Fact Check : ಹಿಂದೂ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸುತ್ತಿರುವುದನ್ನು ಶರೀಯಾ ಕಾನೂನಿನ ಪ್ರಕಾರ ಶಿಕ್ಷೆ ಎಂದು ಹಂಚಿಕೆ

ಇಸ್ಲಾಮಿಕ್ ಶರೀಯಾ ಕಾನೂನುಗಳ ಅಡಿಯಲ್ಲಿ ಅತ್ಯಾಚಾರ ಸಂತ್ರಸ್ತೆಗೆ ಶಿಕ್ಷೆ ನೀಡುತ್ತಿರುವ ದೃಶ್ಯಗಳು ಎಂದು ಆರೋಪಿಸಿ ಮಹಿಳೆಯೊಬ್ಬಳನ್ನು ಮರಕ್ಕೆ ಕಟ್ಟಿಹಾಕಿ ಪುರುಷನೊಬ್ಬ ಬರ್ಬರವಾಗಿ ಥಳಿಸುತ್ತಿರುವ ಮತ್ತು ಜನರ ಗುಂಪು ಸುತ್ತಲೂ ನಿಂತು ನೋಡುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವೀಡಿಯೊವನ್ನು ಹಂಚಿಕೊಳ್ಳುವಾಗ X ಬಳಕೆದಾರರು, “ಶರೀಯಾ ಕಾನೂನಿನ ಅಡಿಯಲ್ಲಿ, ಮಹಿಳೆಯ ಮೇಲೆ ಅತ್ಯಾಚಾರ ನಡೆದರೆ, ಅದನ್ನು ಮದುವೆಗೆ ಮುಂಚಿತವಾಗಿ ಆಕೆ ನಡೆಸಿದ ಲೈಂಗಿಕ ಅಪರಾಧ ಎಂದು ಪರಿಗಣಿಸಿ ಆಕೆಗೆ ಶಿಕ್ಷೆ ವಿಧಿಸಲಾಗುತ್ತದೆ. ಶರೀಯಾ ಕಾನೂನು ಪಾಲಿಸುವ ಹೆಚ್ಚಿನ ದೇಶಗಳಲ್ಲಿ, ಮಹಿಳೆಯರು ತಮ್ಮ ಮೇಲೆ ಅತ್ಯಾಚಾರ ನಡೆದಿದೆ ವರದಿ ಮಾಡಿದರೆ ಆಕೆಯನ್ನು ಕಲ್ಲಿನಿಂದ ಹೊಡೆದು ಸಾಯಿಸುತ್ತಾರೆ. ಹಾಗಾಗಿ ವೀಡಿಯೋದಲ್ಲಿರುವವರು ಮಹಿಳೆ ‘ಅದೃಷ್ಟವಂತೆ’ ಯಾಕೆಂದರೆ ಆಕೆಗೆ ಕೇವಲ ಚಾಟಿ ಏಟು ನೀಡಲಾಗುತ್ತಿದೆ” ಎಂಬ ಸಂದೇಶದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್ ಚೆಕ್

ಕನ್ನಡ ಫ್ಯಾಕ್ಟ್ ಚೆಕ್ ತಂಡವು ಈ ವೈರಲ್ ವಿಡಿಯೋದಲ್ಲಿ ಮಾಡಲಾಗಿರುವ ಆರೋಪಗಳು ಸುಳ್ಳಿನಿಂದ ಕೂಡಿವೆ ಎಂಬುದನ್ನು ಪತ್ತೆ ಹಚ್ಚಿದೆ.

ಹಂಚಿಕೊಳ್ಳಲಾಗುತ್ತಿರುವ ವೈರಲ್ ವೀಡಿಯೋ “ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದ್ದು, ಗ್ರಾಮ ಪಂಚಾಯತಿಯೊಂದರ ಆದೇಶದ ಮೇರೆಗೆ  ಹಿಂದೂ ಮಹಿಳೆಯನ್ನು ಆಕೆಯ ಪತಿ ಸಾರ್ವಜನಿಕವಾಗಿ ಥಳಿಸುತ್ತಿರುವುದು” ಎಂದು ತಿಳಿದು ಬಂದಿದೆ.

ವೈರಲ್ ವಿಡಿಯೋದಿಂದ ಕೀಫ್ರೇಮ್‌ಗಳನ್ನು ಬಳಸಿ ರಿವರ್ಸ್ ಸರ್ಚ್ ಮಾಡಿದಾಗ, ಕ್ಲಿಪ್‌ನ ಸ್ಕ್ರೀನ್‌ಶಾಟ್‌ಗಳನ್ನು ಒಳಗೊಂಡಿರುವ ಮಾರ್ಚ್ 2018 ರ ಹಲವಾರು ವರದಿಗಳು ನಮಗೆ ಲಭಿಸಿವೆ.

2018ರ ಮಾರ್ಚ್ 22ರಂದು ಪ್ರಕಟವಾದ ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಈ ಘಟನೆಯು ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಲೌಂಗಾ ಗ್ರಾಮದಲ್ಲಿ ನಡೆದಿದ್ದು, ಅನೈತಿಕ ಸಂಬಂಧ ಹೊಂದಿದ್ದಳು ಎಂಬ ಕಾರಣಕ್ಕೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಸಥ ಏಳು ಗಂಟೆಗಳ ಕಾಲ ಆಕೆಯ ಪತಿ ಸೇರಿದಂತೆ ಅನೇಕ ಪುರುಷರು ನಿರ್ದಯವಾಗಿ ಥಳಿಸಿದ್ದರು. ಮತ್ತು ಈ ವೇಳೆ ಮಹಿಳೆಗೆ ಕಿರುಕುಳ ನೀಡಲಾಗಿತ್ತು ಎಂದು ವರದಿ ಮಾಡಿದೆ.

2018ರ ಮಾರ್ಚ್ 10ರಂದು ಈ ಅಮಾನವೀಯ ಘಟನೆ ನಡೆದಿದ್ದು, ಹತ್ತು ದಿನಗಳ ಬಳಿಕ ವೀಡಿಯೊ ವೈರಲ್ ಆಗಿತ್ತು. ಮಹಿಳೆಯನ್ನು ಹೊಡೆಯುತ್ತಿರುವ ಹಸಿರು ಶರ್ಟ್‌ ಧರಿಸಿದ ವ್ಯಕ್ತಿಯು ಆಕೆಯ ಪತಿ ಶೌದನ್ ಸಿಂಗ್ ಆಗಿದ್ದಾನೆ. ವರದಿಗಳ ಪ್ರಕಾರ, ಶೌದನ್ ಸಿಂಗ್ ಹಾಗೂ ಗ್ರಾಮದ ಮಾಜಿ ಪ್ರಧಾನ್ ಶೇರ್ ಸಿಂಗ್ ಮತ್ತು ಅವರ ಮಗ ಶ್ರವಣ್‌ನನ್ನು ಪೊಲೀಸರು ಬಂಧಿಸಿದ್ದರು. ಹಾಗಾಗಿ ಆರೋಪಿಗಳು ಮುಸ್ಲಿಮರಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

“ನೆರೆಯವನಾದ ಧರ್ಮೇಂದ್ರ ಲೋಧಿ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಕ್ಕಾಗಿ ಮಹಿಳೆಗೆ ಪಾಠ ಕಲಿಸಲು ಪಂಚಾಯತಿಯು ಚಾಟಿ ಏಟಿನ ಶಿಕ್ಷೆಯನ್ನು ನೀಡಿತ್ತು. ಮತ್ತು ಆಕೆಯನ್ನು ಸಾರ್ವಜನಿಕವಾಗಿ ಥಳಿಸಲು ತೀರ್ಮಾನಿಸಿತ್ತು” ಎಂದು ಬುಲಂದ್‌ಶಹರ್ ಪೊಲೀಸ್ ಸೂಪರಿಂಟೆಂಡೆಂಟ್ ಪ್ರವೀಣ್ ರಂಜನ್ ಸಿಂಗ್ ಹಿಂದೂಸ್ತಾನ್ ಟೈಮ್ಸ್‌ಗೆ ಮಾಹಿತಿ ನೀಡಿದ್ದಾರೆ.

ಆಜ್‌ತಕ್‌ನ ಬುಲಂದ್‌ಶಹರ್ ವರದಿಗಾರ ಮುಕುಲ್ ಶರ್ಮಾ ಅವರು 2018ರ ಮಾರ್ಚ್ 10ರಂದು ಸಯಾನಾ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬುಲಂದ್‌ಶಹರ್‌ನ ಲೌಂಗಾ ಗ್ರಾಮದಲ್ಲಿ ಹಿಂದೂ ಮಹಿಳೆಯನ್ನು ಸಾರ್ವಜನಿಕವಾಗಿ ಥಳಿಸಲಾಗಿತ್ತು. ಘಟನೆಯಲ್ಲಿ ಬಲಿಪಶು ಮತ್ತು ಆರೋಪಿ ಇಬ್ಬರೂ ಹಿಂದೂ ಸಮುದಾಯಕ್ಕೆ ಸೇರಿದವರು ಎಂದು ಅವರು ದೃಢಪಡಿಸಿದ್ದಾರೆ.

ಈ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ, 7 ಮಂದಿ ಮತ್ತು 12 ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಜನ್ ಸತ್ತಾ ವರದಿ ಮಾಡಿದೆ.

ಅತ್ಯಾಚಾರಕ್ಕೆ ಶರೀಯಾ ಕಾನೂನು ವಿಧಿಸುವ ಶಿಕ್ಷೆ ಏನು ಗೊತ್ತಾ?

ಮಹಿಳೆಯೊಬ್ಬಳು ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ನೀಡಿದರೆ, ಇಸ್ಲಾಮಿಕ್ ಶರೀಯಾ ಕಾನೂನಿನ ಪ್ರಕಾರ, ಆರೋಪ ಸಾಬೀತಾದ ಕೂಡಲೇ; ಅತ್ಯಾಚಾರ ನಡೆಸಿದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಕಲ್ಲೆಸೆದು ಕೊಲ್ಲುವುದು, ಶಿರಚ್ಛೇದನ ಮಾಡುವುದು, ಗುಂಡಿಕ್ಕಿ ಕೊಲ್ಲುವುದು, ಕೈಕಾಲುಗಳನ್ನು ಕತ್ತರಿಸುವುದು, ಚಾಟಿ ಏಟು ನೀಡಿ ಗಡಿಪಾರು ಮಾಡುವುದು ಸೇರಿದಂತೆ ದಂಡವನ್ನು ವಿಧಿಸುವ ಶಿಕ್ಷೆಯನ್ನೂ ನೀಡಲಾಗುತ್ತದೆ. ಇಸ್ಲಾಮಿಕ್ ಶರೀಯಾ ಕಾನೂನು ಪಾಲಿಸುವ ದೇಶಗಳಲ್ಲಿ ಈ ಶಿಕ್ಷೆಯ ಪ್ರಮಾಣ ಹೆಚ್ಚು ಕಡಿಮೆ ಇರಬಹುದು. ಆದರೆ, ಸಂತ್ರಸ್ತ ಮಹಿಳೆಯ ಘನತೆಗೆ ಧಕ್ಕೆ ಬರುವ ಹಾಗೆ ವರ್ತಿಸಲು ಅನುಮತಿ ಇರುವುದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವಿಡಿಯೋದಲ್ಲಿ ಥಳಿತಕ್ಕೊಳಗಾದ ಮಹಿಳೆ ಹಿಂದೂ ಸಮುದಾಯಕ್ಕೆ ಸೇರಿದವಳಾಗಿದ್ದಾಳೆ‌‌ ಆದರೆ, ಶರೀಯಾ ಕಾನೂನಿನ ಅನ್ವಯ ಮುಸ್ಲಿಮ್ ಮಹಿಳೆಯನ್ನು ಥಳಿಸಲಾಗುತ್ತಿದೆ ಎಂದು ಇಸ್ಲಾಮೋಫೋಬಿಕ್ ಸಂದೇಶವನ್ನು‌ ಹರಡಲಾಗುತ್ತಿದೆ‌.


ಇದನ್ನು ಓದಿದ್ದೀರಾ? : Fact Check | ವಕ್ಫ್ ತಿದ್ದುಪಡಿ ಮಸೂದೆ ಮೇಲೆ ಲೋಕಸಭೆಯಲ್ಲಿ ಯಾವುದೇ ಮತದಾನ ನಡೆದಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *