“ದೀಪಾವಳಿಯಂದು ಮೋದಿ ಸರ್ಕಾರದ ದೊಡ್ಡ ಕೊಡುಗೆ.. ಈ ದೀಪಾವಳಿಗೆ ಮೋದಿ ಸರ್ಕಾರ ಜನ ಸಾಮನ್ಯರಿಗೆ ವಿವಿಧ ಉಡುಗೊರೆಗಳನ್ನು ನೀಡಲಿದೆ. ಇದಕ್ಕಾಗಿ ಕೇಂದ್ರ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡಿದೆ. ಈ ಉಡುಗೊರೆ ಯೋಜನೆಯಅಡಿಯಲ್ಲಿ ಎಲ್ಲಾ ದೇಶವಾಸಿಗಳಿಗೆ ಐದು ಸಾವಿರ ರೂ. ಹಣವನ್ನು ನೀಡಲಾಗುತ್ತಿದೆ. ಈ ಯೋಜನೆಯ ಲಾಭ ಪಡೆಯಲು ಕೇಂದ್ರದ ಸರ್ಕಾರ ವೆಬ್ಸೈಟ್ಗೆ ಹೋಗಿ ನಿಮ್ಮ ಮಾಹಿತಿ ಮತ್ತು ಫೋನ್ ಸಂಖ್ಯೆಯನ್ನು ನೀಡುವಂತೆ ಕೇಳಲಾಗಿದೆ. ಈ ಕುರಿತು ಇಂಡಿಯಾ ಟಿವಿ ಕೂಡ ವರದಿ ಮಾಡಿದೆ.” ಎಂದು ಪೋಸ್ಟ್ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಪೋಸ್ಟ್ ನೋಡಿದ ಹಲವು ಇದು ನಿಜವೆಂದು ಭಾವಿಸಿ, ಅದರಲ್ಲೂ ಇಂಡಿಯಾ ಟಿವಿ ವರದಿ ಕಂಡು ಬಂದ ಕಾರಣ, ಹಲವರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಸಾಕಷ್ಟು ಮಂದಿ ಇದನ್ನು ವಿವಿಧ ವಾಟ್ಸ್ಆಪ್ ಗ್ರೂಪ್ ಸೇರಿದಂತೆ ಇನ್ನೀತರರಿಗೆ ಸಂದೇಶ ರೂಪದಲ್ಲಿ ಫಾರ್ವರ್ಡ್ ಕೂಡ ಮಾಡುತ್ತಿದ್ದಾರೆ. ಆದರೆ ಹಲವು ಮಂದಿ ಇದೊಂದು ಮೋಸದ ಜಾಲ ಎಂದು ಪ್ರತಿಪಾದಿಸುತ್ತಿದ್ದಾರೆ. ಹೀಗೆ ವಿವಿಧ ಆಯಾಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಇಂಡಿಯಾ ಟಿವಿಯೊಂದನ್ನು ಹೊರತು ಪಡಿಸಿ, ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಯಾವುದಾದರೂ ಯೋಜನೆಯ ಕುರಿತು ಬೇರೆ ಮಾಧ್ಯಮಗಳಲ್ಲಿ ವರದಿಗಳು ಬಂದಿವವೆಯೇ ಎಂದು ಪರಿಶೀಲನೆಯನ್ನು ನಡೆಸಿದೆವು. ಆದರೆ ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ವರದಿಗಳು ಕಂಡು ಬಾರದ ಕಾರಣ ವೈರಲ್ ಪೋಸ್ಟ್ ಸುಳ್ಳು ಮಾಹಿತಿ ಎಂಬುದನ್ನು ನಾವು ಕಂಡು ಕೊಂಡಿದ್ದೇವೆ.
ಆದರೂ ಹೆಚ್ಚಿನ ಮಾಹಿತಿಗಾಗಿ ನಾವು ಇನ್ನಷ್ಟು ಪರಿಶೀಲನೆಯನ್ನು ನಡೆಸಿದೆವು. ಇದಕ್ಕಾಗಿ ನಾವು ಇಂಡಿಯಾ ಟಿವಿಯ ಕ್ಲಿಪ್ಗಳನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ ನಮಗೆ ವೈರಲ್ ಕ್ಲಿಪ್ಗೆ ಸಂಬಂಧಿಸಿದ ಮೂಲ ವಿಡಿಯೋ ಪತ್ತೆಯಾಗಿದೆ. ವೀಡಿಯೊ ಸುದ್ದಿಯನ್ನು ಇಂಡಿಯಾ ಟಿವಿಯ ಯೂಟ್ಯೂಬ್ ಚಾನೆಲ್ನಲ್ಲಿ 19 ಅಕ್ಟೋಬರ್ 2022 ರಂದು ಅಪ್ಲೋಡ್ ಮಾಡಲಾಗಿದೆ. ಇದರಲ್ಲಿ ವೈರಲ್ ವೀಡಿಯೊದಲ್ಲಿ ಬಳಸಲಾದ ಕ್ಲಿಪ್ ಅನ್ನು ಸಹ ಕಾಣಬಹುದು. ವಿಡಿಯೋ ಸುದ್ದಿಗಳ ಪ್ರಕಾರ, ದೀಪಾವಳಿಯಂದು ಪ್ರಧಾನಿ ಮೋದಿ ದೇಶದ 75 ಸಾವಿರ ಯುವಕರಿಗೆ ಉದ್ಯೋಗ ಪ್ರಮಾಣಪತ್ರವನ್ನು ನೀಡುವ ಮೂಲಕ ದೊಡ್ಡ ಉಡುಗೊರೆಯನ್ನು ನೀಡಲಿದ್ದಾರೆ ಎಂದು ಎರಡು ವರ್ಷದ ಹಿಂದೆ ಹೇಳಲಾಗಿದೆ ಎಂಬುದು ತಿಳಿದು ಬಂದಿದೆ. ಇಲ್ಲಿಗೆ ವೈರಲ್ ವಿಡಿಯೋದ ಕ್ಲಿಪ್ ಕೂಡ ಹಳೆಯದು ಎಂಬುದು ಸಾಬೀತಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ವೈರಲ್ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ದೀಪಾವಳಿ ಹಬ್ಬದ ಸಲುವಾಗಿ, ದೇಶದ ಜನ ಸಾಮಾನ್ಯರ ಖಾತೆಗಳಿಗೆ 5000 ರೂ.ಗಳನ್ನು ಜಮೆ ಮಾಡಲಿದೆ ಎಂಬುದು ಸುಳ್ಳು ಸುದ್ದಿಯಾಗಿದೆ. ವೈರಲ್ ಆಗುತ್ತಿರುವ ಇಂಡಿಯಾ ಟಿವಿಯ ವಿಡಿಯೋ ಕ್ಲಿಪ್ 2022ರದ್ದಾಗಿದೆ. ಹಾಗಾಗಿ ವೈರಲ್ ಪೋಸ್ಟ್ ಸುಳ್ಳು ನಿರೂಪಣೆಯೊಂದಿಗೆ ಕೂಡಿದೆ. ಈ ಕಾರಣದಿಂದ ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check : ಮದರಸಾ ಮಕ್ಕಳು ಭಾರತದ ವಿರುದ್ಧ ಮಾತಾಡುತ್ತಿದ್ದಾರೆ ಎಂದು ವೈರಲ್ ಆಗುತ್ತಿರುವ ವಿಡಿಯೋ ಪಾಕಿಸ್ತಾನದ್ದು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.