Fact Check | ರಾಸಾಯನಿಕಗಳಿಂದ ಕೃತಕ ಹಾಲು ಉತ್ಪಾದನೆ ಎಂಬ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ

“ಸಾಮಾಜಿಕ ಜಾಲತಾಣದಲ್ಲಿ ರಾಸಾಯನಿಕವೊಂದನ್ನು ಬಳಸಿ ಹಾಲನ್ನು ತಯಾರಿಸಲಾಗುತ್ತಿದೆ. ಇದನ್ನು ಹೇಗಾದರು ಮಾಡಿ ನಿಲ್ಲಿಸಬೇಕಾಗಿದೆ. ರೈಲ್ವೇ ನಿಲ್ದಾಣ ಹಾಗೂ ಬಸ್‌ ನಿಲ್ದಾಣಗಳಲ್ಲಿ ಕಾಫಿ, ಟೀ ಸೇವಿಸುವವರು ಬಹಳಷ್ಟು ಎಚ್ಚರವನ್ನು ವಹಿಸಬೇಕು, ಇದು ಎಲ್ಲರಿಗೂ ಹೇಳುತ್ತಿರುವುದಲ್ಲ. ಆದರೆ ಇಂತಹದೊಂದು ಜಾಲ ಬಹಳ ದೊಡ್ಡ ಮಟ್ಟದಲ್ಲಿ ಇದೆ. ಈ ಬಗ್ಗೆ ದಯವಿಟ್ಟು ಎಲ್ಲರೂ ಎಚ್ಚರದಿಂದಿರಿ”  ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇನ್ನೂ ಕೆಲವರು ಆರೋಗ್ಯ ಸಂಸ್ಥೆ (WHO) ಪ್ರಕಾರ ಭಾರತದಲ್ಲಿ ಕೇವಲ 14 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಆದರೆ 50 ಕೋಟಿ ಲೀಟರ್‌ಗೂ ಹೆಚ್ಚು ಮಾರಾಟವಾಗಿದೆ ಎಂದು ಉಲೇಖಿಸುತ್ತಿದ್ದಾರೆ.

ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋದಲ್ಲಿ ಕೂಡ ರಾಸಾಯನಿಕವನ್ನು ಲೋಟಕ್ಕೆ ಹಾಕಿ ಬಳಿಕ ಅದಕ್ಕೆ ನೀರಿನ ರೀತಿಯ ದ್ರವವೊಂದನ್ನು ಮಿಶ್ರ ಮಾಡಿದ ನಂತರ, ಆ ರಾಸಾಯನಿಕ ಬಿಳಿ ಬಣ್ಣಕ್ಕೆ ಬದಲಾಗುತ್ತದೆ. ಹೀಗಾಗಿ ವೈರಲ್‌ ಆಗುತ್ತಿರುವ ವಿಡಿಯೋವನ್ನು ಸಾಕಷ್ಟು ಮಂದಿ ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ಅಂತರ್ಜಾದಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ ನಮಗೆ 2018 ರಿಂದಲೂ ಇದೇ ವಿಡಿಯೋವನ್ನು ಹಲವು ಮಂದಿ ಹಂಚಿಕೊಳ್ಳುತ್ತಿರುವುದು ಕಂಡು ಬಂದಿದೆ. ಹೀಗಾಗಿ ಈ ವೈರಲ್‌ ವಿಡಿಯೋ 5 ವರ್ಷಗಳಷ್ಟು ಹಳೆಯದು ಎಂಬುದು ನಮಗೆ ಖಚಿತವಾಗಿದೆ.

ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ನೀರನ್ನು ಬ್ಯಾರೆಲ್‌ನ ಹೊರಗಿನಿಂದ ಬಳಸಲಾಗಿದೆ ಮತ್ತು ದ್ರವಣದ ಮಿಶ್ರಣಕ್ಕೆ ಸುರಿಯಲಾಗುತ್ತದೆ. ಇನ್ನು ಬ್ಯಾರೆಲ್‌ ಮೇಲೆ GIDC ಇಂಡಸ್ಟ್ರಿಯಲ್ ಎಸ್ಟೇಟ್ 393002 ಜಿಲ್ಲೆ, ಬರೂಚ್ ಎಂದು ಬರೆದಿರುವುದು ಕಂಡು ಬಂದಿದೆ. ಈ ಕುರಿತು ಪರಿಶೀಲಿಸಿದಾಗ ಇದು ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮ ಎಂದು ತಿಳಿದು ಬಂದಿದೆ..

ಇನ್ನು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ನಾವು ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಫಿನೈಲ್‌ ಯಾವುದೇ ಸಂಯುಕ್ತಗಳಲ್ಲಿ ನೀರಿನೊಂದಿಗೆ ಬೆರೆಯುತ್ತದೆ. ಬಣ್ಣ ವ್ಯತ್ಯಾಸವು ಸ್ವಲ್ಪ ವಯಸ್ಸಾದ ಸಂಯುಕ್ತದ ಕಾರಣದಿಂದಾಗಿರುತ್ತದೆ. ಶುದ್ಧ ಫಿನೈಲ್ ಬಣ್ಣರಹಿತವಾಗಿದೆ. ನೀರಿನೊಂದಿಗೆ ಬೆರೆತಾಗ ಬಿಳಿಯಾಗುವ ಅನೇಕ ರಾಸಾಯನಿಕ ಸಂಯುಕ್ತಗಳಿವೆ. ಡೆಟಾಲ್ ಇದಕ್ಕೊಂದು ಉದಾಹರಣೆ. ಆದರೆ ಡೆಟಾಲ್ ಅನ್ನು ನೀರಿನೊಂದಿಗೆ ಬೆರೆಸಿದಾಗ ಅದು  ಬಿಳಿ ಬಣ್ಣವಾಗುವುದಿಲ್ಲ, ಆದರೆ ಸ್ವಲ್ಪ ಮಂದ ಬಣ್ಣದ್ದಾಗುತ್ತದೆ. ಈ ವೀಡಿಯೊ ಖಂಡಿತವಾಗಿಯೂ ಅಂತಹ ರಾಸಾಯನಿಕ ಮಿಶ್ರಣವಾಗಿದೆ. ಸಿಂಥೆಟಿಕ್ ಹಾಲು ತಯಾರಿಸುವುದು ಹೀಗಲ್ಲ. ಅವು ಗ್ಲೂಕೋಸ್‌ನಂತಹ ಖಾದ್ಯ ವಿಷಯಗಳನ್ನು ಹೊಂದಿರುತ್ತವೆ ಎಂದು ತಿಳಿದು ಬಂದಿದೆ.

ಇನ್ನೂ ಸಿಂಥೆಟಿಕ್ ಹಾಲು ತಯಾರಿಸುವ ಬಗ್ಗೆ ವಿಚಾರಿಸಿದಾಗ ಅದು ಗ್ಲೂಕೋಸ್, ರಿಫೈನ್ಡ್ ಆಯಿಲ್, ಹಾಲಿನ ಪುಡಿ ಮತ್ತು ನೀರಿನ ಮಿಶ್ರಣ ಎಂದು ತಿಳಿಯಿತು. ಆದರೆ ಒಂದೇ ಒಂದು ಪದಾರ್ಥದಿಂದ ಹಾಲು ಮಾಡಲು ಸಾಧ್ಯವಿಲ್ಲ. ಈ ಕುರಿತು ಬಿಬಿಸಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕೂಡ ಹಲವು ಮಾಹಿತಿಗಳು ಲಭ್ಯವಾಗಿದೆ.

ಇನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಕೇವಲ 14 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತದೆ, ಆದರೆ 50 ಕೋಟಿ ಲೀಟರ್ ಹಾಲು ಮಾರಾಟವಾಗಿದೆ. ಅಂದರೆ ಮಾರುಕಟ್ಟೆಗೆ ಬರುವ ಉಳಿದ ಹಾಲು ಕಲಬೆರಕೆಯಾಗಿದೆ. ಈ ಬಗ್ಗೆ ವಿವರಣೆ ಕೂಡ ಲಭ್ಯವಾಗಿದೆ. ಈ ಬಗ್ಗೆ ವಿಚಾರಿಸಿದಾಗ ಡಬ್ಲ್ಯುಎಚ್‌ಒ ಅಂತಹ ಲೆಕ್ಕಾಚಾರ ಮಾಡಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ವತಃ WHO ಸ್ಪಷ್ಟನೆ ನೀಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಲಭ್ಯವಿರುವ ಮಾಹಿತಿಯ ಪ್ರಕಾರ ವೈರಲ್‌ ವಿಡಿಯೋ ನೀರಿಗೆ ಫಿನೈಲ್ ಬೆರೆಸುವ ಕ್ರಿಯೆಯಾಗಿದೆ ಎಂಬುದು ತಿಳಿದು ಬಂದಿದೆ. ಹಾಗಾಗಿ ವೈರಲ್‌ ವಿಡಿಯೋ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಈ ವಿಡಿಯೋವನ್ನು ಯಾವುದೇ ಕಾರಣಕ್ಕೂ ಶೇರ್‌ ಮಾಡಬೇಡಿ, ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ..


ಇದನ್ನೂ ಓದಿ : Fact Check : ರತನ್ ಟಾಟಾ ಪಾಕಿಸ್ತಾನಕ್ಕೆ ಟಾಟಾ ಸುಮೋ ವಾಹನಗಳನ್ನು ಮಾರಾಟ ಮಾಡಲು ನಿರಾಕರಿಸಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *