Fact Check : ಬಂಡೆಗಳ ಮೇಲೆ ಸಿಲುಕಿದ್ದ ಆನೆಯನ್ನು ಕ್ರೇನ್‌ನಿಂದ ರಕ್ಷಿಸಲಾಗಿದೆ ಎಂಬ ವಿಡಿಯೋ ನಿಜವಲ್ಲ, AI ರಚಿತವಾದದ್ದು

ಪರ್ವತದ ಕಿರಿದಾದ ಬಂಡೆಯ ಮೇಲೆ ಸಿಲುಕಿರುವ ದೈತ್ಯಾಕಾರದ ಆನೆಯನ್ನು ಕ್ರೇನ್ ಮೂಲಕ ರಕ್ಷಿಸುವುದನ್ನು ಬರಿ ಕಲ್ಪಿಸಿಕೊಂಡರೆ ಭಯಾನಕ ದೃಶ್ಯದಂತಿದೆ. ಇನ್ನು ಅದು ನಿಜವಾದ ಘಟನೆಯಾದರೆ ಅದು ಕಲ್ಪನೆಗೂ ಮೀರಿದ  ಅಮೋಘವಾದ ದೃಶ್ಯ! ಎಂದು ಬರೆದು  ಫೇಸ್‌ಬುಕ್ ಬಳಕೆದಾರರು  “ಅಮೇರಿಕದ ಪೊಲೀಸರು ಕಲ್ಲಿನ ಪರ್ವತದಲ್ಲಿ ಸಿಲುಕಿಕೊಂಡಿದ್ದ  ಆನೆಯನ್ನು ರಕ್ಷಿಸಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ  ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ ಚೆಕ್‌ :

ಈ ವೈರಲ್‌ ವಿಡಿಯೋದ ಕುರಿತು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು,  ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು  ರಿವರ್ಸ್ ಇಮೇಜ್‌ ಬಳಸಿಕೊಂಡು ಹುಡುಕಿದಾಗ,  ಅಕ್ಟೋಬರ್ 2 ರಂದು AThing Inside ಎಂಬ ಹೆಸರಿನ YouTube ಚಾನೆಲ್‌ ಇದೇ ವೈರಲ್‌ ವೀಡಿಯೊವನ್ನು ಹಂಚಿಕೊಂಡಿದೆ. ಅದರ ಶೀರ್ಷಿಕೆಯಲ್ಲಿ “ಅಮೇರಿಕದ ಪೋಲೀಸರು  ಪರ್ವತದ ಕಿರಿದಾದ ಕಲ್ಲಿನಲ್ಲಿ ಸಿಲುಕಿರುವ ಆನೆಯನ್ನು ರಕ್ಷಿಸಿದ್ದಾರೆ” ಎಂದು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆ, ಈ ವಿಡಿಯೋವನ್ನು ಮಿಲಿಯನ್‌ಗಿಂತಲೂ ಹೆಚ್ಚು ಜನರು  ವೀಕ್ಷಿಸಿದ್ದಾರೆ. ಆದರೆ ವಿಡಿಯೋ ವಿವರಣೆಯಲ್ಲಿ ಇದು ಕೃತಕವಾಗಿ ರಚಿಸಲಾಗಿದೆ ಎಂದು ಬರೆದಿದೆ. ಅಲ್ಲಿಗೆ ಈ ದೃಶ್ಯಗಳನ್ನು ಡಿಜಿಟಲ್ ಆಗಿ ರಚಿಸಲಾಗಿದೆ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.

ಈ ವೈರಲ್‌ ವಿಡಿಯೋವನ್ನು ಬಹು ಎಚ್ಚರಿಕೆಯಿಂದ ಗಮನಿಸಿದ ನಂತರ, AThing Inside Youtube ಚಾನಲ್‌ ಹಂಚಿಕೊಂಡಿರುವ ಪ್ರಾಣಿಗಳಿಗೆ-ಸಂಬಂಧಿಸಿದ ಹಲವಾರು AI (Artificial intelligence) ರಚಿತ ವಿಡಿಯೋಗಳನ್ನು ಲಭಿಸಿವೆ. ಹಲವಾರು ವಿಡಿಯೋಗಳಲ್ಲಿ, ಈ ಪ್ರಾಣಿಗಳನ್ನು ಅವಾಸ್ತವಿಕ ಸಂದರ್ಭಗಳಲ್ಲಿ ತೋರಿಸಲಾಗಿದೆ, ಉದಾಹರಣೆಗೆ ನೋಡುವುದಾದರೆ,  ಸಿಂಹವು ಮೊಸಳೆಯ ಮೇಲೆ ನಿಂತಿರುವುದು ಅಥವಾ ಪಾಂಡಾ ದೈತ್ಯ ಹೆಬ್ಬಾವನ್ನು ತಿನ್ನುವುದು . ಈ ಎಲ್ಲಾ ವಿಡಿಯೋಗಳು ಒಂದೇ ರೀತಿಯ ಕೃತಕ ಬುದ್ಧಿಮತ್ತೆಯಿಂದ ರಚಿಸಲಾಗಿದೆ.

ವಿಡಿಯೋವನ್ನು AI ನಿಂದ ರಚಿಸಲಾಗಿದೆ ಎಂಬ ಅಂಶವನ್ನು ಇತರ ಅಂಶಗಳು ಸೂಚಿಸುತ್ತವೆ. ಆನೆಯ ಚರ್ಮವು ತುಂಬಾ ನಯವಾಗಿ, ಹೊಳೆಯುವಂತೆ ಕಾಣುತ್ತದೆ. ಒಂದು ಹಂತದಲ್ಲಿ, ಇದು ಒಂದಕ್ಕಿಂತ ಹೆಚ್ಚು ಬಾಲಗಳನ್ನು ಹೊಂದಿರುವಂತೆ ಕಂಡುಬಂದಿದೆ. ಕಲ್ಲಿನ ಭೂಪ್ರದೇಶವು ದೃಶ್ಯದಿಂದ ದೃಶ್ಯಕ್ಕೆ ಬದಲಾಗುತ್ತದೆ. AI-ರಚಿಸಿದ ವಿಡಿಯೋಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ರೀತಿಯ ಜನರು ಹಿನ್ನೆಲೆಯಲ್ಲಿ ನಡೆಯುತ್ತಿದ್ದಾರೆ.

ಅಮೇರಿಕದಲ್ಲಿ ಅಂತಹ ಯಾವುದೇ ಘಟನೆ ನಡೆದಿದೆಯೇ ಎಂದು ಕಂಡುಹಿಡಿಯಲು Google ನಲ್ಲಿ ಹುಡುಕಿದಾಗ, ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಯಾವುದೇ ರೀತಿಯ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಆದ್ದರಿಂದ ಆನೆಯೊಂದು ಕಲ್ಲಿನ ಪರ್ವತದಲ್ಲಿ ಸಿಲುಕಿರುವ ವಿಡಿಯೋ ನಕಲಿ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಮೇರಿಕದ ಪೋಲಿಸರು ಪರ್ವತದ ಕಿರಿದಾದ ಕಲ್ಲಿನಲ್ಲಿ ಸಿಲುಕಿರುವ ಆನೆಯನ್ನು ಕ್ರೇನ್‌ ಮೂಲಕ ರಕ್ಷಿಸಲಾದ ವಿಡಿಯೋ AI ರಚಿತ ವೀಡಿಯೊವಾಗಿದೆ. ಆದ್ದರಿಂದ ಪ್ರಾಣಿಗಳಿಗೆ ಸಂಬಂಧಿಸಿದ ಊಹಾಪೋಹವಾದ ಘಟನೆಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನು ಓದಿ :

Fact Check : ಮಳೆಯಲ್ಲಿ ನಮಾಜ್ ಮಾಡುವ ವ್ಯಕ್ತಿಗೆ ಕೊಡೆ ಹಿಡಿಯುವ ಚಿತ್ರ ನೈಜ ಘಟನೆಯಲ್ಲ, ಸಿನಿಮಾ ದೃಶ್ಯ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *