Fact Check : ಆಹಾರದಲ್ಲಿ ಮೂತ್ರ ಬೆರೆಸಿದ ಮನೆಕೆಲಸದಾಕೆ ಮುಸ್ಲಿಂ ಸಮುದಾಯಕ್ಕೆ ಸೇರಿದವಳು ಎಂಬುದು ಸುಳ್ಳು

“ಉಗುಳಿನ ಬಳಿಕ ಈಗ ಮೂತ್ರ ಜಿಹಾದ್‌ ಶುರುವಾಗಿದೆ. ಗಾಜಿಯಾಬಾದ್‌ನಲ್ಲಿ ಮನೆಕೆಲಸದಾಕೆಯೊಬ್ಬಳು ಪಾತ್ರೆಯೊಂದರಲ್ಲಿ ಮೂತ್ರ ಮಾಡಿ ಅದರಲ್ಲಿಯೇ ರೊಟ್ಟಿ ತಯಾರಿಸಿರುವ ಆಘಾತಕಾರಿ ಘಟನೆ ಮನೆಯಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ” ಎಂದು ಮುಸ್ಲಿಮರನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್:‌

ಈ ವಿಕೃತ ಕೃತ್ಯ ಎಸಗಿದ  ಮಹಿಳೆಯ ಹೆಸರು ರೀನಾ ದೇವಿ ಎಂದಾಗಿದ್ದು, ಈಕೆ ಮುಸ್ಲಿಮ್‌ ಸಮುದಾಯಕ್ಕೆ ಸೇರಿವಳಲ್ಲ ಬದಲಾಗಿ ಹಿಂದು ಸಮುದಾಯದವಳು ಎಂಬುದು ದಾಖಲಾದ ಎಫ್‌ಐಆರ್ ಪ್ರಕಾರ ಬಯಲಾಗಿದೆ.  ಆದ್ದರಿಂದ ಹಂಚಿಕೊಳ್ಳುತ್ತಿರುವ ಸಂದೇಶವು ಇಸ್ಲಾಮೋಫೋಬಿಯಾದಿಂದ ಕೂಡಿದೆ ಎಂದು ದಿ ಇಂಟೆಂಟ್‌ ಡಾಟಾ ಸತ್ಯ ಶೋಧನಾ ಸಂಸ್ಥೆಯು ವರದಿ ಮಾಡಿದೆ.

ದಾಖಲಾದ ಎಫ್‌ಐಆರ್‌ನ ಪ್ರಕಾರ,  “ಜಿಎಚ್ -7 ಸೊಸೈಟಿ ಆಫ್ ಕ್ರಾಸಿಂಗ್ ಎಫ್‌ಐಇಡಿ ರಿಪಬ್ಲಿಕ್‌ನ ಟವರ್ -1ನಲ್ಲಿ ಉದ್ಯಮಿ ನಿತಿನ್‌ರವರ ಕುಟುಂಬ ವಾಸವಿದೆ. ನಿತಿನ್‌ರವರ ಪತ್ನಿ ರೂಪಮ್ ಘಟನೆಯ ಬಗ್ಗೆ ನೀಡಿದ ಹೇಳಿಕೆಯ ಪ್ರಕಾರ, ಗಾಜಿಯಾಬಾದ್‌ನ ಶಾಂತಿ ನಗರದಲ್ಲಿ ವಾಸವಿರುವ ಪ್ರಮೋದ್ ಕುಮಾರ್ ಎಂಬುವವರ ಪತ್ನಿ ರೀನಾ ಕಳೆದ  8 ವರ್ಷಗಳಿಂದ ಉದ್ಯಮಿಯ ಮನೆಯಲ್ಲಿ ಅಡುಗೆ ಸೇರಿದಂತೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಅಕ್ಟೋಬರ್ 14ರಂದು ರೂಪಮ್‌ರವರು ಮೊಬೈಲ್ ಕ್ಯಾಮೆರಾದ ರೆಕಾರ್ಡಿಂಗ್ ಅನ್ನು ಪರಿಶೀಲಿಸಿದಾಗ, ಮನೆ ಕೆಲಸದಾಕೆಯು ಪಾತ್ರೆಯೊಂದರಲ್ಲಿ ಮೂತ್ರ ವಿಸರ್ಜನೆ ಮಾಡಿ ಅದರಲ್ಲಿಯೇ ರೊಟ್ಟಿಗಳನ್ನು ತಯಾರಿಸಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಇಡೀ ಕುಟುಂಬವು ಆಘಾತಕ್ಕೊಳಗಾಗಿತ್ತು.

“ಕೆಲವು ತಿಂಗಳುಗಳಿಂದ ಅವರ ಕುಟುಂಬದ ಸದಸ್ಯರು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು. ಆರಂಭದಲ್ಲಿ ಸೋಂಕು ತಗುಲಿದೆ ಎಂದು ಭಾವಿಸಿ ವೈದ್ಯರನ್ನು ಸಂಪರ್ಕಿಸಿದ್ದರು. ಆದರೆ, ಶಾಶ್ವತ ಪರಿಹಾರ ದೊರೆತಿರಲಿಲ್ಲ. ಒಬ್ಬರ ನಂತರ ಮತ್ತೊಬ್ಬರಂತೆ ಇಡೀ ಕುಟುಂಬವೇ ಯಕೃತ್ತಿನ ಕಾಯಿಲೆಗೆ ತುತ್ತಾದಾಗ, ಕುಟುಂಬವು ಏನೋ ಅಚಾತುರ್ಯ ನಡೆಯುತ್ತಿದೆ ಎಂದು ಅನುಮಾನಿಸಿದ್ದು, ಅಡುಗೆ ಕೋಣೆಗೆ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿತ್ತು. ಬಳಿಕ, ಆರೋಪಿ ರೀನಾ ಪಾತ್ರೆಯಲ್ಲಿ ಮೂತ್ರ ಮಾಡಿ, ಅದರಲ್ಲಿ ಗೋಧಿ ಹಿಟ್ಟು ಕಲಸಿ ಚಪಾತಿ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು”  ಎಂದು ಕನ್ನಡ ಮಾಧ್ಯಮ ಸಂಸ್ಥೆ ಈದಿನ.ಕಾಮ್‌ ವರದಿ ಮಾಡಿದೆ.

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಾಸಿಂಗ್ ರಿಪಬ್ಲಿಕ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಸಂಬಂಧಪಟ್ಟ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದ್ದು, ಕಾನೂನು ಪ್ರಕ್ರಿಯೆ ಜಾರಿಯಲ್ಲಿದೆ.  ಆದರೆ, ಆಕೆ ಯಾವ ಕಾರಣಕ್ಕೆ ಇಂತಹ ಕೃತ್ಯ ಎಸಗುತ್ತಿದ್ದಳು ಮತ್ತು ಎಷ್ಟು ದಿನಗಳಿಂದ ಈ ಕೃತ್ಯ ಎಸಗಿದ್ದಾಳೆ ಎಂಬ ಬಗ್ಗೆ ಆಕೆ ಇನ್ನೂ ಬಾಯಿಬಿಟ್ಟಿಲ್ಲ ಎಂದು @DCPRuralGZB ಗಾಝಿಯಾಬಾದ್‌ ಡಿಸಿಪಿ ರೂರಲ್‌ ಕಮಿಷನರೇಟ್‌ ಅಧಿಕೃತ ಟ್ಟಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಪಾತ್ರೆಯಲ್ಲಿ ಮೂತ್ರ ವಿಸರ್ಜನೆ ಮಾಡಿ ರೊಟ್ಟಿ ತಯಾರಿಸುತ್ತಿದ್ದ ಮನೆಕೆಲಸದಾಕೆ, ಪೊಲೀಸರು ಸಾಂಕ್ರಾಮಿಕ ರೋಗಗಳನ್ನು ಹರಡುವ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಭಾರತ್‌ ಸಮಾಚಾರ ಮಾಧ್ಯಮ ಸಂಸ್ಥೆಯು ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ,  ಮಾಧ್ಯಮಗಳು ಈ ಘಟನೆಗೆ ಕೋಮು ಬಣ್ಣ ಬಳಿಯಲು ಯತ್ನಿಸಿದ್ದು, ಆರೋಪಿ ಮಹಿಳೆ ತಲೆಗೆ ಸುತ್ತಿಕೊಂಡಿರುವ ಬಟ್ಟೆಯು ಹಿಜಾಬ್‌ ಧರಿಸಿದಂತೆ ಕಾಣುತ್ತಿರುವುದರಿಂದ ಆಕೆಯನ್ನು ಮುಸ್ಲಿಂ ಎಂದು ಬಿಂಬಿಸಿ ಕೋಮು ದ್ವೇಷ ಪ್ರಚೋದಿಸಲು ಯತ್ನಿಸಿವೆ. ಆದರೆ, ಆಕೆ ಮುಸ್ಲಿಂ ಅಲ್ಲ ಹಿಂದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಇದನ್ನು ಓದಿದ್ದೀರಾ? : Fact Check: ಸಲ್ಮಾನ್ ಖಾನ್ ಅವರು ಲಾರೆನ್ಸ್ ಬಿಷ್ಣೋಯ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ಕೋವಿಡ್ -19 ಕುರಿತು ಜನರನ್ನು ಎಚ್ಚರಿಸುವ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *