Fact Check : ಕಲ್ಲಂಗಡಿ & ಗಸಗಸೆ ಬೀಜದಿಂದ ಅಧಿಕ ರಕ್ತದೊತ್ತಡ ಗುಣವಾಗುತ್ತದೆ ಎಂಬುದು ಸುಳ್ಳು

ಕಲ್ಲಂಗಡಿ ಬೀಜಗಳು ಮತ್ತು ಗಸಗಸೆಗಳನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ, ಪುಡಿ ಮಾಡಿದ ನಂತರ ಮತ್ತು ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಅಧಿಕ ರಕ್ತದೊತ್ತಡ ಮತ್ತು ನಿದ್ರಾಹೀನತೆ ಸಂಪೂರ್ಣವಾಗಿ ಗುಣವಾಗುತ್ತದೆ ಎಂದು Instagramನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್‌ :

ಕಲ್ಲಂಗಡಿ ಬೀಜಗಳು ಮತ್ತು ಗಸಗಸೆ ಬೀಜಗಳಲ್ಲಿ ಪೌಷ್ಟಿಕಾಂಶಗಳಿದ್ದರೂ , ಅವು ಅಧಿಕ ರಕ್ತದೊತ್ತಡ ಅಥವಾ ನಿದ್ರಾಹೀನತೆಯನ್ನು ಗುಣಪಡಿಸುತ್ತವೆ ಎಂಬುದಕ್ಕೆ ಯಾವುದೇ ದೃಢವಾದ ವೈಜ್ಞಾನಿಕ ಪುರಾವೆಗಳಿಲ್ಲ. ಪ್ರಸ್ತುತ, ಅಧಿಕ ರಕ್ತದೊತ್ತಡಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದ್ದರಿಂದ, ಈ ಬೀಜಗಳನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಅಥವಾ ನಿದ್ರಾಹೀನತೆಯನ್ನು ಗುಣವಾಗುತ್ತದೆ ಎಂಬುದು ಸುಳ್ಳು.

2016 ಮತ್ತು 2022ರಲ್ಲಿ ಪ್ರಕಟವಾದ ವಿಶ್ಲೇಷಣೆಗಳಲ್ಲಿ ಕಲ್ಲಂಗಡಿಯ ಸಾರವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿವೆ. ಆದರೆ, ಈ ಸಂಶೋಧನೆಗಳು ನಿರ್ದಿಷ್ಟವಾಗಿ ಕಲ್ಲಂಗಡಿ ಸಾರಗಳಿಗೆ ಅನ್ವಯಿಸಿದ್ದು, ಸಂಪೂರ್ಣ ಕಲ್ಲಂಗಡಿ ಅಥವಾ ಅದರ ಬೀಜಗಳಿಗೆ ಸಂಬಂಧಿಸಿದ್ದಲ್ಲ. ಅಧಿಕ ರಕ್ತದೊತ್ತಡ ಹೊಂದಿರುವ ಮಧ್ಯವಯಸ್ಕರು, ವಯಸ್ಕರು ಮತ್ತು ಋತುಮತಿಯರಾದ ಮಹಿಳೆಯರಲ್ಲಿ ರಕ್ತದೊತ್ತಡದ ಮಟ್ಟವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಲು ಕಲ್ಲಂಗಡಿಯ ಸಾರವು ಸಹಾಯಕವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕಲ್ಲಂಗಡಿಯ ಸಾರವು ಅಧಿಕ ರಕ್ತದೊತ್ತಡ ಹೊಂದಿರುವ ಕೆಲವು ವ್ಯಕ್ತಿಗಳಿಗೆ ಸಹಾಯಕವಾಬಹುದಾದರೂ, ಇದು ಚಿಕಿತ್ಸೆಯ ವಿಧಾನವಾಗಿ ಪರಿಗಣಿಸಲ್ಪಡುವುದಿಲ್ಲ ಮತ್ತು ಎಲ್ಲರ ಮೇಲೆಯೂ ಇದು ಪರಿಣಾಮಕಾರಿಯಾಗದೇ ಹೋಗಬಹುದು.

ಗಸಗಸೆ ಲ್ಯಾಟೆಕ್ಸ್‌ನಲ್ಲಿ(ಗಿಡದ ಒಂದು ಭಾಗ) ನಿದ್ರೆ ಬರಿಸುವ ಸಂಯುಕ್ತಗಳನ್ನು ಹೊಂದಿದೆ ಆದರೆ, ಗಸಗಸೆ ಬೀಜಗಳು ಈ ಸಂಯುಕ್ತಗಳನ್ನು ಹೊಂದಿರುವುದಿಲ್ಲ. ಅಂಗಡಿಗಳಲ್ಲಿ ಲಭಿಸುವ ಗಸಗಸೆ ಬೀಜಗಳನ್ನು ಸ್ವಚ್ಛಗೊಳಿಸಲಾಗುತ್ತದೆ ಮತ್ತು ಸಂಸ್ಕರಿಸಲಾಗುತ್ತದೆ ಹಾಗಾಗಿ ಇದನ್ನು ನಿದ್ರಾಹೀನತೆಗೆ ಚಿಕಿತ್ಸೆಯಾಗಿ ಬಳಸಲಾಗುವುದಿಲ್ಲ. ತೊಳೆಯದ ಬೀಜಗಳು ಅಪಾಯಕಾರಿಯಾಗಬಹುದು, ಏಕೆಂದರೆ ಅವುಗಳು ಮಾರ್ಫಿನ್‌ನ ಹಾನಿಕಾರಕ ಮಟ್ಟವನ್ನು ಹೊಂದಿರಬಹುದು, ಅಲ್ಲದೇ ಇದು ಚಟಕ್ಕೆ ಕಾರಣವಾಗುತ್ತದೆ. ಆದ್ದರಿಂದ, ನಿದ್ರಾಹೀನತೆಯನ್ನು ಗುಣಪಡಿಸಲು ಗಸಗಸೆ ಬೀಜಗಳು ಸುರಕ್ಷಿತ ಆಯ್ಕೆಯಲ್ಲ.

ಶ್ರುತಿ. ಕೆ ಭಾರದ್ವಾಜ್

“ಯಾವುದೇ ಒಂದು ಆಹಾರವು ಇಂತಹ ಸಂಕೀರ್ಣ ಪರಿಸ್ಥಿತಿಗಳಿಗೆ ಪರಿಹಾರವಾಗುವುದಿಲ್ಲ; ಬದಲಾಗಿ ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಅತ್ಯಗತ್ಯವಾಗುತ್ತದೆ. ಸ್ಥೂಲಕಾಯ, ಖಿನ್ನತೆ, ನಿದ್ರಾಹೀನತೆ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಗಳನ್ನು ನೋಡುವಾಗ, ಕೇವಲ ಕಲ್ಲಂಗಡಿ ಮತ್ತು ಗಸಗಸೆ ಬೀಜಗಳನ್ನು ಸೇವಿಸಿ ಗುಣಪಡಿಸಬಹುದು ಎಂದು ನಂಬುವುದು ತಪ್ಪು” ಎಂದು ಅಹ್ಮದಾಬಾದ್‌ನ ಝೈಡಸ್ ಆಸ್ಪತ್ರೆಯ ಮುಖ್ಯ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಶ್ರುತಿ. ಕೆ ಭಾರದ್ವಾಜ್ ಹೇಳುತ್ತಾರೆ.

“ನಿದ್ರಾಹೀನತೆಯು ನಿಜವಾದ ವೈದ್ಯಕೀಯ ಸ್ಥಿತಿಯಾಗಿದ್ದು, ವ್ಯಕ್ತಿಗಳು ನಿದ್ರಿಸಲು ಕಷ್ಟಪಡುತ್ತಾರೆ. ಇದು ಕೇವಲ ಸಾಂದರ್ಭಿಕ ನಿದ್ರಾಹೀನತೆ ಅಲ್ಲ ಇದು ಹೀಗೆ ಮುಂದುವರಿದರೆ ಆತಂಕ, ಖಿನ್ನತೆ ಮತ್ತು ಹೃದಯ ಸಂಬಂಧಿತ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಬೆಳವಣಿಗೆಯನ್ನು ತಡೆಗಟ್ಟಲು ನಿದ್ರಾಹೀನತೆಯನ್ನು ಮೊದಲೇ ಗುರುತಿಸುವುದು ಮತ್ತು ಚಿಕಿತ್ಸೆ ನೀಡುವುದು ಬಹಳ ಮುಖ್ಯ” ಎಂದು ನವ ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆ ಮತ್ತು ಮ್ಯಾಕ್ಸ್ ಆಸ್ಪತ್ರೆಯ ಹಿರಿಯ ಸಮಾಲೋಚಕ ಮನಶ್ಶಾಸ್ತ್ರಜ್ಞೆ ಡಾ. ರೋಮಾ ಕುಮಾರ್ ಹೇಳಿದ್ದಾರೆ.

ಡಾ. ರೋಮಾ ಕುಮಾರ್
ಡಾ ಉಬೈದುರ್ ರೆಹಮಾನ್‌

ಈ ಗಂಭೀರ ಆರೋಗ್ಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಆಹಾರವನ್ನು ಮಾತ್ರ ಅವಲಂಬಿಸುವುದು ಒಳ್ಳೆಯದಲ್ಲ. ಆರೋಗ್ಯಕರ ಆಹಾರವು ಉತ್ತಮ ಆರೋಗ್ಯಕ್ಕೆ ಪೂರಕ. ಆದರೆ, ಈ ಪರಿಸ್ಥಿತಿಗಳನ್ನು ನಿರ್ವಹಿಸಲು ಸಾಮಾನ್ಯವಾಗಿ ಜೀವನಶೈಲಿಯ ಬದಲಾವಣೆ, ಔಷಧಿಗಳು ಮತ್ತು ಆರೋಗ್ಯ ವೃತ್ತಿಪರರಿಂದ ಮಾರ್ಗದರ್ಶನದ ಅಗತ್ಯವಿರುತ್ತದೆ. ಕೆಲವು ಜನರು ನಿದ್ರಾಹೀನತೆಯನ್ನು ಗುಣಪಡಿಸಲು ಬಾಳೆಹಣ್ಣಿನ ಸಿಪ್ಪೆಯ ಚಹಾವನ್ನು ಕುಡಿಯಲು ಸಲಹೆ ನೀಡುತ್ತಾರೆ, ಆದರೆ ಇದೂ ಕೂಡ ಕಲ್ಲಂಗಡಿ ಮತ್ತು ಗಸಗಸೆ ಬೀಜಗಳ ಹಾಗೆ ಪರಿಣಾಮಕಾರಿಯಾದ ವಿಧಾನವಲ್ಲ. ಅಧಿಕ ರಕ್ತದೊತ್ತಡ ಮತ್ತು ನಿದ್ರಾಹೀನತೆಗೆ ಪ್ರತ್ಯೇಕ ಆಹಾರ ಸೇವಿಸುವುದರ ಬಗ್ಗೆ ನವದೆಹಲಿಯ ಹೋಲಿ ಮಿಷನ್ ಕ್ಲಿನಿಕ್‌ನ ಜನರಲ್ ಫಿಸಿಶಿಯನ್ ಡಾ. ಉಬೈದುರ್ ರೆಹಮಾನ್‌ರವರು ಮಾಹಿತಿ ನೀಡಿದ್ದು, “ಕಲ್ಲಂಗಡಿ ಮತ್ತು ಗಸಗಸೆಯಂತಹ ಬೀಜಗಳು ಆಹಾರಕ್ಕೆ ಉತ್ತಮ ಸೇರ್ಪಡೆಯಾಗಿದೆ, ಆದರೆ ಇವು ಪವಾಡಕಾರಿ ಪರಿಹಾರಗಳಲ್ಲ. ಅಧಿಕ ರಕ್ತದೊತ್ತಡದ ಪರಿಣಾಮಕಾರಿ ಚಿಕಿತ್ಸೆಯು ಔಷಧಿ, ವ್ಯಾಯಾಮ ಮತ್ತು ಆಹಾರಕ್ರಮವನ್ನು ಸೇರಿದಂತೆ ವಿಸ್ತೃತವಾದ ವಿಧಾನವನ್ನು ಒಳಗೊಂಡಿದೆ” ಎಂದು ಹೇಳಿದ್ದಾರೆ.

 

ನೀವು ನಿದ್ರಾಹೀನತೆ ಅಥವಾ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ಕೇವಲ ಮನೆಮದ್ದುಗಳನ್ನು ಅವಲಂಬಿಸಬೇಡಿ. ಆರೋಗ್ಯ ವೃತ್ತಿಪರರೊಂದಿಗೆ ಮಾತನಾಡಿ. ಮೂಲ ಕಾರಣವನ್ನು ಕಂಡುಹಿಡಿಯಲು ಮತ್ತು ಉತ್ತಮ ಚಿಕಿತ್ಸೆಯನ್ನು ಸೂಚಿಸಲು ಅವರು ನಿಮಗೆ ಸಹಾಯ ಮಾಡುತ್ತಾರೆ. ನಿಯಮಿತ ವ್ಯಾಯಾಮದಂತಹ ಸರಳ ಜೀವನಶೈಲಿಯ ಬದಲಾವಣೆಗಳು, ಒತ್ತಡ ಮತ್ತು ನಿದ್ರಾಹೀನತೆ ಮತ್ತು ಅಧಿಕ ರಕ್ತದೊತ್ತಡದ ಆಹಾರದ ನಿರ್ವಹಣೆಯ ಜೊತೆಗೆ ದೊಡ್ಡ ವ್ಯತ್ಯಾಸವನ್ನು ಮಾಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಕಲ್ಲಂಗಡಿ ಬೀಜಗಳು ಮತ್ತು ಗಸಗಸೆ ಬೀಜಗಳು ಅಧಿಕ ರಕ್ತದೊತ್ತಡ ಮತ್ತು ನಿದ್ರಾಹೀನತೆಯನ್ನು ಗುಣಪಡಿಸಬಹುದು ಎಂಬ ಕಲ್ಪನೆಯು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಈ ಪರಿಸ್ಥಿತಿಗಳಿಗೆ ಕೇವಲ ಆಹಾರದ ಹೊಂದಾಣಿಕೆಗಳಿಗಿಂತ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುತ್ತದೆ. ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಸರಿಯಾದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವುದು ಅತ್ಯಗತ್ಯ. ತ್ವರಿತ ಪರಿಹಾರಗಳನ್ನು ಅವಲಂಬಿಸುವುದಕ್ಕಿಂತ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗೃತಿ ಅತ್ಯಗತ್ಯ.


ಇದನ್ನು ಓದಿದ್ದೀರಾ? : Fact Check : ದುರ್ಗಾ ಮಾತಾ ಆರತಿಯ ವೇಳೆ ಇಸ್ಲಾಮೀ ಘೋಷಣೆ ಕೂಗಲಾಗಿದೆ ಎಂದು ಟಿಎಂಸಿ ರ್ಯಾಲಿಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

 

 

Leave a Reply

Your email address will not be published. Required fields are marked *