Fact Check| ವಯನಾಡ್‌ನಲ್ಲಿ ಪ್ರಿಯಾಂಕಾ ಗಾಂಧಿಯವರ ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜ ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಪಾಕಿಸ್ತಾನದ ಧ್ವಜಗಳನ್ನು ಬೀಸುತ್ತಿರುವ ಈ ದೃಶ್ಯಗಳು ಪಾಕಿಸ್ತಾನಕ್ಕೆ ಸಂಬಂಧಿಸಿದ್ದಲ್ಲ. ಇದು ಭಾರತದ  ಕೇರಳದ ವಯನಾಡ್‌ನಲ್ಲಿ ಕಂಡು ದೃಶ್ಯ. ಅಲ್ಲಿ ಕಾಂಗ್ರೆಸ್‌ನ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ, ಹೀಗಾಗಿ ದೇಶ ವಿರೋಧಿ ಶಕ್ತಿಗಳು ಅಲ್ಲಿ ಒಂದಾಗಿ, ಪಾಕಿಸ್ತಾನದ ಧ್ವಜವನ್ನು ಹಾರಿಸಿ, ಘೋಷಣೆಗಳನ್ನು ಕೂಗಿದ್ದರೆ. ಆದ್ದರಿಂದ ಹಿಂದೂಗಳೇ, ಕಾಂಗ್ರೆಸ್‌ನ ಮನಸ್ಥಿತಿಯನ್ನು ನೆನಪಿನಲ್ಲಿಡಿ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್‌ ವಿಡಿಯೋದಲ್ಲಿ ಸಾಕಷ್ಟು ಮಂದಿ ಬೆಂಬಲಿಗರು ಹಸಿರು ಬಣ್ಣದ ಬಟ್ಟೆ ಧರಿಸಿ, ಹಸಿರು ಬಣ್ಣದಿಂದ ಕೂಡಿರುವ ಇಸ್ಲಾಂ ಚಿಹ್ನೆ ಇರುವ ಧ್ವಜಗಳನ್ನು ಬೀಸುತ್ತಿರುವುದು ಕಂಡು ಬಂದಿದೆ. ಹೀಗಾಗಿ ವೈರಲ್‌ ವಿಡಿಯೋ ನೋಡಿದ ಸಾಕಷ್ಟು ಮಂದಿ ಇದು ನಿಜವಾದ ಘಟನೆ ಇರಬಹುದು ಎಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ವೈರಲ್‌ ವಿಡಿಯೋವನ್ನು ಹಂಚಿಕೊಂಡು, ಕಾಂಗ್ರೆಸ್‌ ವಿರುದ್ಧ, ಕೇರಳದ ಜನರ ವಿರುದ್ಧ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ವಿವಿಧ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌ 

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋವನ್ನು ಪರಿಶೀಲನೆ ನಡೆಸಲು ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಮೇ 8, 2024 ರಂದು ರಾಜು ದಾಸ್ ಎಂಬುವವರ ಎಕ್ಸ್‌ ಖಾತೆಯಲ್ಲಿ ವೈರಲ್ ವಿಡಿಯೋ ಅಪ್‌ಲೋಡ್ ಮಾಡಿರುವುದು ಕಂಡು ಬಂದಿದ್ದು, ಇದನ್ನು ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರ ರ್ಯಾಲಿ ಎಂದು ವಿವರಿಸಲಾಗಿದೆ. ವಯನಾಡಿನಲ್ಲಿ ನಡೆದ ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜಗಳನ್ನು ಬೀಸಲಾಯಿತು ಎಂದು ಹೇಳಲಾಗಿದೆ.

ಇದರಿಂದ ಈ ವಿಡಿಯೋ ಪ್ರಿಯಾಂಕಾ ಗಾಂಧಿಯವರ ವಯನಾಡ್ ರ್ಯಾಲಿಯದ್ದಲ್ಲ ಎಂಬುದು ಸ್ಪಷ್ಟವಾಗಿದೆ. ಇದರ ನಂತರ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಜೂನ್ 10, 2019 ರಂದು ವೈರಲ್‌ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.  ಅಂದರೆ ಈ ವಿಡಿಯೋ ಸುಮಾರು ಐದು ವರ್ಷಗಳಿಂದ ಅಂತರ್ಜಾಲದಲ್ಲಿ ಇದೆ ಎಂಬುದು ನಮಗೆ ಸ್ಪಷ್ಟವಾಗಿದೆ. ಇನ್ನು ಈ ವಿಡಿಯೋ 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೇರಳದ ಕಾಸರಗೋಡಿನಿಂದ ಬಂದಿದೆ. ವಿಡಿಯೋದಲ್ಲಿ ಸಿಪಿಎಂ ಅಭ್ಯರ್ಥಿ ಸತೀಶ್ ಚಂದ್ರನ್ ವಿರುದ್ಧ ಘೋಷಣೆಗಳು ಕೇಳಿ ಬರುತ್ತಿವೆ. ವೀಡಿಯೊದಲ್ಲಿ ಕಂಡುಬರುವ ಹಸಿರು ಬಾವುಟಗಳು ರಾಜಕೀಯ ಪಕ್ಷವಾದ IUML ಗೆ ಸೇರಿದ್ದು, ಇದು ಕೇರಳದ ಪ್ರಸಿದ್ಧ ರಾಜಕೀಯ ಪಕ್ಷವಾಗಿದೆ. ಕಾಸರಗೋಡಿನಲ್ಲಿ ಅವರ ಪಕ್ಷದ ಇಬ್ಬರು ಶಾಸಕರಿದ್ದಾರೆ ಎಂಬುದು ತಿಳಿದು ಬಂದಿದೆ.

ಇನ್ನು ವಿಡಿಯೋದಲ್ಲಿ ಕಾಣುವ ಹಸಿರು ಬಾವುಟ ಹಾಗೂ ಪಾಕಿಸ್ತಾನದ ಧ್ವಜವನ್ನು ಹೋಲಿಕೆ ಮಾಡಿದ್ದೇವೆ. ವೀಡಿಯೊದಲ್ಲಿ ಕಂಡುಬರುವ ಹಸಿರು ಧ್ವಜವು ಬಿಳಿ ಪಟ್ಟಿಯನ್ನು ಹೊಂದಿಲ್ಲ, ಆದರೆ ಪಾಕಿಸ್ತಾನದ ಧ್ವಜವು ಬಿಳಿ ಪಟ್ಟಿಯನ್ನು ಹೊಂದಿದೆ. ಹಾಗಾಗಿ ವೈರಲ್‌ ವಿಡಿಯೋದಲ್ಲಿರುವುದು ಪಾಕಿಸ್ತಾನದ ಧ್ವಜವಲ್ಲ ಎಂಬುದು ಸ್ಪಷ್ಟವಾಗಿದೆ. ಇದಾದ ನಂತರ ನಾವು ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿಯವರ ರ್ಯಾಲಿಯ ಲೈವ್ ವೀಡಿಯೊವನ್ನು ಪರಿಶೀಲಿಸಿದ್ದೇವೆ. ಕೇರಳ ಕಾಂಗ್ರೆಸ್‌ನ ಫೇಸ್‌ಬುಕ್ ಪುಟದಲ್ಲಿ ರ್ಯಾಲಿಯನ್ನು ಲೈವ್ ಮಾಡಲಾಗಿದೆ. ಇದರಲ್ಲಿ, ರ್ಯಾಲಿಯಲ್ಲಿ ಐಯುಎಂಎಲ್ ಮತ್ತು ಕಾಂಗ್ರೆಸ್ ಧ್ವಜಗಳು ಗೋಚರಿಸುತ್ತವೆ.

ಅಕ್ಟೋಬರ್ 23 ರಂದು ಎನ್‌ಡಿಟಿವಿ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯಲ್ಲಿ , ಪ್ರಿಯಾಂಕಾ ಗಾಂಧಿ ಕಲ್ಪೆಟ್ಟಾದಲ್ಲಿ ರೋಡ್ ಶೋ ಮೂಲಕ ಚುನಾವಣಾ ಯಾತ್ರೆಯನ್ನು ಪ್ರಾರಂಭಿಸಿದರು ಮತ್ತು ವಯನಾಡ್ ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದರು ಎಂದು ಬರೆಯಲಾಗಿದೆ. ರೋಡ್ ಶೋನಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷ ಐಯುಎಂಎಲ್ ಧ್ವಜಗಳು ಕಂಡುಬಂದವು. ನವೆಂಬರ್ 13 ರಂದು ವಯನಾಡಿನಲ್ಲಿ ಮತದಾನ ನಡೆಯಲಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ಪ್ರಿಯಾಂಕಾ ಗಾಂಧಿ ಅವರು ವಯನಾಡ್ ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ರ್ಯಾಲಿಯಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷ ಐಯುಎಂಎಲ್ ಧ್ವಜಗಳನ್ನು ಬೀಸಲಾಯಿತು. ಸುಮಾರು ಐದು ವರ್ಷಗಳಿಂದ ಅಂತರ್ಜಾಲದಲ್ಲಿ ವೈರಲ್ ವೀಡಿಯೊಗಳು ಸಹ ಇವೆ. ಅದರಲ್ಲಿ ಕಾಣುವ ಹಸಿರು ಬಾವುಟಗಳೂ ಐಯುಎಂಎಲ್ ಗೆ ಸೇರಿದ್ದು. ಪಾಕಿಸ್ತಾನದ ಧ್ವಜ ಎಂಬ ಹೇಳಿಕೆ ತಪ್ಪಾಗಿದೆ.


ಇದನ್ನೂ ಓದಿ : Fact Check | ಹದ್ದು ಸಿಂಹದ ಮೇಲೆ ಕುಳಿತಿರುವ ವೈರಲ್‌ ವಿಡಿಯೋ AI ನಿಂದ ರಚಿಸಲಾಗಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *