Fact Check | ಮಾತ್ರೆಗಳಲ್ಲಿ ಮೊಳೆಗಳನ್ನು ತುಂಬಿ ಮುಸಲ್ಮಾನರು ಮೆಡಿಸನ್‌ ಜಿಹಾದ್‌ ಆರಂಭಿಸಿದ್ದಾರೆ ಎಂಬುದು ಸುಳ್ಳು

“ಎಚ್ಚರಿಕೆಯಿಂದಿರಿ, ಜಿಹಾದ್‌ನ ಹೊಸ ರೂಪ ಪ್ರಾರಂಭವಾಗಿದೆ. ಅದರ ಹೆಸರು ‘ಮೆಡಿಸಿನ್ ಜಿಹಾದ್’. ಮುಸಲ್ಮಾನರು ಮಾತ್ರೆಗಳ ಒಳಗೆ ಮೊಳೆಗಳನ್ನು ತುಂಬಿ, ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಪ್ಯಾಕಿಂಗ್‌ ಮಾಡಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಇದನ್ನು ಸೇವಿಸಿದ ಇತರೆ ಕೋಮಿನವರು ಸಾವನ್ನಪ್ಪುವ ಸಾಧ್ಯತೆ ಇದೆ. ಹೀಗಾಗಿ ಈ ಮಾತ್ರಗಳನ್ನು ಕೊಂಡು ಕೊಳ್ಳುವ ಮುನ್ನ ಪರಿಶೀಲನೆ ನಡೆಸಿ. ಇಲ್ಲದಿದ್ದರೆ ನಿಮ್ಮ ಜೀವಕ್ಕೂ ಆಪತ್ತು ತರಬಹುದು” ಎಂದು ವಿಡಿಯೋದೊಂದಿಗೆ ಸಣ್ಣ ಟಿಪ್ಪಣಿಗಳನ್ನು ಬರೆದು ಹಲವರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್‌ ಮಾಡುತ್ತಿದ್ದಾರೆ.

ಇನ್ನು ಈ ವಿಡಿಯೋದಲ್ಲಿ ಕೂಡ ವ್ಯಕ್ತಿಯೊಬ್ಬ ಎರಡು ಬೇರೆ ಬೇರೆ ಮಾತ್ರೆಗಳನ್ನು ಒಡೆಯುತ್ತಾನೆ. ಈ ವೇಳೆ ಆ ಮಾತ್ರೆಗಳ ಒಳಗೆ ಸಣ್ಣ ಸಣ್ಣ ಮೊಳೆಗಳು ಇರುವುದನ್ನು ಕಾಣ ಬಹುದಾಗಿದೆ. ಹೀಗಾಗಿ ಇದು ನಿಜವೆಂದು ಹಲವರು ಭಾವಿಸಿ, ತಮ್ಮ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹಲವರು ಈ ವಿಡಿಯೋವನ್ನು ಶೇರ್‌ ಮಾಡಿ ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸಿದ್ದಾರೆ. ಆದರೆ ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಹಾಗೂ ಅದರಲ್ಲಿನ ಟಿಪ್ಪಣಿ ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ವಿಡಿಯೋದಲ್ಲಿ ತೋರಿಸಲಾದ ಮಾತ್ರೆಗಳು ಎಸೋರಲ್ 20 ಎಂಜಿ ಮತ್ತು ಎಂಟೆರೊಫ್ಯೂರಿಲ್ 200 ಎಂಜಿ ಎಂದು ತಿಳಿದು ಬಂದಿದೆ. ಈ ಮಾತ್ರೆಗಳ ಕುರಿತು ಹುಡುಕಾಟ ನಡೆಸಿದಾಗ ಈ ಎರಡೂ ಮಾತ್ರೆಗಳನ್ನು ಭಾರತದಲ್ಲಿ ತಯಾರಿಸುವುದಿಲ್ಲ ಅಥವಾ ಮಾರಾಟ ಮಾಡುವುದಿಲ್ಲ ಎಂಬುದು ತಿಳಿದು ಬಂದಿದೆ.

ಈ ವಿಡಿಯೋದಲ್ಲಿ ಮಾತ್ರೆಗಳಲ್ಲಿ ಎಸೋರಲ್ 20 ಎಂಜಿ ಅನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ತಯಾರಿಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ , ಆದರೆ ಎಂಟರ್‌ಫುರಿಲ್ 200 ಎಂಜಿ ಅನ್ನು ಬೋಸ್ನಿಯಾ ಮತ್ತು ಹರ್ಜೆಗೋವಿನಾದಲ್ಲಿ ತಯಾರಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ವಿಡಿಯೋಗಳು ಬೇರೆ ಬೇರೆ ಆಗಿದ್ದು, ಎರಡೂ ವಿಡಿಯೋಗಳನ್ನು ಸೇರಿಸಿ ಎಡಿಟ್‌ ಮಾಡಲಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಬೇರೆ ಬೇರೆಯಾಗಿ ಈ ವಿಡಿಯೋಗಳ ಕುರಿತು ಪರಿಶೀಲನೆ ನಡೆಸಿದ್ದೇವೆ.

ಕ್ಲಿಪ್-1

‘ಎಸೋರಲ್ 20 ಎಂಜಿ’ ಕ್ಯಾಪ್ಸುಲ್‌ಗಳು ಎಂದು ತೋರಿಸುವ ಮಾತ್ರೆಯ ಪ್ಯಾಕೆಟ್‌ ಮೇಲೆ, ಇದು ಪ್ರೋಟಾನ್ ಪಂಪ್ ಇನ್ಹಿಬಿಟರ್ ಎಂದು ಉಲ್ಲೇಖಿಸಿದೆ. ಅದರ ಹೆಸರನ್ನು ಕೀವರ್ಡ್ ಆಗಿ ಬಳಸಿ, ವೈರಲ್ ಕ್ಲಿಪ್ ಕುರಿತು ಹೆಚ್ಚಿನ ವಿವರಗಳಿಗಾಗಿ ನಾವು ನೋಡಿದ್ದೇವೆ. ಈ ವೇಳೆ  ನಮಗೆ 22 ಸೆಪ್ಟಂಬರ್‌ 2022 ರಂದು ಸ್ಪೆಷಲ್‌ ಹೆಲ್ತ್‌ ಎಂಬ ಯೂಟ್ಯುಬ್‌ ಚಾನಲ್‌ಲ್ಲಿ ವೈರಲ್‌ ವಿಡಿಯೋದ ಸ್ಪಷ್ಟ ಆವೃತ್ತಿಯ ವಿಡಿಯೋವನ್ನು ಹಂಚಿಕೊಂಡಿರುವುದು ಪತ್ತೆಯಾಗಿದೆ. ಇದರಲ್ಲಿ ಮಾತ್ರೆಯ ಪ್ಯಾಕ್‌ನ ಹಿಂದೆ, ಔಷಧಿಯನ್ನು ಸಿಟಿ ಫಾರ್ಮಾಸ್ಯುಟಿಕಲ್ ಲ್ಯಾಬೊರೇಟರೀಸ್ ತಯಾರಿಸಿದೆ ಎಂದು ತೋರಿಸಿದೆ ಮತ್ತು ಸ್ಥಳವನ್ನು ಪಾಕಿಸ್ತಾನದ ಕರಾಚಿ ಎಂದು ಉಲ್ಲೇಖಿಸಿರುವುದು ಪತ್ತೆಯಾಗಿದೆ.

ಇನ್ನು ಗೂಗಲ್‌ನಲ್ಲಿ ಈ ಮಾತ್ರೆಯ ತಯಾರಿ ಎಲ್ಲಿ ನಡೆಯುತ್ತದೆ ಎಂದು ನಾವು ಪರಿಶೀಲನೆ ನಡೆಸಿದಾಗ ಬಾಂಗ್ಲಾದೇಶದ Eskayef Pharmaceuticals Limited ಎಂಬ ಕಂಪನಿ ಎಂಬುದು ತಿಳಿದು ಬಂದಿದೆ. ಈ ಕಂಪನಿಯ ವೆಬ್‌ಸೈಟ್‌ನಲ್ಲಿ ವೈರಲ್‌ ವಿಡಿಯೋದಲ್ಲಿನ ಮಾತ್ರೆಯ ಉತ್ಪನ್ನದ ಹೆಸರು ಕೂಡ ಕಂಡು ಬಂದಿದೆ. ಆದರೆ ಈ ವೆಬ್‌ಸೈಟ್‌ನ ಸೇರಿದಂತೆ ಇನ್ನೀತರ ಹುಡುಕಾಟದಲ್ಲಿನ ಎಸ್ಕೇಫ್ ಫಾರ್ಮಾಸ್ಯುಟಿಕಲ್ಸ್‌ನ ಎಸೋರಲ್ 20 ಎಂಜಿ ಅನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಅಥವಾ ಮಾರಾಟ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ.

ಇನ್ನು ಈ ಮಾತ್ರೆಗಳಲ್ಲಿ ಮೊಳೆಗಳು ಕಂಡು ಬಂದಿವೆ ಎಂಬುದಕ್ಕೆ ಯಾವುದೇ ನಿಖರವಾದ ವರದಿಗಳು ಇದುವರೆಗೂ ಕಂಡು ಬಂದಿಲ್ಲ. ಹಾಗಾಗಿ ಇದೊಂದು ಮೊದಲ ವಿಡಿಯೋ ನಕಲಿ ಎಂಬುದು ಸ್ಪಷ್ಟವಾಗಿದೆ. ಆದರೆ ಇಲ್ಲಿ ಈ ವಿಡಿಯೋದ ಮೂಲ ಯಾವುದು ಎಂಬ ಬಗ್ಗೆ ನಮಗೆ ಯಾವುದೇ ಸ್ಪಷ್ಟವಾದ ಮಾಹಿತಿ ಇಲ್ಲ.

ಕ್ಲಿಪ್‌-2

ಇನ್ನು ಇದೇ ವೈರಲ್‌ ವಿಡಿಯೋದಲ್ಲಿ ತೋರಿಸಲಾದ ಮತ್ತೊಂದು ಕ್ಲಿಪ್‌ನ ವಿಡಿಯೋವನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ 18 ಫೇಬ್ರುವರಿ 2021ರಲ್ಲಿ ಯೂಟ್ಯುಬ್‌ ವಿಡಿಯೋದಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದು ಕಂಡು ಬಂದಿದೆ. ಈ ವಿಡಿಯೋದಲ್ಲಿನ ಮಾತ್ರೆಯ ಪ್ಯಾಕ್‌ಗಳು ಸಿರಿಲಿಕ್ ಲಿಪಿಯಲ್ಲಿ ಇರುವುದು ಪತ್ತೆಯಾಗಿದೆ. ಬಳಿಕ ಈ ಮಾತ್ರಯ ಕುರಿತು ಮಾಹಿತಿಯನ್ನು ಪಡೆಯಲು ಗೂಗಲ್ ಲೆನ್ಸ್ ಮೂಲಕ ಮಾಹಿತಿಯನ್ನು ಪಡೆಯಲಾಯಿತು. ಇದು ಬೆಲರೂಸಿಯನ್‌ನಿಂದ ಹೆಸರನ್ನು ‘ಎಂಟರ್‌ಫುರಿಲ್ 200 ಎಂಜಿ’ ಎಂದು ಅನುವಾದಿಸಿ ಮಾತ್ರೆಯ ಕುರಿತು ಮಾಹಿತಿ ನೀಡಿದೆ.

ಈ ಮಾತ್ರೆಯ ಕುರಿತು ಇನ್ನಷ್ಟು ಪರಿಶೀಲನೆ ನಡೆಸಿದಾಗ ಈ ಮಾತ್ರೆಯನ್ನು ಎಂಟರ್ ಫ್ಯೂರಿಲ್ ಎಂಬ ಹೆಸರಿನಲ್ಲಿ  ಬೋಸ್ನಾಲಿಜೆಕ್ ಎಂಬ ಕಂಪನಿ ತಯಾರಿಸುತ್ತಿದ್ದು, ಕಂಪನಿಯ ವೆಬ್‌ಸೈಟ್ ಪ್ರಕಾರ ಇದರ ಕಚೇರಿ  ಬೋಸ್ನಿಯಾ ಮತ್ತು ಹರ್ಜೆಗೋವಿನಾದಲ್ಲಿದೆ ಎಂದು ತಿಳಿದು ಬಂದಿದೆ. ಭಾರತದಲ್ಲಿ ಈ ಸಂಸ್ಥೆ ಯಾವುದಾದರು ಕಚೇರಿಯನ್ನು ಹೊಂದಿದೆಯೇ ಎಂದು ಪರಿಶೀಲನೆ ನಡೆಸಿದಾಗ ಈ ಸಂಸ್ಥೆಯ ಕಚೇರಿಗಳು ಭಾರತದಲ್ಲಿ ಇಲ್ಲ ಎಂದು ತಿಳಿದು ಬಂದಿದೆ. ಇನ್ನು ಈ ಮಾತ್ರಯನ್ನೂ ಕೂಡ ಭಾರತದಲ್ಲಿ ಮಾರಾಟ ಮಾಡಲಾಗುತ್ತಿಲ್ಲ. ಹಾಗೂ ಈ ಮಾತ್ರೆಗಳಲ್ಲಿ ಕೂಡ ಮೊಳೆ ಸಿಕ್ಕಿದ್ದಕ್ಕೆ ಯಾವುದೇ ರೀತಿಯಾದ ಪುರಾವೆಗಳು ಕೂಡ ಲಭ್ಯವಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ. ಮುಸ್ಲಿಂ ಸಮುದಾಯವು ಮೆಡಿಸನ್‌ ಜಿಹಾದ್‌ ಆರಂಭಿಸಿದೆ. ಇದಕ್ಕಾಗಿ ಮಾತ್ರೆಗಳಲ್ಲಿ ಮೊಳೆ ತುಂಬಿ ಅಮಾಯಕರ ಜೀವ ತೆಗೆಯಲು ಮುಂದಾಗಿದೆ ಎಂಬುದು ಸುಳ್ಳಾಗಿದೆ. ಮಾತ್ರೆ ಪ್ಯಾಕೆಟ್ ತೆಗೆದು ಅದರಲ್ಲಿ ಮೊಳೆ ಹೊಂದಿರುವ ಕೆಲವೊಂದು ಮಾತ್ರಗಳನ್ನು ಮೊದಲೇ ಸೇರಿಸಿ ನಂತರ ಪ್ಯಾಕ್ ಮಾಡಿ ಆನಂತರ ವಿಡಿಯೋ ಮಾಡುವಾಗ ಹೊಸ ಮಾತ್ರೆ ಪ್ಯಾಕೆಟ್ ಒಪನ್ ಮಾಡುತ್ತಿರುವಂತೆ ಇಲ್ಲಿ ತೋರಿಸಲಾಗಿದೆಯೇ ಹೊರತು ನಿಜವಾಗಿಯೂ ಮಾತ್ರೆಗಳ ಒಳಕೆ ಮೊಳೆ ಕಂಡು ಬಂದ ಯಾವುದೇ ವರಿದಿಗಳು ನಮಗೆ ಸಿಕ್ಕಿಲ್ಲ. ಹಾಗೂ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಒಮ್ಮೆ ಪರಿಶೀಲಿಸಿ.


ಇದನ್ನೂ ಓದಿ :Fact Check | ಗೂಗಲ್‌ ಮ್ಯಾಪ್‌ ತನ್ನ ಅಪ್ಲಿಕೇಶನ್‌ನಿಂದ ಪ್ಯಾಲೆಸ್ಟೈನ್ ಹೆಸರನ್ನು ತೆಗೆದಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *