Fact Check : ರತನ್ ಟಾಟಾ ಪಾಕಿಸ್ತಾನಕ್ಕೆ ಟಾಟಾ ಸುಮೋ ವಾಹನಗಳನ್ನು ಮಾರಾಟ ಮಾಡಲು ನಿರಾಕರಿಸಿದ್ದರು ಎಂಬುದು ಸುಳ್ಳು

2008ರಲ್ಲಿ ಮುಂಬೈ ಭಯೋತ್ಪಾದನಾ ದಾಳಿಯ ಕೆಲವು ತಿಂಗಳ ನಂತರ, ಪಾಕಿಸ್ತಾನ ಸರ್ಕಾರವು ಟಾಟಾ ಸುಮೋ ವಾಹನಗಳನ್ನು ಖರೀದಿಸಲು ಆರ್ಡರ್ ಮಾಡಿತ್ತು. ಆಗ ರತನ್ ಟಾಟಾರವರು ಒಂದೇ ಒಂದು ವಾಹನವನ್ನು ಸಹ ರಫ್ತು ಮಾಡಲು ನಿರಾಕರಿಸಿದ್ದರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.

26/11 ದಾಳಿಯ ನಂತರ ತಾಜ್ ಗ್ರೂಪ್ ತಾಜ್ ಹೋಟೆಲ್‌ಗಳನ್ನು ಪುನರ್‌ನಿರ್ಮಿಸಲು ಟೆಂಡರ್‌ ನೀಡಿದಾಗ ಪಾಕಿಸ್ತಾನದ ಕಂಪನಿಗಳು ಸಹ ಅದಕ್ಕೆ ಬಿಡ್ ಮಾಡಿದ್ದವು. ಪಾಕಿಸ್ತಾನದ ಕೈಗಾರಿಕೋದ್ಯಮಿಗಳು ತಮ್ಮ ಪ್ರಯತ್ನವನ್ನು ಬಲಪಡಿಸಿಕೊಳ್ಳಲು ಸಚಿವ ಆನಂದ್ ಶರ್ಮಾರವರ ಮೂಲಕ ರತನ್ ಟಾಟಾ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ಆನಂದ್ ಶರ್ಮಾರವರು ರತನ್ ಟಾಟಾರವರಿಗೆ ಕರೆ ಮಾಡಿ ತಮ್ಮ ಟೆಂಡರ್‌ನ್ನು ಪರಿಗಣಿಸುವಂತೆ ಮನವಿ ಮಾಡಿಕೊಂಡಾಗ, ರತನ್ ಟಾಟಾ ನೀವು ನಾಚಿಕೆಯಿಲ್ಲದವರು, ನಾನು ಅಲ್ಲಎಂದು  ಉಚ್ಛಾಟಿಸಿ ಕರೆಯನ್ನು ಕಟ್ ಮಾಡಿದ್ದಾರೆ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ ಚೆಕ್‌ :

ವೈರಲ್ ಪೋಸ್ಟ್‌ರ್‌ ಕುರಿತು ನಿಜ ತಿಳಿದುಕೊಳ್ಳಲು , ಪೋಸ್ಟ್‌ಗೆ ಸಂಬಂಧಿಸಿದ ಕೀವರ್ಡ್ ಬಳಸಿಕೊಂಡು Googleನಲ್ಲಿ ಹುಡುಕಿದಾಗ, 2019 ರ ಟಾಟಾ ಮೋಟಾರ್ಸ್‌ನ  ಟ್ವೀಟ್‌ ಪೋಸ್ಟ್‌ ಲಭಿಸಿದೆ. ಇದರಲ್ಲಿ ಅವರು ಅದೇ ವಿಷಯದ ಕುರಿತು ‘X’ ಬಳಕೆದಾರರ ಪೋಸ್ಟ್‌ಗಳಿಗೆ ಪ್ರತ್ಯುತ್ತರಿಸುವಾಗ ಇದು ವಂಚನೆ ಎಂದು ಸ್ಪಷ್ಟಪಡಿಸಿದ್ದಾರೆ.

2019ರ ಅಕ್ಟೋಬರ್ 26ರಂದು ಟಾಟಾ ಮೋಟಾರ್ಸ್ ಪಾಕಿಸ್ತಾನಕ್ಕೆ ವಾಹನಗಳನ್ನು ರಫ್ತು ಮಾಡದಿರಲು ನಿಜವಾದ ಕಾರಣವನ್ನು ನೀಡಿದೆ. ಆ ದೇಶದ ನೀತಿಯು ಆಮದು ಮಾಡಿಕೊಳ್ಳಲು ಭಾರತದ ವಾಹನಗಳು ಋಣಾತ್ಮಕ ಪಟ್ಟಿಯಲ್ಲಿವೆ ಎಂದು ಹೇಳಿದೆ. 2013 ರಲ್ಲಿ ‘ಟಾಟಾ ಮೋಟಾರ್ಸ್’ ತಮ್ಮ ‘ಎಕ್ಸ್’ ಖಾತೆಯಲ್ಲಿ ಅದೇ ವಿಷಯವನ್ನು ಸ್ಪಷ್ಟಪಡಿಸಿದೆ.

ಪಾಕಿಸ್ತಾನದ ನಿಯಮಗಳ ಪ್ರಕಾರ, ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳು ‘ನಿರ್ಬಂಧಿತ ಪಟ್ಟಿ’ಯಲ್ಲಿವೆ ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆದ್ದರಿಂದ ಪಾಕಿಸ್ತಾನ ಟಾಟಾ ಸುಮೋ ವಾಹನಗಳನ್ನು ಖರೀದಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನದ ವಾಣಿಜ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ 2022 ರ ಆಮದು ನೀತಿ ಆದೇಶದ ಪ್ರಕಾರ, ಭಾರತದಿಂದ ಮತ್ತು ಇಸ್ರೇಲ್‌ನಿಂದ ದೇಶಕ್ಕೆ ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಅವರು ಕೇವಲ ‘ಚಿಕಿತ್ಸಗೆ ಔಷಧಿಗಳನ್ನು’ ಆಮದು ಮಾಡಿಕೊಳ್ಳಬಹುದು ಎಂದು ಉಲ್ಲೇಖಿಸಿದೆ. ರತನ್ ಟಾಟಾ ಅವರ ನಿಧನದ ಸಂದರ್ಭದಲ್ಲಿ ವೈರಲ್‌ ಪೋಸ್ಟ್‌ ʼಪುನರುಜ್ಜೀವನಗೊಂಡ ಹಳೆಯ ವಂಚನೆʼ ಎಂದು ಸ್ಪಷ್ಟವಾಗುತ್ತದೆ.

 

26/11 ದಾಳಿಯ ನಂತರ ಪಾಕಿಸ್ತಾನದ ಕೈಗಾರಿಕೋದ್ಯಮಿಗಳನ್ನು ಭೇಟಿಯಾಗಲು ರತನ್ ಟಾಟಾ ನಿರಾಕರಿಸಿದ್ದಾರೆ ಎಂಬ ಪೋಸ್ಟ್‌ನಲ್ಲಿನ ಇತರ ಹೇಳಿಕೆಗೆ ಸಂಬಂಧಿಸಿದಂತೆ, ಈ ಹೇಳಿಕೆಯನ್ನು ದೃಢೀಕರಿಸಲು ನಮಗೆ ಯಾವುದೇ ವಿಶ್ವಾಸಾರ್ಹ ಮಾಹಿತಿ ದೊರೆತಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, 2008 ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ರತನ್ ಟಾಟಾ ಪಾಕಿಸ್ತಾನಕ್ಕೆ ಟಾಟಾ ಸುಮೋ ವಾಹನಗಳನ್ನು ಮಾರಾಟ ಮಾಡಲು ನಿರಾಕರಿಸಿಲ್ಲ. ರತನ್ ಟಾಟಾ ನಿಧನದ ಸಂದರ್ಭದಲ್ಲಿ ಹಳೆಯ ಸುಳ್ಳು ಹೇಳಿಕೆಯನ್ನು ಪುನಃ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ವಾಣಿಜ್ಯ ವ್ಯಾಪಾರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸ್ಪಷ್ಟವಾಗಿ ತಿಳಿಯದೇ ಹಂಚಿಕೊಳ್ಳಬೇಡಿ.


ಇದನ್ನು ಓದಿ :

Fact Check : ಅನಿರುದ್ದ್‌ ಆಚಾರ್ಯರು ಸಲ್ಮಾನ್ ಖಾನ್‌ ಪಾದ ಸ್ಪರ್ಶಿಸಿದ್ದಾರೆ ಎಂದು ಎಡಿಟೆಡ್‌ ಪೋಟೊ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *