Fact Check | ಪ್ರಧಾನಿ ಮೋದಿ ಅವರೊಂದಿಗೆ ಏಂಜೆಲಾ ಮರ್ಕೆಲ್‌, ಕ್ಸಿ ಜಿನ್‌ಪಿಂಗ್‌ ಹಸ್ತಲಾಘವ ಮಾಡಲು ನಿರಾಕರಿಸಿಲ್ಲ

ಸಾಮಾಜಿಕ ಜಾಲತಾಣದಲ್ಲಿ ಜರ್ಮನಿಯ ಮಾಜಿ ಚಾನ್ಸೆಲರ್‌ ಏಜೆಂಲಾ ಮರ್ಕೆಲ್‌ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಹಲವರು ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆಯಾಗಿದೆ ಎಂದು ಬರೆದುಕೊಂಡು ವೈರಲ್‌ ವಿಡಿಯೋವನ್ನು ಶೇರ್‌ ಮಾಡುತ್ತಿದ್ದಾರೆ.

ವೈರಲ್ ವಿಡಿಯೋ ನೋಡಿದ ಹಲವು ಮಂದಿ ಇದನ್ನು ನಿಜವೆಂದು ಭಾವಿಸಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ಪ್ರಧಾನಿ ಮೋದಿಯವರು ಈಗ ಜಾಗತಿಕ ನಾಯಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಜಗತ್ತಿನ ಯಾವ ನಾಯಕರೂ ಮೋದಿಗೆ ಗೌರವ ಕೊಡುತ್ತಿಲ್ಲ. ಅದಕ್ಕೆ ಈ ವಿಡಿಯೋವೇ ಸಾಕ್ಷಿ ಎಂದು ಬರೆದು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವೈರಲ್ ಆಗಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ 30 ಮೇ 2017 ರಂದು ಪ್ರಕಟವಾದ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯೊಂದು ಕಂಡುಬಂದಿದೆ. ಇದರಲ್ಲಿ ಮರ್ಕೆಲ್‌ ಅವರೊಂದಿಗೆ ಪ್ರಧಾನಿ ಮೋದಿ ಹಸ್ತಲಾಘವ ಮಾಡುತ್ತಿರುವ ಚಿತ್ರವನ್ನು ಪ್ರಕಟಿಸಿರುವುದು ಕಂಡುಬಂದಿದೆ. ಈ ಚಿತ್ರದ ಕೆಳಗೆ “ಜರ್ಮನ್ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌ ಅವರು ಜರ್ಮನಿಯ ಬರ್ಲಿನ್‌ನಲ್ಲಿರುವ ಚಾನ್ಸೆಲರಿಯಲ್ಲಿ ಸುದ್ದಿಗೋಷ್ಠಿಯ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಸ್ತಲಾಘವ ಮಾಡಿದ್ದಾರೆ.” ಎಂದು ಚಿತ್ರದ ವಿವರಣೆಯನ್ನು ನೀಡಲಾಗಿದೆ. ಇಲ್ಲಿಗೆ ಜರ್ಮನ್ ಚಾನ್ಸೆಲರ್‌ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಸ್ತಲಾಘವ ಮಾಡಿಲ್ಲ ಎಂಬುದು ಸುಳ್ಳು ಎಂಬುದು ಸ್ಪಷ್ಟವಾಗಿದೆ.

ಈ ಬಗ್ಗೆ ಇನ್ನಷ್ಟು ಸ್ಪಷ್ಟನೆಗಾಗಿ ವಿವಿಧ ಕೀ ವರ್ಡ್‌ಗಳನ್ನು ಬಳಸಿ ಮತ್ತಷ್ಟು ಹುಡುಕಾಟವನ್ನು ನಡೆಸಿದಾಗ, 30 ಮೇ 2017 ರಂದು ಬಿಜೆಪಿಯ ಅಧಿಕೃತ YouTube ಚಾನಲ್‌ನಲ್ಲಿ ಲೈವ್‌ಸ್ಟ್ರೀಮ್‌ ಮಾಡಿದ 40 ನಿಮಿಷಗಳ ವಿಡಿಯೋವೊಂದು ಕಂಡು ಬಂದಿದೆ. ಈ ವಿಡಿಯೋದಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ಜಂಟಿ ಪತ್ರಿಕಾ ಹೇಳಿಕೆಗಳಲ್ಲಿ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌ ಅವರೊಂದಿಗೆ ಪ್ರಧಾನಿ ಮೋದಿ ಎಂಬ ಶೀರ್ಷಿಕೆಯನ್ನು ನೀಡಿರುವುದು ಕಂಡುಬಂದಿದೆ. ಈ ವೈರಲ್ ಕ್ಲಿಪ್‌ನಲ್ಲಿ 39:40 ನಿಮಿಷಗಳ ಟೈಮ್ ಸ್ಟ್ಯಾಂಪ್ ನಲ್ಲಿ ಮರ್ಕೆಲ್‌ ಮೋದಿಯವರಿಗೆ ಹಸ್ತಲಾಘವ ಮಾಡುವುದನ್ನು ನೋಡಬಹುದಾಗಿದೆ.

ಪ್ರಧಾನಿ ಮೋದಿಗೆ ಕ್ಸಿ ಜಿನ್‌ಪಿಂಗ್‌ ಹಸ್ತಲಾಘವ ಮಾಡಿಲ್ಲ ಎಂಬುದು ಕೂಡ ಸುಳ್ಳು..!

ಪ್ರಧಾನಿ ಮೋದಿಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹಸ್ತಲಾಘವ ಮಾಡಿಲ್ಲ ಎಂಬ ವಿಡಿಯೋಗೆ ಸಂಬಂಧಪಟ್ಟಂತೆ ವೈರಲ್ ಕ್ಲಿಪ್‌ನ ವಿವಿಧ ಕಿ ಪ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ ANI ನ್ಯೂಸ್ 23 ಅಕ್ಟೋಬರ್ 2024 ರಂದು ಪ್ರಕಟಿಸಿದ ವಿಡಿಯೋ ವರದಿಯೊಂದು ಕಂಡು ಬಂದಿದೆ. ಇದರಲ್ಲಿ “ಐತಿಹಾಸಿಕ ಹಸ್ತಲಾಘವ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ” ಎಂದು ಶೀರ್ಷಿಕೆ ನೀಡಲಾಗಿದೆ. ವಿಡಿಯೋದ ಆರಂಭದಲ್ಲಿ ವೈರಲ್ ಕ್ಲಿಪ್ ಕಾಣಿಸಿಕೊಳ್ಳುತ್ತದೆ ಮತ್ತು ಏಳು ಸೆಕೆಂಡ್ ಟೈಮ್ ಸ್ಟ್ಯಾಂಪ್ ನಲ್ಲಿ ಪ್ರಧಾನಿ ಮೋದಿಯವರಿಗೆ ಹಸ್ತಲಘವ ಮಾಡುವುದನ್ನು ಕಾಣಬಹುದಾಗಿದೆ.

ಈ ವರದಿಯಯಲ್ಲಿ “ಟಾಟರ್‌ಸ್ತಾನ್‌ನ ರಾಜಧಾನಿಯಲ್ಲಿ ನಡೆದ ಸಭೆಯು ಐದು ವರ್ಷಗಳಲ್ಲಿ ಉಭಯ ನಾಯಕರ ನಡುವಿನ ಮೊದಲ ಔಪಚಾರಿಕ ಸಂವಾದವಾಗಿದೆ. ಈ ಸಂವಾದದಲ್ಲಿ ಪೂರ್ವ ಲಡಾಕ್‌ನಲ್ಲಿರುವ ಲೈನ್ ಆಫ್ ಆಕ್ಚುವಲ್‌ ಕಂಟ್ರೋಲ್ ಗಡಿ ಪ್ರದೇಶದಲ್ಲಿ ನಿಯಮಿತ ಗಸ್ತು ಪುನರ್ ಆರಂಭಿಸಲು ಎರಡು ದೇಶಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ” ಎಂಬ ಕುರಿತು ಆ ಸಂದರ್ಭದಲ್ಲಿ ವರದಿಯಲ್ಲಿ ಪ್ರಕಟ ಮಾಡಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಜರ್ಮನಿಯ ಮಾಜಿ ಚಾನ್ಸೆಲರ್‌ ಮರ್ಕೆಲ್‌ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಪ್ರಧಾನಿ ಮೋದಿಯವರೊಂದಿಗೆ ಹಸ್ತಲಾಘವ ಮಾಡುವುದಕ್ಕೆ ನಿರಾಕರಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ ಮತ್ತು ಈ ವಿಡಿಯೋಗಳು ಎಡಿಟೆಡ್ ಆಗಿದೆ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಈ ವಿಡಿಯೋವನ್ನು ಹಂಚಿಕೊಳ್ಳಬೇಡಿ ಮತ್ತು ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check : ಹಿಂದೂ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸುತ್ತಿರುವುದನ್ನು ಶರೀಯಾ ಕಾನೂನಿನ ಪ್ರಕಾರ ಶಿಕ್ಷೆ ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *