Fact Check | ದೀಪಾವಳಿಯಂದು ಚೀನಾ ಭಾರತಕ್ಕೆ ಅಸ್ತಮಾ ಉಂಟುಮಾಡುವ ಪಟಾಕಿಗಳನ್ನು ಕಳುಹಿಸುತ್ತಿದೆ ಎಂಬುದು ಸುಳ್ಳು

“ಪ್ರಮುಖ ಮಾಹಿತಿ… ಗುಪ್ತಚರ ಪ್ರಕಾರ, ಪಾಕಿಸ್ತಾನವು ನೇರವಾಗಿ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲದ ಕಾರಣ, ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದೆ.. ಭಾರತದಲ್ಲಿ ಅಸ್ತಮಾ ಹರಡಲು ಕಾರ್ಬನ್ ಮಾನಾಕ್ಸೈಡ್ ಅನಿಲಕ್ಕಿಂತ ಹೆಚ್ಚು ವಿಷಕಾರಿ ಪಟಾಕಿಗಳನ್ನು ಚೀನಾ ಅಭಿವೃದ್ಧಿಪಡಿಸಿದೆ. ಇದಲ್ಲದೆ, ಕುರುಡುತನಕ್ಕೆ ಕಾರಣವಾಗುವ ಕಣ್ಣಿನ ಕಾಯಿಲೆ ಹರಡುವ ಬೆಳಕಿನ ಅಲಂಕಾರಿಕ ದೀಪಗಳನ್ನು ಅಭಿವೃದ್ದಿಪಡಿಸಿ ಭಾರತಕ್ಕೆ ಕಳಿಸಲಿದೆ. ಬಹಳಷ್ಟು ಪಾದರಸವನ್ನು ಬಳಸಲಾಗಿದೆ, ದಯವಿಟ್ಟು ಈ ದೀಪಾವಳಿಯಲ್ಲಿ ಜಾಗರೂಕರಾಗಿರಿ ಮತ್ತು ಈ ಚೈನೀಸ್ ಉತ್ಪನ್ನಗಳನ್ನು ಬಳಸಬೇಡಿ. ಎಲ್ಲಾ ಭಾರತೀಯರಿಗೆ ಈ ಸಂದೇಶವನ್ನು ಹರಡಿ. ಜೈ ಹಿಂದ್” ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇನ್ನೂ ಕೆಲವರು ಈ ಸಂದೇಶವನ್ನು ವಿಶ್ವಜಿತ್ ಮುಖರ್ಜಿ, ಹಿರಿಯ ತನಿಖಾ ಅಧಿಕಾರಿ, ಗೃಹ ಸಚಿವಾಲಯ, ಭಾರತ ಸರ್ಕಾರ (ಛತ್ತೀಸ್‌ಗಢ) ಅವರು ಹೇಳಿದ್ದಾರೆ ಎಂದು ಇದೇ ಬರಹವನ್ನು ಹಂಚಿಕೊಳ್ಳುತ್ತಿದ್ದಾರೆ. ಸಾಕಷ್ಟು ಮಂದಿ ಸಾರ್ವಜನಿಕರು ಈ ವೈರಲ್‌ ಪೋಸ್ಟ್‌ ಅನ್ನು ನೋಡಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಂಡು, ಈ ಬಾರಿ ಚೀನಿ ಪಟಾಕಿಗಳನ್ನು ಖರೀದಿಸಬೇಡಿ ಎಂದು ಬರೆದುಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಬರಹಗಳಿಂದ ಸಾರ್ವಜನಿಕರ ಗೊಂದಲಕ್ಕೆ ಕಾರಣವಾಗಿರುವ ವೈರಲ್‌ ಪೋಸ್ಟ್‌ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 2016 ಮತ್ತು 2017ರಲ್ಲಿ ಅನೇಕ Facebook ಪೋಸ್ಟ್‌ಗಳಲ್ಲಿ ಹಂಚಿಕೊಂಡ ವೈರಲ್ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ . ಇದರಿಂದ ಈ ಪೋಸ್ಟ್ ಇತ್ತೀಚಿನದಲ್ಲ, ಆದರೆ ಈಗಾಗಲೇ ವೈರಲ್ ಆಗಿದೆ ಎಂಬುದು ಸ್ಪಷ್ಟವಾಗಿದೆ. ಆದರೆ ಆಗಲೂ ಕೂಡ ಸುಳ್ಳು ಮಾಹಿತಿಯೊಂದಿಗೆ ವೈರಲ್‌ ಆಗಿರುವುದು ಕೂಡ ನಮ್ಮ ಗಮನಕ್ಕೆ ಬಂದಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕುರಿತು ಕೇಂದ್ರ ಗೃಹ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಆದರೆ ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಯಾವುದೇ ರೀತಿಯಾದ ಅಧಿಕೃತ ಮಾಹಿತಿಗಳಾಗಲಿ, ಸೂಚನೆಯಾಗಲಿ ನಮಗೆ ಕಂಡು ಬಂದಿಲ್ಲ. ಒಂದು ವೇಳೆ ವೈರಲ್‌ ಪೋಸ್ಟ್‌ನಲ್ಲಿ ಉಲ್ಲೇಖಿಸಿದಂತೆ ಗೃಹ ಇಲಾಖೆಯೇ ಈ ಸೂಚನೆ ನೀಡಿದ್ದಲ್ಲಿ, ಆ ಬಗೆಗಿನ ಪ್ರಕಟಣೆ ವೆಬ್‌ಸೈಟ್‌ನಲ್ಲಿ ಕಂಡುಬರಬೇಕಿತ್ತು, ಇಲ್ಲಿ ಅಂತಹ ಯಾವುದೇ ಕುರುಹುಗಳು ಕೂಡ ಇಲ್ಲ.

ಇನ್ನು ವೈರಲ್‌ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದ ವಿಶ್ವಜಿತ್ ಮುಖರ್ಜಿ ಎಂಬ ಹಿರಿಯ ತನಿಖಾಧಿಕಾರಿಯ ಕುರಿತು ಕೂಡ ಇಲ್ಲಿ ಹುಡುಕಲಾಯಿತು, ಆದರೆ ನಮಗೆ ಇಲ್ಲಿ ನಾವು ವಿಶ್ವಜಿತ್ ಗುಪ್ತಾ ಎಂಬ ಹೆಸರು ಕಂಡು ಬಂದಿದೆ. ಆದರೆ ವಿಶ್ವಜಿತ್ ಮುಖರ್ಜಿ ಎಂಬ ಹೆಸರಿನ ಯಾವುದೇ ವ್ಯಕ್ತಿಯ ಹೆಸರು ಪಟ್ಟಿಯಲ್ಲಿ ಕಂಡುಬಂದಿಲ್ಲ. ಹಾಗಾಗಿ ವೈರಲ್‌ ಪೋಸ್ಟ್‌ ನಂಬಲು ಅರ್ಹವಲ್ಲ ಎಂಬುದು ಸಾಬೀತಾಗಿದೆ. 

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ದೀಪಾವಳಿಯಂದು ಚೀನಾ ಭಾರತಕ್ಕೆ ಅಸ್ತಮಾ ಉಂಟುಮಾಡುವ ಪಟಾಕಿಗಳನ್ನು ಕಳುಹಿಸುತ್ತಿದೆ ಎಂಬುದು ಸುಳ್ಳಾಗಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯದ ಹಿರಿಯ ತನಿಖಾಧಿಕಾರಿ ವಿಶ್ವಜಿತ್ ಮುಖರ್ಜಿ ಮಾಹಿತಿ ನೀಡಿದ್ದಾರೆ ಎಂಬುದು ಕೂಡ ಸುಳ್ಳಾಗಿದೆ. ಅಸಲಿಗೆ ವಿಶ್ವಜಿತ್ ಮುಖರ್ಜಿ  ಎಂಬ ವ್ಯಕ್ತಿಯೇ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳ ಪಟ್ಟಿಯಲ್ಲಿ ಇಲ್ಲಾ, ಹಾಗಾಗಿ ವೈರಲ್‌ ಪೋಸ್ಟ್‌ ಸಂಪೂರ್ಣವಾಗಿ ತಪ್ಪು ಮಾಹಿತಿಗಳಿಂದ ಕೂಡಿದೆ. ಹಾಗಾಗಿ ಈ ಪೋಸ್ಟ್‌ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check : ಅನಿರುದ್ದ್‌ ಆಚಾರ್ಯರು ಸಲ್ಮಾನ್ ಖಾನ್‌ ಪಾದ ಸ್ಪರ್ಶಿಸಿದ್ದಾರೆ ಎಂದು ಎಡಿಟೆಡ್‌ ಪೋಟೊ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *