Fact Check : ಭವಿಶ್ ಅಗರ್ವಾಲ್- ಕುನಾಲ್ ಕಮ್ರಾ ನಡುವಿನ ವಿವಾದದ ಹಿನ್ನೆಲೆಯಲ್ಲಿ ಶೋರೂಮ್‌ಗೆ ಬೆಂಕಿ ಹಚ್ಚಲಾಗಿದೆ ಎಂಬ ವೀಡಿಯೊ ಹಳೆಯದು

ಓಲಾ ಸಿಇಒ ಭವಿಶ್ ಅಗರ್ವಾಲ್ ಮತ್ತು ಹಾಸ್ಯಗಾರ ಕುನಾಲ್ ಕಮ್ರಾ ನಡುವೆ ಟ್ವಿಟರ್‌ನಲ್ಲಿ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ , ಓಲಾದ ಅತೃಪ್ತ ಗ್ರಾಹಕರು ಓಲಾ ಶೋರೂಮ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಕರ್ನಾಟಕದಲ್ಲಿ ಓಲಾದ ಅತೃಪ್ತ ಗ್ರಾಹಕರು ಓಲಾ ಶೋರೂಮ್‌ಗೆ ಬೆಂಕಿ ಹಚ್ಚಿದ್ದಾರೆ, ಕಾರಣವೆಂದರೆ ಕಂಪನಿಯು ತಮ್ಮ ವಾಹನಗಳಿಗೆ ತಿಂಗಳುಗಟ್ಟಲೆ ಸೇವೆ ಸಲ್ಲಿಸುವಲ್ಲಿ ವಿಫಲವಾಗಿದೆ. ಇದರ ಮಧ್ಯೆ, ಭವಿಶ್ ಅಗರ್ವಾಲ್ ಅವರು ಸಾರ್ವಜನಿಕವಾಗಿ ಸತ್ಯವನ್ನು ಬಹಿರಂಗಪಡಿಸಿ, ಕುನಾಲ್ ಕಮ್ರಾರನ್ನು ಅಪಹಾಸ್ಯ ಮಾಡಿದ್ದಾರೆ. ಇದು ಅವರ ದುರಹಂಕಾರದ ಮಟ್ಟವನ್ನು ತೋರಿಸುತ್ತದೆ,” ಎಂದು ಬರೆದು ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸೇವಾ ಕೇಂದ್ರದ ಸ್ಥಿತಿಯನ್ನು ಕುನಾಲ್ ಬಹಿರಂಗಪಡಿಸಿದಾಗ, ಭವಿಶ್ ಅಗರ್ವಾಲ್ ಮತ್ತು ಕುನಾಲ್ ಕಮ್ರಾ ತೀವ್ರ ವಾಗ್ವಾದಕ್ಕಿಳಿದರು. ಕಮ್ರಾ ತನ್ನ ಅಧಿಕೃತ ಖಾತೆಯಲ್ಲಿ ಓಲಾ ಸೇವಾ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯ ಇವಿ ಸ್ಕೂಟರ್‌ಗಳನ್ನು ನಿಲ್ಲಿಸಿದ್ದಾರೆ ಎಂದು ಚಿತ್ರವನ್ನು ಹಂಚಿಕೊಂಡಾಗ ವಾದವಿವಾದ ಪ್ರಾರಂಭವಾಗಿದೆ ಎಂದು ವರದಿಯಾಗಿದೆ. ಕಂಪನಿಯ ವಿರುದ್ಧ ವಿಮರ್ಶಾತ್ಮಕವಾದ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಕಮ್ರಾ ಹಣ ತೆಗೆದುಕೊಂಡಿದ್ದಾನೆ ಎಂದು ಆರೋಪಿಸಿ ಭವಿಶ್ ಅಗರ್ವಾಲ್ ಅವರನ್ನು ಕೆರಳಿಸಿದೆ.  ಎರಡೂ ಕಡೆಯವರು ಯೋಗ್ಯವಾದ ವಾದಗಳನ್ನು ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಒಪ್ಪಿಕೊಂಡರೂ, ಅನೇಕರು ಅಗರ್ವಾಲ್ ಅವರ ಭಾಷೆಯನ್ನು ವಿರೋಧಿಸಿ, ಅವರ ಭಾಷೆ ಸಾರ್ವಜನಿಕ ವ್ಯಕ್ತಿತ್ವಕ್ಕೆ ಅನರ್ಹವೆಂದು ಕರೆದಿದ್ದಾರೆ.

ಫ್ಯಾಕ್ಟ್‌ ಚೆಕ್‌ :

ಈ ವೈರಲ್‌ ವೀಡಿಯೊದ ಕುರಿತು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು, ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2024ರ ಸೆಪ್ಟೆಂಬರ್ 11ರಂದು ಇಂಡಿಯನ್ ಸ್ಟಾರ್ಟ್‌ಅಪ್ ನ್ಯೂಸ್‌ ಹಂಚಿಕೊಂಡ ಎಕ್ಸ್‌ನ ವೀಡಿಯೊವೊಂದು ಲಭಿಸಿದೆ. 26 ವರ್ಷದ ಮೊಹಮ್ಮದ್ ನದೀಮ್ ಎಂಬ ವ್ಯಕ್ತಿ ಉತ್ತರ ಕರ್ನಾಟಕದ ಕಲಬುರಗಿಯಲ್ಲಿ ಓಲಾ ಎಲೆಕ್ಟ್ರಿಕ್ ಶೋರೂಮ್‌ಗೆ ಸೆಪ್ಟೆಂಬರ್ 10 ರಂದು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ನ ಬಗೆಹರಿಯದ ಸಮಸ್ಯೆಗಳಿಂದಾಗಿ ಹತಾಶೆಯಿಂದ ಬೆಂಕಿ ಹಚ್ಚಿದ್ದಾನೆ ಎಂದು ಈ ಎಕ್ಸ್‌ನ ವೀಡಿಯೊದಿಂದ ಸ್ಪಷ್ಟವಾಗಿ ತಿಳಿದುಬಂದಿದೆ.

