Fact Check : ಮೀಸಲಾತಿ ತೆಗೆದುಹಾಕುತ್ತೇವೆ ಎಂದು ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಹೇಳಿಲ್ಲ

“ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನಕ್ಕೇ ಬೆಂಕಿ ಇಡಲು @INCIndia ಚಿಂತನೆ ನಡೆಸಿದೆ. ಮಂದ ಬುದ್ಧಿಯ ಬಾಲಕ @RahulGandhi ಅವರು ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನೇ ಕಿತ್ತು ಹಾಕುವುದಾಗಿ ದೂರದ ಅಮೆರಿಕದಲ್ಲಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್‌ ಬಡವರು, ದೀನ ದಲಿತರು, ಶೋಷಿತರು, ಪರಿಶಿಷ್ಟರು, ಬುಡಕಟ್ಟು ಸಮುದಾಯದವರ ವಿರೋಧಿ ಎನ್ನುವುದಕ್ಕೆ ಇದಕ್ಕಿಂತಲೂ ಸಾಕ್ಷಿ ಇನ್ನೇನು ಬೇಕು?” ಎಂದು ಬಿಜೆಪಿಯವರು ತನ್ನ ಕರ್ನಾಟಕ  ಎಕ್ಸ್‌ ( ಈ ಹಿಂದಿನ ಟ್ವಿಟರ್‌)ನಲ್ಲಿ ಎಡಿಟೆಡ್‌ ವಿಡಿಯೋವನ್ನು ಈ ಹಿಂದೆ ಹಂಚಿಕೊಂಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ಸುಳ್ಳು ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಭಾರತೀಯ ಹಲವಾರು ಜನತಾ ಪಕ್ಷದ (ಬಿಜೆಪಿ) ಪದಾಧಿಕಾರಿಗಳು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಭಾರತದಲ್ಲಿ ಮೀಸಲಾತಿಯನ್ನು ರದ್ದುಗೊಳಿಸುವ ಕುರಿತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ರಾಹುಲ್‌ ಗಾಂಧಿಯವರ ಅಪಾದಿತ ಹೇಳಿಕೆಗಳನ್ನು ಪಟೋಲೆ ಬೆಂಬಲಿಸಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ  “ಮೀಸಲಾತಿ ತೆಗೆದುಹಾಕುತ್ತೇವೆ” ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಸಾಮಾಜಿಕ ತಾರತಮ್ಯವನ್ನು ಹೋಗಲಾಡಿಸುವ ಸಲುವಾಗಿ ಮೀಸಲಾತಿಯನ್ನು ಒದಗಿಸಲಾಗುತ್ತದೆ. ಆದರೆ SC, ST ಮತ್ತು OBC ಮೀಸಲಾತಿಯನ್ನು ತೆಗೆದುಹಾಕಲು ಕಾಂಗ್ರೆಸ್ ನಿರ್ಧರಿಸಿದೆ, ಮೋದಿ ಮತ್ತು ಬಿಜೆಪಿ ಇರುವವರೆಗೆ, ಡಾ.ಬಿ.ಆರ್‌.ಅಂಬೇಡ್ಕರ್‌ರವರು ನೀಡಿದ ಮೀಸಲಾತಿಯನ್ನು ಯಾರೂ ಮುಟ್ಟುವುದಕ್ಕೆ ಬಿಡುವುದಿಲ್ಲ. ಬಿಜೆಪಿ ಮೀಸಲಾತಿಯನ್ನು ಎಲ್ಲ ಬೆಲೆಯನ್ನು ತೆತ್ತಿಯಾದರೂ ರಕ್ಷಿಸಿಕೊಳ್ಳುತ್ತದೆ”. ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಕೂಡ ಇದೇ ಹೇಳಿಕೆಯೊಂದಿಗೆ ವಿಡಿಯೋವನ್ನು ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಶಿವಸೇನೆ (ಏಕನಾಥ್ ಶಿಂಧೆ ಬಣ) ನಾಯಕ ಸಂಜಯ್ ನಿರುಪಮ್ ಕೂಡ ಇದೇ ಹೇಳಿಕೆ ನೀಡಿದ್ದಾರೆ. ಹೀಗೆ ವಿವಾದಕ್ಕೆ ಕಾರಣವಾಗಿರುವ ವೈರಲ್‌ ವಿಡಿಯೋದ ಅಸಲಿಯತ್ತು ಏನು? ಪಟೋಲೆಯವರು ಪೂರ್ಣ ವಿಡಿಯೋದಲ್ಲಿ ಯಾವ ಯಾವ ಅಂಶಗಳ ಕುರಿತು ಮಾತನಾಡಿದ್ದಾರೆ? ಎಂಬುದನ್ನು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿದುಕೊಳ್ಳೋಣ.

ಫ್ಯಾಕ್ಟ್‌ ಚೆಕ್‌ :

ಬಿಜೆಪಿ ಬೆಂಬಲಿತ ಮಾಧ್ಯಮಗಳು ಮತ್ತು ಬಿಜೆಪಿಯ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳಲು ಹುಡುಕಾಟ ನಡೆಸಿದಾಗ,  ಪಟೋಲೆ ಅವರ ಭಾಷಣದ ಮೂಲ ವಿಡಿಯೋವನ್ನು ಹಿಂದಿ ಸುದ್ದಿ ವಾಹಿನಿಯಾದ ಇಂಡಿಯಾ ಟಿವಿಯಲ್ಲಿ ಪ್ರಸಾರ ಮಾಡಲಾಗಿದೆ.

ಮೂಲ ವಿಡಿಯೋದಲ್ಲಿ ಪಟೋಲೆಯವರು ಮೀಸಲಾತಿ ಕುರಿತು ಕಾಂಗ್ರೆಸ್‌ನ ನಿಲುವಿನ ಬಗ್ಗೆ ಮತ್ತು ಬಿಜೆಪಿಯ ಆರೋಪಗಳನ್ನು ಕುರಿತು ಚರ್ಚಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೀಸಲಾತಿಯನ್ನು ತೆಗೆದುಹಾಕುವುದಾಗಿ ಹೇಳಿಲ್ಲ ಎಂದು ಅವರ ಬೆಂಬಲಕ್ಕೆ ನಿಂತು ಪಟೋಲೆ ಮಾತನಾಡಿದ್ದಾರೆ.

ನಿಮ್ಮ ಕಾಂಗ್ರೆಸ್ ಪಕ್ಷವು ಮೀಸಲಾತಿ ಕುರಿತು ಹೇಗೆ ವಿಚಾರ ಮಾಡುತ್ತದೆ? ಸಂವಿಧಾನ ಮತ್ತು ವಿದೇಶದಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗಳನ್ನು, ಬಿಜೆಪಿ ವಿಷಯವನ್ನಾಗಿಸಿಕೊಂಡು ಕಾಂಗ್ರೆಸ್ ಪಕ್ಷವು ಜಾತಿ, ಜನಗಣತಿ ವಿಷಯವನ್ನು ಪ್ರಸ್ತಾಪಿಸಿ ಜಾತಿಗಳ ನಡುವೆ ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿದೆ. ಮರಾಠರು ಮತ್ತು ಒಬಿಸಿಗಳ ನಡುವೆ ಬಿರುಕು ಮೂಡಿಸುತ್ತಿದೆ ಎಂದು ಆರೋಪ ಮಾಡುತ್ತಿದೆ. ಇದನ್ನು ಕುರಿತು ಪಟೋಲೆರವರೇ ನೀವೇನು ಹೇಳುತ್ತೀರಿ? ಎಂದು ಇಂಡಿಯಾ ಟಿವಿ ಪತ್ರಕರ್ತರು ಕೇಳಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು? ಮೀಸಲಾತಿ ಕುರಿತು ಗಾಂಧಿಯವರು ಮಾತನಾಡಿದ ವಿಡಿಯೋ ನಿಮ್ಮ ಬಳಿ ಇದ್ದರೆ ತೋರಿಸಿ ಎಂದರು. ನಂತರ ನಮ್ಮ ದೇಶದಲ್ಲಿ ಯಾವಾಗ ಎಲ್ಲರೂ ಸಮಾನರಾಗುತ್ತಾರೋ ಆಗ ಮೀಸಲಾತಿಯ ಬಗ್ಗೆ ಯೋಚಿಸಬಹುದು ಎಂದು ಗಾಂಧಿ ಅವರು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿಲುವು ಕೂಡ ಅದೇ ಆಗಿದೆ. ರಾಹುಲ್ ಗಾಂಧಿಯವರು ಹೇಳಿದ್ದರಲ್ಲಿ ತಪ್ಪೇನಿಲ್ಲ. ಇಂಗ್ಲಿಷ್ ಅರ್ಥವಾಗದ  ಬಿಜೆಪಿಯವರು ತಮಗೆ ಬೇಕಾದ ಹಾಗೆ ಅರ್ಥ ಮಾಡಿಕೊಂಡರೆ ಹೇಗೆ ಎಂದು ಪಟೋಲೆಯವರು ಪತ್ರಕರ್ತರ ಪ್ರಶ್ನೆಗೆ ಪ್ರತ್ಯುತ್ತರವನ್ನು ನೀಡಿದ್ದರು. ಅದನ್ನು ಈ ಕೆಳಗಿನ ವಿಡಿಯೋದಲ್ಲಿ ನೀವು ನೋಡಬಹುದು.

