“ಯೋಜನಾಬದ್ಧವಾಗಿ, ಹಿಂದೂಗಳು ಮತ್ತು ಹಿಂದೂಗಳ ಸಹೋದರಿಯರು ಮತ್ತು ಹಿಂದೂಗಳ ಹೆಣ್ಣುಮಕ್ಕಳನ್ನು ಕೊಲ್ಲಲಾಗುತ್ತಿದೆ, ಇದು ಅಪಘಾತ ಎಂದು ಹಿಂದೂಗಳು ಭಾವಿಸುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ, ತಮ್ಮ ಮನೆಯ ಹೊರಗೆ ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರೊಂದು ಉದ್ದೇಶಪೂರ್ವಕವಾಗಿ ಹರಿದಿದೆ. ಹೀಗೆ ಕಾರು ಹರಿಸಿದವು ಅದೇ ಕೊಲೆಗಡುಕ ಸಮುದಾಯಕ್ಕೆ ಸೇರಿದವನು. ಈತ ಈ ಇಬ್ಬರು ಸತ್ತಿದ್ದಾರಾ ಎಂಬುದನ್ನು ನೋಡಿ ಖಾತ್ರಿ ಪಡಿಸಿಕೊಂಡ ಮೇಲೆ ಸ್ಥಳದಿಂದ ಪರಾರಿಯಾಗಿದ್ದಾನೆ” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದಲ್ಲಿ ಇಬ್ಬರು ಹೆಣ್ಣು ಮಕ್ಕಳು ತಮ್ಮ ಮನೆಗಳ ಮುಂದೆ ರಂಗೋಲಿ ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ರಭಸವಾಗಿ ಬಂದ ಕಾರು ಅವರನ್ನು ಗುದ್ದುತ್ತದೆ. ಬಳಿಕ ಕಾರಿನಿಂದ ಇಳಿದ ವ್ಯಕ್ತಿ ಇಬ್ಬರನ್ನು ನೋಡಿ ಓಡಿಹೋಗುತ್ತಾನೆ. ಹೀಗಾಗಿ ಈ ವಿಡಿಯೋ ನೋಡಿದ ಸಾಕಷ್ಟು ಮಂದಿ ವೈರಲ್ ಪೋಸ್ಟ್ ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹೆಚ್ಚಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಆಗ ನಮಗೆ 30 ಅಕ್ಟೋಬರ್ 2024ರಂದು ಎನ್ಡಿಟಿವಿಯಲ್ಲಿ ಪ್ರಕಟಿಸಲಾದ ವರದಿಯೊಂದು ಕಂಡು ಬಂದಿದೆ. ಈ ವರದಿಯ ಪ್ರಕಾರಇಂದೋರ್ನ ರಾಜ್ನಗರದಲ್ಲಿರುವ ತಮ್ಮ ಮನೆಯ ಹೊರಗೆ ನವ್ಯಾ, 14 ಮತ್ತು ಪ್ರಿಯಾಂಶಿ, 20 ರವರು ರಂಗೋಲಿ ಹಾಕುತ್ತಿದ್ದಾಗ ವೇಗವಾಗಿ ಬಂದ ಕಾರು ಅವರ ಮೇಲೆ ಹರಿದಿದೆ. ಕೂಡಲೇ ಕಾರಿನಡಿ ಸಿಲುಕಿದ್ದ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು. ಆರೋಪಿ ಕಾರು ಚಾಲಕ, ಅಪ್ರಾಪ್ತ ವಯಸ್ಕ ಸ್ಥಳದಿಂದ ಪರಾರಿಯಾಗಿದ್ದು, ನಂತರ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಆಜ್ ತಕ್ ವರದಿಯ ಪ್ರಕಾರ , ಅಕ್ಟೋಬರ್ 28 ರಂದು ಇಂದೋರ್ನ ಏರೋಡ್ರೋಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 17 ವರ್ಷದ ಆರೋಪಿ ತನ್ನ ಪರಿಚಯಸ್ಥರ ಕಾರನ್ನು ಓಡಿಸುತ್ತಿದ್ದ ಎಂದು ಡಿಸಿಪಿ ವಿನೋದ್ ಕುಮಾರ್ ಮೀನಾ ಹೇಳಿದ್ದಾರೆ. ಆರೋಪಿ ಅಪ್ರಾಪ್ತನನ್ನು ಬೆಟ್ಮಾ ಪ್ರದೇಶದಿಂದ ಬಂಧಿಸಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಆರೋಪಿ ಅನ್ಯ ಕೋಮಿಗೆ ಸೇರಿದ ಯುವಕ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಬೂಮ್ ಸುದ್ದಿ ಸಂಸ್ಥೆ ತನಿಖಾಧಿಕಾರಿ (IO) ಶ್ಯಾಮ್ ಲಾಲ್ ತನ್ವಾರ್ ಅವರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದಿದೆ. ಇದರಲ್ಲಿ ಆರೋಪಿಯು ಅಪ್ರಾಪ್ತ ವಯಸ್ಕ ಮತ್ತು ಹಿಂದೂ ಸಮುದಾಯಕ್ಕೆ ಸೇರಿದವನಾಗಿದ್ದು, ಸರಿಯಾಗಿ ವಾಹನ ಚಲಾಯಿಸಲು ತಿಳಿದಿಲ್ಲ ಮತ್ತು ಪರವಾನಗಿ ಹೊಂದಿಲ್ಲ, ಆತನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಂತೆ ಮುಸ್ಲಿಂ ವ್ಯಕ್ತಿಯಿಂದ ಹಿಂದೂ ಹೆಣ್ಣು ಮಕ್ಕಳ ಮೇಲೆ ಕಾರು ಚಲಾಯಿಸಿ ಕೊಲೆ ಎಂಬುದು ಸುಳ್ಳು. ಇಬ್ಬರು ಸಂತ್ರಸ್ತ ಹೆಣ್ಣು ಮಕ್ಕಳು ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಲಾಯಿದಾತ ಅಪ್ರಾಪ್ತ ಬಾಲಕ. ಈತನೂ ಕೂಡ ಹಿಂದೂ ಸಮುದಾಯಕ್ಕೆ ಸೇರಿದವನು ಎಂದು ಬೂಮ್ ಸುದ್ದಿ ಸಂಸ್ಥೆಗೆ ತನಿಖಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ. ಹಾಗಾಗಿ ವೈರಲ್ ಪೋಸ್ಟ್ ಸುಳ್ಳು ನಿರೂಪಣೆಯಿಂದ ಕೂಡಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.