2024ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಯಲ್ಲಿಯೇ ಈ ಚುನಾವಣೆಯಲ್ಲಿ ಟ್ರಂಪ್‌ರವರು ಗೆಲುವು ಸಾಧಿಸಿಯೇ ಸಾಧಿಸುತ್ತಾರೆ ಎಂದು ಮೋದಿ ಭವಿಷ್ಯವನ್ನು ನುಡಿದಿದ್ದರು ಎಂಬ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋದಲ್ಲಿ ಪ್ರಧಾನಿ ಮೋದಿ, “ಸ್ನೇಹಿತರೇ, ಭಾರತೀಯರೆಲ್ಲರೂ ಅಮೇರಿಕದ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಅಬ್ ಕೀ ಬಾರ್ ಟ್ರಂಪ್ ಸರ್ಕಾರ್” (ಈ ಬಾರಿಗೆ ಟ್ರಂಪ್ ಸರ್ಕಾರ ಆಡಳಿತದ ಚುಕ್ಕಾಣಿಯನ್ನು ಹಿಡಿಯುತ್ತದೆ) ಎಂದು ಹಲವಾರು ಫೇಸ್‌ಬುಕ್ ಮತ್ತು ಟ್ವಿಟರ್ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
2024ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲ್ಲುತ್ತಾರೆ ಎಂದು ಮೋದಿ ಮೊದಲೇ ಭವಿಷ್ಯವನ್ನು ನುಡಿದಿದ್ದರಾ? ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿದುಕೊಳ್ಳೋಣ.
ಫ್ಯಾಕ್ಟ್ ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು Googleನಲ್ಲಿ ʼPM Modiʼಮತ್ತು ʼ Abki bar Trump sarkarʼ ಎಂಬ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಾಟ ನಡೆಸಿದಾಗ, 2019ರ ಸೆಪ್ಟೆಂಬರ್ 23ರಂದು NDTVಯ ವರದಿ ವಿಡಿಯೋವೊಂದು ದೊರೆತಿದೆ.
ಈ ವಿಡಿಯೋವನ್ನು ಗಮನಿಸಿದಾಗ, “ಪ್ರಧಾನಿ ನರೇಂದ್ರ ಮೋದಿಯವರು ಹೋಸ್ಟನ್‌ನಲ್ಲಿ ನಡೆದ ಮೆಗಾ ಶೋನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಿದ್ದರು. ಈ ವೇಳೆ ನೆರೆದಿದ್ದ 50,000 ಭಾರತೀಯರು ಟ್ರಂಪ್‌ರೊಂದಿಗೆ ಇರುವ ಸಂಬಂಧದ ಕುರಿತು ಮಾತನಾಡಿದ್ದರು.
2019ರ ಸೆಪ್ಟೆಂಬರ್ 22ರಂದು ಬಿಜೆಪಿಯ ಯೂಟ್ಯೂಬ್ ವಿಡಿಯೋ ಸಹ ದೊರೆತಿದೆ. ಈ ವಿಡಿಯೋದಲ್ಲಿ ಹೋಸ್ಟನ್‌ನಲ್ಲಿನ ಪ್ರಧಾನ ಮಂತ್ರಿ ಮೋದಿಯವರ ಭಾಷಣವನ್ನು ತೋರಿಸಲಾಗಿದೆ. ಈ ವಿಡಿಯೋದಲ್ಲಿ, “ಭಾರತದ ಸ್ನೇಹಿತ, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರನ್ನು ಟೆಕ್ಸಾಸ್‌ನ ಹೋಸ್ಟನ್‌ನಲ್ಲಿ ನಡೆಯಲಾದ ಐತಿಹಾಸಿಕ #HowdyModi ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಹ್ವಾನಿಸಿದ್ದರು” ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.
ಪ್ರಧಾನಿ ಮೋದಿಯವರು ಸೆಪ್ಟೆಂಬರ್ 2019ರಲ್ಲಿ ತಮ್ಮ ಅಮೇರಿಕದ ಭೇಟಿಯ ಸಂದರ್ಭದಲ್ಲಿ ಟೆಕ್ಸಾಸ್‌ನ ಹೋಸ್ಟನ್‌ನಲ್ಲಿರುವ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ಭಾರತೀಯ ಸಮುದಾಯದ “ಹೌಡಿ ಮೋದಿ” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದರು.. ಅಂದಿನ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2020ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಪ್ರಧಾನಿ ಮೋದಿಯವರು ‘ಅಬ್ಕಿ ಬಾರ್ ಟ್ರಂಪ್ ಸರ್ಕಾರ್’ ಎಂಬ ಪದವನ್ನು ಬಳಸಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ನಂತರ ಸ್ಪಷ್ಟಪಡಿಸಿದ್ದಾರೆ.
2016ರ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ, ಟ್ರಂಪ್ ಪ್ರಚಾರದ ಜಾಹೀರಾತಿನಲ್ಲಿ “ಅಬ್ಕಿ ಬಾರ್ ಟ್ರಂಪ್ ಸರ್ಕಾರ್ “ ಎಂದು ಹೇಳಿದ್ದರು . 2020ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡನ್‌ರವರು 46ನೇ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಗಿನ ಅಧ್ಯಕ್ಷ ಟ್ರಂಪ್‌ರವರನ್ನು ಸ್ಪಷ್ಟ ಬಹುಮತದೊಂದಿಗೆ ಸೋಲಿಸಿದ್ದರು. ಬಿಡೆನ್ 306 ಚುನಾವಣಾ ಮತಗಳನ್ನು ಪಡೆದರೆ, ಟ್ರಂಪ್ 232 ಮತಗಳನ್ನು ಪಡೆದಿದ್ದರು.
ಚುನಾವಣೆಗೂ ಮುನ್ನ ಪ್ರಧಾನಿ ಮೋದಿಯವರು ಟ್ರಂಪ್ ಅವರನ್ನು ಬೆಂಬಲಿಸಿದ್ದರಾ?
2024ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿ ಅಮೇರಿಕದ ಪ್ರವಾಸದ ವೇಳೆ ಟ್ರಂಪ್‌ರನ್ನು ಭೇಟಿಯಾಗಲಿದ್ದಾರೆ ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು. ಆದರೆ, ಕಾರಣಾಂತರದಿಂದಾಗಿ ಪ್ರವಾಸ ಕೈಗೊಳ್ಳಲೇ ಇಲ್ಲ.
ಪ್ರಧಾನಿ ಮೋದಿಯವರು ತಮ್ಮ “ಮಿತ್ರ” ಡೊನಾಲ್ಡ್ ಟ್ರಂಪ್‌ರು ಅದ್ಭುತವಾಗಿ ಗೆಲುವನ್ನು ಸಾಧಿಸಿದ್ದಾರೆ ಎಂದು ಅಭಿನಂದಿಸಿದರೂ, ಕೂಡ 2024ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್‌ರವರನ್ನು ಬೆಂಬಲಿಸಿದ್ದಾರೆ ಎಂಬ ಯಾವುದೇ ಅಧಿಕೃತ ಹೇಳಿಕೆಗಳು ಕಂಡುಬಂದಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ಮೋದಿಯವರ ಹಳೆಯ ಸಂಬಂಧವಿಲ್ಲದ ವಿಡಿಯೋಗಳನ್ನು, 2024ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ರವರು ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದರು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.