ಮೀಸಲಾತಿ ವಿಚಾರದಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?

2024ರ ಸೆಪ್ಟೆಂಬರ್‌ನಲ್ಲಿ ರಾಹುಲ್ ಗಾಂಧಿ ವಾಷಿಂಗ್ಟನ್ ಡಿಸಿಯ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಸಂವಾದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಪ್ರಶ್ನೋತ್ತರ ಅವಧಿಯಲ್ಲಿ, ವಿದ್ಯಾರ್ಥಿಯೊಬ್ಬರು ಜಾತಿ ಆಧಾರಿತ ಮೀಸಲಾತಿಯ ಕುರಿತು ನಿಮ್ಮ ಅಭಿಪ್ರಾಯವೇನು? ಮತ್ತು ಮೀಸಲಾತಿ ಕುರಿತು ಕಾಂಗ್ರೆಸ್ ಪಕ್ಷದ ನಿಲುವೇನು? ಮತ್ತು ಪಕ್ಷವು ಮೀಸಲಾತಿಯಿಂದ ದೂರ ಸರಿಯುವುದರ ಕುರಿತು ಯೋಚಿಸುತ್ತದೆಯೇ? ಎಂಬ ಪ್ರಶ್ನೆಯನ್ನು ಕೇಳಿದರು.

ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ ಭಾರತದ ಹಣಕಾಸಿನ ನಿರ್ಧಾರ ಮತ್ತು ವ್ಯಾಪಾರ ವ್ಯವಸ್ಥೆಗಳಲ್ಲಿ ಪ್ರಾತಿನಿಧ್ಯದ ಕೊರತೆ ಹೇಗಿದೆ ಎಂದು ಬಿಜೆಪಿ ವಿರುದ್ಧ ಒಂದು ಕಾಲ್ಪನಿಕ ಟೀಕೆಯನ್ನು ಮಾಡಿದ್ದರು. “… ಭಾರತವು ಸರ್ವರಿಗೂ ಸಮಾನವಾದ, ನ್ಯಾಯಯುತವಾದ ಸ್ಥಳವಾದಾಗ ಕಾಂಗ್ರೆಸ್ ಮೀಸಲಾತಿಯನ್ನು ರದ್ದುಗೊಳಿಸುವ ಬಗ್ಗೆ ಯೋಚಿಸುತ್ತದೆ. “ಭಾರತವು ಸದ್ಯದ ಪರಿಸ್ಥಿತಿಯಲ್ಲಿ ಸಮಾನತೆಯ ಸ್ಥಳವಾಗಿಲ್ಲ”ಎಂದು ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿಯವರು ತಾವು ಅಥವಾ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ಕೊನೆಗೊಳಿಸುತ್ತೇವೆ ಎಂದು ಹೇಳಿಲ್ಲ. ಭಾರತ ಯಾವಾಗ ಸಮಾನವಾದ ನ್ಯಾಯಸಮ್ಮತವಾದ ದೇಶವಾಗುತ್ತದೋ ಆಗ ಮೀಸಲಾತಿಯನ್ನು ತೆಗೆದುಹಾಕುವುದರ ಕುರಿತು ಯೋಚಿಸುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದರು. ಈ ವಿಚಾರವನ್ನೇ ಪಟೋಲೆಯವರು ಗಾಂಧಿಯವರನ್ನು ಬೆಂಬಲಿಸಿ ಮಾತನಾಡಿದ್ದಾರೆ ಹೊರತು ಮೀಸಲಾತಿಯನ್ನು ರದ್ದುಗೊಳಿಸುತ್ತೇವೆ ಎಂದು ಮಾತನಾಡಿಲ್ಲ.


ಇದನ್ನು ಓದಿ : 

Fact Check : ಇತ್ತೀಚೆಗೆ ಚೀನಾ-ತೈವಾನ್‌ ಉದ್ವಿಗ್ನತೆ ಎಂದು 2018ರ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *