Fact Check: ಇಂದು ಮಧ್ಯರಾತ್ರಿ 12:30 ರಿಂದ 3:30 ರ ನಡುವೆ ಅಪಾಯಕಾರಿ ಕಾಸ್ಮಿಕ್ ಕಿರಣಗಳು ಆಕಾಶದಲ್ಲಿ ಹಾದುಹೋಗುತ್ತವೆ ಎಂಬುದು ಹಳೆಯ ಸುಳ್ಳು

ಕೆಲವು ದಿನಗಳಿಂದ ವಾಟ್ಸಾಪ್‌ನಲ್ಲಿ ಆಡಿಯೋ ಮೆಸೇಜ್ ಒಂದು ಸಾಕಷ್ಟು ವೈರಲ್ ಆಗಿದ್ದು ಅದರಲ್ಲಿ, “ಇಂದು ಮಧ್ಯರಾತ್ರಿ 12:30 ರಿಂದ 3:30 ರ ನಡುವೆ ಅಪಾಯಕಾರಿ ಕಾಸ್ಮಿಕ್ ಕಿರಣಗಳು ಆಕಾಶದ ಮೂಲಕ ಹಾದುಹೋಗುತ್ತವೆ. ಈ ಸಮಯದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ. ನಿಮ್ಮೊಂದಿಗೆ ಫೋನ್ ಇಟ್ಟುಕೊಂಡು ಮಲಗಬೇಡಿ.” ಎಂಬ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ.

ಆಡಿಯೋ ಸಂದೇಶದ ಜೊತೆಗೆ ಸುದ್ದಿ ವರದಿಯೊಂದರ ಸ್ಕ್ರೀನ್ಶಾಟ್‌ ಸಹ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್:

ಈ ಮಾಹಿತಿ ಸಂಪೂರ್ಣ ಸುಳ್ಳು. ಇಂದು ಭೂಮಿಯ ಮೂಲಕ ಹಾದುಹೋಗುವ ಕಾಸ್ಮಿಕ್ ಕಿರಣಗಳು ನಿಮ್ಮ ಮೊಬೈಲ್ ಫೋನ್‌ಗೆ ಹಾನಿ ಮಾಡುತ್ತದೆ ಎಂಬ ಹೇಳಿಕೆಯು ಒಂದು ಕಟ್ಟುಕಥೆಯಾಗಿದೆ. ಕಾಸ್ಮಿಕ್ ಕಿರಣಗಳು ಯಾವಾಗಲೂ ಇರುತ್ತವೆ ಮತ್ತು ನಿರಂತರವಾಗಿ ಭೂಮಿಯ ಮೂಲಕ ಹಾದುಹೋಗುತ್ತವೆ, ಆದರೆ ಅವು ನಿಮ್ಮ ಎಲೆಕ್ಟ್ರಾನಿಕ್ ಸಾಧನಗಳಿಗೆ ಯಾವುದೇ ಅಪಾಯವನ್ನು ಉಂಟುಮಾಡುವುದಿಲ್ಲ. ಕಾಸ್ಮಿಕ್ ಕಿರಣಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಲಾಗಿದೆ, ಮತ್ತು ಅವುಗಳು ಬಹಳ ಎತ್ತರದಲ್ಲಿ ಅಥವಾ ಬಾಹ್ಯಾಕಾಶದಲ್ಲಿ ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳಲ್ಲಿ ಸಣ್ಣ ಅಡಚಣೆಗಳನ್ನು ಉಂಟುಮಾಡಬಹುದು, ಆದರೆ ಭೂಮಿಯ ವಾತಾವರಣವು ಗಮನಾರ್ಹ ರಕ್ಷಣೆ ನೀಡುತ್ತದೆ. ನಿಮ್ಮ ಮೊಬೈಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ಸ್ ಕಾಸ್ಮಿಕ್ ಕಿರಣಗಳ ಯಾವುದೇ ಹಾನಿಕಾರಕ ಪರಿಣಾಮಗಳಿಂದ ಸುರಕ್ಷಿತವಾಗಿದೆ.

ಇನ್ನೂ ನಾವು ವೈರಲ್ ವರದಿಯನ್ನು ಗೂಗಲ್ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿದಾಗ ಇದು ದೈನಿಕ್ ಭಾಸ್ಕರ್ ಅವರ 7 ವರ್ಷಗಳ ಹಳೆಯ ವರದಿಯೆಂದು ತಿಳಿದು ಬಂದಿದೆ.

ದೈನಿಕ್ ಭಾಸ್ಕರ್ ಮಾಧ್ಯಮದವರು ಸಹ ಈ ವೈರಲ್ ಸಂದೇಶದ ಸತ್ಯಶೋಧನೆ ನಡೆಸಿರುವ ವರದಿ ಇದಾಗಿದ್ದು, “ವೈರಲ್ ಸಂದೇಶದ ಸತ್ಯವನ್ನು ತಿಳಿಯಲು, ನಾವು ವಿಜ್ಞಾನ ಸಚಿವಾಲಯದ ವಿಜ್ಞಾನಿ ಆರ್ ಪಯ್ಯಪ್ಪನ್ ಅವರೊಂದಿಗೆ ಮಾತನಾಡಿದ್ದೇವೆ. ಈ ವೈರಲ್ ಸಂದೇಶವು ಸಂಪೂರ್ಣವಾಗಿ ನಕಲಿ, ಏಕೆಂದರೆ ಕಾಸ್ಮಿಕ್ ಕಿರಣಗಳು ಮಂಗಳ ಗ್ರಹದಿಂದ ಎಂದಿಗೂ ಹೊರಬರುವುದಿಲ್ಲ ಎಂದು ಅವರು DainikBhaskar.com ಹೇಳಿದರು. ಆದ್ದರಿಂದ ಇದರಿಂದ ಯಾವುದೇ ಫೋನ್ ಸ್ಫೋಟ ಸಂಭವಿಸುವುದಿಲ್ಲ(ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಲಾಗಿದೆ).” ಎಂದು ಈ ವರದಿಯಲ್ಲಿ ತಿಳಿಸಿದ್ದಾರೆ.

ದೈನಿಕ್ ಭಾಸ್ಕರ್ ಅವರ ಈ ವರದಿ ಕಳೆದ 7 ವರ್ಷಗಳ ಹಿಂದಿನ ವರದಿ ಎಂಬುದನ್ನು ನೀವು ಗಮನಿಸಬಹುದು, ಇದರಿಂದ ಈ ಸಂದೇಶ ಸಾಕಷ್ಟು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಇದು ಸೂಚಿಸುತ್ತದೆ.

ಆದ್ದರಿಂದ ಇಂದು ಮಧ್ಯರಾತ್ರಿ 12:30 ರಿಂದ 3:30 ರ ನಡುವೆ ಅಪಾಯಕಾರಿ ಕಾಸ್ಮಿಕ್ ಕಿರಣಗಳು ಆಕಾಶದ ಮೂಲಕ ಹಾದುಹೋಗುತ್ತವೆ. ಈ ಸಮಯದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ. ನಿಮ್ಮೊಂದಿಗೆ ಫೋನ್ ಇಟ್ಟುಕೊಂಡು ಮಲಗಬೇಡಿ ಎಂಬ ಸಂದೇಶ ಸುಳ್ಳಾಗಿದೆ.

ಆದರೆ ಸಾಮಾನ್ಯವಾಗಿ ಮಲಗುವಾಗ ಮೊಬೈಲ್ ಬಳಸುವುದರಿಂದ ಮಾತ್ರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ನಿದ್ರಾಹೀನತೆ, ಕಣ್ಣಿನ ಮೇಲೆ ಒತ್ತಡ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಲಗಲು ಹಾಸಿಗೆಗೆ ಹೋಗುವ ಒಂದು ಗಂಟೆಯ ಮುನ್ನ ಮೊಬೈಲ್ ಬಳಸಬೇಡಿ ಎಂದು ಡಾಕ್ಟರ್‌ಗಳು ಸಲಹೆ ನೀಡುತ್ತಾರೆ.


ಇದನ್ನು ಓದಿ: ಜಸ್ಟೀಸ್ ದಲ್ವೀರ್ ಭಂಡಾರಿಯವರು ಅಂತರಾಷ್ಟ್ರೀಯ ನ್ಯಾಯಾಲಯದ(ICJ) ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗಿಲ್ಲ.


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *