Fact Check: ಕೆನರಾ ಬ್ಯಾಂಕ್ ಮುಂದೆ ಸೇರಿ ಕೆನಡಾ ವಿರುದ್ಧ ಬಿಜೆಪಿ ಪ್ರತಿಭಟಿಸಿದೆ ಎಂದು ಎಡಿಟೆಡ್‌ ಪೋಟೊ ಹಂಚಿಕೆ

ಉತ್ತರ ಅಮೆರಿಕಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಭೀಕರ ರಾಜತಾಂತ್ರಿಕ ಕಲಹ ಉಂಟಾಗಿದೆ. ಈ ನಡುವೆ ಕೆನರಾ ಬ್ಯಾಂಕ್ ಶಾಖೆಯ ಹೊರಗೆ ಕೆನಡಾ ವಿರುದ್ದ ಬಿಜೆಪಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ ಎಂಬ ಟ್ರೋಲ್ ಪೋಸ್ಟರ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್‌ನ ಕೆಲವು ಬಳಕೆದಾರರು “ಕೆನರಾ ಬ್ಯಾಂಕ್ ಮುಂದೆ ಸೇರಿ ಕೆನಡಾ ವಿರುದ್ಧವೇ ಪ್ರತಿಭಟನೆ ನಡೆಸಿದ್ದಾರೆ” ಎಂದು ಬಿಜೆಪಿ ಕಾರ್ಯಕರ್ತರನ್ನು ಅಪಹಾಸ್ಯ ಮಾಡಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ ಚೆಕ್:

ಈ ವೈರಲ್ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಆರೋಪಿತ ಕೆನರಾ ಬ್ಯಾಂಕ್ ಬೋರ್ಡ್ ಮೇಲೆ ಬೇರೆ ಬೇರೆ ಬಣ್ಣಗಳು ಕಂಡುಬಂದಿದ್ದು, Xiaomi  ಹೋರ್ಡಿಂಗ್‌ ಸಹ ಹಾಕಲಾಗಿದೆ. ಹೋರ್ಡಿಂಗ್‌ನ ಕೆಳಭಾಗದಲ್ಲಿ “ಹೆಡ್ ಆಫೀಸ್” ಎಂದು ಬರೆಯಲಾಗಿದೆ.  ಕೆನರಾ ಬ್ಯಾಂಕ್ ಹೆಡ್ ಆಫೀಸ್ ಕಟ್ಟಡ/ಸ್ಥಳದ ಗೂಗಲ್ ಪೋಟೊವನ್ನು ವೈರಲ್ ಪೋಟೊದೊಂದಿಗೆ ಹೋಲಿಸಿದಾಗ ಎರಡೂ ಸ್ಥಳಗಳ ನಡುವೆ ಯಾವುದೇ ಹೋಲಿಕೆ ಕಂಡುಬಂದಿಲ್ಲ.

ನಂತರ  ಗೂಗಲ್ ಲೆನ್ಸ್‌ ಬಳಸಿಕೊಂಡು ವೈರಲ್ ಚಿತ್ರವನ್ನು ಹುಡುಕಿದಾಗ, 2020ರ ಆಗಸ್ಟ್ 30ರಂದು ಪ್ರಕಟವಾದ ಮಲೈಮಲರ್ ಎಂಬ ವರದಿ ಕಂಡುಬಂದಿದೆ. ಕೆನರಾ ಬ್ಯಾಂಕ್‌ನ ಹೋರ್ಡಿಂಗ್ ಇಲ್ಲದ ಮೂಲ ಪೋಟೊ ಅದರಲ್ಲಿದ್ದು ಊಟಿಯಲ್ಲಿ ಬಿಜೆಪಿ ಕಾರ್ಯಕರ್ತರು ಪೂರ್ವಾನುಮತಿ ಇಲ್ಲದೆ ಪುರಸಭೆಯ ಒಡೆತನದ ಜಮೀನಿನಲ್ಲಿ ತಮ್ಮ ಪಕ್ಷದ ಧ್ವಜವನ್ನು ಹಾರಿಸಲು ಧ್ವಜಸ್ತಂಭವನ್ನು ನಿರ್ಮಿಸಿದ್ದರು ಎಂದು ಆರೋಪಿಸಲಾಗಿದೆ. ದೂರಿನ ಮೇರೆಗೆ ಧ್ವಜವನ್ನು ತೆಗೆದುಹಾಕಲಾಗಿತ್ತು, ನಂತರ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ವೈರಲ್ ಪೋಟೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಎಡ ಮೂಲೆಯಲ್ಲಿ ತಾತ್ಕಾಲಿಕ ಧ್ವಜಸ್ತಂಭದ ಬಳಿ ಇಟ್ಟಿಗೆಗಳ ರಾಶಿ ಕಂಡುಬಂದಿದೆ.

ವೈರಲ್ ಪೋಟೊ ಮತ್ತು 2020 ರ ಮಲೈಮಲರ್ ವರದಿಯಲ್ಲಿ ಪ್ರಕಟವಾದ ಪೋಟೊವನ್ನು ಹೋಲಿಕೆ ಮಾಡಿದಾಗ, ವೈರಲ್ ಪೋಟೊವನ್ನು ಎಡಿಟ್ ಮಾಡಲಾಗಿದೆ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ. ಮೂಲ ಪೋಟೊದಲ್ಲಿ ಪ್ರತಿಭಟನೆಯ ಸ್ಥಳದಲ್ಲಿ ಅಂತಹ ಯಾವುದೇ ಬ್ಯಾಂಕ್ ಹೋರ್ಡಿಂಗ್ ಕಂಡುಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಕೆನರಾ ಬ್ಯಾಂಕ್‌ನ ಶಾಖೆಯ ಹೊರಗೆ ಕೆನಡಾ ವಿರುದ್ಧ ಬಿಜೆಪಿ ಬೆಂಬಲಿಗರು ಪ್ರತಿಭಟಿಸಿದ್ದಾರೆ ಎಂದು ಸುಳ್ಳು ಹೇಳಿಕೆಯೊಂದಿಗೆ 2020ರ ಪೋಟೊವನ್ನುಎಡಿಟ್‌ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ಚಿತ್ರಗಳನ್ನು ಹಂಚಿಕೊಳ್ಳುವ ಮೊದಲು ಚಿತ್ರದ ಸತ್ಯಾಂಶವನ್ನು ತಿಳಿದುಕೊಳ್ಳಿ.


ಇದನ್ನು ಓದಿ :

Fact Check : ಗಾಜಾ ಪತ್ರಕರ್ತನ ಮೃತ ದೇಹ ಎಂದು ಎಡಿಟೆಡ್‌ ಪೋಟೊ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *