Fact Check | ಆಜಾನ್ ಸಮಯದಲ್ಲಿ ಧ್ವನಿವರ್ಧಕದ ಮೂಲಕ ‘ಭಜನೆ ಮತ್ತು ಕೀರ್ತನೆ’ ಹಾಕುವಂತಿಲ್ಲ ಎಂಬ ಪ್ರತಿಪಾದನೆ ಸುಳ್ಳು

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಆಜಾನ್ ಸಮಯದಲ್ಲಿ ಭಜನೆ ಮತ್ತು ಕೀರ್ತನೆಗಳಂತಹ ಧಾರ್ಮಿಕ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರ ವಿಡಿಯೋವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಲವರು ಈ ವಿಡಿಯೋವನ್ನು ನೋಡಿ ಮಹಾರಾಷ್ಟ್ರದ ಪೊಲೀಸ್‌ ಇಲಾಖೆ ಮುಸಲ್ಮಾನರ ಪರವಾಗಿ ನಿಂತಿದೆ. ಇದರಿಂದ ಮುಂದೆ ಹಿಮಧುಗಳು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹಲವರು ಬರೆದುಕೊಳ್ಳುತ್ತಿದ್ದಾರೆ.

ಸಾಕಷ್ಟು ಮಂದಿ ವೈರಲ್‌ ವಿಡಿಯೋವನ್ನು ನೋಡಿ, ಅದರ ಬಗ್ಗೆ ಆಕ್ರೋಶವನ್ನು ವ್ಯಕ್ತ ಪಡಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ಸಾರ್ವಾಜನಿಕ ವಲಯದಲ್ಲಿ ಸಾಕಷ್ಟು ಗೊಂದಲವನ್ನು ಮೂಡಿಸುತ್ತಿದ್ದು, ಭಜನೆ, ಕೀರ್ತನೆಯಂತಹ ಕಾರ್ಯಕ್ರಮಗಳನ್ನು ನಡೆಸಬೇಕೆ ಬೇಡವೆ ಎಂಬ ಅನುಮಾನಗಳು ಕೂಡ ಹುಟ್ಟು ಹಾಕಿದೆ ಎನ್ನಲಾಗುತ್ತಿದೆ. ಹೀಗೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿರುವ ವೈರಲ್‌ ವಿಡಿಯೋವಿನ ನೈಜತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 18 ಏಪ್ರಿಲ್‌ 2022ರಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಅದರ ಪ್ರಕಾರ , “ನಾಸಿಕ್ ಪೊಲೀಸ್ ಕಮಿಷನರ್ ದೀಪಕ್ ಪಾಂಡೆ ಅವರು ನಾಸಿಕ್ ಪೊಲೀಸ್ ಕಮಿಷನರೇಟ್‌ನ ವ್ಯಾಪ್ತಿಗೆ ಬರುವ ಯಾವುದೇ ಮಸೀದಿಯ 100 ಮೀಟರ್ ಅಂತರದೊಳಗೆ ಅಜಾನ್‌ ಸಂದರ್ಭದಲ್ಲಿ 15 ನಿಮಿಷಗಳ ಕಾಲ ಯಾವುದೇ ಭಜನೆ ಮತ್ತು ಕೀರ್ತನೆಗಳನ್ನು ಧ್ವನಿವರ್ಧಕದ ಮೂಲಕ ಹಾಕುವಂತಿಲ್ಲ ಎಂಬ ಆದೇಶ ಹೊರಡಿಸಿದ್ದರು ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.

ಇನ್ನು ಈ ಆದೇಶ ವಿವಾದವನ್ನು ಕೂಡ ಹುಟ್ಟು ಹಾಕಿತ್ತು. ತದ ನಂತರ ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ  28 ​​ಏಪ್ರಿಲ್ 2022 ರಂದು ಆಜ್ ತಕ್ ಸುದ್ದಿ ಪತ್ತೆಯಾಯಿತು. ಇದರಲ್ಲಿ “ನಾಸಿಕ್ ಪೊಲೀಸ್ ಕಮಿಷನರ್ ಜಯಂತ್ ನಾಯಕನವರೆ ಹಿಂದಿನ ಕಮಿಷನರ್ ದೀಪಕ್ ಪಾಂಡೆ ಅವರು ಧ್ವನಿವರ್ಧಕಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಆದೇಶವನ್ನು ಹಿಂಪಡೆದಿದ್ದಾರೆ ಎಂಬುದು ತಿಳದು ಬಂದಿದೆ. ಇಲ್ಲಿಗೆ ಈ ಪ್ರಕರಣ ಇತ್ಯರ್ಥಗೊಂಡಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಇನ್ನೂ ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ಈ ಬಗ್ಗೆ ಏನಾದರೂ ಆದೇಶವನ್ನು ಹೊರಡಿಸಿದೆಯೇ ಎಂದು ಹುಡುಕಿದಾಗ 15 ಅಕ್ಟೋಬರ್‌ 2024ರಂದು ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ನಾಸಿಕ್‌ ಸಿಟಿ ಪೊಲೀಸರು ತಮ್ಮ ಅಧಿಕೃತ ಎಕ್ಸ್‌ ಹ್ಯಾಂಡಲ್‌ನಿಂದ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವುದು ಕಂಡು ಬಂದಿದೆ. ಇದರಲ್ಲಿ “ನಾಸಿಕ್ ಪೊಲೀಸ್ ಕಮಿಷನರ್ ಎಂದು ಅಧಿಕಾರಿಯ ಹೆಸರನ್ನು ತಪ್ಪಾಗಿ ಚಿತ್ರಿಸುವ 2.5 ವರ್ಷಗಳ ಹಳೆಯ ವೀಡಿಯೊವನ್ನು ಉದ್ದೇಶಪೂರ್ವಕವಾಗಿ ಎಡಿಟ್ ಮಾಡಿ ದುಷ್ಕರ್ಮಿಗಳು ವಾಟ್ಸಾಪ್‌ನಲ್ಲಿ ಪ್ರಸಾರ ಮಾಡಿದ್ದಾರೆ. ಮತ್ತು ಅದನ್ನು ಬಳಕೆದಾರರು ನಿನ್ನೆ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಪೋಸ್ಟ್ ಮಾಡಿದ್ದಾರೆ. ಇದರಿಂದಾಗಿ ಸ್ಥಳೀಯ ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನ ನಡೆದಿದೆ. ನಾವು ಎಫ್‌ಐಆರ್ ದಾಖಲಿಸಿಕೊಂಡಿದ್ದು, ವಿಡಿಯೋ ಪ್ರಸಾರ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಧರ್ಮ, ಜಾತಿ, ಜನ್ಮಸ್ಥಳ, ನಿವಾಸ ಅಥವಾ ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲು ವೀಡಿಯೊಗಳ ಎಡಿಟ್ ಮಾಡಿದ ಆವೃತ್ತಿಗಳನ್ನು ಪ್ರಸಾರ ಮಾಡುವುದು ಭಾರತೀಯ ನ್ಯಾಯ ಸಂಹಿತೆ, 2023 ರ ಸೆಕ್ಷನ್ 196 ಮತ್ತು 197 ರ ಅಡಿಯಲ್ಲಿ ಶಿಕ್ಷಾರ್ಹವಾಗಿದೆ. ನಮ್ಮ ಸೈಬರ್ ಪೊಲೀಸ್ ತಂಡಗಳು ಎಲ್ಲಾ ಆನ್‌ಲೈನ್ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಿವೆ ಮತ್ತು ಅಂತಹ ಪೋಸ್ಟ್‌ಗಳ ವಿರುದ್ಧ ನಾವು ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತೇವೆ.” ಎಂದು ಸುದೀರ್ಘ ಬರಹದೊಂದಿಗೆ ವೈರಲ್‌ ಪೋಸ್ಟ್‌ ಅನ್ನು ನಕಲಿ ಎಂದು ಉಲ್ಲೇಖಿಸಿದ್ದಾರೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಪೋಸ್ಟ್‌ನಲ್ಲಿ ಉಲ್ಲೇಖಿಸಿದಂತೆ ಮಹಾರಾಷ್ಟ್ರದಲ್ಲಿ ಆಜಾನ್ ಸಮಯದಲ್ಲಿ ಭಜನೆ ಮತ್ತು ಕೀರ್ತನೆಗಳಂತಹ ಧಾರ್ಮಿಕ ಚಟುವಟಿಕೆಗಳನ್ನು ನಿಲ್ಲಿಸಲಾಗಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದೆ. ಹಾಗೂ ವೈರಲ್‌ ವಿಡಿಯೋ 2 ವರ್ಷಗಳಷ್ಟು ಹಿಂದಿನದ್ದಾಗಿದ್ದು, ಹಾಗಾಗಿ ವೈರಲ್‌ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ :  Fact Check | ರಾಜಸ್ತಾನದಲ್ಲಿ RSS ಕಾರ್ಯಕರ್ತನ ಮೇಲೆ ಮುಸ್ಲಿಮರಿಂದ ಹಲ್ಲೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *