Fact Check: 1947ರಿಂದ 2017ರ ನಡುವೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ 3 ರಿಂದ 30 ಕೋಟಿಯಷ್ಟು ಹೆಚ್ಚಳವಾಗಿದೆ ಎಂಬುದು ಸುಳ್ಳು

ಕಳೆದ ಅನೇಕ ವರ್ಷಗಳಿಂದ ಮುಸ್ಲಿಂ ಜನಸಂಖ್ಯೆಯ ಕುರಿತು ಅನೇಕ ಸುಳ್ಳು ಸುದ್ದಿಗಳು ಮತ್ತು ಸುಳ್ಳು ಪ್ರತಿಪಾದನೆಗಳನ್ನು ಮಾಡಲಾಗುತ್ತಿದೆ. ಹಿಂದೂ ಧರ್ಮಿಯರನ್ನು ಮತ ಬ್ಯಾಂಕ್‌(vote bank) ಆಗಿ ಬಳಸಿಕೊಳ್ಳಲು ಮುಸ್ಲಿಂ ದ್ವೇಷವನ್ನು ಕೆಲವು ರಾಜಕೀಯ ಪಕ್ಷಗಳು ಮುನ್ನಲೆಗೆ ತರುತ್ತಿವೆ. ಈ ಮೂಲಕ ಪ್ರತಿನಿತ್ಯ ಮುಸ್ಲಿಂ ಸಮುದಾಯದ ಕುರಿತು ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವ ಮೂಲಕ ಜನರಲ್ಲಿ ಸಾಮರಸ್ಯದ ಭಾವನೆ ಹೊರಟು ಹೋಗಿ ಪರಸ್ವರ ದ್ವೇಷದ ಭಾವನೆ ಹೆಚ್ಚಾಗುತ್ತಿದೆ. ಈ ಮೂಲಕ ರಾಜಕೀಯ ಅಧಿಕಾರವನ್ನು ಪಡೆಯುವ  ದಾರಿಗಳನ್ನು ರಾಜಕೀಯ ಪಕ್ಷಗಳು ಕಂಡುಕೊಂಡಿವೆ.

ಅದರ ಭಾಗವಾಗಿ ಈಗ, ಸಾಮಾಜಿಕ ಮಾಧ್ಯಮಗಳಲ್ಲಿ ಕರಪತ್ರವೊಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, “ನಿಮಗೆ ಗಣಿತ ತಿಳಿದಿದ್ದರೆ 1947 ರಿಂದ 2017 ರವರೆಗಿನ 70 ವರ್ಷಗಳಲ್ಲಿ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆಯು 3 ಕೋಟಿಯಿಂದ 30 ಕೋಟಿಗೆ ಹತ್ತು ಪಟ್ಟು ಹೆಚ್ಚಾಗಿದೆ ಎಂದು ಹೇಳಿ, ಆಗ ನಮ್ಮ ಮಗನ ಜೀವಿತಾವಧಿಯು ಅವರ ಜನಸಂಖ್ಯೆಗೆ ಸಮನಾಗಿರುತ್ತದೆ. ಮುಂದಿನ 70 ವರ್ಷಗಳು (2090) ಎಷ್ಟು..?” ಎಂಬ ಶೀರ್ಷಿಕೆಯೊಂದಿಗೆ, ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಪ್ರತಿಪಾದಿಸಲಾಗುತ್ತಿದೆ.

 ಈ ಕರಪತ್ರವನ್ನು ಪ್ರತೀ ಮೂರು ಜನ ಹಿಂದುಗಳಿಂದ ಹಂಚಿಕೊಳ್ಳುವಂತೆ ಸೂಚಿಸಲಾಗಿದೆ. ಅದರ ಭಾಗವಾಗಿ ಅನೇಕರು ಈ ಕರಪತ್ರವನ್ನು ಹಂಚಿಕೊಂಡಿದ್ದು ಅದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ ಚೆಕ್:

1947 ರಲ್ಲಿ ಬ್ರಿಟಿಷ್‌ ವಸಾಹತುಶಾಹಿ ದೇಶವಾಗಿದ್ದ ಭಾರತವನ್ನು, ಹಿಂದೂ-ಬಹುಸಂಖ್ಯಾತ ಭಾರತ ಮತ್ತು ಮುಸ್ಲಿಂ-ಬಹುಸಂಖ್ಯಾತ ಪಾಕಿಸ್ತಾನಗಳಾಗಿ ವಿಭಜಿಸಿದ ನಂತರ ಭಾರತದ ಜನಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳ ಕಂಡಿದೆ – 1951 ರಲ್ಲಿ 36.1 ಕೋಟಿ ಜನರಿಂದ, 2011 ರಲ್ಲಿ 1.2 ಶತಕೋಟಿಗೆ ಹೆಚ್ಚಳವಾಗಿದೆ. (ಸ್ವತಂತ್ರ ಭಾರತವು 1951 ರಲ್ಲಿ ತನ್ನ ಮೊದಲ ಜನಗಣತಿಯನ್ನು ನಡೆಸಿತು. ಮತ್ತು ಕೊನೆಯದಾಗಿ 2011 ರಲ್ಲಿ ನಡೆಸಲಾಗಿದೆ.)

ಈ ಅವಧಿಯಲ್ಲಿ, ಭಾರತದಲ್ಲಿನ ಪ್ರತಿಯೊಂದು ಪ್ರಮುಖ ಧರ್ಮವು ಅದರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ ಎಂದು ಅಧ್ಯಯನಗಳು ಕಂಡುಹಿಡಿದಿವೆ. 1947ರಿಂದ ಹಿಂದೂಗಳ ಜನಸಂಖ್ಯೆ 30.4 ಕೋಟಿಯಿಂದ 96.6 ಕೋಟಿಗೆ ಏರಿದೆ; ಮುಸ್ಲಿಮರ ಸಂಖ್ಯೆ 3.5 ಕೋಟಿಯಿಂದ 17.2 ಕೋಟಿಗೆ ಏರಿದೆ; ಮತ್ತು ಕ್ರಿಶ್ಚಿಯನ್ನರ ಸಂಖ್ಯೆ 80 ಲಕ್ಷದಿಂದ 2.8 ಕೋಟಿಗೆ ಏರಿದೆ.

1947 ರಲ್ಲಿ, ಭಾರತದ ವಿಭಜನೆಯ ಸಮಯದಲ್ಲಿ, ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆಯು (ಪಾಕಿಸ್ತಾನದ ರಚನೆಯ ಮೊದಲು) ಸುಮಾರು 9. 4 ಕೋಟಿ ಎಂದು ಅಂದಾಜಿಸಲಾಗಿದೆ. ವಿಭಜನೆಯ ನಂತರ, ಈ ಜನಸಂಖ್ಯೆಯ ಗಮನಾರ್ಹ ಭಾಗವು ಪಾಕಿಸ್ತಾನವಾಗಿ ಮಾರ್ಪಟ್ಟ ಪ್ರದೇಶಗಳಲ್ಲಿ (ಪಶ್ಚಿಮ ಪಾಕಿಸ್ತಾನ, ಈಗ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನ, ಈಗ ಬಾಂಗ್ಲಾದೇಶ) ಆಗಿತ್ತು. ಹೊಸದಾಗಿ ಸ್ವತಂತ್ರ ಭಾರತದಲ್ಲಿ, ಮುಸ್ಲಿಂ ಜನಸಂಖ್ಯೆಯು ಸುಮಾರು 3.5 ಕೋಟಿ ಎಂದು ಅಂದಾಜಿಸಲಾಗಿದೆ. ಇದು ಆ ಸಮಯದಲ್ಲಿ ಭಾರತದ ಒಟ್ಟು ಜನಸಂಖ್ಯೆಯ ಸರಿಸುಮಾರು 10% ಆಗಿತ್ತು.

ಭಾರತದಲ್ಲಿ 2011 ರಲ್ಲಿ ಕೊನೆಯದಾಗಿ ನಡೆದ ಜನಗಣತಿಯ ಕೆಲವು ಮುಖ್ಯ ಅಂಶಗಳು ಮತ್ತು ಧಾರ್ಮಿಕ ಸಂಯೋಜನೆಯ ಮಾಹಿತಿ ಕೆಳಗಿನಂತಿದೆ.

  • 2011 ರ ಜನಗಣತಿಯಲ್ಲಿ ಭಾರತದ 1.2 ಶತಕೋಟಿ ಜನರಲ್ಲಿ ಹಿಂದೂಗಳು 79.8% ರಷ್ಟಿದ್ದಾರೆ. ವಿಶ್ವದ 94% ಹಿಂದೂಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ.
  • ಮುಸ್ಲಿಮರು 14.2% ಭಾರತೀಯರನ್ನು ಹೊಂದಿದ್ದಾರೆ. ಭಾರತವು ವಿಶ್ವದ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯ ನೆಲೆಯಾಗಿದೆ, ಇದನ್ನು ಇಂಡೋನೇಷ್ಯಾ ಮಾತ್ರ ಮೀರಿಸಿದೆ.
  • ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು ಮತ್ತು ಜೈನರು ಒಟ್ಟಾಗಿ ಜನಸಂಖ್ಯೆಯ 6% ರಷ್ಟಿದ್ದಾರೆ.
  • 2011 ರಲ್ಲಿ ಕೇವಲ 30,000 ಭಾರತೀಯರು ತಮ್ಮನ್ನು ನಾಸ್ತಿಕರು ಎಂದು ಗುರುತಿಸಿಕೊಂಡಿದ್ದಾರೆ.
  • ಸುಮಾರು 8 ಮಿಲಿಯನ್ ಜನರು ತಾವು ಆರು ದೊಡ್ಡ ಧರ್ಮದ ಗುಂಪುಗಳಿಗೆ ಸೇರಿದವರಲ್ಲ ಎಂದು ಹೇಳಿದ್ದಾರೆ.
  • ಒಟ್ಟು ಜನಸಂಖ್ಯೆಯಲ್ಲಿ 83 ಸಣ್ಣ ಧಾರ್ಮಿಕ ಗುಂಪುಗಳಿದ್ದವು ಮತ್ತು ಪ್ರತಿಯೊಂದೂ ಕನಿಷ್ಠ 100 ಅನುಯಾಯಿಗಳನ್ನು ಹೊಂದಿದ್ದವು.
  • ಭಾರತವು ಪ್ರತಿ ತಿಂಗಳು ಸರಿಸುಮಾರು 1 ಮಿಲಿಯನ್ ನಿವಾಸಿಗಳನ್ನು ಪಡೆಯುತ್ತದೆ, 2030 ರ ವೇಳೆಗೆ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮುತ್ತದೆ.
    (ಮೂಲ: 2011 ಜನಗಣತಿ, ಪ್ಯೂ ಸಂಶೋಧನಾ ಕೇಂದ್ರ)

2011ರ ಜನಗಣತಿಯ ಮಾಹಿತಿಯಂತೆ ಭಾರತದಲ್ಲಿ ಹಿಂದುಗಳ ಒಟ್ಟು ಜನಸಂಖ್ಯೆ 79.8% ಇದ್ದರೆ ಮುಸ್ಲಿಮರ ಒಟ್ಟು ಜನಸಂಖ್ಯೆ 14.2% ಇದೆ. ಅಂದರೆ ಹಿಂದೂ ಮತ್ತು ಮುಸ್ಲಿಂ ಜನಸಂಖ್ಯೆಯ ನಡುವೆ 65% ಅಷ್ಟು ಅಂತರವಿದೆ. ಆದರೂ ಭಾರತ ಮುಂಬರುವ ದಿನಗಳಲ್ಲಿ ಮುಸ್ಲಿಂ ರಾಷ್ಟ್ರವಾಗುತ್ತದೆ ಎಂದು ಸುಳ್ಳು ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಇನ್ನೂ ಧರ್ಮಗಳ ಫಲವತ್ತತೆ ದರದ ಕುರಿತು ಚರ್ಚಿಸುವುದಾದರೆ;

ಪ್ರಮುಖ ಧಾರ್ಮಿಕ ಗುಂಪುಗಳಲ್ಲಿ ಮುಸ್ಲಿಮರು ಹೆಚ್ಚಿನ ಫಲವತ್ತತೆಯ ಪ್ರಮಾಣವನ್ನು ಹೊಂದಿದ್ದಾರೆ (2015 ರಲ್ಲಿ ಪ್ರತಿ ಮಹಿಳೆಗೆ 2.6 ಮಕ್ಕಳು), ನಂತರ ಹಿಂದೂಗಳು (2.1). ಜೈನರು 1.2 ರಷ್ಟು ಕಡಿಮೆ ಫಲವತ್ತತೆಯ ಪ್ರಮಾಣವನ್ನು ಹೊಂದಿದ್ದಾರೆ. 1992 ರಲ್ಲಿ ಮುಸ್ಲಿಮರು ಅತ್ಯಧಿಕ ಫಲವತ್ತತೆ ದರವನ್ನು (4.4) ಹೊಂದಿದ್ದಾಗ, ಹಿಂದೂಗಳು 3.3 ಫಲವತ್ತತೆ ದರ ಹೊಂದಿದ್ದರು. ಆದರೆ ಮುಂಬರುವ ದಿನಗಳಲ್ಲಿ ಎರಡೂ ಧರ್ಮಗಳ ಫಲವತ್ತತೆ ದರ ಒಂದೇ ಆಗಿರುತ್ತದೆ ಎಂದು ಅಧ್ಯಯನವು ಹೇಳುತ್ತದೆ. “ಆದರೆ ಭಾರತದ ಧಾರ್ಮಿಕ ಗುಂಪುಗಳ ನಡುವಿನ ಮಕ್ಕಳನ್ನು ಹೆರುವಲ್ಲಿನ ಅಂತರವು ಸಾಮಾನ್ಯವಾಗಿ ಹಿಂದೆಂದಿಗಿಂತಲೂ ಕಡಿಮೆಯಾಗಿದೆ” ಎಂದು ಅಧ್ಯಯನವು ಹೇಳಿದೆ.

ಮತ್ತು ಹಿಂದಿನ ದಶಕಗಳಲ್ಲಿ ಹಿಂದೂಗಳನ್ನು ಮೀರಿಸಿದ ಭಾರತದ ಅಲ್ಪಸಂಖ್ಯಾತ ಗುಂಪುಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯಲ್ಲಿನ ನಿಧಾನಗತಿಯು ಹೆಚ್ಚು ಸ್ಪಷ್ಟವಾಗಿದೆ. ಮುಸ್ಲಿಂರಲ್ಲಿ ಒಂದೇ ಪೀಳಿಗೆಯಲ್ಲಿ 25 ವರ್ಷದೊಳಗಿನ ಪ್ರತಿ ಮಹಿಳೆಗೆ ಸುಮಾರು ಎರಡು ಮಕ್ಕಳ ಫಲವತ್ತತೆ ಕುಸಿತವು ಗಮನಾರ್ಹ ಸಂಗತಿಯಾಗಿದೆ ಎಂದು ಧರ್ಮಗಳ ಜನಸಂಖ್ಯೆಯಲ್ಲಿ ಪರಿಣತಿ ಹೊಂದಿರುವ ಹಿರಿಯ ಪ್ಯೂ ಸಂಶೋಧಕ ಸ್ಟೆಫನಿ ಕ್ರಾಮರ್ ಹೇಳಿದ್ದಾರೆ.

ಭಾರತೀಯ ಮಹಿಳೆಯರ ಮಕ್ಕಳ ಸಂಖ್ಯೆಯು 1990 ರ ದಶಕದ ಆರಂಭದಲ್ಲಿ ಪ್ರತಿ ಮಹಿಳೆಗೆ ಸರಾಸರಿ 3.4 ರಿಂದ 2015 ರಲ್ಲಿ 2.2 ಕ್ಕೆ ಇಳಿದಿದ್ದರಿಂದ, ಮುಸ್ಲಿಮರಲ್ಲಿನ ಪ್ರಮಾಣವು 4.4 ರಿಂದ 2.6 ಕ್ಕೆ ಇನ್ನಷ್ಟು ಕುಸಿಯಿತು. 60 ವರ್ಷಗಳ ಅವಧಿಯಲ್ಲಿ, ಭಾರತದ ಜನಸಂಖ್ಯೆಯ ಮುಸ್ಲಿಂ ಪಾಲು 4% ರಷ್ಟು ಬೆಳೆದರೆ, ಹಿಂದೂ ಪಾಲು ಸುಮಾರು ಅದೇ ಪ್ರಮಾಣದಲ್ಲಿ ಕುಸಿಯಿತು. ಇತರ ಗುಂಪುಗಳು ತಕ್ಕಮಟ್ಟಿಗೆ ಸ್ಥಿರವಾಗಿದ್ದವು.

ಭಾರತದಲ್ಲಿ ಮುಸ್ಲಿಂ ಜನಸಂಖ್ಯಾ ಸ್ಫೋಟದ ಕುರಿತಿರುವ ಕಟ್ಟುಕಥೆಗಳು

2014ರಿಂದ ಕೇಂದ್ರದಲ್ಲಿ  ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ ಆಡಳಿತ ಆರಂಭಿಸಿದಂದಿನಿಂದ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೇರಳವಾಗಿ ಹೆಚ್ಚಾಗಿದೆ ಎಂದು ವಾದಿಸಲಾಗುತ್ತಿದೆ. ಇದನ್ನು ಸಾಭೀತು ಪಡಿಸಲು ಸರಿಯಾದ ದಾಖಲೆಗಳು ಇಲ್ಲದ ಕಾರಣ ಸುಳ್ಳು ಅಂಕಿ-ಅಂಶಗಳನ್ನು ತೋರಿಸುತ್ತಾ ಜನರಲ್ಲಿ ಆಂತಕ ಮೂಡಿಸಲಾಗುತ್ತಿದೆ. ಮುಸ್ಲಿಂ ಜನಸಂಖ್ಯೆ ಹೆಚ್ಚಾಗುವ ಮೂಲಕ ಭಾರತ ಮುಸ್ಲಿಂ ರಾಷ್ಟ್ರವಾಗುತ್ತದೆ ಹಾಗಾಗಿ ಹಿಂದೂಗಳೆಲ್ಲಾ ಒಂದಾಗಿ ಬಿಜೆಪಿ ಬೆಂಬಲಿಸಬೇಕು, ಏಕೆಂದರೆ ಕಾಂಗ್ರೆಸ್‌ ಸಹ ಮುಸ್ಲಿಮರ ಪಕ್ಷ ಎಂದು ನೇರವಾಗಿ ಪ್ರಚಾರ ಮಾಡುತ್ತ ಮೂರು ಭಾರಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದಿದೆ.

ಭಾರತದಲ್ಲಿ ಪ್ರತೀ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯನ್ನು ಕೇಂದ್ರ ಬಿಜೆಪಿ ಸರ್ಕಾರ 2021ರಲ್ಲಿ ನಡೆಸಬೇಕಾಗಿತ್ತು ಆದರೆ ಜನಗಣತಿಯನ್ನು ನಡೆಸದೇ, ಜನಗಣತಿ ಅಥವಾ ಜಾತಿಜನಗಣತಿ ನಡೆಸುವುದೇ ಅನಗತ್ಯ ಎಂಬ ಬಾಲೀಷ ವಾದವನ್ನು ಜನರ ನಡುವೆ ಹರಿಬಿಟ್ಟಿದೆ.

ದೇಶದಲ್ಲಿ ಹೆಚ್ಚಳವಾಗುತ್ತಿರುವ ಜನಸಂಖ್ಯೆ, ಧರ್ಮಗಳ ಜನಸಂಖ್ಯೆ, ಜಾತಿ ಜನಗಣತಿ ಇವುಗಳೆಲ್ಲವುದರ ಆಧಾರದ ಮೇಲೆ ದೇಶದ ಅಭಿವೃದ್ದಿ ಕಾರ್ಯಗಳನ್ನು ರೂಪಿಸಲು ಜನಗಣತಿಯ ಮಾಹಿತಿಗಳು ಬಹಳ ಅಗತ್ಯವಾಗಿರುತ್ತವೆ. ದೇಶದಲ್ಲಿ ನಡೆಯುವ ಅಧ್ಯಯನಗಳಿಗೆಂತೂ ಈ ಅಂಕಿ-ಅಂಶಗಳ ಅಗತ್ಯತೆ ಇನ್ನೂ ಹೆಚ್ಚಿರುತ್ತದೆ. ಆದರೆ ಪ್ರಸ್ತುತ ನಾವು ಭಾರತದ ಅಧಿಕೃತ ಜನಸಂಖ್ಯೆಯ ಕುರಿತು ಮಾತನಾಡಬೇಕಾದರೆ 13 ವರ್ಷಗಳ ಹಿಂದಿನ ಅಂಕಿ-ಅಂಶಗಳ ಆಧಾರದ ಮೇಲಷ್ಟೇ ಮಾತನಾಡಬೇಕಾಗಿದೆ.

ಜನಗಣತಿಯನ್ನು ನಡೆಸದೇ ಯಾವುದೇ ಧರ್ಮದ ಜನಸಂಖ್ಯೆಯ ಕುರಿತು ಮಾತನಾಡುವುದು ತಪ್ಪಾಗುತ್ತದೆ. ಆದರೆ ಈ ಕಾರಣಕ್ಕಾಗಿಯೇ ಆಡಳಿತರೂಢ ಬಿಜೆಪಿ ಸರ್ಕಾರ ಜನಗಣತಿಯನ್ನು ನಡೆಸದೇ ಆಧಾರರಹಿತವಾಗಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದು ಜನರಲ್ಲಿ ಆತಂಕ ಹುಟ್ಟಿಸುತ್ತಿದೆ. ಈ ಮೂಲಕ ಬಹುಸಂಖ್ಯಾತ ಹಿಂದೂ ಮತಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

ಆದ್ದರಿಂದ ಸಧ್ಯ ಭಾರತದಲ್ಲಿ ಮುಂಬರುವ ದಿನಗಳಲ್ಲಿ ಮುಸ್ಲಿಂ ಜನಸಂಖ್ಯೆಗೆ ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ಸುಳ್ಳು ಸುದ್ದಿಯಾಗಿದ್ದು, ಈ ವಾದಕ್ಕೆ ಯಾವುದೇ ಪುರಾವೆಗಳಿಲ್ಲ.


ಇದನ್ನು ಓದಿ: ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತದೆ ಎಂಬುದು ನಿಜವೇ? ಇಲ್ಲಿದೆ ಸಂಪೂರ್ಣ ಮಾಹಿತಿ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *