Fact Check : ಫಡ್ನವೀಸ್‌ ಗನ್‌ ಹಿಡಿದಿರುವ ಹಳೆಯ ಪೋಸ್ಟರನ್ನು ಬಾಬಾ ಸಿದ್ದಿಕ್ ಹತ್ಯೆಯ ಬಳಿಕ ಹಂಚಿಕೊಳ್ಳಲಾಗುತ್ತಿದೆ

ಗುಜರಾತ್‌ನ ಸಬರಮತಿ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಆದೇಶದ ಮೇರೆಗೆ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಹಿರಿಯ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರನ್ನು ಕಳೆದ ವಾರ ಮುಂಬೈನಲ್ಲಿರುವ ಅವರ ಮಗನ ಕಚೇರಿಯ ಹೊರಗೆ ಗುಂಡಿಕ್ಕಿ ಕೊಂದಿದ್ದಾರೆ. ಆ ಬಳಿಕ “ಸೇಡು ಪೂರ್ಣಗೊಂಡಿದೆ” ಎಂಬ ಹಿಂದಿ ಘೋಷಣೆಯೊಂದಿಗೆ ಫಡ್ನವೀಸ್ ಬಂದೂಕು ಹಿಡಿದು ನಿಂತಿರುವ  ಪೋಸ್ಟರ್‌ಗಳನ್ನು ನಗರದಾದ್ಯಂತ ಅಂಟಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. 

“ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವರು, ರಾಜಕಾರಣಿ ಮತ್ತು ಕೈಗಾರಿಕೋದ್ಯಮಿಯನ್ನು ಹತ್ಯೆ ಮಾಡಿದ್ದಾರೆ.  ನಂತರ, ಮುಂಬೈಯಾದ್ಯಂತ ಮಹಾರಾಷ್ಟ್ರದ ಗೃಹ ಸಚಿವ ಮತ್ತು ಉಪ ಮುಖ್ಯಮಂತ್ರಿಯಾದ ಫಡ್ನವೀಸ್‌ರವರ  ಪೋಟೊದೊಂದಿಗೆ “ಸೇಡು ಪೂರ್ಣಗೊಂಡಿದೆ” ಎಂಬ  ಪೋಸ್ಟರ್‌ಗಳನ್ನು ಹಾಕಲಾಗಿದೆ. ಫಡ್ನವೀಸ್ ಈ ಕೊಲೆ ಮಾಡಿದ್ದಾನೆ ಎಂದರ್ಥವೇ? ಗೃಹ ಸಚಿವರು ಮತ್ತು ಉಪಮುಖ್ಯಮಂತ್ರಿಗಳ ಇಂತಹ ಪೋಸ್ಟರ್‌ಗಳನ್ನು ಅವರ ಅನುಮತಿಯಿಲ್ಲದೆ ನಗರದಾದ್ಯಂತ ಹಾಕಬಹುದೇ? ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಈ ದೇಶವನ್ನು ಈಗ ದೇವರೇ ರಕ್ಷಿಸಲಿ” ಎಂದು ಹಂಚಿಕೊಳ್ಳಲಾಗುತ್ತಿದೆ.  ಈ ಕುರಿತು ಸತ್ಯಾಂಶವನ್ನು ತಿಳಿದುಕೊಳ್ಳೋಣ.

ಫ್ಯಾಕ್ಟ್‌ ಚೆಕ್‌ :

ಈ ವೈರಲ್‌ ಪೋಸ್ಟರ್‌ ಕುರಿತು ನಿಜ ತಿಳಿದುಕೊಳ್ಳಲು, ಪೋಸ್ಟ್‌ನಲ್ಲಿರುವ ಚಿತ್ರವನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2024ರ ಸೆಪ್ಟೆಂಬರ್ 23ರಂದು ಪ್ರಕಟವಾದ ಹಿಂದೂಸ್ತಾನ್ ಟೈಮ್ಸ್ ವರದಿ ಲಭಿಸಿದೆ. ಈ ವರದಿ ವೈರಲ್‌ ಪೋಟೊವನ್ನು ಹೊಂದಿದೆ. 

“ಬದ್ಲಾಪುರ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತ ಆರೋಪಿಯಾದ ಅಕ್ಷಯ್ ಶಿಂಧೆಯವರನ್ನು ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆಗೈದ ನಂತರ ಶಿವಸೇನೆಯ ನಾಯಕರು ಮತ್ತು ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ  ನಂತರ… ಭಾರತೀಯ ಜನತಾ ಪಕ್ಷವು ತನ್ನ ಮಿತ್ರ ಪಕ್ಷವನ್ನು ಒಗ್ಗೂಡಿಸಲು ಪ್ರಯತ್ನಿಸಿದೆ. ಬುಧವಾರ ಖೇರ್ವಾಡಿ, ಅಂಧೇರಿ, ಲಾಲ್‌ಬಾಗ್ ಮತ್ತು ಸಿಯಾನ್ ಸೇರಿದಂತೆ ಮುಂಬೈನ ವಿವಿಧ ಭಾಗಗಳಲ್ಲಿ “ಬದಲಾ ಪುರಾ” (ಸೇಡು ತೀರಿಸಿಕೊಳ್ಳಲಾಗಿದೆ) ಎಂಬ ಶೀರ್ಷಿಕೆಯೊಂದಿಗೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಂದೂಕು ಹಿಡಿದಿರುವ ಪೋಸ್ಟರ್‌ಗಳನ್ನು ಹಾಕಲಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಮಹಾರಾಷ್ಟ್ರದ ಬದ್ಲಾಪುರದ ಶಾಲೆಯೊಂದರಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದ ಅಕ್ಷಯ್ ಶಿಂಧೆ ಎಂಬಾತನನ್ನು ಸಪ್ಟೆಂಬರ್‌ 23ರಂದು ಠಾಣೆಯ ಪೊಲೀಸರು, ಪೊಲೀಸ್ ಅಧಿಕಾರಿಯ ಗನ್ ಕಸಿದುಕೊಂಡು ಗುಂಡು ಹಾರಿಸಿ  ಹತ್ಯೆ ಮಾಡಿದ್ದಾರೆ. ಆದ್ದರಿಂದ ಇದು ಸಿದ್ದಿಕ್ ಹತ್ಯೆಗಿಂತ ಹಿಂದಿನದು ಎಂದು ಖಚಿತವಾಗಿ ತಿಳಿದುಬಂದಿದೆ.   

ಒಟ್ಟಾರೆಯಾಗಿ ಹೇಳುವುದಾದರೆ, ಮಹಾರಾಷ್ಟ್ರದ ಬದ್ಲಾಪುರ್ ಶಾಲೆಯ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳ ಎನ್‌ಕೌಂಟರ್ ಹತ್ಯೆಯ ನಂತರ ದೇವೇಂದ್ರ ಫಡ್ನವೀಸ್ ಬಂದೂಕು ಹಿಡಿದಿರುವ ಹಳೆಯ ಪೋಸ್ಟರ್‌ಗಳನ್ನು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆಯ ಬಳಿಕ ತಪ್ಪಾದ ಸಂದೇಶದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಿ.

 


ಇದನ್ನು ಓದಿ :

Fact Check : ರತನ್ ಟಾಟಾ ಅವರ ನಾಯಿ ʼಗೋವಾʼ ಜೀವಂತವಾಗಿಲ್ಲ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *