Fact Check : ಲೆಬನಾನ್‌ ನಟಿ ಮೌಲವಿಗೆ ಕಪಾಳಮೋಕ್ಷ ಮಾಡಿದ್ದಾಳೆ ಎಂದು ಟಿವಿ ಶೋ ದೃಶ್ಯಗಳನ್ನು ಹಂಚಿಕೊಳ್ಳಲಾಗುತ್ತಿದೆ

ತನ್ನ ಉಡುಗೆಯ ಬಗ್ಗೆ ಹೀನಾಯವಾಗಿ ಮಾತಾಡಿದ್ದಕ್ಕಾಗಿ ಲೆನನಾನಿನ ನಟಿ ಮೌಲವಿಗೆ ಕಪಾಳಮೋಕ್ಷ ಮಾಡಿದ್ದಾಳೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ತನ್ನ ಉಡುಗೆ ತೊಡುಗೆಯ ಬಗ್ಗೆ ಹೀನಾಯವಾಗಿ ಮಾತಾಡಿದ ಮೌಲವಿಗೆ ಲೆಬನಾನ್‌ನಲ್ಲಿ ನಟಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಹೇಳಲಾಗಿದೆ.

ಫ್ಯಾಕ್ಟ್‌ ಚೆಕ್

ಈ ದೃಶ್ಯಗಳು ಇರಾಕಿನ ಪ್ರ್ಯಾಂಕ್‌ ಶೋ (ಯಾಮಾರಿಸುವ, ಬಕ್ರಾ ಮಾಡುವ) ವೊಂದಕ್ಕೆ ಸಂಬಂಧಿಸಿದ್ದು, ಇಲ್ಲಿ ಮೌಲವಿ ವೇಷ  ಧರಿಸಿದ ವ್ಯಕ್ತಿಯು ಓರ್ವ ನಟನಾಗಿದ್ದಾನೆಯೇ ಹೊರತು ನೈಜ ಮೌಲವಿ ಅಲ್ಲ. ಇರಾಕಿನ ಈ  ಟಿವಿ ಕಾರ್ಯಕ್ರಮದ ದೃಶ್ಯಾವಳಿಗಳು ಲೆಬನಾನ್‌ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.

೨೦೨೦ರಲ್ಲಿ ಇರಾಕಿನ ಸ್ಯಾಟ್‌ಲೈಟ್‌ ಚಾನೆಲ್‌ ಆಗಿರುವ ಏಷ್ಯಾ ಟಿವಿಯಲ್ಲಿ ಈ  ಕಾರ್ಯಕ್ರಮ ಪ್ರಸಾರವಾಗಿತ್ತು. ಇರಾಕಿನ ನಟಿ ಅಮಾನಿ ಅಲಾ ಈ ಶೋದಲ್ಲಿ ಭಾಗವಹಿಸಿದ್ದು, ಮೌಲವಿ ವೇಷದಲ್ಲಿ ಮತ್ತೊರ್ವ ನಟ ಭಾಗವಹಿಸಿದ್ದರು.  ಮೌಲವಿ ವೇಷದಲ್ಲಿರುವ ನಟ ನಟಿಯನ್ನು ಯಾಮಾರಿಸಲು ಮಾತಾಡಲು ಪ್ರಾರಂಭಿಸುತ್ತಾನೆ ಮತ್ತು ಆಕೆಯ ಬಗ್ಗೆ ಹೀನಾಯವಾಗಿ ಮಾತಾಡುತ್ತಾನೆ ಇದಕ್ಕೆ ಪ್ರತಿಕ್ರಿಯೆಯಾಗಿ ನಟಿಯೂ ಒಂದಿಷ್ಟು ಮಾತಾಡುತ್ತಾಳೆ ಮತ್ತು ಮೌಲವಿ ವೇಷದಲ್ಲಿರುವ ನಟನಿಗೆ ಕಪಾಳಮೋಕ್ಷ ಮಾಡುತ್ತಾಳೆ ಮತ್ತು ಥಳಿಸಲು ಮುಂದಾಗುತ್ತಾಳೆ.

ಕಾರ್ಯಕ್ರಮದ ಮುಂದುವರಿದ ಭಾಗದಲ್ಲಿ ನಟಿಗೆ ತನ್ನನ್ನು ಬಕ್ರಾ ಮಾಡಲು ಆಹ್ವಾನಿಸಿರುವುದು ಅರಿವಿಗೆ ಬರುತ್ತದೆ.

ವೀಡಿಯೊದಿಂದ ಕೀಫ್ರೇಮ್‌ನಲ್ಲಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಅದೇ ವೀಡಿಯೊ 2022 ರಿಂದ ವೈರಲ್ ಆಗಿದೆ ಎಂಬುದು ತಿಳಿದು ಬಂದಿದೆ. ಘಟನೆಯು ಲೆಬನಾನಿನ ಟಿವಿ ಶೋನಲ್ಲಿ ಸಂಭವಿಸಿದೆ ಎಂಬ ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಹೀಗಾಗಿ, ವೀಡಿಯೊದಿಂದ ಹೆಚ್ಚಿನ ಫ್ರೇಮ್‌ಗಳಲ್ಲಿ ಅರೇಬಿಕ್ ಕೀವರ್ಡ್‌ಗಳೊಂದಿಗೆ ಹುಡುಕಾಟವನ್ನು ನಡೆಸಿದಾಗ ಶೋ ಹೋಸ್ಟ್ ಹುಸೇನ್ ಟೋನಿ ಎಂದು ಗುರುತಿಸಲು ಸಾಧ್ಯವಾಗಿದೆ. ಹೋಸ್ಟ್ ಹುಸೇನ್ ಟೋನಿ ಅದೇ ವೀಡಿಯೊವನ್ನು ಏಪ್ರಿಲ್ 2020ರಂದು ತನ್ನ ಫೇಸ್‌ಬುಕ್ ಪುಟದಲ್ಲಿ ಅರೇಬಿಕ್‌ನಲ್ಲಿ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದು, “ದೈನಂದಿನ” ಏಷಿಯಾ ಚಾನೆಲ್‌ನಲ್ಲಿ “ಕಾಫ್ ವಾ ಮುಕ್ಲಾಬ್” ಎಂಬ ಕಾರ್ಯಕ್ರಮವನ್ನು ಸಾದ್ ಅಲ್-ಜೈದಿ ನಿರ್ದೇಶಿಸಿದ್ದಾರೆ ಮತ್ತು ಮುಸ್ತಫಾ ಅಲ್-ದಹಾಬಿ ಅವರು ಮೇಲ್ವಿಚಾರಣೆ ಮಾಡಿದ್ದಾರೆ. ಈ ಸಂಚಿಕೆಯನ್ನು ವೀಕ್ಷಿಸಲು ಲಿಂಕ್ ಅನ್ನು ಕ್ಲಿಕ್ ಮಾಡಿ” ಎಂಬ ಸಂದೇಶದೊಂದಿಗೆ ಹಂಚಿಕೊಂಡಿದ್ದಾರೆ.

ಇದರ ಆಧಾರದ ಮೇಲೆ YouTube ನಲ್ಲಿ ನಿರ್ದಿಷ್ಟ ಕೀವರ್ಡ್‌ಗಳೊಂದಿಗೆ ವೀಡಿಯೊವನ್ನು ಹುಡುಕಿದಾಗ 2020 ರಲ್ಲಿ ಅಪ್‌ಲೋಡ್ ಮಾಡಿದ ಪೂರ್ಣ ಸಂಚಿಕೆಯನ್ನು ಅರೇಬಿಕ್‌ ಶೀರ್ಷಿಕೆಯೊಂದಿಗೆ “ಅಮಾನಿ ಅಲಾ ಮತ್ತು ಶೇಖ್ ( ತಮಾಷೆ ಕಾರ್ಯಕ್ರಮ) ಎಂದು ಪೋಸ್ಟ್‌ ಮಾಡಿರುವುದು ಕಂಡು ಬಂದಿದೆ.
ಇದರ ಪೂರ್ಣ ವೀಡಿಯೊದಲ್ಲಿ, ಮೌಲವಿ ವೇಷ ಧರಿಸಿರುವ ಫಹಾದ್‌ಗೆ ಕಪಾಳಮೋಕ್ಷ ಮಾಡಿದ ನಂತರ ಇದು ತಮಾಷೆಗಾಗಿ ಮಾಡಿದ್ದು ಎಂದು ಹೇಳುತ್ತಾರೆ ಮತ್ತು ಫಹಾದ್ ತಾನು ಧರಿಸಿ ಮೌಲವಿ ವೇಷವನ್ನು ತೆಗೆದುಹಾಕಿದ ಬಳಿಕ ಅಲಾ ಅವನನ್ನು ಹೊಡೆಯುವುದನ್ನು ನಿಲ್ಲಿಸಿ, ಶಾಂತವಾಗಿ ಮತ್ತು ಶೋನಲ್ಲಿ ಭಾಗವಹಿಸುವುದನ್ನು ಮುಂದುವರಿಸುತ್ತಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಇದು ಇರಾಕಿನ ಪ್ರ್ಯಾಂಕ್‌ ಶೋ ವೊಂದರ ದೃಶ್ಯಗಳಾಗಿದ್ದು, ತಮಾಷೆಗಾಗಿ ಮಾಡಲಾಗಿದೆ ಮತ್ತು ಇದು ಲೆಬನಾನಿನಲ್ಲಿ ನಡೆದಿದ್ದಲ್ಲ ಎಂಬುದು ಸಾಬೀತಾಗಿದೆ.


 

ಇದನ್ನು ಓದಿದ್ದೀರಾ? Fact Check | ಗೇಮಿಂಗ್ ವಿಡಿಯೋವನ್ನು ತೇಜಸ್ ವಿಮಾನದ ದೃಶ್ಯ ಎಂದು ಹಂಚಿಕೆ

 


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *