Fact Check | ಭಾರತದ ಮುಸಲ್ಮಾನರು ಕ್ರೈಸ್ತರ ಚರ್ಚ್‌ಗಳನ್ನು ಸುಟ್ಟು ಹಾಕುತ್ತಿದ್ದಾರೆ ಎಂಬುದು ಸುಳ್ಳು ಸುದ್ದಿ

“ಕಳೆದ ರಾತ್ರಿ 20 ಚರ್ಚುಗಳನ್ನು ಸುಟ್ಟುಹಾಕಲಾಯಿತು ಮತ್ತು ಇಂದು ರಾತ್ರಿ ಅವರು “ಒಲಿಸಾಬಾಂಗ್ ಪ್ರಾಂತ್ಯ” ದಲ್ಲಿ 200 ಕ್ಕೂ ಹೆಚ್ಚು ಚರ್ಚುಗಳನ್ನು ನಾಶಮಾಡಲು ಬಯಸುತ್ತಾರೆ. ಅವರು ಮುಂದಿನ 24 ಗಂಟೆಗಳಲ್ಲಿ 200 ಮಿಷನರಿಗಳನ್ನು ಕೊಲ್ಲಲು ಬಯಸುತ್ತಾರೆ. ಎಲ್ಲಾ ಕ್ರಿಶ್ಚಿಯನ್ನರು ಹಳ್ಳಿಗಳಲ್ಲಿ ಅಡಗಿಕೊಂಡಿದ್ದಾರೆ. ಅವರಿಗಾಗಿ ಪ್ರಾರ್ಥಿಸಿ ಮತ್ತು ಪ್ರಪಂಚದಾದ್ಯಂತ ನಿಮಗೆ ತಿಳಿದಿರುವ ಎಲ್ಲಾ ಕ್ರಿಶ್ಚಿಯನ್ನರಿಗೆ ಈ ಸಂದೇಶವನ್ನು ಕಳುಹಿಸಿ.” ಎಂಬ ಬರಹವೊಂದನ್ನು ವಾಟ್ಸ್‌ಆಪ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇದೇ ಬರಹದಲ್ಲಿ ಮುಂದುವರೆದು “ಭಾರತದಲ್ಲಿರುವ ನಮ್ಮ ಸಹೋದರ ಸಹೋದರಿಯರನ್ನು ಕರುಣಿಸುವಂತೆ ದೇವರನ್ನು ಕೇಳಿಕೊಳ್ಳಿ. “ನೀವು ಈ ಸಂದೇಶವನ್ನು ಸ್ವೀಕರಿಸಿದಾಗ, ದಯವಿಟ್ಟು ಅದನ್ನು ಇತರ ಜನರಿಗೆ ತುರ್ತಾಗಿ ಕಳುಹಿಸಿ. ದಯವಿಟ್ಟು ಮರಣದಂಡನೆಗೆ ಒಳಗಾದ 22 ಕ್ರಿಶ್ಚಿಯನ್ ಮಿಷನರಿ ಕುಟುಂಬಗಳಿಗಾಗಿ ಪ್ರಾರ್ಥಿಸಿ. ದಯವಿಟ್ಟು ಇದನ್ನು ನಿಮಗೆ ಸಾಧ್ಯವಾದಷ್ಟು ಬೇಗ ರವಾನಿಸಿ ಇದರಿಂದ ಅನೇಕರು ಪ್ರಾರ್ಥಿಸುತ್ತಾರೆ!!! ಪ್ರೀತಿಯಿಂದ, ಜಾಯ್ಸ್ ಮೆಯೆರ್.” ಎಂದು ಬರೆದುಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಬರಹದ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯಾದ ವರದಿಗಳು ಕಂಡು ಬಂದಿಲ್ಲ. ಒಂದು ವೇಳೆ ವೈರಲ್‌ ಬರಹದಲ್ಲಿ  ಹೇಳಿದಂತೆ ಭಾರತದಲ್ಲಿ ಮುಸಲ್ಮಾನರು 20ಕ್ಕೂ ಹೆಚ್ಚು ಚರ್ಚ್‌ಗಳನ್ನು ಸುಟ್ಟು ಹಾಕಿದ್ದು ನಿಜವೇ ಆಗಿದ್ದರೆ, ಅದು ದೇಶದ ಅತಿದೊಡ್ಡ ಅಲ್ಪಸಂಖ್ಯಾತರ ಸಂಘರ್ಷವಾಗಬೇಕಿತ್ತು. ಹೀಗಾಗಿ ವಿವಿಧ ಮಾಧ್ಯಮಗಳು ಕೂಡ ನಿರಂತರವಾಗಿ ವರದಿಯನ್ನು ಪ್ರಕಟಿಸಬೇಕಿತ್ತು. ಆದರೆ ಅಂತಹ ಯಾವುದೇ ವರದಿಗಳು ಕಂಡು ಬಾರದ ಕಾರಣ ವೈರಲ್‌ ವಿಡಿಯೋ ಅನುಮಾನವನ್ನು ಹುಟ್ಟು ಹಾಕಿತ್ತು.

ಈ ಹಿನ್ನೆಲೆಯಲ್ಲಿ ಭಾರತದಲ್ಲಿ Olisabang ಎಂಬ ಪ್ರಾಂತ್ಯ ಅಥವಾ ಊರು ಇದೇಯೇ ಎಂದು ಪರಿಶೀಲನೆ ನಡೆಸಿದೆವು. ಆದರೆ ಆ ರೀತಿಯ ಯಾವುದೇ ಊರು ಭಾರತದಲ್ಲಿ ಇಲ್ಲ ಎಂಬುದು ದೃಢ ಪಟ್ಟಿದೆ. ಹಾಗಾಗಿ ವೈರಲ್‌ ವಿಡಿಯೋದಲ್ಲಿ ಉಲ್ಲೇಖಿಸಿದ ಊರು ಕೂಡ ಸುಳ್ಳು ಸೃಷ್ಟಿಯಾಗಿದೆ. ಇನ್ನು ವೈರಲ್‌ ಸಂದೇಶವನ್ನು ಸುವಾರ್ತಾ ಬೋಧಕಿ ಜಾಯ್ಸ್‌ ಮೇಯರ್‌ ಅವರು ಕಳುಹಿಸಿದ್ದಾರೆ ಎಂದು ಉಲ್ಲೇಖಿಸಿದ ಹಿನ್ನೆಲೆ ಈ ಕುರಿತು ಹುಡುಕಾಟವನ್ನು ನಡೆಸಿದೆವು, ಆದರೆ ಈ ಬಗ್ಗೆ ನಂಬಲು ಅರ್ಹವಾದ ಯಾವುದೇ ಅಧಿಕೃತ ಮಾಹಿತಿಗಳು ಕೂಡ ನಮಗೆ ಲಭ್ಯವಾಗಿಲ್ಲ.

ಇನ್ನೂ ಹೆಚ್ಚಿನ ಹುಡುಕಾಟವನ್ನು ನಡೆಸಿದಾಗ ವೈರಲ್‌ ಸಂದೇಶಕ್ಕೆ ಹೋಲಿಕೆಯಾಗುವಂತೆ 6 ಏಪ್ರಿಲ್‌ 2010ರಂದು ಸ್ನೋಪ್ಸ್‌ನಲ್ಲಿ ಪ್ರಕಟವಾದ ವರದಿಯೊಂದನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ 2010ರಲ್ಲಿ ಭಾರತದಲ್ಲಿ ಬೌಧ ಸನ್ಯಾಸಿಗಳಿಂದ ಕ್ರೈಸ್ತರ ಚರ್ಚುಗಳ ಧ್ವಂಸವಾಗುತ್ತಿದೆ ಎಂಬುದು ಸುಳ್ಳು ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಇನ್ನು ಸ್ನೋಪ್ಸ್‌ ತಂಡ 2010ರಲ್ಲೇ ಜಾಯ್ಸ್‌ ಮೇಯರ್‌ ಅವರನ್ನು ಸಂಪರ್ಕಿಸಿ ವೈರಲ್‌ ಸಂದೇಶದ ಕುರಿತು ವಿಚಾರಸಿತ್ತು. ಆದರೆ ಅವರು ವೈರಲ್‌ ಪೋಸ್ಟ್‌ ಸುಳ್ಳಾಗಿದೆ. ಈ ರೀತಿಯ ಸಂದೇಶವನ್ನು ನಾನು ಯಾರಿಗೂ ಕಳುಹಿಸಿಲ್ಲ. ಇದು ಹಿಂದುತ್ವವಾದಿಗಳ ಕುತಂತ್ರ ಎಂದು ಹೇಳಿದ್ದರು.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ಭಾರತದಲ್ಲಿ ಮುಸಲ್ಮಾನರು ಕ್ರೈಸ್ತ ಸಮುದಾಯ ಚರ್ಚ್‌ಗಳನ್ನು ಸುಟ್ಟು ಹಾಕುತ್ತಿದ್ದಾರೆ ಎಂಬುದು ಸುಳ್ಳಿನಿಂದ ಕೂಡಿದೆ. 2010ರಲ್ಲಿ ಬೌದ್ಧ ಸನ್ಯಾಸಿಗಳಿಂದ ಕ್ರೈಸ್ತರ ಚರ್ಚುಗಳ ಧ್ವಂಸ ಎಂದು ಇದೇ ಸಂದೇಶವನ್ನು ಹಂಚಿಕೊಳ್ಳಲಾಗಿತ್ತು. ಈಗ ಅದರಲ್ಲಿ ಬೌಧ ಎಂಬ ಪದವನ್ನು ತೆಗೆದು ಮುಸಲ್ಮಾನ ಎಂಬುದಾಗಿ ಸೇರಿಸಲಾಗಿದೆ. ಹಾಗಾಗಿ ಇಂತ ಸುಳ್ಳು ಸುದ್ದಿ ಕಂಡು ಬಂದರೆ ಅವುಗಳನ್ನು ಯಾರಿಗೂ ಶೇರ್‌ ಮಾಡಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check: ಬಡ ಮಕ್ಕಳೊಂದಿಗೆ ರತನ್ ಟಾಟಾ ಊಟ ಮಾಡುತ್ತಿರುವ ಫೋಟೊ AI ರಚಿತವಾದದ್ದು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *