Fact Check: ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ರೈಗೆ ವಿಚ್ಛೇದನ ನೀಡಿ ನಿಮ್ರತ್ ಕೌರ್ ಅವರನ್ನು ಮದುವೆ ಆಗಿದ್ದಾರೆ ಎಂಬುದು ಸುಳ್ಳು

ಅಭಿಷೇಕ್ ಬಚ್ಚನ್

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ರವರ ದಾಂಪತ್ಯದ ಮಧ್ಯೆ ಬಿರುಕು ಉಂಟಾಗಿದೆ ಎಂಬ ವದಂತಿಗಳು ಕೇಳಿ ಬರುತ್ತಿರುವುದರ ನಡುವೆ, ಈಗ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಅವರಿಗೆ ವಿಚ್ಛೇದನ ನೀಡಿದ್ದಾರೆ ಮತ್ತು ನಟಿ ನಿಮ್ರತ್ ಕೌರ್ ಅವರನ್ನು ವಿವಾಹವಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಚಿತ್ರಗಳು ವೈರಲ್ ಆಗಿವೆ. ಈ ಹೇಳಿಕೆಯನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಬಚ್ಚನ್ ಅವರ ಕುಟುಂಬದ ಬಗ್ಗೆ ಮತ್ತಷ್ಟು ಊಹಾಪೋಹಗಳು ಹರಡಲು ಕಾರಣವಾಗಿದೆ.

“ಐಶ್ವರ್ಯಾ ರೈ ಅವರೊಂದಿಗಿನ ವಿಚ್ಛೇದನದ ನಂತರ ಅಭಿಷೇಕ್ ಬಚ್ಚನ್ ನಿಮ್ರತ್ ಕೌರ್ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.

ಮೇಲಿನ ಪೋಸ್ಟ್ ಅನ್ನು ಇಲ್ಲಿ ನೋಡಬಹುದು (ಆರ್ಕೈವ್). ಅಂತಹ ಹೆಚ್ಚಿನ ಪೋಸ್ಟ್ ಗಳನ್ನು ಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್ ಚೆಕ್

ನಮ್ಮ ತಂಡ ವೈರಲ್ ಹೇಳಿಕೆಯ ಕುರಿತು ಸತ್ಯಾಸತ್ಯತೆಯನ್ನು ಕಂಡುಕೊಂಡಿದ್ದು, ಅದು ಸುಳ್ಳು ಎಂದು ಕಂಡುಬಂದಿದೆ. ಮೊದಲಿಗೆ ನಮ್ಮ ಸತ್ಯಶೋಧನಾ ತಂಡವು ಕೀವರ್ಡ್ ಹುಡುಕಾಟವನ್ನು ನಡೆಸಿತು, ಇದರಿಂದ ವೈರಲ್‌ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ.

ನಂತರ, ನಾವು ಹಂಚಿಕೊಳ್ಳಲಾಗುತ್ತಿರುವ ಚಿತ್ರಗಳನ್ನು ಪರಿಶೀಲಿಸಿದಾಗ, ಅವುಗಳನ್ನು ಡಿಜಿಟಲ್ ಆಗಿ ಬದಲಾಯಿಸಲಾಗಿದೆ ಎಂದು ಕಂಡುಕೊಂಡಿದ್ದೇವೆ. ರಿವರ್ಸ್ ಇಮೇಜ್ ಹುಡುಕಾಟವು ಡಿಸೆಂಬರ್ 15, 2022 ರ ನ್ಯೂಸ್ 18 ವರದಿಯಲ್ಲಿ ಕಾಣಿಸಿಕೊಂಡ ಮೂಲ, ಎಡಿಟ್ ಮಾಡದ ಚಿತ್ರಗಳಿಗೆ ನಮ್ಮನ್ನು ಕರೆದೊಯ್ಯಿತು.

ವರದಿಯು ಸಾಥ್ ನಿಭಾನಾ ಸಾಥಿಯಾ ಚಿತ್ರದ ನಟಿ ದೇವೋಲೀನಾ ಭಟ್ಟಾಚಾರ್ಜಿ ಮತ್ತು ಜಿಮ್ ತರಬೇತುದಾರ ಶಹನವಾಜ್ ಶೇಖ್ ಅವರೊಂದಿಗಿನ ಮದುವೆಯ ಚಿತ್ರಗಳು ಎಂದು ಗುರುತಿಸಿದೆ.

ಮೇಲಿನ ಹೋಲಿಕೆಯಲ್ಲಿ, ದೇವೋಲೀನಾ ಭಟ್ಟಾಚಾರ್ಜಿ ಮತ್ತು ಶಹನವಾಜ್ ಶೇಖ್ ಅವರ ಮುಖಗಳನ್ನು ಫೋಟೋ ಎಡಿಟಿಂಗ್ ಸಾಫ್ಟ್ವೇರ್ ಬಳಸಿ ಅಭಿಷೇಕ್ ಬಚ್ಚನ್ ಮತ್ತು ನಿಮ್ರತ್ ಕೌರ್ ಅವರಿಂದ ಬದಲಾಯಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಮತ್ತಷ್ಟು ಹುಡುಕಿದಾಗ, ದೇವೋಲೀನಾ ಅವರ ಅಧಿಕೃತ ಇನ್ಸ್ಟಾಗ್ರಾಮ್ ಮೂಲಕ ಸ್ಕ್ಯಾನ್ ಮಾಡಿದಾಗ, ಅವರ ಮದುವೆಯ ಹೆಚ್ಚಿನ ದೃಶ್ಯಗಳನ್ನು ನಾವು ಕಂಡುಕೊಂಡಿದ್ದೇವೆ, ಅವುಗಳನ್ನು ವೈರಲ್ ಚಿತ್ರಗಳನ್ನು ರಚಿಸಲು ಬಳಸಲಾಗಿದೆ. (ಈ ದೃಶ್ಯಗಳನ್ನು ಇಲ್ಲಿ ನೋಡಬಹುದು)

ಅಭಿಷೇಕ್ ಮತ್ತು ನಿಮ್ರತ್ ಕೌರ್ ಅವರು ಕೂತಿರುವ ಎರಡನೇ ಚಿತ್ರಗಳು ಚಲನಚಿತ್ರ ನಿರ್ಮಾಪಕ ಜೆಪಿ ದತ್ತಾ ಮತ್ತು ಮಾಜಿ ನಟಿ ಬಿಂದಿಯಾ ಗೋಸ್ವಾಮಿ ಅವರ ಮಗಳು ನಿಧಿ ದತ್ತಾ ಅವರೊಂದಿಗೆ ನಡೆದ ಆಗಸ್ಟ್ 2020 ರಲ್ಲಿ ನಿಶ್ಚಿತಾರ್ಥದ ಸಮಯದ ಪೋಟೋಗಳಾಗಿವೆ.

ಆದ್ದರಿಂದ, ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈಗೆ ವಿಚ್ಛೇದನ ನೀಡಿದ್ದಾರೆ ಮತ್ತು ನಿಮ್ರತ್ ಕೌರ್ ಅವರನ್ನು ಮದುವೆಯಾಗಿದ್ದಾರೆ ಎಂಬ ವೈರಲ್ ಹೇಳಿಕೆ ಸಂಪೂರ್ಣವಾಗಿ ಆಧಾರರಹಿತವಾಗಿದೆ. ಇಂದು ನಿಮ್ರತ್ ಕೌರ್ ಅವರ ಕುರಿತು ಲೇಖನ ಪ್ರಕಟಿಸಿರುವ ಡೆಕ್ಕನ್ ಹೆರಾಲ್ಡ್‌, ನಿಮ್ರತ್ ಕೌರ್ ಅವರ ಕುರಿತು ಇಂತಹ ಅನೇಕ ವಿವಾದಗಳಿಗೆ ಸಿಲುಕಿದ್ದಾರೆ, ದಸ್ವಿ ಸಿನಿಮಾದ ಸಮಯದಲ್ಲಿ ಅಭಿಷೇಕ್ ಬಚ್ಚನ್ ಮತ್ತು ನಿಮ್ರತ್ ಕೌರ್ ಅವರ ಸಂಬಂಧದ ಕುರಿತು ಅನೇಕ ಗಾಳಿಸುದ್ದಿಗಳು ಹರಿದಾಡುತ್ತಿದ್ದವು ಎಂದು ಉಲ್ಲೇಖಿಸಿದ್ದಾರೆ.

ಆದರೆ ಈ ಇಬ್ಬರು ಮದುವೆಯ ಹಂತಕ್ಕೆ ಮುಂದುವರೆದಿರುವ ಕುರಿತು ಯಾವುದೇ ಮಾಹಿತಿ ಇಲ್ಲ. ವೈರಲ್ ಪೋಟೋಗಳನ್ನು ಡಿಜಿಟಲ್ ಆಗಿ ಬದಲಾಯಿಸಲಾಗಿದೆ, ಮತ್ತು ಯಾವುದೇ ವಿಶ್ವಾಸಾರ್ಹ ಮೂಲಗಳು ಈ ವದಂತಿಯನ್ನು ಬೆಂಬಲಿಸುವುದಿಲ್ಲ.


ಇದನ್ನು ಓದಿ: ಉದ್ಧವ್ ಠಾಕ್ರೆ ಅವರು ಉರ್ದು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *