Fact Check | ಅಫ್ಘಾನಿಸ್ತಾನ ಆಟಗಾರರು ‘ವಂದೇ ಮಾತರಂ’ ಹಾಡಿದ್ದಾರೆ ಎಂಬ ವಿಡಿಯೋ ಸುಳ್ಳು.!

ಪ್ರಸ್ತುತ ಭಾರೀ ಸದ್ದು ಮಾಡುತ್ತಿರುವ T-20 ಕ್ರಿಕೆಟ್ ವಿಶ್ವಕಪ್ ಹಲವು ರೋಚಕ ಕ್ಷಣಗಳಿಗೆ ಕಾರಣವಾಗುತ್ತಿದೆ. ಈ ಪಂದ್ಯವಾಳಿಗಳಲ್ಲಿ ಅಫ್ಘಾನ್ ಆಟಗಾರರು ಬಾಂಗ್ಲಾದೇಶವನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಟಿ- 20 ವಿಶ್ವಕಪ್‌ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಈ ನಡುವೆ “ಅಫ್ಘಾನಿಸ್ತಾನದ ಆಟಗಾರರು T-20 ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸಿದ ನಂತರ ‘ವಂದೇ ಮಾತರಂ’ ಹಾಡಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋ ನೋಡಿದ ಹಲವರು ಇದು ನಿಜವಾದ ವಿಡಿಯೋ ಇರಬಹುದು ಎಂದು ಸಾಕಷ್ಟು ಮಂದಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ವಿಡಿಯೋ ಕೂಡ ನೋಡಲು ನೈಜ ದೃಶ್ಯಾವಳಿಯಂತೆ ಇದ್ದು, ಇದು ನಿಜವೆಂದು ನಂಬುವಂತೆ ಮಾಡುತ್ತದೆ. ಆದರೂ ಈ ವಿಡಿಯೋ ವಿವಿಧ ಕಾರಣಗಳಿಂದ ಹಲವು ಅನುಮಾನ ಹುಟ್ಟು ಹಾಕಿದೆ. ಹಾಗಾಗಿ ಈ ವಿಡಿಯೋದ ಸತ್ಯಾಸತ್ಯತೆಯನ್ನು ಫ್ಯಾಕ್ಟ್‌ಚೆಕ್‌ ನಡೆಸಿ ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋಗೆ ಸಂಬಂಧ ಪಟ್ಟಂತೆ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ 2023 ರ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಪಾಕಿಸ್ತಾನವನ್ನು ಸೋಲಿಸಿದ ನಂತರ, ಅಕ್ಟೋಬರ್ 2023 ರಲ್ಲಿ ಪತ್ರಕರ್ತರೊಬ್ಬರು ಹಂಚಿಕೊಂಡ ವಿಡಿಯೋವೊಂದು ಕಂಡು ಬಂದಿದೆ. ಈ ವಿಡಿಯೋ ವೈರಲ್‌ ವಿಡಿಯೋಗೆ ಹೋಲಿಕೆಯೂ ಆಗಿರುವುದು ಕಂಡು ಬಂದಿದೆ. ಆದರೆ ಆ ವಿಡಿಯೋದಲ್ಲಿ ಇಸ್ಲಾಮಿಕ್‌ ಘೋಷಣೆಗಳನ್ನು ಕೂಗುವುದನ್ನು ಕಾಣಬಹುದಾಗಿದೆ.

ಇನ್ನು ಅಫ್ಘಾನ್ ಆಟಗಾರ ಮೊಹಮ್ಮದ್ ನಬಿ ಅವರು ಕೂಡ ಅಕ್ಟೋಬರ್ 2023 ರಲ್ಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪತ್ರಕರ್ತ ಹಂಚಿಕೊಂಡ ಅದೇ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ , ಈ ವಿಡಿಯೋದಲ್ಲೂ ಆಟಗಾರರು ಇಸ್ಲಾಮಿಕ್ ಘೋಷಣೆಗಳನ್ನು ಕೂಗುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಹೀಗಾಗಿ ವೈರಲ್‌ ವಿಡಿಯೋದಲ್ಲಿ ‘ವಂದೇ ಮಾತರಂ’ ಘೋಷಣೆಗಳನ್ನು ಸೇರಿಸಲು ಡಿಜಿಟಲ್ ಎಡಿಟ್ ಮಾಡಲಾಗಿದೆ ಎಂಬುದು ಈ ಎರಡೂ ವಿಡಿಯೋಗಳು ಸಾಭೀತುಪಡಿಸಿವೆ.

 

View this post on Instagram

 

A post shared by Mohammad Nabi (@mohammadnabi07)

ಇದಕ್ಕಿಂತ ಮುಖ್ಯವಾಗಿ ಒಂದು ವೇಳೆ ಅಫ್ಘಾನಿಸ್ತಾನದ ಆಟಗಾರರು ವಂದೇ ಮಾತರಂ ಘೋಷಣೆ ಕೂಗಿದ್ದೇ ಆದಲ್ಲಿ ಆ ಕುರಿತು ಭಾರತ ಸೇರಿದ ಹಾಗೆ ಹಲವು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಬೇಕಿತ್ತು. ಆದರೆ ಅಂತಹ ಯಾವುದೇ ವರದಿಗಳು ಪತ್ತೆಯಾಗಿಲ್ಲಿ. ಹಾಗಾಗಿ ವೈರಲ್‌ ವಿಡಿಯೋ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಫ್ಘಾನ್ ಆಟಗಾರರು 2023 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಗೆದ್ದ ಸಂದರ್ಭದಲ್ಲಿ ಇಸ್ಲಾಮಿಕ್‌ ಘೋಷಣೆಗಳನ್ನು ಕೂಗಿದ್ದಾರೆ. ಈ ವಿಡಿಯೋವನ್ನು ಡಿಜಿಟಲ್‌ ಆಗಿ ಎಡಿಟ್‌ ಮಾಡಿ, ಇತ್ತೀಚೆಗಿನ ಟಿ-20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಗೆದ್ದಾಗ ವಂದೇ ಮಾತರಂ ಘೋಷಣೆಯನ್ನು ಕೂಗಿದ್ದಾರೆ ಎಂದು ಸುಳ್ಳು ವಿಡಿಯೋ ಸೃಷ್ಟಿಸಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಇಂತಹ ವಿಡಿಯೋವನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check: ರೈಲ್ವೆ ನಿಲ್ದಾಣದಲ್ಲಿ ಪೋಲಿಸ್ ಪೇದೆಯೊಬ್ಬರು ವೃದ್ಧನಿಗೆ ತಳಿಸಿರುವ ವೀಡಿಯೋ ಮಧ್ಯಪ್ರದೇಶದ್ದಾಗಿದ್ದು ಉತ್ತರ ಪ್ರದೇಶದ್ದಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *