Fact Check | ಶಾರ್ಜೀಲ್ ಇಮಾಮ್ ಪ್ರಕರಣ: ಲೈವ್ ಲಾ ವರದಿಯ ಬಗ್ಗೆ ಸುಳ್ಳು ವರದಿ ಪ್ರಕಟಿಸಿದ OpIndia

ಶಾರ್ಜೀಲ್ ಇಮಾಮ್‌ರ ಸುಪ್ರೀಂ ಕೋರ್ಟ್ ಪ್ರಕರಣದ ಕುರಿತು ‘ಲೈವ್ ಲಾ'(LiveLaw) “ತಪ್ಪಾಗಿ ವರದಿ ಮಾಡಿದೆ” ಎಂದು OpIndia  ಹೇಳಿಕೊಂಡಿದ್ದು, ನ್ಯಾಯಾಂಗ ಪ್ರಕ್ರಿಯೆಗಳ ಬಗ್ಗೆ ಲೈವ್ ಲಾ “ಸುಳ್ಳು ಮಾಹಿತಿಯನ್ನು ನೀಡಿದೆ” ಎಂದು ಆರೋಪಿಸಿದೆ.

“ಶಾರ್ಜೀಲ್ ಇಮಾಮ್ ಪ್ರಕರಣದಲ್ಲಿ ಲೈವ್‌ಲಾ ‘ಸುಳ್ಳು ಸುದ್ದಿಗಳನ್ನು ಹರಡುತ್ತಿದೆ’ ಮತ್ತು ‘ನ್ಯಾಯಮೂರ್ತಿ ಬೇಲಾ ತ್ರಿವೇದಿಯವರನ್ನು ಅವರೊಂದಿಗೆ ಯಾವುದೇ ರೀತಿಯ ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ…’. ನ್ಯಾಯವಾದಿ ಬೇಲಾ ತ್ರಿವೇದಿ ಅವರ ಮುಂದೆ ಶಾರ್ಜೀಲ್ ಇಮಾಮ್‌ ಮನವಿ ಸಲ್ಲಿಸಿದ್ದಾರೆ ಎಂದು ಸುಳ್ಳು ವರದಿ ಮಾಡಿರುವ ಎಂ.ಎ ರಶೀದ್‌ರವರ ಲೈವ್‌ಲಾ ‘ಹಸಿಹಸಿ ಸುಳ್ಳು ಸುದ್ದಿ’ಗಳನ್ನು ಬಿತ್ತರಿಸುತ್ತಿದೆ” ಎಂದು ಈ ಬಗ್ಗೆ ಸುದೀರ್ಘ ಲೇಖನ ಬರೆದಿರುವ OpIndiaದ ಪ್ರಧಾನ ಸಂಪಾದಕಿ ನೂಪುರ್ ಶರ್ಮಾ ಆರೋಪಿಸಿದ್ದಾರೆ.

ನೂಪುರ್ ಶರ್ಮಾ ತಮ್ಮ ಆರೋಪದಲ್ಲಿ, “ಸುಪ್ರೀಂ ಕೊರ್ಟ್‌ ವಿಚಾರಣೆಗೆ ಮೊದಲೇ LiveLaw ಶಾರ್ಜೀಲ್ ಇಮಾಮ್ ಪ್ರಕರಣಗಳನ್ನು ತಪ್ಪಾಗಿ ವರದಿ ಮಾಡಿದೆ. ವಾಸ್ತವವಾಗಿ ಈ ಬಗ್ಗೆ ಲಭ್ಯವಿರುವ ಮಾಹಿತಿಯನ್ನು  ನಾವು ಪರಿಶೀಲಿಸಿದ್ದೇವೆ‌” ಎಂದೂ ಸಮರ್ಥಿಸಿಕೊಂಡಿದ್ದರು.

ಫ್ಯಾಕ್ಟ್‌ ಚೆಕ್:

OpIndiaದ ವಾದವು ಸುಳ್ಳಿನಿಂದ ಕೂಡಿದ್ದು, LiveLawನ ವರದಿಯು ನಿಖರವಾಗಿತ್ತು ಎಂಬುದರ ಬಗ್ಗೆ ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡವು  ಸತ್ಯ ಪರಿಶೀಲನೆ ನಡೆಸಿದೆ.

ಶಾರ್ಜೀಲ್ ಇಮಾಮ್‌ರವರು ಸುಪ್ರೀಂ ಕೋರ್ಟ್‌ನಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿದ್ದರು. ಜಾಮೀನು ಕೋರಿ ಒಂದು ಪ್ರಕರಣ ಸಲ್ಲಿಸಿದ್ದರೆ, ಇನ್ನೊಂದು ಅರ್ಜಿಯನ್ನು 2020ರ ದೇಶದ್ರೋಹದ ಪ್ರಕರಣದಲ್ಲಿ ಅವರ ವಿರುದ್ಧ ದಾಖಲಾದ ಎಫ್‌ಐಆರ್‌‌ಗಳನ್ನು ರದ್ದುಗೊಳಿಸುವಂತೆ ಕೋರಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದರು.

2024ರ ಅಕ್ಟೋಬರ್ 22ರಂದು ಸುಪ್ರೀಂ ಕೋರ್ಟ್‌ ಇಮಾಮ್ ಸಲ್ಲಿಸಿದ ಎರಡು ವಿಭಿನ್ನ ಮನವಿಗಳನ್ನು ಪಟ್ಟಿ ಮಾಡಿತ್ತು. ಆದರೆ, ಅದೇ ದಿನ ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರ ಪೀಠದ ಮುಂದೆ ಪಟ್ಟಿ ಮಾಡಲಾಗಿದ್ದ ಎರಡನೇ ಪ್ರಕರಣವನ್ನು OpIndia ಕಡೆಗಣಿಸಿರುವುದನ್ನು ಕನ್ನಡ ಫ್ಯಾಕ್ಟ್‌ಚೆಕ್ ತಂಡವು ಗುರುತಿಸಿದೆ.

ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಎರಡು ವಿಭಿನ್ನ ಅರ್ಜಿಗಳು ಮತ್ತು ಇತರ ವಿವರಗಳನ್ನು ಪರಿಶೀಲಿಸುವ ಮೂಲಕ ಎರಡು ಪ್ರಕರಣಗಳನ್ನು ಪರಿಶೀಲಿಸಿದೆ.

ಶಾರ್ಜೀಲ್ ಇಮಾಮ್‌ರವರ ಒಂದು ಪ್ರಕರಣವು ಸಂಜೀವ್ ಖನ್ನಾ ನೇತೃತ್ವದ ಪೀಠದ ಮುಂದೆ ಇತ್ತು. ಮತ್ತು ಇನ್ನೊಂದು ಪ್ರಕರಣವನ್ನು ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತು.

ಪ್ರಕರಣ 1: ಜಸ್ಟೀಸ್ ಸಂಜೀವ್ ಖನ್ನಾ ನೇತೃತ್ವದ ಪೀಠದ ವಿಚಾರಣೆ

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರ ಮುಂದೆ ನ್ಯಾಯಾಲಯ 2 ರಲ್ಲಿ ಪಟ್ಟಿ ಮಾಡಲಾದ ವಿಷಯ – ಡೈರಿ ಸಂಖ್ಯೆ 4730/2020, ಇದು ನಾಲ್ಕು ವರ್ಷಗಳ ಹಳೆಯ ಪ್ರಕರಣವಾಗಿದ್ದು, ದೆಹಲಿ, ಉತ್ತರ ಪ್ರದೇಶ, ಅಸ್ಸಾಂ, ಮಣಿಪುರ ಮತ್ತು ಅರುಣಾಚಲ ಪ್ರದೇಶದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಐದು ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ಇಮಾಮ್ ಕೋರಿದ್ದರು. ಇವು 2020ರ ಜನವರಿ 16ರಂದು ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ನೀಡಿದ ಭಾಷಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್‌ಗಳಿಗೆ ಸಂಬಂಧಿಸಿದ್ದು.

ಪ್ರಸ್ತುತ ನ್ಯಾಯಮೂರ್ತಿ ಖನ್ನಾ ಅವರ ಮುಂದಿರುವ ಪ್ರಕರಣವನ್ನು 2020ರ ಏಪ್ರಿಲ್ 28ರಂದು ಮೊದಲ ಬಾರಿಗೆ ಸಲ್ಲಿಸಿದಾಗಿನಿಂದ 10 ಬಾರಿ ಮುಂದೂಡಲಾಗಿದೆ. ಇದನ್ನು 11 ನೇ ಬಾರಿಗೆ 2024ರ ಅಕ್ಟೋಬರ್ 22ರಂದು ಮುಂದೂಡಲಾಗಿತ್ತು, ಆದರೆ ಪೀಠವು ಕೆಲವು ಇತರ ಪ್ರಕರಣಗಳ ವಿಚಾರಣೆಯಲ್ಲಿ ನಿರತರಾಗಿದ್ದರಿಂದ ವಿಷಯವನ್ನು ಆಲಿಸಿಲ್ಲ. ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಪ್ರಕರಣದ ವಿವರಗಳ ಪ್ರಕಾರ, ಈ ಪ್ರಕರಣವನ್ನು ಈಗ 2024ರ ನವೆಂಬರ್ 5ಕ್ಕೆ ತಾತ್ಕಾಲಿಕವಾಗಿ ಪಟ್ಟಿ ಮಾಡಲಾಗಿದೆ.

ಪ್ರಕರಣ 2: ಜಸ್ಟೀಸ್ ಬೇಲಾ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ‌ರವರ ಪೀಠ

ಅಕ್ಟೋಬರ್ 22ರಂದು, ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಮುಂದೆ ಎರಡನೆಯ ಪ್ರಕರಣವನ್ನು ಪಟ್ಟಿ ಮಾಡಲಾಗಿದ್ದು – ಡಬ್ಲ್ಯೂ.ಪಿ. (Crl) 422/2024 – ಶಾರ್ಜೀಲ್ ಇಮಾಮ್ Vs ರಾಜ್ಯ (NCT ದೆಹಲಿ). ಇದು ಮೊದಲ ಬಾರಿಗೆ 2024ರ ಅಕ್ಟೋಬರ್ 9ರಂದು ದಾಖಲಿಸಲಾದ ಹೊಸ ಪ್ರಕರಣವಾಗಿದೆ.

ಈ ಮನವಿಯಲ್ಲಿ, ವಿದ್ಯಾರ್ಥಿ ಕಾರ್ಯಕರ್ತನನ್ನು ದೊಡ್ಡ ಪಿತೂರಿ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿರುವ 2020ರ ದೆಹಲಿ ಗಲಭೆ ವಿಷಯಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಸಲ್ಲಿಸಿದ್ದಾಗಿದೆ.

ಪರ್ಯಾಯವಾಗಿ, ಸುಪ್ರೀಂ ಕೋರ್ಟ್ ತನ್ನ ಜಾಮೀನು ಅರ್ಜಿಯನ್ನು ಪುರಸ್ಕರಿಸಲು ಒಲವು ತೋರದಿದ್ದರೆ ದೆಹಲಿ ಹೈಕೋರ್ಟ್‌ಗೆ ನಿರ್ದೇಶನ ನೀಡುವಂತೆ ಕೋರಿ ಇಮಾಮ್ ಮನವಿ ಮಾಡಿದ್ದರು ಮತ್ತು ಈ ವಿಷಯವನ್ನು ತ್ವರಿತವಾಗಿ ವಿಚಾರಣೆ ಮಾಡಬೇಕೆಂದು ಕೋರಿದ್ದರು.
ತನ್ನ ಈ ಮನವಿಯಲ್ಲಿ, ಕಳೆದ 2.5 ವರ್ಷಗಳಿಂದ ಈ ಪ್ರಕರಣವು ಹೈಕೊರ್ಟಿನಲ್ಲಿ ಬಾಕಿ ಉಳಿದಿದೆ ಮತ್ತು ಕನಿಷ್ಠ 69 ಬಾರಿ ಮುಂದೂಡಲಾಗಿದೆ. ಆದರೆ ಯಾವುದೇ ಪರಿಣಾಮಕಾರಿ ವಿಚಾರಣೆ ನಡೆದಿಲ್ಲ ಎಂದು ಸುಪ್ರೀಂಕೋರ್ಟಿನ ಗಮನಕ್ಕೆ ತಂದಿದ್ದಾರೆ. ಶಾರ್ಜೀಲ್ ಇಮಾಮ್ ಅವರು ನಾಲ್ಕು ವರ್ಷ ಮತ್ತು 2 ತಿಂಗಳ ಕಾಲ ಜೈಲಿನಲ್ಲಿದ್ದಾರೆ.

OpIndia ನ್ಯಾಯಾಂಗ ನಿಂದನೆ ಮಾಡುತ್ತಿದೆ: ಲೈವ್‌ ಲಾ ಪ್ರತ್ಯುತ್ತರ

ನೂಪುರ್ ಶರ್ಮಾ‌ರ ಆರೋಪಗಳಿಗೆ ಲೈವ್ ಲಾ ಮ್ಯಾನೇಜಿಂಗ್ ಎಡಿಟರ್ ಮನು ಸೆಬಾಸ್ಟಿಯನ್‌ರವರು ಅಕ್ಟೋಬರ್ 23ರಂದು ಪೋಸ್ಟ್ ಮಾಡಿದ ಟ್ವೀಟ್ ಥ್ರೆಡ್‌ನಲ್ಲಿ “OpIndiaದ ಲೇಖನವು ದುರುದ್ದೇಶಪೂರಿತವಾಗಿದೆ, ವಾಸ್ತವಿಕವಾಗಿ ತಪ್ಪಾಗಿದೆ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳನ್ನು ತಪ್ಪಾಗಿ ನಿರೂಪಿಸಲಾಗಿದೆ, ಅಲ್ಲದೇ, OpIndia ನ್ಯಾಯಾಂಗ ನಿಂದನೆ ಮಾಡುತ್ತಿದೆ” ಎಂದು ಬೆಟ್ಟು ಮಾಡಿದ್ದಾರೆ.

Oplus_131072

ನೂಪುರ್ ಶರ್ಮಾರ ಲೇಖನವನ್ನು ‘ಚೇಷ್ಟೆ’ ಎಂದು ಕರೆದ ಸೆಬಾಸ್ಟಿಯನ್ ಅವರು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಹೊರತಾಗಿಯೂ, “OpIndia ಲೈವ್ ಲಾಗೆ ಕಳಂಕ ತರುವ ಪ್ರಯತ್ನದಲ್ಲಿ ಜನರನ್ನು ತಪ್ಪುದಾರಿಗೆಳೆಯುವ ಲೇಖನವನ್ನು ಪ್ರಕಟಿಸಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, OpIndiaದ ಪ್ರಧಾನ ಸಂಪಾದಕಿ ನೂಪುರ್ ಶರ್ಮಾರವರು, ಲೈವ್ ಲಾ‌ ಕಾನೂನು ಸುದ್ದಿ ಸಂಸ್ಥೆ ತಪ್ಪಾಗಿ ವರದಿ ಮಾಡಿದೆ ಎಂದು ಆರೋಪ ಮಾಡುವ ಆತುರದಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ ಶಾರ್ಜೀಲ್ ಇಮಾಮರ ಇನ್ನೊಂದು ಪ್ರಕರಣವನ್ನು ನಿರ್ಲಕ್ಷಿಸಿದೆ ಎಂಬುದು ಸಾಬೀತಾಗಿದೆ. ಹೀಗಾಗಿ OpIndia ಲೈವ್ ಲಾ ಬಗ್ಗೆ ಹುಸಿ ಆರೋಪಗಳನ್ನು ಮಾಡಿದ್ದಾರೆ ಎಂಬುದು ತಿಳಿದುಬರುತ್ತದೆ.


ಇದನ್ನು ಓದಿದ್ದೀರಾ ?: Fact Check | ಚೀನೀ ಪಡೆಗಳು ‘ಜೈ ಶ್ರೀರಾಮ್’ ಘೋಷಣೆ ಕೂಗಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

 

Leave a Reply

Your email address will not be published. Required fields are marked *