2024 ರ ಸೆಪ್ಟೆಂಬರ್ 12ರಂದು ಟೈಮ್ಸ್ ಆಫ್ ಇಂಡಿಯಾದ ಟ್ವೀಟ್‌ನಲ್ಲಿ,  ಅದೇ ವೀಡಿಯೊವನ್ನು ಹಂಚಿಕೊಂಡಿದೆ.  ಈ ವೈರಲ್ ವೀಡಿಯೊವನ್ನು ಅಗರ್ವಾಲ್-ಕಮ್ರಾ ವಿವಾದಕ್ಕಿಂತ ಮುಂಚಿತವಾಗಿಯೇ ಹಂಚಿಕೊಳ್ಳಲಾಗಿದೆ ಎಂದು ಖಚಿತಪಡಿಸುತ್ತದೆ.

ಈ ವೈರಲ್‌ ಘಟನೆಯ ಕುರಿತು ಮತ್ತಷ್ಟು ಹುಡುಕಿದಾಗ, ಅನೇಕ ಸುದ್ದಿ ವರದಿಗಳು ಲಭಿಸಿವೆ. “ಕರ್ನಾಟಕದ ಕಲಬುರಗಿಯಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ಗ್ರಾಹಕನು ತಾನು ಹೊಸದಾಗಿ ಖರೀದಿಸಿದ ಎಲೆಕ್ಟ್ರಿಕ್ ವಾಹನಕ್ಕೆ ಸರಿಯಾದ ಗ್ರಾಹಕ ಬೆಂಬಲ ಸಿಕ್ಕಿಲ್ಲ ಎಂದು ಆರೋಪಿಸಿ ಕುಪಿತಗೊಂಡು ಶೋರೂಮ್‌ಗೆ ಬೆಂಕಿ ಹಚ್ಚಿದ್ದಾನೆ. 26 ವರ್ಷದ ಮೊಹಮ್ಮದ್ ನದೀಮ್ ಎಂಬ ಗ್ರಾಹಕ ಮಂಗಳವಾರ ಶೋರೂಂನಲ್ಲಿ ಗ್ರಾಹಕ ಬೆಂಬಲ ಕಾರ್ಯನಿರ್ವಾಹಕರೊಂದಿಗೆ ತೀವ್ರ ವಾಗ್ವಾದ ನಡೆಸಿ, ಪೆಟ್ರೋಲ್ ಸುರಿದು ಶೋರೂಂಗೆ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರು ವಾಹನಗಳು ಮತ್ತು ಕಂಪ್ಯೂಟರ್ ವ್ಯವಸ್ಥೆಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ ”ಎಂದು  2024ರ ಸೆಪ್ಟೆಂಬರ್ 11 ರಂದು ಪ್ರಕಟವಾದ ಇಂಡಿಯಾ ಟುಡೇ ವರದಿಯಲ್ಲಿ ಉಲ್ಲೇಖವಾಗಿದೆ.

 

 

ಒಟ್ಟಾರೆಯಾಗಿ ಹೇಳುವುದಾದರೆ, ಕಲಬುರ್ಗಿಯ ಒಬ್ಬ ಓಲಾ ಸ್ಕೂಟರ್‌ನ ಗ್ರಾಹಕನು ತನಗೆ ಗ್ರಾಹಕ ಬೆಂಬಲ ಸಿಕ್ಕಿಲ್ಲ ಎಂದು ಶೋರೂಮ್‌ಗೆ ಬೆಂಕಿ ಹಚ್ಚಿರುವ ವೀಡಿಯೊವನ್ನು, ಭವಿಶ್ ಅಗರ್ವಾಲ್ ಮತ್ತು ಕುನಾಲ್ ಕಮ್ರಾ ನಡುವೆ ಟ್ವಿಟರ್‌ನಲ್ಲಿ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ ಅತೃಪ್ತ ಗ್ರಾಹಕರು ಕರ್ನಾಟಕದಲ್ಲಿ ಓಲಾ ಶೋರೂಮ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ವೀಡಿಯೊಗಳನ್ನು ಹಂಚಿಕೊಳ್ಳದೇ, ವೀಡಿಯೊಗಳ ಕುರಿತು ಸತ್ಯಾಂಶಗಳನ್ನು ತಿಳಿದುಕೊಂಡು ಹಂಚಿಕೊಳ್ಳುವುದು ಉತ್ತಮ.


ಇದನ್ನು ಓದಿ :

Fact Check : ಯುಪಿ CMO ಮೇಲೆ ದಾಳಿ ಎಂದು ನೋಯ್ಡಾದ ಬಿಜೆಪಿ ನಾಯಕನನ್ನು ಥಳಿಸಲಾದ ವೀಡಿಯೊ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *