Fact Check : ನ್ಯಾನ್ಸಿ ಪೆಲೋಸಿಯವರು ಟ್ರಂಪ್‌ರ ಗೆಲುವಿನ ವಿರುದ್ಧ ಪ್ರತಿಕ್ರಿಯಿಸಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

2024ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿಜಯ ಸಾಧಿಸಿದ ನಂತರ, ಅಮೇರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ಮಾಜಿ ಸ್ಪೀಕರ್ ಮತ್ತು ಡೆಮೋಕ್ರಾಟ್ ನ್ಯಾನ್ಸಿ ಪೆಲೋಸಿಯವರು “ಶುಭಾಶಯಗಳನ್ನು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ, ಏಕೆಂದರೆ ಅದು ಖಂಡಿತವಾಗಿಯೂ ಗೆಲುವಲ್ಲ” ಎಂದು ಹೇಳಿದ್ದಾರೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಕನ್ನಡ ಫ್ಯಾಕ್ಟ್‌ ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ, ವಿಡಿಯೋದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, 2022ರ ಜೂನ್ 24ರಂದು X ನಲ್ಲಿ ಹಂಚಿಕೊಳ್ಳಲಾದ ಅದೇ ವೈರಲ್‌ ವಿಡಿಯೋ ಲಭಿಸಿದೆ. ಆದ್ದರಿಂದಾಗಿ 2024ರ ಚುನಾವಣೆಯ ನಂತರ ನ್ಯಾನ್ಸಿ ಪೆಲೋಸಿಯವರು ಟ್ರಂಪ್‌ ವಿಜಯದ ವಿರುದ್ಧ “ಶುಭಾಶಯಗಳನ್ನು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ, ಏಕೆಂದರೆ ಅದು ಖಂಡಿತವಾಗಿಯೂ ಗೆಲುವಲ್ಲ” ಎಂದು ಹೇಳಿಲ್ಲ ಎಂಬುದು ಖಚಿತವಾಗಿ ತಿಳಿದುಬಂದಿದೆ.

ಈ ವೈರಲ್‌ ವಿಡಿಯೋದ ಕುರಿತು ಮತ್ತಷ್ಟು ಹುಡುಕಾಟ ನಡೆಸಿದಾಗ, 2022ರ ಜೂನ್ 24ರಂದು ಪ್ರಕಟವಾದ ಡೆಡ್‌ಲೈನ್‌ ಲೇಖನವೊಂದು ದೊರೆತಿದೆ. ಆ ಲೇಖನದ ಪ್ರಕಾರ, ಆಗಿನ ಸರ್ಕಾರದ ಹೌಸ್ ಸ್ಪೀಕರ್ ಆದ ನ್ಯಾನ್ಸಿ ಪೆಲೋಸಿಯವರು ರೋಯ್ ವರ್ಸಸ್ ವೇಡ್‌ನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟಿನ ಹೆಗ್ಗುರುತಿನ ತೀರ್ಪಿನ ಮೇಲೆ ದಾಳಿ ಮಾಡಿದ್ದರು ಎಂದು ಉಲ್ಲೇಖಿಸಲಾಗಿದೆ. “ಶುಭಾಶಯಗಳನ್ನು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ, ಏಕೆಂದರೆ ಅದು ಖಂಡಿತವಾಗಿಯೂ ಗೆಲುವಲ್ಲ” ಎಂದು ಪೆಲೋಸಿಯವರು ಕ್ಯಾಪಿಟಲ್ ಹಿಲ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು. ಇವರ ನಿರ್ಧಾರವನ್ನು “ಕ್ರೂರ”, “ಅತಿರೇಕದ ಮತ್ತು ಹೃದಯವಿದ್ರಾವಕ” ಎಂದು ಕರೆಯಲಾಗಿತ್ತು. ಅಂತಹ ವರದಿಗಳು ಸಹ ನಮಗೆ ಲಭಿಸಿವೆ.

ಕ್ಯಾಲಿಫೋರ್ನಿಯಾದ ಡೆಮೋಕ್ರಾಟ್‌ನ 84 ವರ್ಷದ ಪೆಲೋಸಿ, ರೋಯ್ ವಿರುದ್ಧ ವೇಡ್‌ನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಟೀಕಿಸಿದ್ದಾರೆ. ಮತ್ತು 1973ರ ನಿರ್ಧಾರವು ಗರ್ಭಪಾತಕ್ಕೆ ಸಾಂವಿಧಾನಿಕ ಹಕ್ಕನ್ನು ಸ್ಥಾಪಿಸಿದಂತಿದೆ ಎಂದು ಮನಬಂದಂತೆ ಮಾತನಾಡಿದ್ದಾರೆ. ಕ್ಯಾಪಿಟಲ್ ವಿಸಿಟರ್ ಸೆಂಟರ್‌ನಲ್ಲಿ 2022ರ ಜೂನ್ 24ರಂದು ತಮ್ಮ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಪೆಲೋಸಿಯವರ ಹೇಳಿಕೆಗಳ ಅಧಿಕೃತ ಪ್ರತಿಲೇಖನ ದೊರೆತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2022ರ ಪೆಲೋಸಿಯವರ ಕೆಲವು ಸಂಬಂಧವಿಲ್ಲದ ಹೇಳಿಕೆಗಳನ್ನು, 2024ರ ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜೇತರಾದ ಟ್ರಂಪ್‌ ವಿರುದ್ಧ ಪ್ರತಿಕ್ರಿಯಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನು ಓದಿ :

Fact Check : ಟ್ರಂಪ್ ವಿಜಯೋತ್ಸವ ಭಾಷಣದಲ್ಲಿ ʼಮೋದಿ ಮೋದಿʼ ಎಂದು ಜಪಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *