Fact Check:  ಹೈದರಾಬಾದ್‌ನ ದೇವಸ್ಥಾನವೊಂದರಲ್ಲಿ ಕಿಡಿಗೇಡಿಗಳು ಕರುವಿನ ಮಾಂಸ ಎಸೆದಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ ಹೈದರಾಬಾದಿನ ಮಸಾಬ್ ಟ್ಯಾಂಕ್‌ನಲ್ಲಿರುವ ಶ್ರೀ ದುರ್ಗಾ ದೇವಿ ದೇವಾಲಯದ ಮಂಟಪದಲ್ಲಿ ಕಿಡಿಗೇಡಿಗಳು ಕರುವಿನ ಮಾಂಸ ಎಸೆಯ ಆಘಾತಕಾರಿ ಘಟನೆ ನಡೆದಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

“ಮಸಾಬ್ ಟ್ಯಾಂಕ್‌ನ ಶ್ರೀ ಶ್ರೀ ದುರ್ಗಾ ಭವಾನಿ ದೇವಸ್ಥಾನದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ, ಅನಾಮಧೇಯ ವ್ಯಕ್ತಿಯೊಬ್ಬ ದೇವಾಲಯದೊಳಗೆ ಕರುವಿನ ಮಾಂಸವನ್ನು ಎಸೆದಿದ್ದಾನೆ. ಈ ಅನ್ಯಾಯದ ವಿರುದ್ಧ ಪ್ರತಿಯೊಬ್ಬ ಹಿಂದೂ ಧ್ವನಿ ಎತ್ತಬೇಕು – ನಮಗೆ ನ್ಯಾಯ ಬೇಕು!…” ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿಯೇ ಯಾಕೆ ಹೀಗೆ ಆಗುತ್ತಿದೆ? ಗೋ ಪೂಜೆ ಮಾಡಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ರೇವಂತ್‌ ರೆಡ್ಡಿ ಈಗ ಎಲ್ಲಿದ್ದಾರೆ…?” ಎಂಬ ಸಂದೇಶದೊಂದಿಗೆ ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್:

“ಮಸಾಬ್ ಟ್ಯಾಂಕ್ ಪ್ರದೇಶದ ದೇವಸ್ಥಾನದ ಬಳಿ ಪತ್ತೆಯಾಗಿದ್ದು ಆಡಿನ ಭ್ರೂಣ” ಎಂದು ಹೈದರಾಬಾದ್ ನಗರ ಪೊಲೀಸ್‌ನ ಪಶ್ಚಿಮ ವಲಯದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಎಸ್‌ಎಂ ವಿಜಯ್ ಕುಮಾರ್ ದೃಢಪಡಿಸಿದ್ದಾರೆ. “ದೇವಸ್ಥಾನದ ಒಳಗೆ ಅಲ್ಲ, ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಇದು ಪತ್ತೆಯಾಗಿತ್ತು. ಇದು ಬೀದಿ ನಾಯಿಗಳ ಕೃತ್ಯ ಎಂಬುದು ಸಿಸಿಟಿವಿ ಪರಿಶೀಲನೆಯಲ್ಲಿ ತಿಳಿದು ಬಂದಿದೆ. ದೇವಸ್ಥಾನದಿಂದ ಅನತಿ ದೂರದಲ್ಲಿರುವ ತ್ಯಾಜ್ಯ ತೊಟ್ಟಿಯಿಂದ ಬೀದಿ ನಾಯಿಗಳು ಮೇಕೆಯ ಭ್ರೂಣವನ್ನು ಎಳೆದು ತಂದು ದೇವಸ್ಥಾದ ಎದುರು ರಸ್ತೆಯಲ್ಲಿ ಬಿಟ್ಟು ಓಡಿಹೋಗಿವೆ. ಇದನ್ನು ವ್ಯಕ್ತಿಗಳೇ ಎಸೆದು ಹೋಗಿದ್ದಾರೆ ಎಂಬ ಆರೋಪ ಸುಳ್ಳು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಕೀವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಸರ್ಚ್ ಎಂಜಿನ್ ಬಳಿಸಿ ಪರಿಶೀಲಿಸಿದಾಗ, ತೆಲಂಗಾಣ ಟುಡೇಯಲ್ಲಿ ಪ್ರಕಟವಾದ ಸುದ್ದಿ ವರದಿಯು ಲಭ್ಯವಾಗಿದೆ. “ಮಸಾಬ್ ಟ್ಯಾಂಕ್‌ನ ಪೋಚಮ್ಮ ಬಸ್ತಿಯ ದೇವಸ್ಥಾನದ ಬಳಿ ಒಂದಿಷ್ಟು ಮಾಂಸದ ತುಂಡುಗಳು ಕಂಡುಬಂದ ಬಳಿಕ ಕೆಲ ಕಾಲ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಇದರಲ್ಲಿ ಕೆಲವು ಬೀದಿ ನಾಯಿಗಳು ಮಾಂಸದ ತುಂಡುಗಳನ್ನು ಎಳೆದಾಡಿ ತಂದು ದೇವಸ್ಥಾನದ ಎದುರು ಬಿಟ್ಟಿರುವುದು ಕಂಡು ಬಂದಿತ್ತು. ಪೊಲೀಸರು ದೃಶ್ಯಾವಳಿಗಳನ್ನು ಸಾರ್ವಜನಿಕಗೊಳಿಸಿದ್ದು, ನಾಗರಿಕರು ಇಂತಹ ವದಂತಿಗಳಿಗೆ ಮರುಳಾಗಬಾರದು ಎಂದು ಒತ್ತಾಯಿಸಿದ್ದಾಗಿ” ವರದಿ ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಹೈದರಾಬಾದ್‌ನ ದೇವಸ್ಥಾನವೊಂದರಲ್ಲಿ ಕರುವಿನ ಮಾಂಸ ಪತ್ತೆಯಾಗಿದೆ ಎಂಬುದು ಸುಳ್ಳು ಸುದ್ದಿಯಾಗಿದ್ದು, ಬೀದಿನಾಯಿಗಳು ತ್ಯಾಜ್ಯದಿಂದ ಮೇಕೆಯ ಭ್ರೂಣವನ್ನು ಎಳೆದಾಡಿ ತಂದು ದೇವಸ್ಥಾನದ ಎದುರು ಬಿಟ್ಟು ಓಡಿಹೋಗಿದ್ದವು ಎಂಬುದು ಸಾಬೀತಾಗಿದೆ. ಹೀಗಾಗಿ, ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ ಎಂಬ ವಾದದಲ್ಲಿಯೂ ಯಾವುದೇ ಹುರುಳಿಲ್ಲ.


ಇದನ್ನು ಓದಿದ್ದೀರಾ?  Fact Check : ಕಲ್ಲಂಗಡಿ & ಗಸಗಸೆ ಬೀಜದಿಂದ ಅಧಿಕ ರಕ್ತದೊತ್ತಡ ಗುಣವಾಗುತ್ತದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *