ದೆಹಲಿಯ ಜಹಾಂಗೀರ್ಪುರಿಯಲ್ಲಿರುವ ಹಿಂದೂ ದೇವಾಲಯದ ಮೇಲೆ ಮುಸ್ಲಿಂ ಸಮುದಾಯದ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ದೇವಾಲಯದ ಆವರಣದೊಳಗೆ ಕಲ್ಲು ತೂರಾಟ ನಡೆಸುತ್ತಿರುವ ಯುವಕರ ಗುಂಪನ್ನು ತೋರಿಸುವ ಸಿಸಿಟಿವಿ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
ಅನೇಕ ಬಲಪಂಥೀಯ ಮತ್ತು ಬಿಜೆಪಿ ಕಾರ್ಯಕರ್ತರು ಈ ವಿಡಿಯೋವನ್ನು ಹಂಚಿಕೊಂಡು “ಇಂದು ಕೆಲ ಸಮಯದ ಹಿಂದೆ ದೆಹಲಿಯ ಜಹಾಂಗೀರಪುರಿಯಲ್ಲಿರುವ ಕಾಳಿ ಮಾತಾ ದೇವಸ್ಥಾನದ ಮೇಲೆ ಇಸ್ಲಾಮಿಸ್ಟ್ಗಳು ಕಲ್ಲು ತೂರಾಟ ನಡೆಸಿದ್ದರು. ಈಗ ಇಸ್ಲಾಮಿಕ್ ಹಿಂಸೆ ಎಲ್ಲ ಮಿತಿಗಳನ್ನು ದಾಟಿದೆ. ದೇಶಾದ್ಯಂತ ಅವರಿಗೆ ಕಾಂಕ್ರೀಟ್ ಚಿಕಿತ್ಸೆ ಅಗತ್ಯ. ಸರಕಾರ ಅವರ ಬೆನ್ನೆಲುಬು ಮುರಿದರೆ ಮಾತ್ರ ಪರಿಹಾರ ಸಿಗುತ್ತದೆ ಮತ್ತು ಸನಾತನಿ ಕೂಡ ಆತ್ಮರಕ್ಷಣೆಯಲ್ಲಿ ಹಿಂದೆ ಬೀಳುವುದಿಲ್ಲ.” ಎಂಬ ಶೀರ್ಷಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ.
ಹಾಗೆಯೇ, ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲು ಕುಖ್ಯಾತಿ ಪಡೆದ ಹಿಂದಿಯ ಸುದರ್ಶನ್ ನ್ಯೂಸ್ ಸಹ ಈ ವಿಡಿಯೋವನ್ನು ಇದೇ ರೀತಿಯ ಕೋಮು ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ ಚೆಕ್:
ವೈರಲ್ ಮಾಹಿತಿ ಸುಳ್ಳಾಗಿದ್ದು ಕಲ್ಲು ತೂರಾಟ ನಡೆಸುತ್ತಿರುವ ಯುವಕರು ಹಿಂದೂ ಧರ್ಮಕ್ಕೆ ಸೇರಿದ್ದು, ಈ ಘಟನೆಯಲ್ಲಿ ಯಾವುದೇ ಹಿಂದೂ-ಮುಸ್ಲಿಂ ಆಯಾಮವಿಲ್ಲ.
ನಾವು ವೈರಲ್ ವಿಡಿಯೋದಿಂದ ಕೆಲವು ಕೀಫ್ರೇಮ್ ಬಳಸಿ ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟ ನಡೆಸಿದೆವು ಮತ್ತು ಕೀವರ್ಡ್ ಹುಡುಕಾಟ ನಡೆಸಿದಾಗ ಈ ಘಟನೆಗೆ ಸಂಬಂಧಿಸಿದಂತೆ ಅನೇಕ ವರದಿಗಳು ಲಭ್ಯವಾಗಿದ್ದು ಪೊಲೀಸ್ ವರದಿಗಳ ಪ್ರಕಾರ, “ಸೋಮವಾರ ಸಂಜೆ 5.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಜಹಾಂಗೀರ್ ಪುರಿಯಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ ಎಂದು ದೆಹಲಿ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಪೊಲೀಸರು ಸ್ಥಳಕ್ಕೆ ತಲುಪಿದಾಗ, ಯುವಕರ ಎರಡು ಗುಂಪುಗಳ ನಡುವಿನ ವಿವಾದದಿಂದಾಗಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಎರಡೂ ಗುಂಪುಗಳ ಯುವಕರು ಒಂದೇ ಸಮುದಾಯಕ್ಕೆ ಸೇರಿದವರು. ಅವರ ನಡುವೆ ಯಾವುದೋ ವಿಷಯದ ಕಾರಣಕ್ಕೆ ಜಗಳ ನಡೆಯಿತು. ಈ ಜಗಳದ ಮಧ್ಯೆ, ಒಂದು ಗುಂಪಿನ ಯುವಕರು ದೇವಾಲಯದ ಒಳಗೆ ಹೋದರೆ, ಇನ್ನೊಂದು ಗುಂಪಿನ ಯುವಕರು ಹೊರಗಿನಿಂದ ಕಲ್ಲುಗಳನ್ನು ಎಸೆದರು.” ಎಂದು ಎಬಿಪಿ ನ್ಯೂಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಸುದ್ದಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಲಾಗಿದೆ.
NDTV ವರದಿಯ ಪ್ರಕಾರ, “ದೆಹಲಿಯ ಜಹಾಂಗೀರ್ಪುರಿಯಲ್ಲಿ ದೇವಸ್ಥಾನದೊಳಗೆ ಸೇರಿದ್ದ ಜನರ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿವೆ. ಇದರಲ್ಲಿ ದೇವಸ್ಥಾನದ ಒಳಗೆ ಹೊರಗಿನಿಂದ ಕಲ್ಲುಗಳನ್ನು ಎಸೆಯಲಾಗುತ್ತಿದೆ. ಈ ಘಟನೆಯ ನಂತರ, ಜಹಾಂಗೀರ್ಪುರಿಯಲ್ಲಿ ಭಾರಿ ಕೋಲಾಹಲ ಮತ್ತು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಲಗಳ ಪ್ರಕಾರ ಕೆಲ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಎರಡೂ ಪಕ್ಷಗಳು ಒಂದೇ ಸಮುದಾಯಕ್ಕೆ ಸೇರಿದವರು. ಮೊದಲು ಹೊರಗಿನಿಂದ ಕಲ್ಲುಗಳನ್ನು ಎಸೆದ ನಂತರ ದೇವಾಲಯದ ಒಳಗಿನಿಂದ ಕೂಡ ಕಲ್ಲುಗಳನ್ನು ಎಸೆಯಲಾಯಿತು.” ಎಂದು ತಿಳಿಸಿದೆ.
ತನಿಖೆ ಮುಂದುವರಿದಿದ್ದು, ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಕೆಲವು ಬಲಪಂಥೀಯ ಮತ್ತು ಬಿಜೆಪಿ ಪ್ರಭಾವಿಗಳು ಧರ್ಮದ ಆಧಾರದ ಮೇಲೆ ದ್ವೇಷವನ್ನು ಹರಡುವ ಸಲುವಾಗಿ ವಿಡಿಯೊಗಳನ್ನು ಸುಳ್ಳು ಕೋಮು ಆಯಾಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇದನ್ನು ಓದಿ: ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್ ಪರವಾಗಿ ಮಾತನಾಡಿದ್ದು ನಿಜ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.