Fact Check | ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ರೋಹಿಂಗ್ಯಾ ಮುಸ್ಲಿಮರ ಗುಂಪನ್ನು ಬಂಧಿಸಲಾಗಿದೆ ಎಂಬುದು ಸುಳ್ಳು

“ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ರೋಹಿಂಗ್ಯಾ ಮುಸ್ಲಿಮರು ಹಾಗೂ ಮುಸ್ಲಿಂ ಬಾಲಕರನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ತಡೆ ಹಿಡಿದು ಅದರಲ್ಲಿದ್ದ ರೋಹಿಂಗ್ಯಾ ಮುಸಲ್ಮಾನರನ್ನು ಬಂಧಿಸಿ ಟ್ರಕ್‌ ವಶಪಡಿಸಿಕೊಳ್ಳುವ ಮೂಲಕ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಪೊಲೀಸರು ಪ್ರಮುಖ ಒಳನುಸುಳುವಿಕೆ ಘಟನೆಯನ್ನು ವಿಫಲಗೊಳಿಸಿದ್ದಾರೆ” ಎಂದು ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವೀಡಿಯೊ ಕ್ಲಿಪ್‌ನಲ್ಲಿ, ಹಲವಾರು ಮುಸ್ಲಿಂ ಬಾಲಕರು ಪೊಲೀಸರ ಸಮ್ಮುಖದಲ್ಲಿ ಟ್ರಕ್‌ನಿಂದ ಹೊರಬರುವುದನ್ನು ಕಾಣಬಹುದಾಗಿದೆ. ಹಾಗಾಗಿ ವಿಡಿಯೋ ಕೂಡ ವೈರಲ್‌ ಆಗಿದೆ.

ಈ ವಿಡಿಯೋವನ್ನು ನೋಡಿದ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದ ಬಳಕೆದಾರರು ವೈರಲ್‌ ವಿಡಿಯೋ ನಿಜವೆಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹಲವರು ರೋಹಿಂಗ್ಯಾ ಮುಸಲ್ಮಾನರ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿ ವಿವಿಧ ಬರಹಗಳನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಇಡೀ ಮುಸ್ಲಿಂ ಸಮುದಾಯವನ್ನೇ ನಿಂದಿಸುತ್ತಿದ್ದಾರೆ. ಹೀಗೆ ಕೋಮು ದ್ವೇಷಕ್ಕೆ ಕಾರಣವಾಗಿರುವ ವೈರಲ್‌ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಪಂಜಾಬ್ ಕೇಸರಿ ಟಿವಿಯ ಅಧಿಕೃತ YouTube ಚಾನಲ್‌ನಲ್ಲಿ ವೈರಲ್‌ ವಿಡಿಯೋಗೆ ಸಂಬಂಧಿಸಿದ ವರದಿಯೊಂದು ಕಂಡು ಬಂದಿದೆ.

ಇದರ ಪ್ರಕಾರ  “ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮಕ್ಕಳ ಕಳ್ಳ ಸಾಗಾಟದ ಅನುಮಾನದ ಮೇಲೆ ಪೊಲೀಸರು ಟ್ರಕ್‌ ಅನ್ನು ನಿಲ್ಲಿಸಿದ್ದಾರೆ. ಇದರಲ್ಲಿ 63 ಮಕ್ಕಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ವಿಚಾರಿಸಿದಾಗ, ಇವರು ಬಿಹಾರ ಮತ್ತು ಪ.ಬಂಗಾಳದಿಂದ ಧಾರ್ಮಿಕ ಶಿಕ್ಷಣ ಪಡೆಯಲು ಮಹಾರಾಷ್ಟ್ರಕ್ಕೆ ಬಂದಿದ್ದಾರೆ ಎಂಬುದು ತಿಳಿದು ಬಂದಿದೆ” ಎಂದು ಉಲ್ಲೇಖಿಸಲಾಗಿತ್ತು. ಈ ಕುರಿತು ಹಲವು ವರದಿಗಳಲ್ಲೂ ಇದೇ ಅಂಶ ಉಲ್ಲೇಖವಾಗಿದ್ದು, ಪೊಲೀಸ್‌ ಇಲಾಖೆ ನೀಡಿರುವ ಸ್ಪಷ್ಟನೆಗಳು ಮತ್ತು ಅಧಿಕಾರಿಗಳು ಮಾಧ್ಯಮಕ್ಕೆ ನೀಡಿದ ಮಾಹಿತಿಗಳಲ್ಲೂ ಕೂಡ ಇವರು ರೋಹಿಂಗ್ಯಾ ಮುಸಲ್ಮಾನರಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಂತೆ  ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ರೋಹಿಂಗ್ಯಾ ಮುಸ್ಲಿಮರನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ತಡೆ ಹಿಡಿದು ಅದರಲ್ಲಿದ್ದ ರೋಹಿಂಗ್ಯಾ ಮುಸಲ್ಮಾನರನ್ನು ಬಂಧಿಸಲಾಗಿದೆ ಎಂಬುದು ಸುಳ್ಳು ಎಂಬುದು ಹಲವು ವರದಿಗಳಿಂದ ಸಾಬೀತಾಗಿದೆ. ಹಾಗಾಗಿ ಇಂತಹ ವರದಿಗಳು ಕಂಡು ಬಂದರೆ ಅವುಗಳನ್ನು ಪರಿಶೀಲಿಸದೆ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check | ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *