Fact Check | ಆಸ್ಪತ್ರೆಯ ಜಾಹೀರಾತು ಫಲಕ ಎಡಿಟ್‌ ಮಾಡಿ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಂಡ ಕಿಡಿಗೇಡಿಗಳು

ಸಾಮಾಜಿಕ ಜಾಲತಾಣದಲ್ಲಿ ಕಾಶ್ಮೀರ್‌ ಐ ಹಾಸ್ಪಿಟಲ್‌ಗೆ ಸಂಬಂಧಿಸಿದ ಜಾಹೀರಾತು ಫಲಕವೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಫಲಕದಲ್ಲಿ “ನಿಮ್ಮ ತಾಯಿಯ ಕಣ್ಣುಗಳೇ ನಮ್ಮ ಗುರಿ” ಎಂಬ ಸಾಲುಗಳಿದ್ದು, ಈ ಸಾಲುಗಳು ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕೂಡ ಕಾರಣವಾಗಿದೆ. ಈ ಜಾಹಿರಾತು ಫಲಕದ ಚಿತ್ರವನ್ನು ನೋಡಿದ ಹಲವು ಮಂದಿ ಕೋಮು ಆಯಾಮದಿಂದಲೂ ಕೂಡ ಪೋಸ್ಟ್ ಮಾಡಿ, ಮುಸಲ್ಮಾನರ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ಇನ್ನು ವೈರಲ್ ಜಾಹೀರಾತು ಫಲಕದ ಫೋಟೋ ನಿಜವಾದ ಜಾಹೀರಾತು ಫಲಕದಂತೆ ಕಾಣುತ್ತಿರುವ ಕಾರಣ, ಸಾಕಷ್ಟು ಮಂದಿ ಇದನ್ನು ನಿಜವೆಂದು ಭಾವಿಸಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುವ ಮೂಲಕ ಈ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಕೂಡ ಕಿಡಿ ಕಾರುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಜಾಹೀರಾತು ಫಲಕದ ಫೋಟೋಗೆ ಸಂಬಂಧಿಸಿದಂತೆ, ಯಾವುದಾದರೂ ವರದಿಗಳು ಪ್ರಕಟವಾಗಿವೆಯೇ ಎಂಬುದನ್ನು ಪರಿಶೀಲನೆ ನಡೆಸಿದವು. ಇದಕ್ಕಾಗಿ ನಾವು ವಿವಿಧ ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಆದರೆ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಯಾವುದೇ ವರದಿಗಳು ನಮಗೆ ಕಂಡುಬಂದಿಲ್ಲ. ಹಾಗಾಗಿ ಇದು ಹಲವು ಸಂಶಯಗಳಿಗೆ ಕಾರಣವಾಯಿತು.

ಈ ಹಿನ್ನೆಲೆಯಲ್ಲಿ ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ನಮಗೆ ಆಲ್ಟ್‌ನ್ಯೂಸ್‌ನ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೈರ್‌ ಅವರು ಹಂಚಿಕೊಂಡ ಪೋಸ್ಟ್‌ವೊಂದು ಕಂಡುಬಂದಿದ್ದು, ಅದರಲ್ಲಿ “ಇದು ಎಡಿಟೆಡ್ ಚಿತ್ರವಾಗಿದೆ. ಈ ಕುರಿತು ಕಾಶ್ಮೀರ್‌ ಐ ಹಾಸ್ಪಿಟಲ್‌ನವರು ಸ್ಪಷ್ಟನೆಯನ್ನು ನೀಡಿದ್ದಾರೆ.” ಎಂದು ಟ್ವೀಟ್ ಮಾಡಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ನಾವು ಕಾಶ್ಮೀರ್‌ ಐ ಹಾಸ್ಪಿಟಲ್‌ನ ಅಧಿಕೃತ ಎಕ್ಸ್ (ಈ ಹಿಂದಿನ ಟ್ವಿಟರ್) ಖಾತೆಯನ್ನು ಪರಿಶೀಲನೆ ನಡೆಸಿದೆವು. ಈ ವೇಳೆ ಇಂದು ( 24 ಅಕ್ಟೋಬರ್ 2024 ರಂದು) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋ ಕುರಿತು ಸ್ಪಷ್ಟನೆ ನೀಡಿರುವ ಪೋಸ್ಟ್‌ವೊಂದು ಕಂಡು ಬಂದಿದೆ. ಇದರಲ್ಲಿ ಅವರು ನಿಜವಾದ ಜಾಹೀರಾತು ಫಲಕದ ಪೋಸ್ಟ್‌ ಅನ್ನು ಹಂಚಿಕೊಂಡಿದ್ದು, ಅದರ ಡಿಜಿಟಲ್ ಕಾಫಿಯನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ “ಸುಳ್ಳು ಸುದ್ದಿಗಳನ್ನು ಹರಡುವುದರ ವಿರುದ್ಧ ನಿಂತ ಪ್ರತಿಯೊಬ್ಬರ ಪ್ರಯತ್ನಗಳಿಗೂ ನಾವು ಬೆಂಬಲವನ್ನು ನೀಡುತ್ತೇವೆ. ನಾವು ನಿಜವಾದ ಜಾಹೀರಾತು ಫಲಕದ ಚಿತ್ರಗಳನ್ನು ಇಲ್ಲಿ ಹಂಚಿಕೊಂಡಿದ್ದೇವೆ. ನಮ್ಮನ್ನು ನಂಬಿ ಬೆಂಬಲಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು” ಎಂದು ಲಘು ಟಿಪ್ಪಣಿಯನ್ನು ಕೂಡ ಪ್ರಕಟಿಸಿದ್ದಾರೆ. ಹೀಗಾಗಿ ವೈರಲ್ ಪೋಸ್ಟ್ ಸುಳ್ಳು ನಿರೂಪಣೆಯಿಂದ ಕೂಡಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಕಾಶ್ಮೀರ್ ಐ ಹಾಸ್ಪಿಟಲ್ ಗೆ ಸಂಬಂಧಿಸಿದ ಜಾಹಿರಾತು ಫಲಕದ ಚಿತ್ರವನ್ನು ಎಡಿಟ್ ಮಾಡಿ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಂಡಿರುವುದು ಸಾಬೀತಾಗಿದೆ, ಈ ಕುರಿತು ಆಸ್ಪತ್ರೆ ಆಡಳಿತ ಮಂಡಳಿಯೂ ಕೂಡ ಸ್ಪಷ್ಟನೆಯನ್ನು ನೀಡಿದೆ. ಹಾಗಾಗಿ ವೈರಲ್ ಚಿತ್ರವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check: ಸೌದಿ ಅರೇಬಿಯಾ ಸರ್ಕಾರವು ಭಗವದ್ಗೀತೆಯನ್ನು ‘ಅರೇಬಿಕ್’ ಭಾಷೆಯಲ್ಲಿ ಬಿಡುಗಡೆ ಮಾಡಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *