Fact Check | ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡುತ್ತಿದೆ ಎಂಬುದು ಸುಳ್ಳು ಸುದ್ದಿ

“ ದೇಶದ ಬಡ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅದರಲ್ಲೂ ಡಿಜಿಟಲ್‌ ಶಿಕ್ಷಣ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಲ್ಯಾಪ್‌ಟಾಪ್ ಯೋಜನೆ 2024 ಕ್ಕಾಗಿ ಅಪ್ಲಿಕೇಶನ್‌ಗಳು ಲಭ್ಯವಿದೆ. ಆರ್ಥಿಕ ಕಾರಣಗಳಿಗಾಗಿ ತಮ್ಮದೇ ಆದ ಲ್ಯಾಪ್‌ಟಾಪ್ ಖರೀದಿಸುವ ಸ್ಥಿತಿಯಲ್ಲಿಲ್ಲದ ಮತ್ತು ಅವರ ಶಿಕ್ಷಣದ ಮಟ್ಟದಲ್ಲಿ ಲ್ಯಾಪ್‌ಟಾಪ್ ಅಗತ್ಯವಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ಯೋಜನೆಯು ಆರಂಭಿಸಲಾಗಿದೆ. ಈ ಲಿಂಕ್‌ ಕ್ಲಿಕ್‌ ಮಾಡಿ, ಯೋಜನೆಯ ಲಾಭ ಪಡೆಯಿರಿ”  ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತು ವಾಟ್ಸ್‌ಆಪ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಲಿಂಕ್‌ ಕ್ಲಿಕ್‌ ಮಾಡಿದ ತಕ್ಷಣ ಲ್ಯಾಪ್‌ಟಾಪ್‌ ಬೇಕಾದವರ ಹೆಸರು, ಅವರ ವಯಸ್ಸು, ವಿದ್ಯಾರ್ಹತೆಯನ್ನು ಮೊದಲು ಕೇಳುತ್ತದೆ, ತದ ನಂತರ ಯಾವ ಬ್ರ್ಯಾಂಡಿನ ಲ್ಯಾಪ್‌ಟಾಪ್‌ ಬೇಕು ಎಂದು ಕೇಳುತ್ತದೆ. ಇದಕ್ಕೆ ಉತ್ತರಿಸಿದ ನಂತರ ” ನೀವು ಉಚಿತ ಲಾಪ್‌ಟಾಪ್‌ ಪಡೆಯಲು ಅರ್ಹರಾಗಿದ್ದೀರಿ, ಈ ಸಂದೇಶವನ್ನು ಎಲ್ಲರಿಗೂ ಶೇರ್‌ ಮಾಡಿ ಮತ್ತು ಲ್ಯಾಪ್‌ಟಾಪ್‌ ಪಡೆಯಿರಿ” ಎಂಬ ಸೂಚನೆ ಕಂಡು ಬರುತ್ತದೆ. ಇದನ್ನು ಗಮನಿಸಿದ ಹಲವು ಮಂದಿ ತಮ್ಮ ಸಾಮಾಜಿಕ ಜಾಲಾತಣದಲ್ಲಿ ವೈರಲ್‌ ಪೋಸ್ಟ್‌ ಅನ್ನು ಶೇರ್‌ ಮಾಡುತ್ತಿದ್ದಾರೆ. 

ಉಚಿತ ಲ್ಯಾಪ್‌ಟಾಪ್‌ ವಿತರಣೆ ಎಂದು ಕೇಂದ್ರ ಸರ್ಕಾರದ್ದೇ ವೆಬ್‌ಸೈಟ್‌ ಎಂಬಂತೆ ವೆಬ್‌ಪೇಜ್‌ ನಿರ್ಮಿಸಿರುವ ಕಿಡಿಗೇಡಿಗಳು

 

 

ಇದರಲ್ಲಿ ಸುಳ್ಳು ಕಮೆಂಟ್‌ಗಳನ್ನು ಸೇರಿಸಲಾಗಿದೆ. ಇದನ್ನೇ ನಂಬಿ ಸಾಕಷ್ಟು ಮಂದಿ ಈ ಪೇಜ್‌ನಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ.
ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸುವ ಪುಟ

 

“ನೀವು ಉಚಿತ ಲ್ಯಾಪ್‌ಟಾಪ್‌ ಪಡೆಯಲು ಅರ್ಹರಾಗಿದ್ದೀರಿ, ಈ ಮಾಹಿತಿಯನ್ನು ಎಲ್ಲರಿಗೂ ಹಂಚಿಕೊಂಡ ಬಳಿಕ ಲ್ಯಾಪ್‌ಟಾಪ್‌ ಪಡೆಯುತ್ತಿರಿ” ಎಂದು ಸುಳ್ಳು ಭರವಸೆಯನ್ನು ನೀಡುವ ಪುಟ

ವಿಶೇಷ ಸೂಚನೆ : ವೈರಲ್‌ ಪೋಸ್ಟ್‌ನಲ್ಲಿನ ಯಾವುದೇ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ, ಇವು ನಿಮ್ಮ ಬ್ಯಾಂಕ್‌ ಖಾತೆ, ಆಧಾರ್‌ ಕಾರ್ಡ್‌ ಸಂಖ್ಯೆ ಸೇರಿದಂತೆ ಇನ್ನೀತರೆ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವ ಸಾಧ್ಯತೆ ಇದೆ. ಈ ಕಾರಣದಿಂದ ವೈರಲ್‌ ವಿಡಿಯೋಗೆ ಸಂಬಂಧಿಸಿದ ಲಿಂಕ್‌ ಅನ್ನು ಈ ಸುದ್ದಿಯಲ್ಲಿ ನೀಡಲಾಗಿಲ್ಲ. 

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ಗೂಗಲ್‌ನಲ್ಲಿ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ  PIB ಫ್ಯಾಕ್ಟ್ ಚೆಕ್ 10ನೇ ಜುಲೈ 2022 ರಂದು ಪೋಸ್ಟ್ ಮಾಡಿದ ಟ್ವೀಟ್ ಕಂಡು ಬಂದಿದೆ. ಇದರಲ್ಲಿ  “ವೆಬ್‌ಸೈಟ್ ಲಿಂಕ್‌ನೊಂದಿಗೆ ಪಠ್ಯ ಸಂದೇಶವೊಂದು ಭಾರತ ಸರ್ಕಾರವು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ ಎಂಬ ಹೇಳಿಕೆಯೊಂದಿಗೆ ಪ್ರಸಾರವಾಗುತ್ತಿದೆ. ಇದು ಸುಳ್ಳು ಸುದ್ದಿಯಾಗಿದೆ” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ 11ನೇ ಜುಲೈ 2022 ರಂದು ಮತ್ತೊಂದು ಟ್ವಿಟ್‌ ಅನ್ನು PIB  ಫ್ಯಾಕ್ಟ್ ಚೆಕ್ ಹಂಚಿಕೊಂಡಿದೆ. ಇದರಲ್ಲಿ ಅದು “ಎಲ್ಲಾ ವಿದ್ಯಾರ್ಥಿಗಳಿಗೆ 500,000 ಉಚಿತ ಲ್ಯಾಪ್‌ಟಾಪ್‌ಗಳನ್ನು EduMinOfIndia ನೀಡುತ್ತಿದೆ ಎಂಬುದು ಸುಳ್ಳು ಸುದ್ದಿಯಾಗಿದೆ” ಎಂದು ಟ್ವಿಟ್‌ ಮಾಡಿದೆ. ಈ ಟ್ವಿಟ್‌ನಲ್ಲಿ ಕೂಡ ಲ್ಯಾಪ್‌ಟಾಪ್‌ ಹಂಚಿಕೆಯ ಸುಳ್ಳು ಸುದ್ದಿಯನ್ನು ಬಹಿರಂಗ ಪಡಿಸಿದೆ.

ಇನ್ನು ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೇಂದ್ರ ಸರ್ಕಾರ ಯಾವುದಾದರೂ ಉಚಿತ ಲ್ಯಾಪ್‌ಟಾಪ್‌ ಅನ್ನು ನೀಡುವ ಬಗ್ಗೆ ಪ್ರಕಟಣೆ ಹೊರಡಿಸಿದೆಯೇ  ಎಂದು ಹಲವು ಸುದ್ದಿ ತಾಣಗಳನ್ನು ಪರಿಶೀಲಿಸಿದೆವು. ಆದರೆ ನಮಗೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಸುದ್ದಿಗಳು ಕಂಡು ಬಂದಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರ ಈ ಯೋಜನೆ ಘೋಷಿಸಿದ್ದು ನಿಜವೇ ಆಗಿದ್ದರೆ ಆ ಕುರಿತು ಬಹುತೇಖ ಸುದ್ದಿ ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು. ಆದರೆ ಆ ರೀತಿಯ ಯಾವುದೇ ವರದಿಗಳು ಕಂಡು ಬಾರಾದ ಕಾರಣ ವೈರಲ್‌ ಸುದ್ದಿ ಸುಳ್ಳು ಎಂಬುದು ಸಾಬೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ಕೇಂದ್ರ ಸರ್ಕಾರ ಉಚಿತ ಲ್ಯಾಪ್‌ಟಾಪ್‌ ಯೋಜನೆಯನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡುತ್ತಿದೆ ಎಂಬುದು ಸುಳ್ಳು, ವೈರಲ್‌ ವೆಬ್‌ಸೈಟ್‌ ನಿಮ್ಮ ಖಾಸಗಿ ಮಾಹಿತಿಯನ್ನು ಕದಿಯುವ ಜಾಲವನ್ನು ಹೊಂದಿದೆ. ಹಾಗಾಗಿ ಈ ವೆಬ್‌ಸೈಟ್‌ಗೆ ಭೇಟಿ ನೀಡಬೇಡಿ ಮತ್ತು ವೈರಲ್‌ ಪೋಸ್ಟ್‌ ಅನ್ನು ಯಾವುದೇ ಕಾರಣಕ್ಕೂ ಶೇರ್‌ ಮಾಡಬೇಡಿ.


ಇದನ್ನೂ ಓದಿ : Fact Check : ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದೆ ಎಂದು ವಿಡಿಯೋ ಗೇಮ್ ದೃಶ್ಯ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *