Fact Check | ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಧಾನಿ ಮೋದಿ ಅವರ ನಾಮನಿರ್ದೇಶನವಾಗಿದೆ ಎಂಬುದು ಸುಳ್ಳು

“ಒಳ್ಳೆಯ ಸುದ್ದಿ, ನೊಬೆಲ್ ಪ್ರಶಸ್ತಿಗೆ ಭಾರತದ ಪ್ರಧಾನಿಯಾದ ನರೇಂದ್ರ ಮೋದಿಯವರನ್ನು ನಾಮನಿರ್ದೇಶನಗೊಳಿಸಲಾಗಿದೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕಾಗಿದೆ. ಭಾರತದ ಯಾವ ಪ್ರಧಾನಿಗೂ ಇದುವರೆಗೂ ನೊಬೆಲ್ ಪ್ರಶಸ್ತಿ ಲಭ್ಯವಾಗಿಲ್ಲ. ಆದರೆ ಉಕ್ರೇನ್‌ ಮತ್ತು ರಷ್ಯಾ ಯುದ್ಧದ ಸಂದರ್ಭದಲ್ಲಿ ಶಾಂತಿ ಸ್ಥಾಪನೆಗಾಗಿ ಪ್ರಧಾನಿ ಮೋದಿ ಅವರ ಪರಿಶ್ರಮಕ್ಕೆ ಈಗ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರಿಗೆ ಈ ಬಾರಿ ನೊಬೆಲ್‌ ಸಿಗುವುದು ಬಹುತೇಕ ಖಚಿತವಾಗಿದೆ ” ಎಂದು ಪೋಸ್ಟ್ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್‌ ಪೋಸ್ಟ್ ನಲ್ಲಿ ಕೆಲವೊಂದು ಅಂಶಗಳನ್ನು ಉಲ್ಲೇಖಿಸಿ, ಪ್ರಧಾನಿ ಮೋದಿ ಅವರು ನಾಮನಿರ್ದೇಶನಗೊಂಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವುದರಿಂದ, ಸಾಕಷ್ಟು ಮಂದಿ ವೈರಲ್ ಪೋಸ್ಟ್‌ ಅನ್ನು ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಪ್ರಧಾನಿ ಮೋದಿಯವರಿಗೆ ಅಭಿನಂದನೆಯನ್ನು ಕೂಡ ಸಲ್ಲಿಸುತ್ತಿದ್ದಾರೆ. ಆದರೆ ಹಲವರು ಇದು ನಿಜವಿರಲು ಸಾಧ್ಯವಿಲ್ಲ ಒಂದು ವೇಳೆ ಇದು ನಿಜವಾಗಿದ್ದರೆ, ಅಧಿಕೃತವಾಗಿ ಸರ್ಕಾರವೇ ಮಾಹಿತಿಯನ್ನು ಹೊರಹಾಕಬೇಕಿತ್ತು. ಎಂದೆಲ್ಲ ಪ್ರತಿಪಾದಿಸಿದ್ದಾರೆ ಹೀಗೆ ವಿವಾದದಿಂದ ಕೂಡಿರುವ ಈ ಪೋಸ್ಟ್‌ನ ಕುರಿತು ಈ ಫ್ರಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಆಗ 16 ಮಾರ್ಚ್ 2023 ರಂದು ಬಿಸಿನೆಸ್ ಸ್ಟ್ಯಾಂಡರ್ಡ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯೊಂದು ಕಂಡು ಬಂದಿದೆ. ಅದರಲ್ಲಿ ನೊಬೆಲ್  ಪ್ರಶಸ್ತಿ ಸಮಿತಿಯ ಉಪಾಧ್ಯಕ್ಷ ಆಶ್ಲೇ ಟೋಜೆ ಅವರನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ವರದಿಯನ್ನು ಮಾಡಲಾಗಿದೆ. ಇದರಲ್ಲಿ ಎಲ್ಲಿಯೂ ಕೂಡ ಪ್ರಧಾನಿ ನರೇಂದ್ರ ಮೋದಿಯವರು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಲಾಗಿಲ್ಲ.

ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ 16 ಮಾರ್ಚ್ 2023 ರಂದು ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರು ಹಂಚಿಕೊಂಡ ಇನ್‌ಸ್ಟಾಗ್ರಾಂ ಪೋಸ್ಟ್ ಒಂದು ಕಂಡುಬಂದಿದೆ. ಅದರಲ್ಲಿ ನೊಬೆಲ್ ಕಮಿಟಿಯ ಉಪನಾಯಕ ಆಶ್ಲೇ ಟೋಜೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿರುವ ವಿಡಿಯೋ ಕ್ಲಿಪ್ ಲಭ್ಯವಾಗಿದೆ. ಇದರಲ್ಲಿ ಅವರು “ನಾನು ಎಂದಿಗೂ ಪ್ರಧಾನಿ ಮೋದಿ ಅವರು ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ ಎಂದು ಹೇಳಿಲ್ಲ” ಎಂಬ ಸ್ಪಷ್ಟನೆ ನೀಡಿರುವುದು ಕಂಡುಬಂದಿದೆ.

ಇನ್ನು 16 ಮಾರ್ಚ್ 2023 ರಂದು CNBC TV 18.com ಸೇರಿದಂತೆ ಹಲವು ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿಯವರು ನೊಬೆಲ್ ಶಾಂತಿ ಪ್ರಶಸ್ತಿಗೆ ಅತಿ ದೊಡ್ಡ ಸ್ಪರ್ಧಿ ಎಂದು ನಾರ್ವೆಯ ನೋಬೆಲ್ ಸಮಿತಿಯ ಉಪಾಧ್ಯಕ್ಷ ಆಶ್ಲೇ ಟೋಜೆ ಹೇಳಿದ್ದಾರೆ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಉಲ್ಲೇಖವಾಗಿತ್ತು. ಆದರೆ ಇದನ್ನು ಕೂಡ ಆಶ್ಲೇ ಟೋಜೆ ಅವರು ತಿರಸ್ಕರಿಸಿದ್ದು, ಇದೆಲ್ಲಾ ಸುಳ್ಳು ಸುದ್ದಿ ಈ ರೀತಿಯ ಹೇಳಿಕೆಯನ್ನು ನಾವು ನೀಡಿಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೊಬೆಲ್ ಶಾಂತಿ ಪ್ರಶಸ್ತಿಗೆ ಮುನ್ನಡೆಯಲ್ಲಿದ್ದಾರೆ, ಅವರ ಹೆಸರನ್ನು ನಾಮನಿರ್ದೇಶನ ಮಾಡಲಾಗಿದೆ ಎಂಬುದು ಸುಳ್ಳಾಗಿದೆ. ಈ ಕುರಿತು ಹರಡಿದ್ದ ಹಲವು ಸುಳ್ಳು ಸುದ್ದಿಗಳ ಬಗ್ಗೆ, ನೊಬೆಲ್ ಪ್ರಶಸ್ತಿ ಕಮಿಟಿಯ ಉಪನಾಯಕ ಆಶ್ಲೇ ಟೋಜೆ ಅವರೇ ಸ್ಪಷ್ಟನೆಯನ್ನು ನೀಡಿದ್ದು, ಇದೊಂದು ಸುಳ್ಳು ಸುದ್ದಿ ಎಂಬುದನ್ನು ಖಚಿತಪಡಿಸಿದ್ದಾರೆ. ಹಾಗಾಗಿ ಯಾರು ಕೂಡ ವೈರಲ್ ಪೋಸ್ಟ್‌ ಅನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check | ಟ್ರಂಪ್ ವಿಜಯೋತ್ಸವ ಭಾಷಣದಲ್ಲಿ ʼಮೋದಿ ಮೋದಿʼ ಎಂದು ಜಪಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *