Fact Check : ಬ್ಯಾಂಕಾಕ್ -ಕೋಲ್ಕತ್ತಾ ವಿಮಾನದಲ್ಲಿ ಮುಸ್ಲಿಂ ವ್ಯಕ್ತಿ ಹಿಂದೂವಿಗೆ ಥಳಿಸಿದ್ದಾನೆ ಎಂಬುದು ಸುಳ್ಳು

ಬ್ಯಾಂಕಾಕ್‌ – ಕೋಲ್ಕತ್ತಾಗೆ ಹೊರಟ ವಿಮಾನದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಭೀಕರ ಜಗಳ ಉಂಟಾಗಿದೆ. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಮೇಲೆ ಹರಿಹಾಯ್ದಿದ್ದಾನೆ. ಇದನ್ನು ಮುಸ್ಲಿಂ ವ್ಯಕ್ತಿ ಹಿಂದೂ ಪ್ರಯಾಣಿಕನ ಮೇಲೆ ದಾಳಿ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾದ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಕೆಲವು ಬಳಕೆದಾರರು ಈ ದೃಶ್ಯವನ್ನು ನಿಜವೆಂದು ನಂಬಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋದ ಕುರಿತು ನಮ್ಮ ಕನ್ನಡ ಫ್ಯಾಕ್ಟ್‌ ಚೆಕ್‌ನಲ್ಲಿ ಸತ್ಯಾಸತ್ಯತೆಯನ್ನು ತಿಳಿಯೋಣ.

ಫ್ಯಾಕ್ಟ್‌ ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳಲು, ವಿಡಿಯೋದಲ್ಲಿನ ಕೆಲವು ಕೀವರ್ಡ್‌ಗಳನ್ನು Googleನಲ್ಲಿ  ಹುಡುಕಿದಾಗ,  Zee News ವರದಿಯೊಂದು ಲಭಿಸಿದೆ. ಈ ವರದಿಯಲ್ಲಿ ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ಹೊರಡುತ್ತಿರುವ ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ವಾಗ್ವಾದ ಸಂಭವಿಸಿತ್ತು ಎಂದು ಉಲ್ಲೇಖಿಸಲಾಗಿದೆ. “# ವೀಕ್ಷಿಸಿ: ಬ್ಯಾಂಕಾಕ್-ಕೋಲ್ಕತ್ತಾ  #THAISmileAirways ವಿಮಾನದಲ್ಲಿ ಗಲಾಟೆ; ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ.” ಎಂಬ ಶೀರ್ಷಿಕೆಯೊಂದಿಗೆ Zee News  ಅದೇ ವಿಡಿಯೋವನ್ನು X ನಲ್ಲಿ ಹಂಚಿಕೊಂಡಿದೆ.

ಈ ವೈರಲ್‌ ವಿಡಿಯೋ ಕುರಿತು ಮತ್ತಷ್ಟು ಹುಡುಕಾಟ ನಡೆಸಿದಾಗ, ದಿ ಹಿಂದೂ ನ್ಯೂಸ್‌ ಸೇರಿದಂತೆ ಹಲವಾರು ಮಾಧ್ಯಮ ವರದಿಗಳು ಲಭಿಸಿವೆ. ಈ ವರದಿಗಳ ಪ್ರಕಾರ, 2022ರ ಡಿಸೆಂಬರ್ 26 ರಂದು ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ಹೊರಟ ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿ ತಿಳಿದುಬಂದಿದೆ. 37C  ಸೀಟಿನಲ್ಲಿ ಕುಳಿತಿದ್ದ ಅಮಿದ್ ಮೊಹಮ್ಮದ್ ಹುಸೇನ್ ಎಂಬಾತನಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದರಿಂದ ತಮ್ಮ ಆಸನವನ್ನು ನೇರಗೊಳಿಸುವುದು ಮತ್ತು ಸೀಟ್‌ಬೆಲ್ಟ್ ಧರಿಸುವುದು ಮುಂತಾದ ಸುರಕ್ಷತಾ ಕ್ರಮಗಳನ್ನು ಪಾಲಿಸಲು ನಿರಾಕರಿಸಿದ್ದ.

ಆಗ ವಿಮಾನದ ಸಿಬ್ಬಂದಿ ಎಷ್ಟೇ ಮನವಿ ಮಾಡಿಕೊಂಡರೂ ಮೊಹಮ್ಮದ್ ಹುಸೇನ್ ಸಹಕರಿಸಲಿಲ್ಲ. ಇದನ್ನು ವೀಕ್ಷಿಸುತ್ತಿದ್ದ ವಿಮಾನದ ಪ್ರಯಾಣಿಕರಲ್ಲಿ ಎಸ್.ಕೆ.ಅಜರುದ್ದೀನ್ ಎಂಬಾತ ಉದ್ರೇಕಗೊಂಡು ಹುಸೇನ್‌ನಿಗೆ ಕಪಾಳಮೋಕ್ಷ ಮಾಡುವ ಮೂಲಕ ಜಗಳಕ್ಕೆ ಮುಂದಾದ. ಇನ್ನೂ ಈ ವಾಗ್ವಾದದಲ್ಲಿ ಇತರ ಹಲವಾರು ಪ್ರಯಾಣಿಕರು ಸೇರಿಕೊಂಡಿದ್ದರು.

ಏರ್‌ಲೈನ್ಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ತಾರಕಕ್ಕೇರಿದ ಪರಿಸ್ಥಿತಿಯನ್ನು ಶಾಂತಗೊಳಿಸಲು ಎಷ್ಟೇ ಪ್ರಯತ್ನ ಪಟ್ಟರೂ ಯಾರೊಬ್ಬರೂ ಸಹಕರಿಸಲಿಲ್ಲ. ಜಗಳದಲ್ಲಿ ಪಾಲ್ಗೊಂಡ ಪ್ರಯಾಣಿಕರ ವಿರುದ್ಧ ದೂರು ದಾಖಲಿಸಲಾಯಿತು. ಸ್ವಲ್ಪ ಸಮಯದ ನಂತರ ವಿಮಾನವು ಹೊರಟಿತು ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಆದರೆ ಮಾಧ್ಯಮ ವರದಿಗಳಲ್ಲಿ ಯಾವುದೇ ಕೋಮು ಗಲಾಟೆಯ ಉದ್ದೇಶದ ಉಲ್ಲೇಖವಿಲ್ಲ.

 

Thai Smile Airways  ಈ ಘಟನೆಯನ್ನು (DGCA) ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಗಮನಕ್ಕೆ ತಂದಿದೆ. 37C ಸೀಟಿನಲ್ಲಿದ್ದ ಪ್ರಯಾಣಿಕ ಅಮಿದ್ ಮೊಹಮ್ಮದ್ ಹುಸೇನ್  ಸುರಕ್ಷತಾ ನಿಯಮಗಳನ್ನು ಪಾಲಿಸಲು ನಿರಾಕರಿಸಿದ್ದರಿಂದ, 41C ಸೀಟಿನಲ್ಲಿದ್ದ ಶೇಖ್ ಅಜರುದ್ದೀನ್ ಕೋಪಗೊಂಡು ಹುಸೇನ್‌ರ ಕಪಾಳಕ್ಕೆ ಹೊಡೆದಿದ್ದರಿಂದಾಗಿ ವಿಮಾನದಲ್ಲಿ ವಾಗ್ವಾದ ಉಂಟಾಗಿದೆ ಎಂದು ವಿಮಾನಯಾನ ಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿದೆ .

ಈ ವೈರಲ್‌ ವಿಡಿಯೋದ ಕುರಿತು ಮತ್ತಷ್ಟು ಹುಡುಕಾಟ ನಡೆಸಿದಾಗ, ವಿಮಾನದಲ್ಲಾದ ಈ ಜಗಳದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆದ ನಂತರ, ಏರ್‌ಲೈನ್ ಇನ್ನುಳಿದ ಪ್ರಯಾಣಿಕರಿಗೆಲ್ಲಿಗೂ ಕ್ಷಮೆ ಕೋರಿತ್ತು. ಆದರೆ, ಈ ಘಟನೆಯನ್ನು ವರದಿ ಮಾಡಿದ ಸಾಮಾಜಿಕ ಮಾಧ್ಯಮ ಖಾತೆಯು 2023ರಿಂದ ತಟಸ್ಥವಾಗಿದೆ. ಜನವರಿ 2024ರಲ್ಲಿ, ಥಾಯ್ ಸ್ಮೈಲ್ ಏರ್ವೇಸ್ ಥಾಯ್ ಏರ್ವೇಸ್ ಇಂಟರ್ನ್ಯಾಷನಲ್‌ನೊಂದಿಗೆ ವಿಲೀನಗೊಂಡಿದೆ ಎಂಬ ನಿಖರವಾದ ಮಾಹಿತಿ ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ಹೊರಟ ವಿಮಾನದಲ್ಲಿ ನಡೆದ ಇಬ್ಬರು ವ್ಯಕ್ತಿಗಳ ನಡುವಿನ ದಾಳಿಯ ಹಳೆಯ ವೀಡಿಯೊವನ್ನು ಸುಳ್ಳು ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವುದಕ್ಕಿಂತ ಮೊದಲು ಸುದ್ದಿಗಳ ಕುರಿತು ನಿಜವನ್ನು ತಿಳಿದುಕೊಳ್ಳಿ.


ಇದನ್ನು ಓದಿ : 

Fact Check : ಮಹಾರಾಷ್ಟ್ರದ ಚುನಾವಣೆಗೂ ಮುನ್ನ ಶಿವಸೇನೆ ಪಕ್ಷದ ₹5 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು 2021ರ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *