Fact Check: ಮಯನ್ಮಾರ್‌ನ 2022ರ ಘಟನೆಯನ್ನು ಮಣಿಪುರದಲ್ಲಿ ಹಿಂದೂ ಹುಡುಗಿಯನ್ನು ಕೊಂದುಹಾಕಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ

ಭಾರತದ ಮಣಿಪುರದಲ್ಲಿ ಹಿಂದೂ ಹುಡುಗಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಕೊಂದುಹಾಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ದೃಶ್ಯಗಳನ್ನು ಮಣಿಪುರದ ಆಂತರಿಕ ಬಿಕ್ಕಟಿಗೆ ಹೋಲಿಸಿ “‘ಸುಪ್ರೀಂ ಕೋರ್ಟ್‌ಗೆ ಮಣಿಪುರ ಸಂಘರ್ಷದ ಪುರಾವೆ ಬೇಕಾಗಿದೆ, ಆದ್ದರಿಂದ ಈ ವೀಡಿಯೊವನ್ನು 48 ಗಂಟೆಗಳ ಒಳಗೆ ವೈರಲ್ ಮಾಡಲು ನಾನು ನಿಮ್ಮನ್ನು ವಿನಂತಿಸುತ್ತೇನೆ, ದಯವಿಟ್ಟು ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ.” ಎಂಬ ಸಂದೇಶದೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. 

ವಾಟ್ಸಾಪ್‌ನಲ್ಲಿ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು. ಸತ್ಯ ತಿಳಿಯದೆ ಅನೇಕರು ಈ ವೀಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಇದೇ ವೀಡಿಯೋವನ್ನು ಮಣಿಪುರದ ಕ್ರಿಶ್ಚಿಯನ್ ಹುಡುಗಿಯನ್ನು ಅಲ್ಲಿನ ಮತಾಂಧ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಕೊಂದುಹಾಕಿದ್ದಾರೆ ಎಂದು ಸಹ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್:

ಈ ಘಟನೆ 2022ರಲ್ಲಿ ಮಯನ್ಮರ್‌ನಲ್ಲಿ ನಡೆದಿದ್ದು, ಈ ವೀಡಿಯೋವಿಗೂ ಮಣಿಪುರ ಅಥವಾ ಭಾರತದ ಕ್ರಿಶ್ಚಿಯನ್/ಹಿಂದೂ ಹುಡುಗಿಗೆ ಯಾವುದೇ ಸಂಬಂಧವಿಲ್ಲ. ವೀಡಿಯೊದಲ್ಲಿರುವ 25 ವರ್ಷದ ಹುಡುಗಿಯನ್ನು ಆಯೆ ಮಾರ್ ತುನ್ ಎಂದು ಗುರುತಿಸಲಾಗಿದೆ. ಮ್ಯಾನ್ಮಾರ್ ಮಿಲಿಟರಿಗೆ ಬಂಡುಕೋರರಾದ “ಪೀಪಲ್ಸ್‌ ಡಿಫೆನ್ಸ್‌ ಫೋರ್ಸ್‌” ವಿರುದ್ಧ ಮಾಹಿತಿ ನೀಡುತ್ತಿದ್ದಳು ಎಂಬ ಕಾರಣಕ್ಕಾಗಿ ಕೊಂದು ಹಾಕಲಾಗಿದೆ.  

ಈ ಘಟನೆಯ ಕುರಿತು ನಾವು ಹೆಚ್ಚಿನ ಮಾಹಿತಿ ತಿಳಿಯಲು Google Chrome InVID ಪರಿಕರವನ್ನು ಬಳಸಿಕೊಂಡು, ವೀಡಿಯೊವನ್ನು ಹಲವಾರು ಕೀಫ್ರೇಮ್‌ಗಳಾಗಿ ವಿಭಜಿಸಿದ್ದೇವೆ ಮತ್ತು ನಂತರ ವಿವಿಧ ಸರ್ಚ್ ಇಂಜಿನ್‌ಗಳ ಮೂಲಕ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ.

ಹುಡುಕಾಟದಿಂದಾಗಿ, ಈ ಘಟನೆ ಡಿಸೆಂಬರ್ 2022 ರಿಂದ ನಡೆದಿರುವ ಕುರಿತು ಹಲವು ಬರ್ಮೀಸ್ ವರದಿಗಳು ಮತ್ತು ವೀಡಿಯೋಗಳು ಲಭ್ಯವಾಗಿವೆ. ಸುದ್ದಿವಾಹಿನಿ ಇಲೆವೆನ್ ಮ್ಯಾನ್ಮಾರ್ ಡಿಸೆಂಬರ್ 3, 2022 ರಂದು ಈ ಘಟನೆಯ ಕುರಿತು ಪೋಸ್ಟ್ ಅನ್ನು ಪ್ರಕಟಿಸಿದೆ. ‘ಯುವತಿಯೊಬ್ಬಳನ್ನು ಹೊಡೆದು, ಗುಂಡಿಕ್ಕಿ ಕೊಲ್ಲಲಾಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ವೀಡಿಯೊದ ಪ್ರಕಾರ ಅವಳು “ಮಿಲಿಟರಿ ಮಾಹಿತಿದಾರೆ” ಎಂದು ತಪ್ಪೊಪ್ಪಿಗೆಯನ್ನು ಮಾಡಲು ಒತ್ತಾಯಿಸಲಾಯಿತು’, ಎಂದು ಮ್ಯಾನ್ಮಾರ್‌ನಲ್ಲಿ ಘಟನೆ ನಡೆದಿದೆ ಎಂದು ಸುದ್ದಿ ಪೋರ್ಟಲ್ ವರದಿ ಮಾಡಿದೆ.

“ವೀಡಿಯೊ ಕ್ಲಿಪ್ ಕೇವಲ 3 ನಿಮಿಷಗಳಿಗಿಂತ ಹೆಚ್ಚು ಉದ್ದವಾಗಿದೆ ಮತ್ತು ಘಟನೆಯ ನಿಖರವಾದ ಸ್ಥಳವನ್ನು ಒಳಗೊಂಡಿಲ್ಲ ಆದರೆ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡವರು ಈ ಘಟನೆಯು ತಮುದಲ್ಲಿ ನಡೆದಿದೆ ಮತ್ತು ತಮು PDF (People Defense Force (ಜನರ ರಕ್ಷಣಾ ಪಡೆಗಳು)) ನಂ.4 ಬೆಟಾಲಿಯನ್‌ನಿಂದ ಮಾಡಲಾಗಿದೆ ಎಂದು ಬರೆದಿದ್ದಾರೆ. ಪ್ರಾಥಮಿಕ ವೀಡಿಯೊದ ಪ್ರಕಾರ, ಯುವತಿಯು ನಾನ್-CDM (ನಾಗರಿಕ ಅಸಹಕಾರ ಚಳುವಳಿ) ಶಿಕ್ಷಕಿಯಾಗಿದ್ದು, ಆಕೆಯ ಹೆಸರು ಮತ್ತು ಈ ಘಟನೆಯ ಸ್ಥಳವು ಇನ್ನೂ ತಿಳಿದುಬಂದಿಲ್ಲ. ಆಡಳಿತಾರೂಢ ಸೇನೆಗೆ ಮಾಹಿತಿ ನೀಡುವವರು (sic),” ಎಂದು ವರದಿ ಹೇಳಿದೆ.

ಇದರಿಂದ ಸೂಚನೆಯನ್ನು ತೆಗೆದುಕೊಂಡು, ನಾವು ಗೂಗಲ್ ಹುಡುಕಾಟದಲ್ಲಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, ಕೆಲವು ಸುದ್ದಿ ವರದಿಗಳನ್ನು ಕಂಡುಕೊಂಡಿದ್ದೇವೆ ಮತ್ತು ಮ್ಯಾನ್ಮಾರ್‌ನ ಸಾರ್ವಜನಿಕವಾಗಿ ಕಡ್ಡಾಯಗೊಳಿಸಲಾದ ರಾಷ್ಟ್ರೀಯ ಏಕತೆ ಸರ್ಕಾರ (ಎನ್‌ಯುಜಿ) ಸಾಗಯಿಂಗ್ ಪ್ರದೇಶದ ತಮುವಿನ ಬೀದಿಯಲ್ಲಿ ಮಹಿಳೆಯ ಹತ್ಯೆಯನ್ನು ತನಿಖೆ ಮಾಡಲು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ. 

ಹೇಳಿಕೆಯನ್ನು ಬಿಡುಗಡೆ ಮಾಡಿದ ಎನ್‌ಯುಜಿ, “ಈ ಘಟನೆಯು ಮಿಲಿಟರಿ ನೀತಿ ಮತ್ತು ನಿಯಮಗಳ ಅಡಿಯಲ್ಲಿ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲದ ಕಾರಣ, ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗುವುದು ಮತ್ತು ಅದರಲ್ಲಿ ಭಾಗಿಯಾಗಿರುವವರ ವಿರುದ್ಧ ಪರಿಣಾಮಕಾರಿಯಾಗಿ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.

ಮ್ಯಾನ್ಮಾರ್ ನೌ ವರದಿಯ ಪ್ರಕಾರ, ಎನ್‌ಯುಜಿಯ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ನೈಂಗ್ ಹ್ಟೂ ಆಂಗ್ ಅವರು ಜೂನ್‌ನಲ್ಲಿ ತಮು ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ ಮತ್ತು ಕೆಲವು ಆರೋಪಿಗಳು ಆಂಟಿ-ಜುಂಟಾ ಪೀಪಲ್ಸ್ ಡಿಫೆನ್ಸ್ ಫೋರ್ಸ್ (PDF) ಜಿಲ್ಲಾ ಘಟಕ ತಮುವಿನ 4 ನೇ ಬೆಟಾಲಿಯನ್‌ಗೆ ಸೇರಿದವರು ಎಂದು ಹೇಳಿದರು.

ಆದ್ದರಿಂದ ಮಯನ್ಮಾರ್‌ ನಲ್ಲಿ 2022ರಲ್ಲಿ ನಡೆದ ಘಟನೆಯನ್ನು ಮಣಿಪುರದಲ್ಲಿ ಹಿಂದೂ ಹುಡುಗಿಯನ್ನು ಕೊಂದುಹಾಕಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಯಾವುದೇ ವಾಟ್ಸಾಪ್‌ ಫಾರ್ವರ್ಡ್‌ ಸಂದೇಶಗಳು ಬಂದಾಗ ಅವುಗಳನ್ನು ನಂಬುವ ಮೊದಲು ಪರಿಶೀಲಿಸಿ, ಬಹುತೇಕ ಬಾರಿ ಫಾರ್ವರ್ಡ್‌ ಸಂದೇಶಗಳು ನಕಲಿ ಮತ್ತು ಸುಳ್ಳು ಮಾಹಿತಿಗಳಿಂದ ಕೂಡಿರುತ್ತವೆ.


ಇದನ್ನು ಓದಿ: ಪೆರಿಯಾರ್ ತನ್ನ ಅನುಯಾಯಿಯನ್ನು ಮದುವೆಯಾದರೆ ಹೊರತು ಮಗಳನ್ನಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *