Fact Check: ಡಾ. ಬಿ.ಆರ್ ಅಂಬೇಡ್ಕರ್ RSS ಶಾಖೆಗೆ ಭೇಟಿ ನೀಡಿದ್ದರು ಎಂಬುದು ಸುಳ್ಳು

RSS

ಇತ್ತೀಚೆಗೆ, ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಪ್ರತಿ ರಾಜಕೀಯ ಪಕ್ಷಗಳು ತಮ್ಮವರೇ ಎಂದು ಹೇಳಿಕೊಳ್ಳುತ್ತಿದ್ದಾರೆ.  ಆ ಮೂಲಕ ಅಂಬೇಡ್ಕರ್‌ರವರು ಪ್ರಭಾವಿಸಿದ ದೊಡ್ಡ ಜನಸಂಖ್ಯೆಯ ಒಲವು ಗಳಿಸಲು ಬಯಸುತ್ತಿದ್ದಾರೆ. ಹಾಗಾಗಿ ಅಂದು ಅಂಬೇಡ್ಕರ್ ನಮ್ಮನ್ನು ಹೊಗಳಿದ್ದರು ಎಂಬ ಸುದ್ದಿಗಳನ್ನು ಹರಿಯಬಿಡುತ್ತಿದ್ದಾರೆ. ಅದರಂತೆ ಡಾ. ಅಂಬೇಡ್ಕರ್ ಅವರು 1939 ರಲ್ಲಿ ಪುಣೆಯ RSS ಶಿಬಿರಕ್ಕೆ ಭೇಟಿ ನೀಡಿ “ಸ್ವಯಂಸೇವಕರು ಇತರ ಜಾತಿಯವರನ್ನು ಸಹ ಸಂಪೂರ್ಣ ಸಮಾನತೆ ಮತ್ತು ಸಹೋದರತ್ವದಿಂದ ನಡೆಸಿಕೊಳ್ಳುತ್ತಿರುವುದನ್ನು ಕಂಡು ನನಗೆ ಆಶ್ಚರ್ಯವಾಗಿದೆ” ಎಂದು ಭಾಷಣ ಮಾಡಿದ್ದರು ಎಂಬ ಸುದ್ದಿಗಳು ಮತ್ತು ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಬಾಬಾಸಾಹೇಬ್ ಅಂಬೇಡ್ಕರ್

 

ಫ್ಯಾಕ್ಟ್‌ಚೆಕ್‌: ಅಂಬೇಡ್ಕರ್‌ರವರು ಬದುಕಿದ ಸಂದರ್ಭದಲ್ಲೇ ಅವರಿಂದ ಮಾಹಿತಿ ಪಡೆದು ಜೀವನ ಚರಿತ್ರೆ ರಚಿಸಿದ ಧನಂಜಯ್ ಕೀರ್‌ರವರ ಪುಸ್ತಕ “ಡಾ. ಬಾಬಾಸಾಹೇಬ್ ಅಂಬೇಡ್ಕರ್‌” ಪುಸ್ತಕದಲ್ಲಿ ಎಲ್ಲಿಯೂ ಇದರ ಉಲ್ಲೇಖವಿಲ್ಲ. ಇನ್ನು ಅಂಬೇಡ್ಕರ್‌ವರ ಆಪ್ತ ಸಹಾಯಕ ನಾನಕ್ ಚಂದ್ ರತ್ತು ರವರು ಬರೆದಿರುವ “Reminiscences and remembrances of Dr. B.R. Ambedkar” ಪುಸ್ತಕದಲ್ಲಿಯೂ ಸಹ ಅಂಬೇಡ್ಕರು RSS ಶಾಖೆಗೆ ಭೇಟಿ ನೀಡಿದ ಉಲ್ಲೇಖವಿಲ್ಲ.

ಈಗಾಗಲೇ ಅಂಬೇಡ್ಕರ್‌ರವರ ಜೀವಿತಾವದಿಯಲ್ಲಿ ಮಾಡಿದ ಭಾಷಣಗಳು ಮತ್ತು ಅವರ ಬರವಣಿಗೆಗಳನ್ನೆಲ್ಲಾ ಸಂಗ್ರಹಿಸಿದ “ಅಂಬೇಡ್ಕರ್ ಭಾಷಣ ಮತ್ತು ಬರಹಗಳು” ಸರಣಿಯಲ್ಲಿಯೂ ಸಹ ಇದರ ವಿವರಗಳಿಲ್ಲ. ಆದರೆ  ದಿ ಪ್ರಿಂಟ್‌ ವೆಬ್‌ಸೈಟ್‌ನಲ್ಲಿ ರಾಜಿವ್ ತುಲಿ ಎಂಬ RSS ಕಾರ್ಯಕರ್ತ ಬರೆದ ಲೇಖನದಲ್ಲಿ ಅಂಬೇಡ್ಕರ್‌ರವರು RSS ಶಾಖೆಗೆ ಭೇಟಿ ನೀಡಿದ್ದರು ಎಂದಿದ್ದಾರೆ. ಆದರೆ ಅವರು ಅದಕ್ಕೆ ಯಾವುದೇ ಆಧಾರ ಒದಗಿಸಿಲ್ಲ. ಮುಂದುವರೆದು ದತ್ತೋಪಂಥ ತೇಂಗಡಿ ಎಂಬ ಆರ್‌ಎಸ್‌ಎಸ್‌ ವ್ಯಕ್ತಿ 1954ರ ಭಂಡಾರ ಉಪ ಚುನಾವಣೆಯಲ್ಲಿ ಅಂಬೇಡ್ಕರ್‌ರವರು ಚುನಾವಣಾ ಏಜೆಂಟ್ ಆಗಿದ್ದರು ಎಂದು ರಾಜೀವ್ ತುಲಿ ಬರೆದಿದ್ದಾರೆ. ಅವರು ಆ ಲೇಖನದಲ್ಲಿ ರಾಜಬಾಹು ಖೋಬ್ರಗಡೆ ಎಂಬುವವರನ್ನು ಉಲ್ಲೇಖಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ  ರಾಜಬಾಹು ಖೋಬ್ರಗಡೆಯವರ ಮೊಮ್ಮಗ ದೀಪಂಕರ್ ಕಾಂಬ್ಳೆ ಎಂಬುವವರು ವೆಲಿವಾಡ ಎಂಬ ವೆಬ್‌ಸೈಟ್‌ನಲ್ಲಿ ಫ್ಯಾಕ್ಟ್ ಚೆಕ್ ಲೇಖನವೊಂದನ್ನು ಬರೆದಿದ್ದಾರೆ. ರಾಜೀವ್ ತುಲಿಯವರಿಗೆ ವಿದರ್ಭ ಪ್ರಾಂತ್ಯದ ಬಗ್ಗೆ ಯಾವುದೇ ಅರಿವಿಲ್ಲದೆ ಸುಳ್ಳು ಬರೆದಿದ್ದಾರೆ, ಆದರೆ ನಾನು ಅದೇ ಪ್ರಾಂತ್ಯದಲ್ಲಿ ಹುಟ್ಟಿ ಬೆಳೆದವನು. ತಮ್ಮ ತಾತ ಮತ್ತು ತಂದೆಯವರು ಅಂಬೇಡ್ಕರ್‌ರವರ ಚಳವಳಿಯಲ್ಲಿ ಭಾಗಿಯಾದವರು. ಅವರನ್ನು ಮಾತನಾಡಿಸಿದಾಗ ಅಂಬೇಡ್ಕರ್ ಆರ್‌ಎಸ್‌ಎಸ್‌ ಶಾಖೆಗೆ ಹೋದರು ಮತ್ತು ಅವರಿಗೆ ದತ್ತೋಪಂಥ ತೇಂಗಡಿ ಎಂಬ ಆರ್‌ಎಸ್‌ಎಸ್‌ ವ್ಯಕ್ತಿ ಚುನಾವಣಾ ಏಜೆಂಟ್ ಆಗಿದ್ದರು ಎಂಬುದು ಸುಳ್ಳು ಎಂದು ನಿರೂಪಿಸಿದ್ದಾರೆ. ಆ ಲೇಖನವನ್ನು ಇಲ್ಲಿ ಓದಬಹುದು.

“ಅಂಬೇಡ್ಕರ್‌ RSS ಶಾಖೆಗೆ ಭೇಟಿ ನೀಡಿ ಅವರ ಸಮಾನತೆ ಮತ್ತು ಶಿಸ್ತು ಕಂಡು ಭಾಷಣ ಮಾಡಿದರು, ಕೊನೆಯಲ್ಲಿ ಭಾರತ್ ಮಾತಾಕೀ ಕೈ ಎಂದು ಕೂಗಿದರು. ಬಾಳಾಸಾಹೇಬ್ ಸಾಳುಂಕೆ ಅವರೇ ಇವೆಲ್ಲವನ್ನೂ ತಮ್ಮ ದಿನಚರಿಯಲ್ಲಿ ಬರೆದುಕೊಂಡಿದ್ದಾರೆ. ಅವರ ದಿನಚರಿಯ ಎಲ್ಲ ಸಂಗತಿಗಳನ್ನೂ ಮುದ್ರಿಸಿ ಹೊರತಂದ ಅವರ ಪುತ್ರ ಕಾಶ್ಯಪ್ ಸಾಳುಂಕೆ ಅವರ “ಹಮಾರೆ ಸಾಹಬ್’ ಪುಸ್ತಕದಲ್ಲಿ ಈ ಸಂಗತಿಗಳನ್ನು ಯಥಾವತ್ತಾಗಿ ನಮೂದಿಸಲಾಗಿದೆ” ಎಂದು ಕೆಲವು ವಿಷಯಗಳನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ಮಹಾರಾಷ್ಟ್ರದ ಅಂಬೇಡ್ಕರ್‌ವಾದಿಗಳು ಅಲ್ಲಗೆಳೆದಿದ್ದಾರೆ. ಆ ದಿನಚರಿಯ ಚಿತ್ರಗಳನ್ನು ಹಾಕಿ ಎಂದು ಸವಾಲು ಹಾಕಿದ್ದಾರೆ. ಆದರೆ ಕಾಶ್ಯಪ್ ಸಾಳುಂಕೆ ಯಾವುದೇ ದಿನಚರಿ ಹಾಗೂ ಇತರ ದಾಖಲೆಗಳನ್ನು ಒದಗಿಸಿಲ್ಲ.

ಈ ಕುರಿತು ಮತ್ತಷ್ಟು ಹುಡುಕಿದಾಗ ಆಯುಷ್ ನದೀಂಪಳ್ಳಿ ಮತ್ತು ರಾಹುಲ್ ಎ ಶಾಸ್ತ್ರಿ ಎಂಬ ಆರ್ ಎಸ್ ಎಸ್ ಬ್ರಾಹ್ಮಣರಿಬ್ಬರು ಬರೆದಿರುವ The Founder of RSS: Dr. Hedgewar seer Patriot and Nation Builder ಎಂಬ ಪುಸ್ತಕದಲ್ಲಿ ಇದೇ ರೀತಿ ಬರೆಯಲಾಗಿದೆ. ಆದರೆ ಲೇಖಕರು ಅವುಗಳಿಗೆ ಯಾವುದೇ ಮಾಹಿತಿ ಮೂಲ ವನ್ನು ತಿಳಿಸಿಲ್ಲ. ಪತ್ರಿಕಾ ವರದಿ ಯನ್ನೂ ಸಾಕ್ಷಿ ಯನ್ನೂ ನೀಡಿಲ್ಲ.

ಮುಂದುವರಿದು ಆರ್ ಎಸ್ ಎಸ್ ಎಂಬ ಪುಸ್ತಕದ ಕರ್ತೃ ಎಂ.ಜಿ. ಚಿತ್ಕಾರ ಬರೆದಿರುವ Dr. Ambedkar and Social Justice ನಲ್ಲಿ ಈ ಮೇಲಿನ ಸುಳ್ಳಿನ ಜೊತೆಗೆ ಅಂಬೇಡ್ಕರರು 1936 ರ ಮಕರ ಸಂಕ್ರಾಂತಿಯಂದು ಆರ್ ಎಸ್ ಎಸ್ ಶಾಖೆಗೆ ಭೇಟಿ ನೀಡಿದ್ದರೆಂದು ಬರೆಯಲಾಗಿದೆ. ಆದರೆ ಯಥಾಪ್ರಕಾರ ಯಾವುದೇ ಮಾಹಿತಿ ಮೂಲವನ್ನೂ ಹಾಗೂ ಪತ್ರಿಕಾ ವರದಿ ಯನ್ನು ಅದರಲ್ಲಿ ಉಲ್ಲೇಖಿಸಿಲ್ಲ.

 

1935ರ ಹೊತ್ತಿಗೆ ಡಾ. ಬಿ.ಆರ್ ಅಂಬೇಡ್ಕರ್‌ ರವರು ಹಿಂದು ಧರ್ಮದ ಜಾತಿಪದ್ದತಿ, RSS ಮತ್ತು ಹಿಂದು ಮಹಾಸಭಾದ ಕಟುವಿಮರ್ಶಕರಾಗಿದ್ದರು. ತಮ್ಮ ಮೂಕ ನಾಯಕ, ಬಹಿಷ್ಕೃತ ಭಾರತ ಮತ್ತು ಪ್ರಬುದ್ಧ ಭಾರತದಲ್ಲಿ ಹಿಂದು ಧರ್ಮದಲ್ಲಿ ಆಚರಿಸಲ್ಪಡುತ್ತಿರುವ ಅನಿಷ್ಟ ಪದ್ದತಿಗಳ, ಜಾತಿ ವ್ಯವಸ್ಥೆ ಮತ್ತು ಬ್ರಾಹ್ಮಣವಾದದ ವಿರುದ್ದ ಸರಣಿ ಲೇಖನಗಳನ್ನು ಪ್ರಕಟಿಸಿದ್ದರು. ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ ಎಂದು ಘೋಷಿಸಿದ್ದ ಅಂಬೇಡ್ಕರ್‌ರವರು ಕೊನೆಗೆ ಹಿಂದು ಧರ್ಮ ತೊರೆದು ಬೌದ್ದ ಧರ್ಮವನ್ನು ಅನುಸರಿಸಿದರು. ಆದ್ದರಿಂದ ಆರ್‌ಎಸ್‌ಎಸ್‌ ಕೃಪಾಪೋಷಿತ ಸುದ್ದಿ ಮಾಧ್ಯಮಗಳು ವರದಿ ಮಾಡಿರುವಂತೆ ಅಂಬೇಡ್ಕರ್‌ರವರು ಆರ್‌ಎಸ್‌ಎಸ್‌ ಕೆಲಸ-ಕಾರ್ಯಗಳನ್ನು ಶ್ಞಾಘಿಸಿದ್ದರು, ಶಾಖೆಗೆ ಭೇಟಿ ನೀಡಿದ್ದರು, ಹಿಂದುರಾಷ್ಟ್ರಕ್ಕೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದರು ಎಂಬುದು ಸುಳ್ಳು.

ಡಾ. ಅಂಬೇಡ್ಕರ್‌ರವರು ತಮ್ಮ ಪ್ರಬುದ್ಧ ಭಾರತದಲ್ಲಿ ವಿ .ಡಿ ಸಾವರ್ಕರ್‌ರವರನ್ನು ಟೀಕಿಸಿ ಲೇಖನ  ಬರೆದಿದ್ದರು. ಅವರು ಆರ್.ಎಸ್.ಎಸ್ ವಿಚಾರಕ್ಕೆ ವಿರುದ್ಧವಾಗಿದ್ದರು. ಅವರು ತಮ್ಮ Scheduled Castes Federation ಪಕ್ಷದ ಪ್ರಣಾಳಿಕೆ ಯಲ್ಲಿ ಹಿಂದೂ ಮಹಾಸಭಾ ಅಥವಾ ಆರ್ ಎಸ್ ಎಸ್ ನಂತಹ ಪ್ರತಿಗಾಮಿ ಗುಂಪುಗಳೊಂದಿಗೆ ಯಾವುದೇ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತಿಲ್ಲ ಎಂದು ಸೂಚಿಸಿದ್ದರು. (ಸಂಪುಟ 17, ಪುಟ 359) ಅಲ್ಲದೇ ಆರ್ ಎಸ್ ಎಸ್ ಒಂದು ಅಪಾಯಕಾರಿ ಸಂಘಟನೆ ಎಂದಿದ್ದರು (ಇಂಗ್ಲಿಷ್ ಸಂಪುಟ 15, ಪುಟ 560). ಹಾಗಾಗಿ ಅವರು ಶಾಖೆಗೆ ಹೋಗಿದ್ದರು ಎಂಬುದು ಸಂಪೂರ್ಣ ಸುಳ್ಳಾಗಿದೆ.


ಇದನ್ನು ಓದಿ: Fact Check : ನಕಲಿ ವೆಬ್‌ಸೈಟ್‌ನಲ್ಲಿ ಉದ್ಯೋಗ ಆಮೀಷ, ನಂಬಿದರೆ ಮೋಸ ಹೋಗುತ್ತೀರಿ ಎಚ್ಚರ.!


ಈ ವಿಡಿಯೋ ನೋಡಿ : Fact Check : ತಿರುಪತಿ ಪುರೋಹಿತರ ಮನೆಯಲ್ಲಿ 128KG ಚಿನ್ನ ಪತ್ತೆ ಎಂದು ತಮಿಳುನಾಡಿನ ವಿಡಿಯೋ ಹಂಚಿಕೆ.!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *