Fact Check | ಇದು 2001ರಲ್ಲಿ ಅಮೆರಿಕ ಮೇಲೆ ನಡೆದ ದಾಳಿಯ ವಿಡಿಯೋ ಇಸ್ರೇಲ್‌ನ ಮೇಲಿನ ದಾಳಿಯಲ್ಲ

ಇಸ್ರೇಲ್ ಮೇಲೆ ಇರಾನ್ ಇತ್ತೀಚೆಗೆ ನಡೆಸಿದ ದಾಳಿಯ ನಂತರ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಬಹುಮಹಡಿ ಕಟ್ಟಡದಲ್ಲಿ ಸ್ಫೋಟದ ನಂತರ ಜನರು ಓಡುತ್ತಿರುವುದನ್ನು ಕಾಣಬಹುದು. ಕೆಲವು ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದು, ಇದನ್ನು ಇಸ್ರೇಲ್‌ನ ಮೇಲೆ ಇರಾನ್‌ ನಡೆಸಿದ ದಾಳಿ ಎಂದು ಉಲ್ಲೇಖಿಸುತ್ತಿದ್ದಾರೆ. ಇದನ್ನು ಹಲವು ಜನ ವಿವಿಧ ಬರಹಗಳೊಂದಿಗೆ ಕೂಡ ಹಂಚಿಕೊಂಡಿರುವುದು ಕಂಡು ಬಂದಿದೆ.

ಹೀಗೆ ಹಲವು ಟಿಪ್ಪಣಿಗಳಿಂದ ಕೂಡಿದ ವಿಡಿಯೋವನ್ನು ಸಾಕಷ್ಟು ಮಂದಿ ನಿಜವೆಂದು ಭಾವಿಸಿ ಈ ಯುದ್ಧದಲ್ಲಿ ಇರಾನ್‌ ಈ ಬಾರಿ ಮೇಲುಗೈ ಸಾಧಿಸಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಕೆಲವರು ಈ ವೈರಲ್‌ ವಿಡಿಯೋ ನಕಲಿ, ಇಸ್ರೇಲ್‌ ಮೇಲೆ ಇಷ್ಟು ದೊಡ್ಡ ಮಟ್ಟದ ದಾಳಿಯೇ ನಡೆದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ವೈರಲ್‌ ವಿಡಿಯೋ ಹಲವು ರೀತಿಯಾದ ಗೊಂದಲಗಳನ್ನು ಹುಟ್ಟು ಹಾಕಿದೆ. ಹಾಗಾಗಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ನಾವು ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್‌ ಆದ ಹಲವು ವಿಡಿಯೋ ಕ್ಲಿಪ್‌ಗಳನ್ನು makeagif ಹೆಸರಿನ ವೆಬ್‌ಸೈಟ್‌ನಲ್ಲಿ ಕಂಡುಕೊಂಡಿದ್ದೇವೆ. ಈ ವಿಡಿಯೋವನ್ನು 10 ವರ್ಷಗಳ ಹಿಂದೆ ಅಪ್‌ಲೋಡ್ ಮಾಡಲಾಗಿದೆ ಮತ್ತು ಫಾಕ್ಸ್ 5 ನ್ಯೂಸ್ ಲೋಗೋ ಹೊಂದಿದೆ.

ಹೀಗಾಗಿ ಇದರ ಆಧಾರದ ಮೇಲೆ ಇನ್ನಷ್ಟು ಕೀ ವರ್ಡ್‌ಗಳನ್ನು ಬಳಸಿಕೊಂಡು ನಾವು ಹುಡುಕಾಟವನ್ನು ನಡೆಸಿದಾಗ 22 ನವೆಂಬರ್ 2008 ರಂದು ನಾಥನ್ ಫ್ಲಾಚ್ ಯೂಟ್ಯೂಬ್ ಚಾನೆಲ್‌ನಲ್ಲಿ ಇದಕ್ಕೆ ಸಂಬಂಧಿಸಿದ ವೀಡಿಯೊ ಸುದ್ದಿಗಳನ್ನು ಕಂಡುಕೊಂಡಿದ್ದೇವೆ. ಇದು ಫಾಕ್ಸ್ 5 ನ್ಯೂಸ್ ಲೋಗೋವನ್ನು ಸಹ ಹೊಂದಿದೆ. ಇದರೊಂದಿಗೆ, ಈ ಕ್ಲಿಪ್ ಅನ್ನು 11 ಸೆಪ್ಟೆಂಬರ್ 2001 ರಂದು ಪ್ರಸಾರ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಈ ವೈರಲ್ ಕ್ಲಿಪ್‌ನ ಒಂದು ಭಾಗವನ್ನು CBS8.com ಗೆ ಅಪ್‌ಲೋಡ್ ಮಾಡಿದ ಸಾಕ್ಷ್ಯಚಿತ್ರದಲ್ಲಿಯೂ ಕಾಣಬಹುದು . ಈ ಸಾಕ್ಷ್ಯಚಿತ್ರವನ್ನು ಸೆಪ್ಟೆಂಬರ್ 11, 2001 ರಂದು ಅಮೆರಿಕದ ಮೇಲಿನ ದಾಳಿಯ ಮೇಲೆ ಮಾಡಲಾಗಿದೆ.

ಜಾರ್ಜ್ ಡಬ್ಲ್ಯೂ. ಬುಷ್ ಪ್ರೆಸಿಡೆಂಷಿಯಲ್‌ ಲೈಬ್ರರಿ ವೆಬ್‌ಸೈಟ್‌ನಲ್ಲಿ ನೀಡಿದ ಮಾಹಿತಿಯ ಪ್ರಕಾರ , ಸೆಪ್ಟೆಂಬರ್ 11, 2001 ರಂದು ನಡೆದ ದಾಳಿಯಲ್ಲಿ 2977 ಜನರು ಸಾವನ್ನಪ್ಪಿದರು. ಎರಡು ಜೆಟ್‌ಲೈನರ್‌ಗಳು ಯುಎಸ್‌ನ ವರ್ಲ್ಡ್ ಟ್ರೇಡ್ ಸೆಂಟರ್‌ನ ಟ್ವಿನ್ ಟವರ್‌ಗಳನ್ನು ಹೊಡೆದರೆ, ಇನ್ನೊಂದು ಪೆಂಟಗನ್‌ಗೆ ಅಪ್ಪಳಿಸಿತು ಎಂಬುದನ್ನು ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವೈರಲ್‌ ವಿಡಿಯೋಗೂ ಇಸ್ರೇಲ್‌-ಇರಾನ್‌ ಯುದ್ಧಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ. ವೈರಲ್‌ ವಿಡಿಯೋ 11 ಸೆಪ್ಟೆಂಬರ್‌ 2001ರಂದು ಅಮೆರಿಕದ ವರ್ಲ್ಡ್‌ ಟ್ರೇಡ್‌ ಸೆಂಟರ್‌ನ ಅವಳಿ ಕಟ್ಟಡದ ಮೇಲೆ ನಡೆದ ದಾಳಿಗೆ ಸಂಬಂಧಿಸಿದ್ದಾಗಿದೆ ಎಂಬುದು  ತಿಳಿದು ಬಂದಿದೆ. ಹಾಗಾಗಿ ವೈರಲ್‌ ವಿಡಿಯೋ ಸಂಪೂರ್ಣವಾಗಿ ಸುಳ್ಳು ನಿರೂಪಣೆಯಿಂದ ಕೂಡಿದೆ ಎಂಬುದು ಸಾಬೀತಾಗಿದೆ.


ಇದನ್ನೂ ಓದಿ : Fact Check | ವ್ಯಕ್ತಿಯೊಬ್ಬ ಹಿಂದೂಗಳಿಗೆ ಬಾಂಗ್ಲಾದೇಶ ತೊರೆಯಲು ಹೇಳಿದ್ದಾನೆ ಎಂಬುದು ಎಡಿಟೆಡ್‌ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *