ಇತ್ತೀಚೆಗೆ ಭಾರತದಲ್ಲಿ ತಮ್ಮ ರಾಜಕೀಯ ಸಿದ್ದಾಂತಗಳನ್ನು ವಿರೋಧಿಸುವ ಇತಿಹಾಸಕಾರರು ಮತ್ತು ಸಾಹಿತಿಗಳ ಮೇಲೆ ದಾಳಿ ಮಾಡುವುದು ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ಇತಿಹಾಸದ ಮೇಲೂ ಸಹ ದಾಳಿ ಮಾಡಲಾಗುತ್ತಿದೆ. ಪುರಾಣದ ಕಥೆಗಳನ್ನು ಇತಿಹಾಸವೆಂದು ಬಿಂಬಿಸುತ್ತಾ, ಐತಿಹಾಸಿಕ ವ್ಯಕ್ತಿಗಳನ್ನು ತಮ್ಮ ರಾಜಕೀಯದ ಮುಖವಾಣಿ ಮಾಡಿಕೊಳ್ಳಲು ಸಾಂಧರ್ಭಿಕ ಇತಿಹಾಸಕಾರರು ಇಂದು ಅನೇಕರು ಹುಟ್ಟಿಕೊಂಡಿದ್ದಾರೆ. ತಮಗೆ ಬೇಕಾದಂತೆ ಇತಿಹಾಸವನ್ನು ತಿರುಚಿ ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತದೆ.
ಇಂತಹ ಸುಳ್ಳಿನ ಭಾಗವಾಗಿ ಗಾಂಧೀಜಿ ಮತ್ತು ನೆಹರೂ ಅವರು ಮುಸ್ಲಿಂ ಕುಟುಂಬದವರು, ಡಾ. ಬಿ.ಆರ್ ಅಂಬೇಡ್ಕರ್ ಅವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು ಎಂಬುದಾಗಿ ಕಟ್ಟು ಕಥೆಗಳನ್ನು ಜನರ ನಡುವೆ ಹರಿಬಿಡಲಾಗುತ್ತಿದೆ.
ಪ್ರಸ್ತುತ ಭಾರತದ ಪ್ರಸಿದ್ದ ಇತಿಹಾಸಕಾರರಾದ ರೋಮಿಲಾ ಥಾಪರ್ ಅವರ ಕುರಿತು ಬಿಜೆಪಿ ಮತ್ತು ಬಲಪಂಥೀಯ ಬೆಂಬಲಿಗರು ಸುಳ್ಳು ಸುದ್ದಿಯೊಂದನ್ನು ಹಂಚಿಕೊಳ್ಳಲಾಗುತ್ತಿದ್ದು ದೋಸೆಯನ್ನು ಕಂಡು ಹಿಡಿದವರು ಮೊಘಲರು ಎಂದು ಅವರು ವಾದಿಸಿದ್ದಾರೆ ಎಂದು ಟೀಕಿಸಲಾಗುತ್ತಿದೆ.
ಈ ಸಂದೇಶವನ್ನು ಹೀಗಾಗಲೇ ನಿರಂತರವಾಗಿ ಸುಳ್ಳು ಸುದ್ದಿಯನ್ನು ಹರಿಬಿಡಲು ಕುಖ್ಯಾತನಾಗಿರುವ ಮಿ. ಸಿನ್ಹಾ ಹಂಚಿಕೊಂಡಿದ್ದಾರೆ. ನಂತರ ಅನೇಕ ಬಿಜೆಪಿ ಮತ್ತು ಬಲಪಂಥೀಯ ಖಾತೆಗಳು ಈ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಅಂತಹ ಪೋಸ್ಟ್‌ಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಫ್ಯಾಕ್ಟ್ ಚೆಕ್:
ಇತಿಹಾಸಕಾರರಾದ ರೋಮಿಲಾ ಥಾಪರ್ ಅವರು ದೋಸೆಯನ್ನು ಭಾರತಕ್ಕೆ ಪರಿಚಯಿಸಿದವರು ಮೊಘಲರು ಎಂದು ಎಲ್ಲಿಯೂ ಹೇಳಿಲ್ಲ. ರೋಮಿಲಾ ಅವರ ಕುರಿತು ದ್ವೇಷ ಬಿತ್ತುವ ಸಲುವಾಗಿ ಈ ರೀತಿಯ ಸುಳ್ಳು ಸುದ್ದಿಯನ್ನು ಹರಿಬಿಡಲಾಗಿದೆ.
ನಾವು ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಕೀವರ್ಡ್ ಹುಡುಕಾಟ ನಡೆಸಿದಾಗ ಅಂತರ್ಜಾಲದಲ್ಲಿ ಈ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಕೃತಕ ಬುದ್ಧಿಮತ್ತೆಯನ್ನು ಸಹ ಬಳಸಿಕೊಂಡು ಹುಡುಕಿದಾಗ ಅದು ಸಹ “ಮೊಘಲರು ದೋಸೆಯನ್ನು ಭಾರತಕ್ಕೆ ಪರಿಚಯಿಸಿದರು ಎಂದು ರೊಮಿಲಾ ಥಾಪರ್ ವಾದಿಸಿದ ಯಾವುದೇ ವಿಶ್ವಾಸಾರ್ಹ ಪುರಾವೆಗಳು ಅಥವಾ ದಾಖಲೆಗಳಿಲ್ಲ.” ಎಂದು ಹೇಳಿದೆ.
ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ ಫ್ರೋಫೆಸರ್ ಆಗಿದ್ದ ರೊಮಿಲಾ ಥಾಪರ್ ಅವರು ಪ್ರಾಚೀನ ಭಾರತೀಯ ಇತಿಹಾಸದ ಬಗ್ಗೆ ತಮ್ಮ ವ್ಯಾಪಕವಾದ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ. ಮತ್ತು ಅವರು ಭಾರತೀಯ ಇತಿಹಾಸದ ಮೇಲೆ ಹಲವಾರು ಪ್ರಸಿದ್ಧ ಕೃತಿಗಳನ್ನು ಬರೆದಿದ್ದಾರೆ. ಅವರ ಕೆಲವು ಪ್ರಸಿದ್ಧ ಪುಸ್ತಕಗಳೆಂದರೆ, ಎ ಹಿಸ್ಟರಿ ಆಫ್ ಇಂಡಿಯಾ, ಸಂಪುಟ 1: ಮೂಲದಿಂದ 1300, ಅಶೋಕ ಮತ್ತು ಮೌರ್ಯರ ಅವನತಿ, ಆರಂಭಿಕ ಭಾರತ: ಮೂಲದಿಂದ AD 1300, ಪ್ರಾಚೀನ ಭಾರತೀಯ ಸಾಮಾಜಿಕ ಇತಿಹಾಸ: ಕೆಲವು ವ್ಯಾಖ್ಯಾನಗಳು, ದ ಪಾಸ್ಟ್ ಆಸ್ ಪ್ರೆಸೆಂಟ್: ಫಾರ್ಜಿಂಗ್ ಕಾಂಟೆಂಪರರಿ ಐಡೆಂಟಿಟೀಸ್ ಥ್ರೂ ಹಿಸ್ಟರಿ, ಸೋಮನಾಥ: ದಿ ಮೆನಿ ವಾಯ್ಸ್ ಆಫ್ ಎ ಹಿಸ್ಟರಿ, ವಾಯ್ಸ್ ಆಫ್ ಡಿಸೆಂಟ್: ಒಂದು ಪ್ರಬಂಧ. ಭಾರತೀಯ ಕಥೆಗಳು, ಮುಂತಾದವು.
ರೋಮಿಲಾ ಥಾಪರ್ ಅವರು ಭಾರತಕ್ಕೆ 1500 ವರ್ಷಗಳ ಹಿಂದೆ ಆರ್ಯನ್ನರ ಆಗಮನದ ಕುರಿತು ತಮ್ಮ ಕೃತಿಯಲ್ಲಿ ವಿಸ್ತಾರವಾಗಿ ಬರೆದಿದ್ದಾರೆ ಮತ್ತು ಈ ವಲಸೆ ಸಿದ್ದಾಂತವನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಸದ್ಯ ಬಲಪಂಥೀಯರ ಮತ್ತು ಆರ್ಯನ್ನರ ವಲಸೆ ಸಿದ್ಧಾಂತವನ್ನು ಹುಟ್ಟುಹಾಕಿದವರು ಬ್ರಿಟಿಷರು ಎಂದು ವಾದಿಸುವವರ ಕೆಂಗಣ್ಣಿಗೆ ರೋಮಿಲಾ ಥಾಪರ್ ಅವರು ಗುರಿಯಾಗಿದ್ದಾರೆ.
ದೋಸೆಯ ಮೂಲದ ಕುರಿತು:
ಭಾರತಕ್ಕೆ ಮೊಘಲರು ಆಗಮಿಸುವುದಕ್ಕಿಂತ ಮುಂಚಿನಿಂದ ದೋಸೆ ಸಾಂಪ್ರದಾಯಿಕವಾಗಿ ದಕ್ಷಿಣ ಭಾರತೀಯ ಖಾದ್ಯವಾಗಿತ್ತು ಎಂದು ನಂಬಲಾಗಿದೆ, ಆದರೆ ದೋಸೆಯ ನಿಖರವಾದ ಭೌಗೋಳಿಕ ಮೂಲವು ಚರ್ಚೆಯ ವಿಷಯವಾಗಿದೆ. ಕೆಲವು ಮೂಲಗಳು ಇದು ಇಂದಿನ ಕರ್ನಾಟಕದ ಉಡುಪಿ ಪಟ್ಟಣದಲ್ಲಿ ಬ್ರಾಹ್ಮಣ ಅಡುಗೆ ಭಟ್ಟರಿಂದ ಕಂಡುಹಿಡಿದರು ಎಂದು ಸೂಚಿಸಿದರೆ, ಇತರರು 1 ನೇ ಶತಮಾನದ CE ಯಿಂದ ಪ್ರಾಚೀನ ತಮಿಳು ಸಾಹಿತ್ಯವನ್ನು ಸೂಚಿಸುತ್ತಾರೆ.
ದೋಸೆಯ ಆರಂಭಿಕ ಲಿಖಿತ ಉಲ್ಲೇಖವು ಇಂದಿನ ತಮಿಳುನಾಡಿನ 8 ನೇ ಶತಮಾನದ ಸಾಹಿತ್ಯದಲ್ಲಿ ಮತ್ತು ಒಂದು ಶತಮಾನದ ನಂತರ ಕನ್ನಡ ಸಾಹಿತ್ಯದಲ್ಲಿ ಕಂಡುಬರುತ್ತದೆ. ದೋಸೆಯ ಪಾಕವಿಧಾನವನ್ನು 12 ನೇ ಶತಮಾನದ ಸಂಸ್ಕೃತ ವಿಶ್ವಕೋಶ, ಮಾನಸೋಲ್ಲಾಸದಲ್ಲಿ ಕಾಣಬಹುದು, ಇದನ್ನು ಚಾಲುಕ್ಯ ರಾಜ ಸೋಮೇಶ್ವರ III ಸಂಗ್ರಹಿಸಿದ್ದಾನೆ.
1930 ರ ದಶಕದಲ್ಲಿ ಉಡುಪಿ ರೆಸ್ಟೋರೆಂಟ್‌ಗಳನ್ನು ತೆರೆಯುವುದರೊಂದಿಗೆ ದೋಸೆ ಮುಂಬೈಗೆ ಪರಿಚಯವಾಯಿತು. 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ದಕ್ಷಿಣ ಭಾರತದ ಪಾಕಪದ್ಧತಿಯು ಉತ್ತರ ಭಾರತದಲ್ಲಿ ಕ್ರಮೇಣ ಜನಪ್ರಿಯವಾಯಿತು. ತಮಿಳು ಜನರ ವಲಸೆ ಮತ್ತು ಭಾರತೀಯ ಪಾಕಪದ್ಧತಿಯ ಜಾಗತಿಕ ಜನಪ್ರಿಯತೆಯ ಮೂಲಕ ಶ್ರೀಲಂಕಾ, ಆಗ್ನೇಯ ಏಷ್ಯಾ ಮತ್ತು ಪಾಶ್ಚಿಮಾತ್ಯ ಪ್ರಪಂಚದ ಜನರ ಪಾಕಶಾಲೆಗಳಿಗೆ ದೋಸೆ ಪರಿಚಿತವಾಯಿತು. ಆದರೆ ದೋಸೆಯ ಮೂಲದ ವಿಚಾರ ಬಂದಾಗ ಕನ್ನಡಿಗರು ಮತ್ತು ತಮಿಳಿಗರ ನಡುವೆ ಸದಾ ವಾಗ್ವಾದದ ವಿಷಯವಾಗಿದೆ.
ಆದ್ದರಿಂದ, ಪ್ರಸ್ತುತ ವೈರಲ್ ಸಂದೇಶದಂತೆ ಇತಿಹಾಸಕಾರರಾದ ರೋಮಿಲಾ ಥಾಪರ್ ಅವರು ದೋಸೆಯನ್ನು ಭಾರತಕ್ಕೆ ಮೊಘಲರು ಪರಿಚಯಿಸಿದರು ಎಂದು ಹೇಳಿರುವುದಕ್ಕೆ ಯಾವುದೇ ಪುರಾವೆ ಅಥವಾ ದಾಖಲೆಗಳಿಲ್ಲ. ರೋಮಿಲಾ ಮತ್ತು ಅವರ ಇತಿಹಾಸದ ಕೃತಿಗಳನ್ನು ಜನರು ತಿರಸ್ಕಾರದಿಂದ ನೋಡಲಿ ಎಂಬ ಉದ್ದೇಶದಿಂದ ಈ ರೀತಿಯ ಸುಳ್ಳು ಆರೋಪಗಳನ್ನು ಅವರಿಗೆ ಹೊರಿಸಲಾಗುತ್ತಿದೆ.
ಇದನ್ನು ಓದಿ: ರಾಹುಲ್ ಗಾಂಧಿ ಅವರನ್ನು ಎಲ್ಲಾ ಸಂಸದೀಯ ಸಮಿತಿಗಳಿಂದ ವಿದೇಶಾಂಗ ಸಚಿವ ಎಸ್ ಜೈಶಂಕರ್ ತೆಗೆದುಹಾಕಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.