Fact Check: ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಅವಮಾನಿಸಲಾಗಿದೆ ಎಂದು ಸುಳ್ಳು ಹಂಚಿಕೊಂಡ ಬಿಜೆಪಿ ನಾಯಕರು

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಕಲ್ಪೆಟ್ಟಾ ಪಟ್ಟಣದ ಮೂಲಕ ಬೃಹತ್ ರೋಡ್ ಶೋ ನಡೆಸಿ ವಯನಾಡು ಕ್ಷೇತ್ರದ ಮತದಾರರ ಬೆಂಬಲಕ್ಕೆ ಸದಾ ಇರುವೆ ಎಂದು ಭರವಸೆ ನೀಡಿದ್ದಾರೆ.

ಆದರೆ, ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆರೋಪವೊಂದು ಕೇಳಿ ಬಂದಿದ್ದು, ನಾಮಪತ್ರ ಸಲ್ಲಿಕೆ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು  ಒಳಗೆ ಕರೆದುಕೊಂಡು ಹೋಗದೇ ಬಾಗಿಲಿನಲ್ಲಿಯೇ ನಿಲ್ಲಿಸಿ ಅವಮಾನಿಸಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವಿಡಿಯೋ ಒಂದನ್ನು ಹಂಚಿಕೊಂಡು “ಇಂದು ವಯನಾಡಿನಲ್ಲಿ ಶ್ರೀ @ಖರ್ಗೆ ಜಿಯವರಂತಹ ಹಿರಿಯ ಸಂಸದೀಯ ಪಟು ಮತ್ತು ದಲಿತ ನಾಯಕರ ಮೇಲೆ ತೋರಿದ ಅಗೌರವವನ್ನು ನೋಡಲು, ತುಂಬಾ ಬೇಸರವಾಗುತ್ತದೆ. ಅದು ಎಐಸಿಸಿ ಅಥವಾ ಪಿಸಿಸಿ ಅಧ್ಯಕ್ಷರಾಗಿರಲಿ, ಅವರನ್ನು ಕೇವಲ ರಬ್ಬರ್ ಸ್ಟ್ಯಾಂಪ್‌ಗಳಂತೆ ಪರಿಗಣಿಸಿ ಅವಮಾನಿಸುವುದರಲ್ಲಿ ಗಾಂಧಿ ಕುಟುಂಬವು ಹೆಮ್ಮೆಪಡುತ್ತದೆಯೇ?” ಎಂಬ ಬರೆದು ಹಂಚಿಕೊಂಡಿದ್ದಾರೆ.

ನಂತರ ಇದೇ ವಿಡಿಯೋವನ್ನು ಬಿಜೆಪಿ ಕರ್ನಾಟಕ ಸಹ ಹಂಚಿಕೊಂಡು “ಯಾವುದೇ ನಾಯಕ, ಎಷ್ಟೇ ಪ್ರಮುಖರಾಗಿದ್ದರೂ @INCIndia ನ ನಕಲಿ ಗಾಂಧಿ ಕುಟುಂಬದ ಬಳಿ ಪ್ರವೇಶ ಪಡೆಯುವುದಿಲ್ಲ! ವಯನಾಡಿನಲ್ಲಿ @PriyankaGandhi ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಿರಿಯ ನಾಯಕ @kharge ji ಅವರನ್ನು ಬದಿಗಿಟ್ಟಿರುವುದು ನಿಜಕ್ಕೂ ಆಘಾತಕಾರಿ. ಬಾಲಕ ಬುದ್ದಿ @ರಾಹುಲ್ ಗಾಂಧಿ, ನಿಮ್ಮ ಕುಟುಂಬದ ಹಿತಾಸಕ್ತಿ ಕಾಪಾಡಲು ದಲಿತ ನಾಯಕರನ್ನು ಕೀಳಾಗಿ ಕಾಣಬೇಡಿ!” ಎಂಬ ಶೀರ್ಷಿಕೆಯೊಂದಿಗೆ ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದೇ ರೀತಿಯಲ್ಲಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಕೇಂದ್ರ ಮಾಜಿ ಸಚಿವ ರಾಜೀವ್ ಚಂದ್ರಶೇಖರ್, @ಬಿಜೆಪಿ4ಇಂಡಿಯಾ, ಬಿಜೆಪಿ4ಮುಂಬೈ, ಗಜೇಂದ್ರ ಸಿಂಗ್ ಶೇಖಾವತ್ ಸೇರಿದಂತೆ ಅನೇಕ ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ಮಲ್ಲಿಕಾರ್ಜುನ್ ಖರ್ಗೆ ಅವರ ವಿಡಿಯೋವನ್ನು ಹಂಚಿಕೊಂಡು ಇದೇ ಆರೋಪ ಮಾಡಿದ್ದಾರೆ.

ಫ್ಯಾಕ್ಟ್‌ ಚೆಕ್:

ಬಿಜೆಪಿ ನಾಯಕರ ಆರೋಪ ಸುಳ್ಳಾಗಿದ್ದು, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನಾಮಪತ್ರ ಸಲ್ಲಿಸುವ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಉಪಸ್ಥಿತಿಯಲ್ಲಿರುವುದನ್ನು ಅನೇಕ ಮಾಧ್ಯಮಗಳು ವರದಿ ಮಾಡಿವೆ.

ಪ್ರಿಯಾಂಕಾ ಗಾಂಧಿಯವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮವನ್ನು ವರದಿ ಮಾಡಿರುವ ಡೆಕ್ಕನ್ ಹೆರಾಲ್ಡ್‌ ವರದಿಯಲ್ಲಿಯೂ ಸಹ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಇರುವುದನ್ನು ಕಾಣಬಹುದು.

ನಾಮಪತ್ರ ಸಲ್ಲಿಕೆ ವೇಳೆ ಕೇವಲ ಐದು ಜನಗಳಿಗೆ ಮಾತ್ರ ಪ್ರವೇಶವಿದ್ದು ಅದರಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ನಾಮಪತ್ರ ಸಲ್ಲಿಕೆ ವೇಳೆ ಇದ್ದದ್ದು ವರದಿಯಾಗಿದೆ.

ನಾಮಪತ್ರ ಸಲ್ಲಿಕೆ ಮತ್ತು ರ್ಯಾಲಿಯ ಚಿತ್ರಗಳನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು ಅದರಲ್ಲಿಯೂ ಸಹ ಮಲ್ಲಿಕಾರ್ಜುನ್ ಖರ್ಗೆಯವರು ಇರುವುದನ್ನು ಕಾಣಬಹುದು.

ಅದೇ ರೀತಿ, ಬಿಜೆಪಿ ಆರೋಪಗಳಿಗೆ ಪ್ರತಿಕ್ರಯಿಸಿರುವ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನಾಟೆ ಅವರು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಅವರನ್ನು ಉದ್ದೇಶಿಸಿ “ನೀವು ಅಗ್ಗದ ಸುಳ್ಳುಗಾರ. ನೀವು ಚುನಾವಣೆಗಳ ಬಗ್ಗೆ ಒಂದು ವಿಷಯ ತಿಳಿದಿರಬೇಕು, ಅಭ್ಯರ್ಥಿಯನ್ನು ಹೊರತುಪಡಿಸಿ ಯಾವುದೇ ಸಮಯದಲ್ಲಿ ಎಷ್ಟು ಜನರನ್ನು ಒಳಗೆ ಅನುಮತಿಸಲಾಗಿದೆ ಎಂದು ನಾನು ತಿಳಿಯ ಬಯಸುತ್ತೇನೆ. ಖರ್ಗೆ ಜಿ, ಸೋನಿಯಾ ಜಿ ಮತ್ತು ರಾಹುಲ್ ಜಿ ಅವರು ಒಳಗೆ ಬರುವ ಮೊದಲು ಕೆಲವು ಜನರು ಹೊರಬರಲು ಕಾಯುತ್ತಿದ್ದರು. ಈಗ ಈ ಚಿತ್ರಗಳನ್ನು ನೋಡಿ ಮತ್ತು ಮೌನವಾಗಿರಿ” ಎಂದು ಪ್ರತಿಕ್ರಯಿಸಿದ್ದಾರೆ.

ನಾಮಪತ್ರ ಸಲ್ಲಿಸುವ ವೇಳೆ ಕೋಣೆಯ ಒಳಗಿದ್ದ ವ್ಯಕ್ತಿಗಳು ಹೊರಗೆ ಬರುವುದನ್ನು ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಕಾಯುತ್ತಾ ನಿಂತ ವಿಡಿಯೋ ಇದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವೈರಲ್ ವಿಡಿಯೋವಿಗೆ ಕುರಿತಂತೆ ಕಾಂಗ್ರೆಸ್‌ ಪ್ರತಿಕ್ರಯಿಸಿದ್ದು ಈ ಆರೋಪ ಸುಳ್ಳು ಎಂದು ತಳ್ಳಿಹಾಕಿದೆ ಮತ್ತು ಸುಳ್ಳು ಹರಡುತ್ತಿರುವ ಕಾರಣಕ್ಕಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಇದೇ ರೀತಿ ಅನೇಕ ಬಾರಿ ಸುಳ್ಳು ಹಂಚಿಕೊಂಡು, ಅವರ ವಿರುದ್ಧ ಹಲವಾರು ಬಾರಿ ಎಫ್‌ಐಆರ್‌ ದಾಖಲಾಗಿದೆ. ಅಮಿತ್ ಮಾಳವೀಯ ಅವರು ಹಂಚಿಕೊಂಡ ಅನೇಕ ಸುಳ್ಳು ಸುದ್ದಿಗಳನ್ನು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಹೀಗಾಗಲೇ ಬಯಲು ಮಾಡಿದೆ.

ಆದ್ದರಿಂದ ನಾಮಪತ್ರ ಸಲ್ಲಿಸುವ ಕೋಣೆಯಿಂದ ವ್ಯಕ್ತಿಗಳು ಹೊರಬರಲಿ ಎಂದು ಕಾಯುತ್ತಿದ್ದ ವಿಡಿಯೋವನ್ನು ಬಳಸಿಕೊಂಡು ಬಿಜೆಪಿ ನಾಯಕರು, ಪ್ರಿಯಾಂಕಾ ಗಾಂಧಿಯವರ ನಾಮಪತ್ರ ಸಲ್ಲಿಸುವ ವೇಳೆ ಮಲ್ಲಿಕಾರ್ಜುನ್ ಖರ್ಗೆಯರನ್ನು ಆಚೆ ನಿಲ್ಲಿಸಿ ಅವಮಾನಿಸಲಾಗಿದೆ ಎಂದು ಸುಳ್ಳನ್ನು ಹರಿಬಿಟ್ಟಿದ್ದಾರೆ.


ಇದನ್ನು ಓದಿ: ಹಸುಗಳು ಆಮ್ಲಜನಕವನ್ನು ಉಸಿರಾಡಿ ಆಮ್ಲಜನಕವನ್ನೇ ಹೊರಹಾಕುತ್ತವೆ ಎಂದು ಸುಳ್ಳು ಹೇಳಿದ ಬಿಜೆಪಿ ಸಚಿವೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *