Fact Check |‌ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮುಖಂಡನ ಮೇಲೆ ಹಿಂದೂಗಳ ಗುಂಪಿನಿಂದ ದಾಳಿ ಎಂಬುದು ಸುಳ್ಳು

ಇಮಾಮ್ ಅಂದ್ರೆ ಮುಸ್ಲಿಂ ಧಾರ್ಮಿಕ ಮುಖಂಡ ತನ್ನ ವಿದ್ಯಾರ್ಥಿಗಳಿಗೆ ಕುರ್‌ಆನ್‌ ಪಟ್ಟಣವನ್ನು ಕಲಿಸುತ್ತಿದ್ದಾಗ ಅಲ್ಲಿಗೆ ಬಂದಂತಹ ಹಿಂದೂಗಳ ಗುಂಪು ಈತನ ಮೇಲೆ ಗುಂಡು ಹಾರಿಸಿ ಕೊಲ್ಲಲು ಯತ್ನಿಸಿದೆ. ಆದರೆ ಅದೃಷ್ಟವಶತ್ ಆತ ಸಣ್ಣ ಪುಟ್ಟ ಗಾಯಗಳೊಂದಿಗೆ ಬದುಕುಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ ಎಂದು ಸುದ್ದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್ ಪೋಸ್ಟ್‌ನಲ್ಲಿನ ಫೋಟೋದಲ್ಲಿ ಗಡ್ಡದಾರಿ ವ್ಯಕ್ತಿಯೊಬ್ಬ ತಲೆಗೆ ಬ್ಯಾಂಡೇಜ್ ಸುತ್ತಿ, ಆಮ್ಲಜನಕದ ಮಾಸ್ಕ್‌ನೊಂದಿಗೆ ವಿಶ್ರಾಂತಿಯನ್ನು ಪಡೆಯುತ್ತಿರುವುದು ಕಂಡುಬಂದಿದೆ. ಈ ಫೋಟೋವನ್ನು ನೋಡಿದ ಸಾಕಷ್ಟು ಮಂದಿ ಘಟನೆಯ ನೈಜಂಶವನ್ನು ತಿಳಿಯದೆ ವೈರಲ್ ಪೋಸ್ಟ್‌ನ ಟಿಪ್ಪಣಿಯನ್ನೇ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಹಲವು ರೀತಿಯ ಗೊಂದಲಗಳು ಕೂಡ ಮೂಡುತ್ತಿವೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್‌ನ ಸತ್ಯಾಸತ್ಯತೆ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆಯನ್ನು ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆ. ಈ ವೇಳೆ ಈ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ ಎಂಬುದು ತಿಳಿದು ಬಂದಿದೆ. ಇದಕ್ಕೆ ಪೂರಕ ಎಂಬಂತೆ ಮೀರತ್ ಪೊಲೀಸರ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್‌ವೊಂದನ್ನು ನಾವು ಕಂಡುಕೊಂಡಿದ್ದೇವೆ. ಈ ಪೋಸ್ಟ್‌ನಲ್ಲಿ ಘಟನೆಯು ಲಿಸಾರಿ ಗೇಟ್‌ ಪೊಲೀಸ್ ಠಾಣೆ ವ್ಯಾಪ್ತಿಯ ಸಮರ್ ಗಾರ್ಡನ್ ಪ್ರದೇಶದಲ್ಲಿ ಅಕ್ಟೋಬರ್ 6ರಂದು ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಈ ಘಟನೆ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೋಸ್ಟ್ ಕೂಡ ಕಂಡು ಬಂದಿದೆ. ಅದರ ಪ್ರಕಾರ ಸಂತ್ರಸ್ತ ನಯೀಮ್‌ ಮತ್ತು ಆರೋಪಿ ಸರ್ತಾಜ್ ಇಬ್ಬರು ಮುಸ್ಲಿಂ ಸಮುದಾಯದಿಂದ ಬಂದವರು. ಆರೋಪಿ ವಿರುದ್ಧ ಲಿಸಾರಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆ ಬಗ್ಗೆ ತನಿಖೆಯನ್ನು ಕೂಡ ನಡೆಸಲಾಗಿದೆ. ಮಾನಸಿಕ ಅಸ್ವಸ್ಥನಾಗಿರುವ ಸರ್ತಾಜ್ ವೈಯಕ್ತಿಕ ದ್ವೇಷದ ಕಾರಣ ಮಸೀದಿಯಲ್ಲಿ ಮೌಲಾನ ನಯೀಮ್‌ ಎಂಬಾತನಿಗೆ ಗುಂಡು ಹಾರಿಸಿದ್ದಾನೆ ಎಂದು ಮಿರತ್‌ ಪೊಲೀಸರು ತಮ್ಮ ಅಧಿಕೃತ ಹೇಳಿಕೆಯಲ್ಲಿ ಕೂಡ ದೃಢಪಡಿಸಿದ್ದಾರೆ. ಸಂತ್ರಸ್ತನನ್ನು ಆಸ್ಪತ್ರೆಗೆ ದಾಖಲಾಗಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಇನ್ನು ಈ ಘಟನೆಯ ಸಂಬಂಧ ಅಕ್ಟೋಬರ್ 6 ರಂದು ಟೈಮ್ಸ್ ಆಫ್ ಇಂಡಿಯಾ ಎಸ್‌ಎಸ್‌ಪಿ ಮೀರತ್ ವಿಪಿನ್ ತಡವನ್ನು ಉಲ್ಲೇಖಿಸಿ ವರದಿ ಮಾಡಿರುವುದು ಕಂಡು ಬಂದಿದೆ. ಈ ವರದಿಯಲ್ಲಿ “ಕೆಲವು ದಿನಗಳ ಹಿಂದೆ ನಿಂದನಾತ್ಮಕ ಘಟನೆಯ ನಂತರ ನಯೀಮ್‌ ಮತ್ತು ಸರ್ತಾಜ್‌ ನಡುವೆ ಸ್ವಲ್ಪ ವಿಷಮ ಪರಿಸ್ಥಿತಿ ಇತ್ತು, ಇನ್ನು ನಯೀಮ್‌ ಕೂಡ ಈ ಹಿಂದೆ ಸರ್ತಾಜ್‌ಗೆ ನೆನಪಿನ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡಿದ್ದ ಎಂಬುದು ತಿಳಿದು ಬಂದಿದೆ. ಈ ವಿಚಾರದಲ್ಲೇ ಗಲಾಟೆ ನಡೆದಿದ್ದು, ಭಾನುವಾರ ಮಸೀದಿಗೆ ಬಂದ ಸರ್ತಾಜ್‌ ನಯೀಮ್‌ ಮೇಲೆ ಗುಂಡು ಹಾರಿಸಿ ಬಂದೂಕನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಉಲ್ಲೇಖಿಸಲಾಗಿದೆ

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಮುಸ್ಲಿಂ ಧಾರ್ಮಿಕ ಮುಖಂಡರೊಬ್ಬರು ತನ್ನ ವಿದ್ಯಾರ್ಥಿಗಳಿಗೆ ಕುರ್‌ಆನ್‌ ಪಠಣೆಯನ್ನು ಕಲಿಸುತ್ತಿರುವ ವೇಳೆ ಹಿಂದುಗಳ ಗುಂಪು ಗುಂಡುಹರಿಸಿ ಆತನನ್ನು ಕೊಲ್ಲಲು ಯತ್ನಿಸಿದೆ ಎಂಬುದು ಸುಳ್ಳು. ಇಬ್ಬರೂ ಕೂಡ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಪೊಲೀಸರಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ. ಹಾಗಾಗಿ ವೈರಲ್ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ.


ಇದನ್ನೂ ಓದಿ : Fact Check: ಮಯನ್ಮಾರ್‌ನ 2022ರ ಘಟನೆಯನ್ನು ಮಣಿಪುರದಲ್ಲಿ ಹಿಂದೂ ಹುಡುಗಿಯನ್ನು ಕೊಂದುಹಾಕಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *