Fact Check: ರಾಹುಲ್‌ ಗಾಂಧಿ ಕಾರ್ಯಕ್ರಮದಲ್ಲಿ ಸಂವಿಧಾನದ ಖಾಲಿ ಪ್ರತಿಯನ್ನು ಹಂಚಲಾಗಿದೆ ಎಂದು ನೋಟ್‌ಪ್ಯಾಡ್‌ನ ವಿಡಿಯೋ ಹಂಚಿಕೊಂಡ ಬಿಜೆಪಿ

ಸಂವಿಧಾನಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ ಬುಧವಾರ ಕಾಂಗ್ರೆಸ್ ವಿರುದ್ಧ ಹೊಸ ಆರೋಪಗಳನ್ನು ಮಾಡಿದೆ, ನಾಗ್ಪುರದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸಂವಿಧಾನ ರಕ್ಷಣೆ ಕುರಿತ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂವಿಧಾನದ ಖಾಲಿ ಪ್ರತಿಗಳನ್ನು ವಿತರಿಸಿದೆ ಎಂದು ಮಹಾರಾಷ್ಟ್ರ ಬಿಜೆಪಿ ಈಗ ಆರೋಪಿಸಿದೆ. ಸಧ್ಯ ಈ ಆರೋಪಕ್ಕೆ ಸಂಬಂಧಿಸಿದಂತೆ ವಿಡಿಯೋ ತುಣುಕೊಂದು ಹರಿದಾಡುತ್ತಿದ್ದು, ಅನೇಕರು ಇದನ್ನು ಹಂಚಿಕೊಂಡು ಕಾಂಗ್ರೆಸ್‌ ಪಕ್ಷ ಮತ್ತು ರಾಹುಲ್‌ ಗಾಂಧಿಯವರನ್ನು ಟೀಕಿಸುತ್ತಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ಘಟಕವು ತನ್ನ ಎಕ್ಸ್‌ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡು “ಈ ರೀತಿ ಭಾರತದ ಸಂವಿಧಾನವನ್ನು ಅಳಿಸಲು ಕಾಂಗ್ರೆಸ್ ಬಯಸುತ್ತಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಎಲ್ಲ ಕಾನೂನುಗಳನ್ನು ಅಳಿಸಿ ಹಾಕಬೇಕು. ಹಾಗಾಗಿಯೇ ಮಧ್ಯಂತರದಲ್ಲಿ ಮೀಸಲಾತಿ ರದ್ದಾಗಲಿದೆ ಎಂದು ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದರು. @ರಾಹುಲ್ ಗಾಂಧಿ ನೆನಪಿರಲಿ, ಗೌರವಾನ್ವಿತ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರ ಸಂವಿಧಾನವು ಚುನಾವಣಾ ವಿಷಯವಲ್ಲ ಆದರೆ ಭಾರತ ಮತ್ತು ಭಾರತೀಯರ ಜೀವನದ ಅಡಿಪಾಯವಾಗಿದೆ. ಹೀಗಾಗಿ ಸಂವಿಧಾನ ವಿರೋಧಿ ಕಾಂಗ್ರೆಸ್ ಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ.” ಎಂದು ಆರೋಪಿಸಿದ್ದಾರೆ.

ವೈರಲ್‌ ವಿಡಿಯೋದ ಮುಖಪುಟದಲ್ಲಿ ‘ಭಾರತದ ಸಂವಿಧಾನ’ ಎಂದು ಬರೆದಿರುವ ಪುಸ್ತಕವನ್ನು ತೋರಿಸುತ್ತದೆ, ಆದರೆ ಮೊದಲ ಪುಟದಲ್ಲಿ ಪೀಠಿಕೆಯನ್ನು ಹೊರತುಪಡಿಸಿ ಖಾಲಿ ಪುಟಗಳನ್ನು ಮಾತ್ರ ಒಳಗೊಂಡಿದೆ. ಈ ವೀಡಿಯೊ ಶೀಘ್ರದಲ್ಲೇ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷಗಳ ನಡುವೆ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ.

ಈ ಆರೋಪವನ್ನೇ ಹಿನ್ನಲೆಯಾಗಿಟ್ಟುಕೊಂಡು ದೇಶದ ಅನೇಕ ಸುದ್ದಿ ಮಾಧ್ಯಮಗಳು ಸೇರಿದಂತೆ ಕರ್ನಾಟಕದ ಅನೇಕ ಮಾಧ್ಯಮಗಳು ಬಿಜೆಪಿಯ ಆರೋಪವನ್ನು ವರದಿ ಮಾಡಿವೆ.

ಫ್ಯಾಕ್ಟ್‌ ಚೆಕ್:‌

ಮಹಾರಾಷ್ಟ್ರದ ಬಿಜೆಪಿ ಘಟಕದ ಆರೋಪ ಸುಳ್ಳಾಗಿದ್ದು, ಕಾರ್ಯಕ್ರಮದಲ್ಲಿ ಹಂಚಲ್ಪಟ್ಟ ಭಾರತೀಯ ಸಂವಿಧಾನ ಎಂದು ಬರೆದಿರುವ ನೋಟ್‌ಪ್ಯಾಡ್‌ಗಳ ವಿಡಿಯೋ ಹಂಚಿಕೊಂಡು, ಖಾಲಿ ಪುಟಗಳಿರುವ ಸಂವಿಧಾನದ ಪ್ರತಿ ಹಂಚಲಾಗಿದೆ ಎಂಬ ಆರೋಪವನ್ನು ಮಾಡಿದ್ದಾರೆ.

ನಾವು ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಕೀವರ್ಡ್‌ ಹುಡುಕಾಟವನ್ನು ನಡೆಸಿದಾಗ ಅನೇಕ ಮಾಧ್ಯಮಗಳು ಈ ಆರೋಪವನ್ನು ವರದಿ ಮಾಡಿದ್ದು(ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಆದರೆ ಈ ಆರೋಪವನ್ನು ಕಾಂಗ್ರೆಸ್‌ ಅಲ್ಲಗೆಳೆದಿದೆ ಎಂದು ವರದಿ ಮಾಡಿದ್ದಾರೆ.

ಮಹಾರಾಷ್ಟ್ರದ ಕಾಂಗ್ರೆಸ್‌ ಘಟಕವು ಈ ಆರೋಪದ ಕುರಿತು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಯಿಸಿದ್ದು “ಸಂವಿಧಾನದ ಮುಖಪುಟವನ್ನು ಖಾಲಿ ಪುಸ್ತಕದ ಮೇಲೆ ಹಾಕುವ ಮೂಲಕ ಸುಳ್ಳು ನಿರೂಪಣೆಯನ್ನು ಹರಡಲು ಅವರು ಎಷ್ಟೇ ಪ್ರಯತ್ನಿಸಿದರೂ, ಬಿಜೆಪಿ ಮತ್ತು ಆರ್ಎಸ್ಎಸ್ ನಿಜವಾದ ಸಂವಿಧಾನದ ಶತ್ರುಗಳು ಎಂದು ಇಡೀ ಭಾರತಕ್ಕೆ ತಿಳಿದಿದೆ” ಎಂದು ಅದು ಹೇಳಿದೆ.

“ಸಂವಿಧಾನವನ್ನು ಉಳಿಸಿದವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಸಂವಿಧಾನವನ್ನು ಕೊನೆಗೊಳಿಸುವುದು ಬಿಜೆಪಿಯ ತಂತ್ರವಾಗಿದೆ. ಆದರೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ, ದೇಶದ ಸಂವಿಧಾನ ಪ್ರಿಯ ಜನರು ಬಿಜೆಪಿಯ ಈ ಕುತಂತ್ರದ ಯೋಜನೆ ಯಶಸ್ವಿಯಾಗಲು ಎಂದಿಗೂ ಅವಕಾಶ ನೀಡುವುದಿಲ್ಲ” ಎಂದು ಪಕ್ಷ ಹೇಳಿದೆ ಎಂದು ಎಬಿಪಿ ನ್ಯೂಸ್‌ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಇಷ್ಟೇ ಅಲ್ಲದೇ ನಾವು ಮಹಾರಾಷ್ಟ್ರದ ಬಿಜೆಪಿ ಘಟಕದ ಪೋಸ್ಟ್‌ಗೆ ಪ್ರತಿಕ್ರಯಿಸಿರುವವರಲ್ಲಿ ಅನೇಕರು ಕಾರ್ಯಕ್ರಮದಲ್ಲಿ ಹಂಚಲ್ಪಟ್ಟ ನೋಟ್‌ಪ್ಯಾಡ್‌ಗಳ ಮತ್ತು ಬ್ಯಾಗ್‌ಗಳ ಚಿತ್ರಗಳನ್ನು ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ. ನೋಟ್‌ಪ್ಯಾಡ್‌ ವೈರಲ್‌ ವಿಡಿಯೋದಲ್ಲಿ ತೋರಿಸಲಾದ ಪುಸ್ತಕದಂತೆಯೇ ಇರುವುದನ್ನು ನೀವು ಗಮನಿಸಬಹುದು.

ಬಿಜೆಪಿಯ ಆರೋಪಕ್ಕೆ ಪ್ರತಿಕ್ರಯಿಸಿರುವ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ” ನಾಗ್ಪುರದಲ್ಲಿ ನಡೆದ ಸಮ್ಮೇಳನಕ್ಕೆ ಬಂದ ಗಣ್ಯರಿಗೆ ನೋಟ್ ಪ್ಯಾಡ್ ಮತ್ತು ಪೆನ್ ನೀಡಲಾಗಿದೆ. ಈ ನೋಟ್‌ಪ್ಯಾಡ್‌ಗಳ ವಿಡಿಯೊಗಳನ್ನು ತಯಾರಿಸುವುದು ಮತ್ತು ಕ್ಷುಲ್ಲಕ ಆರೋಪಗಳನ್ನು ಮಾಡಲು ಅವುಗಳನ್ನು ಬಳಸುವುದು ಹೆಚ್ಚು ಬುದ್ಧಿವಂತಿಕೆಯನ್ನು ತೋರಿಸುವುದಿಲ್ಲ! ರಾಹುಲ್ ಗಾಂಧಿ ನಾಗ್ಪುರಕ್ಕೆ ಬಂದ ಮಾತ್ರಕ್ಕೆ ಬಿಜೆಪಿಗೆ ಏಕೆ ಭಯವಾಯಿತು? ಸುಳ್ಳು ನಿರೂಪಣೆಗಳನ್ನು ಹರಡುವವರಿಗೆ, ಭಯಪಡಬೇಡಿ. ಸಂವಿಧಾನ ಮತ್ತು ರಾಹುಲ್ ಗಾಂಧಿ ಕಾಲಕಾಲಕ್ಕೆ ನಿಮ್ಮನ್ನು ಬಹಿರಂಗಪಡಿಸುತ್ತಲೇ ಇರುತ್ತಾರೆ! ಇದು ಕೇವಲ ಆರಂಭ ಮಾತ್ರ, “ಎಂದು ಅವರು X ನಲ್ಲಿ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಈ ವಿವಾದ ಇಷ್ಟೆಯಲ್ಲದೇ, ಈ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿಯವರು ಕೆಂಪು ಬಣ್ಣದ ಸಂವಿಧಾನದ ಪ್ರತಿಯನ್ನು ಹಿಡಿದಿರುವ ಕಾರಣಕ್ಕಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಾಗ್ದಾಳಿ ನಡೆಸಿದ್ದು ಇದು “ನಗರ ನಕ್ಸಲರು ಮತ್ತು ಅರಾಜಕತಾವಾದಿಗಳ” ಕಡೆಗೆ ಒಲವು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಈ ವರ್ಷದ ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ರಾಹುಲ್ ಗಾಂಧಿ ಅವರು ಕೊಂಡೊಯ್ಯುತ್ತಿದ್ದ ಸಂವಿಧಾನದ ಪ್ರತಿಯ ಬಣ್ಣವು ವಿವಾದದ ವಿಷಯವಾಯಿತು. ಆದರೆ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಸಹ ಈ ಕೆಂಪು ಬಣ್ಣದ ಸಂವಿಧಾನದ ಪ್ರತಿಯನ್ನು ಇತರ ಬಿಜೆಪಿ ನಾಯಕರಿಗೆ ನೀಡಿರುವುದು ವರದಿಯಾಗಿದೆ.

ಆದ್ದರಿಂದ, ಮಹಾರಾಷ್ಟ್ರದ ಚುನಾವಣೆಯ ಹಿನ್ನಲೆಯಲ್ಲಿ ರಾಹುಲ್‌ ಗಾಂಧಿ ನೇತೃತ್ವದ ಸಂವಿಧಾನ ರಕ್ಷಣೆ ಕಾರ್ಯಕ್ರಮದ ಕುರಿತು ವಿವಾದ ಸೃಷ್ಟಿಸಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಮಹಾರಾಷ್ಟ್ರದ ಬಿಜೆಪಿ ಘಟಕವು ನೋಟ್‌ಪ್ಯಾಡ್‌ನ ವಿಡಿಯೋವನ್ನು ಸಂವಿಧಾನದ ಖಾಲಿ ಪ್ರತಿಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಹಂಚಿದ್ದಾರೆ ಎಂಬ ಸುಳ್ಳನ್ನು ಹರಿಬಿಟ್ಟಿದ್ದಾರೆ ಎಂಬುದು ಖಾತ್ರಿಯಾಗಿದೆ.


ಇದನ್ನು ಓದಿ: ಡಾ. ಬಿ.ಆರ್ ಅಂಬೇಡ್ಕರ್ RSS ಶಾಖೆಗೆ ಭೇಟಿ ನೀಡಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *