Fact Check | ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಹೆದರಿ ಮುನಾವರ್‌ ಫರೂಕಿ ಕ್ಷಮೆ ಯಾಚಿಸಿದ್ದಾರೆ ಎಂಬುದು ಸುಳ್ಳು

‘‘ಈ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ಗೆ ಈಗ ಬುದ್ದಿ ಬಂದಿದೆ. ಜೀವ ಭಯ ಶುರುವಾಗಿದೆ. ಈ ಭಯ ಯಾವಾಗಲೂ ಹೀಗೆಯೇ ಇರಬೇಕು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಬೆದರಿಕೆ ಬಂದ ನಂತರ ಮುನ್ನಾವರ್ ಫಾರೂಕಿ ಈ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಜೈ ಲಾರೆನ್ಸ್,’’ ಎಂದು ಮುನ್ನಾವರ್‌ ಫಾರೂಕಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಹಲವು ಬಲಪಂಥೀಯ ಖಾತೆಗಳಲ್ಲಿ ಕೂಡ ಇದೇ ಮಾಹಿತಿಯನ್ನು ಶೇರ್‌ ಮಾಡಲಾಗಿದೆ.

ವಿಡಿಯೋದಲ್ಲಿ ಕೂಡ ಮುನ್ನಾವರ್‌ ಫಾರೂಕಿ ಕ್ಷಮೆ ಕೇಳುವುದು ಕಂಡು ಬಂದಿದ್ದು, ಹೀಗಾಗಿ ವೈರಲ್‌ ವಿಡಿಯೋ ನೋಡಿದ ಹಲವು ಮಂದಿ ಫಾರೂಕಿ ಅವರು ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯ್ ಬಳಿ ಕ್ಷಮೆ ಕೇಳಿದ್ದಾರೆ ಎಂದು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಹಲವು ಮಂದಿ ಈ ವಿಡಿಯೋದೊಂದಿಗೆ ಪ್ರತಿಪಾದಿಸಿರುವ ಹಕ್ಕು ನಿಜವೆಂದು ಭಾವಿಸಿದ್ದಾರೆ. ಹೀಗೆ ವಿವಿಧ ರೀತಿಯಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 12 ಆಗಸ್ಟ್‌ 2024ರಂದು ಫಾರೂಕಿ ಅವರು ತಮ್ಮ ಅಧಿಕೃತ ಎಕ್ಸ್‌ ( ಹಿಂದಿನ ಟ್ವಿಟರ್‌) ನಲ್ಲಿ ಪೋಸ್ಟ್‌ ಮಾಡಿದ ವಿಡಿಯೋವೊಂದು ಕಂಡು ಬಂದಿದೆ.

ಈ ವಿಡಿಯೋದಲ್ಲಿ ಅವರು “ಪ್ರೀತಿಯ ಕೊಂಕಣಕ್ಕೆ ನನ್ನ ಕ್ಷಮೆಯಾಚನೆ” ಎಂಬ ಅರ್ಥ ಬರುವಂತೆ ಶೀರ್ಷಿಕೆಯನ್ನು ನೀಡಿದ್ದರು. ಈ ವಿಡಿಯೋದಲ್ಲಿ ಅವರು ತನ್ನ ಸ್ಟ್ಯಾಂಡ್‌ಅಪ್‌ ಕಾಮಿಡಿಯ ಸಂದರ್ಭದಲ್ಲಿ ಕೊಂಕಣಿ ಸಮುದಾಯಕ್ಕೆ ಸಂಬಂಧಿಸಿದಂತೆ ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಗುರಿಯಾಗಿತ್ತು. ಇದನ್ನು ಉಲ್ಲೇಖಿಸಿ ಅವರು, “ನಾನು ಕೊಂಕಣಿ ಜನರಿಗೆ ಅವಮಾನಿಸುವ ಉದ್ದೇಶದಿಂದ ಹೇಳಿಕೆಯನ್ನು ನೀಡಿಲ್ಲ, ನನಗೆ ಸಾಕಷ್ಟು ಕೊಂಕಣಿ ಗೆಳೆಯರಿದ್ದಾರೆ. ನಾನು ನಡೆಸಿದ ಕಾರ್ಯಕ್ರಮದಲ್ಲಿ ಮರಾಠಿಗರು, ಮುಸಲ್ಮಾನರು, ಹಿಂದೂಗಳು ಕೂಡ ಇದ್ದರು” ಎಂದು ಹೇಳಿಕೆ ನೀಡಿರುವುದು ಕಂಡು ಬಂದಿದೆ. ಇದನ್ನೇ ದಿ ಟೈಮ್ಸ್‌ ಆಫ್‌ ಇಂಡಿಯಾ, ಹಿಂದೂಸ್ತಾನ್‌ ಟೈಮ್ಸ್‌ ಮತ್ತು ನ್ಯೂಸ್‌ 18 ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ. ಹಾಗಾಗಿ ವೈರಲ್‌ ವಿಡಿಯೋ ತಪ್ಪು ಮಾಹಿತಿಯಿಂದ ಕೂಡಿದೆ.

 

 

 

                                                                                             ಟೈಮ್ಸ್‌ ಆಫ್‌ ಇಂಡಿಯಾ ವರದಿ
                                                      ಹಿಂದೂಸ್ತಾನ್‌ ಟೈಮ್ಸ್‌ ವರದಿ
                                                                                                                     ನ್ಯೂಸ್‌ 18 ವರದಿ

ಒಟ್ಟಾರೆಯಾಗಿ ಹೇಳುವುದಾದರೆ, ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ ಮುನ್ನಾವರ್‌ ಫಾರೂಕಿಗೆ ಕೊಲೆ ಬೆದರಿಕೆ ಹಾಕಿದ ನಂತರ, ಮುನ್ನಾವರ್‌ ಫಾರೂಕಿ ಕ್ಷಮೆ ಕೇಳಿದ್ದಾರೆ ಎಂಬುದು ಸುಳ್ಳು. ವೈರಲ್‌ ವಿಡಿಯೋ 12 ಆಗಸ್ಟ್‌ 2024ರಿಂದಲೂ ಸಾಮಾಜಿಕ ಜಾಲತಾಣದಲ್ಲಿದೆ. ಹಾಗಾಗಿ ಸುಳ್ಳು ನಿರೂಪಣೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಸಾಬೀತಾಗಿದೆ. ಹಾಗಾಗಿ ವೈರಲ್‌ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check: 1947ರಿಂದ 2017ರ ನಡುವೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ 3 ರಿಂದ 30 ಕೋಟಿಯಷ್ಟು ಹೆಚ್ಚಳವಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *