Fact Check | ಇಸ್ರೇಲ್ ಅಕ್ರಮ ರಾಷ್ಟ್ರವೆಂದು ಅಂತರರಾಷ್ಟ್ರೀಯ ನ್ಯಾಯಾಲಯ ಘೋಷಿಸಿಲ್ಲ

ಪ್ಯಾಲೆಸ್ತೀನ್‌ನ ವಿದೇಶಾಂಗ ಸಚಿವ ರಿಯಾದ್ ಅಲ್-ಮಲಿಕಿ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ, “ರಿಯಾದ್ ಅಲ್-ಮಲಿಕಿ ಅವರು ಇಸ್ರೇಲ್ ಅನ್ನು ಕಾನೂನು ಬಾಹಿರ ರಾಷ್ಟ್ರವೆಂದು ಘೋಷಿಸುವ ಬಗ್ಗೆ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಸರಿಯಾಗಿ ನೆನಪಿಟ್ಟುಕೊಳ್ಳಿ ಈ ಆದೇಶದ ಪ್ರಕಾರ ಇನ್ನು ಮುಂದೆ ಇಸ್ರೇಲ್‌ ಅಧಿಕೃತ ರಾಷ್ಟ್ರವಾಗಿ ಇರುವುದಿಲ್ಲ. ಇದನ್ನು ಅಂತರಾಷ್ಟ್ರೀಯ ನ್ಯಾಯಾಲಯವೇ ಹೇಳಿದೆ” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಹೀಗೆ ವಿವಿಧ ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ “ಇಸ್ರೇಲ್‌ ಅಧಿಕೃತ ರಾಷ್ಟ್ರವಲ್ಲ, ಇಸ್ರೇಲ್‌ನ ಭೂಪ್ರದೇಶ ಇನ್ನು ಮುಂದೆ ಪ್ಯಾಲೆಸ್ತೀನ್‌ಗೆ ಸೇರಲಿದೆ. ಅಂತರಾಷ್ಟ್ರೀಯ ನ್ಯಾಯಾಲಯದ ಈ ಮಹತ್ವದ ತೀರ್ಪನ್ನು ಅಮೆರಿಕ ಸೇರಿದಂತೆ ಎಲ್ಲಾ ರಾಷ್ಟ್ರಗಳು ಪಾಲನೆ ಮಾಡಲೇಬೇಕು ಎಂದು ಹಲವರು ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ “ಅಲ್-ಮಲಿಕಿ ಮೀಡಿಯಾ ಬ್ರೀಫ್ ICJ ತೀರ್ಪು” ಎಂಬ ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ 19 ಜುಲೈ 2024ರಂದು ವಿವಿಧ ಸುದ್ದಿವಾಹಿನಿಗಳಲ್ಲಿ ಮತ್ತು ಹಲವು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿಗಳು ಕಂಡು ಬಂದಿವೆ.

ವರದಿಗಳ ಪ್ರಕಾರ ಅಲ್-ಮಲಿಕಿ ನಿರ್ದಿಷ್ಟವಾಗಿ ಇಸ್ರೇಲ್‌ ಪ್ಯಾಲೆಸ್ತೀನ್‌ನ ಆಕ್ರಮಣ ಮತ್ತು ಪ್ಯಾಲೆಸ್ತೀನ್‌ ಪ್ರಾಂತ್ಯಗಳಲ್ಲಿನ ಅದರ ವಸಾಹತುಗಳ ಬಗ್ಗೆ ಮಾತನಾಡಿದ್ದು, “ಇಸ್ರೇಲ್‌ನ ಆಕ್ರಮಣವನ್ನು ವಿಶ್ವ ನ್ಯಾಯಾಲಯವು ಕಾನೂನು ಬಾಹಿರವೆಂದು ಘೋಷಿಸಿದೆ, ಅದು ಸಂಪೂರ್ಣವಾಗಿ ಮತ್ತು ಸಾಧ್ಯವಾದಷ್ಟು ವೇಗವಾಗಿ ಕೊನೆಗೊಳ್ಳಬೇಕು ಎಂದು ಷರತ್ತು ವಿಧಿಸಿದೆ. ಅಕ್ರಮ ಇಸ್ರೇಲಿ ಆಕ್ರಮಣವು ಯುಎನ್ ಮಾನವ ಹಕ್ಕುಗಳ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯವು ಕಂಡು ಹಿಡಿದಿದೆ. ಆಕ್ರಮಿತ ಪ್ಯಾಲೆಸ್ತೀನ್ ಭೂಪ್ರದೇಶದಲ್ಲಿರುವ ಎಲ್ಲಾ ಇಸ್ರೇಲಿ ವಸಾಹತುಗಳು ಕಾನೂನುಬಾಹಿರ ಮತ್ತು ಆಕ್ರಮಣವನ್ನು ಹಿಂಪಡೆಯಬೇಕು ಮತ್ತು ಎಲ್ಲಾ ಇಸ್ರೇಲಿ ವಸಾಹತುಗಾರರನ್ನು ಸ್ಥಳಾಂತರಿಸಬೇಕು ಎಂದು ನಿಸ್ಸಂದಿಗ್ಧವಾಗಿ ಘೋಷಿಸಿದೆ” ಎಂದು ಹೇಳಿರುವುದು ಕಂಡು ಬಂದಿದೆ.

ಇಲ್ಲಿ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಹೇಳಬೇಕೆಂದರೆ, ಇಸ್ರೇಲ್‌ ಪ್ಯಾಲೆಸ್ತೀನ್‌ ಮೇಲೆ ದಾಳಿ ನಡೆಸಿ ಅಲ್ಲಿರುವ ಭೂಪ್ರದೇಶದ ಮೇಲೆ ಸಾಧಿಸಿರುವ ಹಿಡಿತವನ್ನು ಅಂತರಾಷ್ಟ್ರೀಯ ನ್ಯಾಯಾಲಯ ಕಾನೂನು ಬಾಹಿರ ಎಂದು ಹೇಳಿದೆ ಎಂಬುದನ್ನು ಅಲ್-ಮಲಿಕಿ ICJ ತೀರ್ಪಿನ ಕುರಿತು ವಿವಿರಣೆಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ಆದರೆ ಇದನ್ನೇ ತಪ್ಪಾಗಿ ಬಳಸಿಕೊಂಡಿರುವ ಕಿಡಿಗೇಡಿಗಳು ಇಸ್ರೇಲ್‌ ಅನ್ನು ಅನಧಿಕೃತ ರಾಷ್ಟ್ರವೆಂದು ಅಂತರಾಷ್ಟ್ರೀಯ ನ್ಯಾಯಲಯ ಘೋಷಿಸಿದೆ ಎಂದು ಹಂಚಿಕೊಂಡಿದ್ದಾರೆ. 

ಒಟ್ಟಾರೆಯಾಗಿ ಹೇಳುವುದಾದರೆ ಅಂತರಾಷ್ಟ್ರೀಯ ನ್ಯಾಯಲಯ ಇಸ್ರೇಲ್‌ ಆಕ್ರಮಿಸಿಕೊಂಡಿರುವ ಪ್ರದೇಶಗಳು ಅನಧಿಕೃತ ಎಂದು ಹೇಳಿವೆ ಎಂಬುದನ್ನು ಪ್ಯಾಲೆಸ್ತೀನ್‌ನ ವಿದೇಶಾಂಗ ಸಚಿವ ರಿಯಾದ್ ಅಲ್-ಮಲಿಕಿ ಅವರು ಮಾಧ್ಯಮಗಳಿಗೆ ಹೇಳಿದ್ದರು, ಅವರ ಹೇಳಿಕೆಯನ್ನು ತಿರುಚಿ ಇಸ್ರೇಲ್‌ ಅನಧಿಕೃತ ರಾಷ್ಟ್ರವೆಂದು ಅಂತರಾಷ್ಟ್ರೀಯ ನ್ಯಾಯಾಲಯ ಘೋಷಿಸಿದೆ ಎಂಬುದು ಸುಳ್ಳು. ಹಾಗಾಗಿ ಇಂತಹ ಸುದ್ದಿಗಳು ನಿಮಗೆ ಕಂಡು ಬಂದರೆ ಅವುಗಳನ್ನು ನಿರ್ಲಕ್ಷಿಸಿ


ಇದನ್ನೂ ಓದಿ : Fact Check : ಲೆಬನಾನ್‌ ನಟಿ ಮೌಲವಿಗೆ ಕಪಾಳಮೋಕ್ಷ ಮಾಡಿದ್ದಾಳೆ ಎಂದು ಟಿವಿ ಶೋ ದೃಶ್ಯಗಳನ್ನು ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *