Fact Check | 100ಕ್ಕೂ ಹೆಚ್ಚು ಜನರನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದ ದೇವೇಂದ್ರ ಶರ್ಮಾನ ಬಂಧನ ಎಂಬುದು ಸುಳ್ಳು

ಪತ್ರಿಕೆಯ ಕಟಿಂಗ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರ ಶೀರ್ಷಿಕೆಯಲ್ಲಿ, 100 ಜನರನ್ನು ಕೊಂದ ಡೆತ್‌ ಡಾಕ್ಟರ್‌ನನ್ನು ಬಂಧಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಆರೋಪಿಯ ಹೆಸರನ್ನು ದೇವೇಂದ್ರ ಶರ್ಮಾ ಎಂದು ನೀಡಲಾಗಿದೆ. ಈ ಪತ್ರಿಕೆಯ ಕಟಿಂಗ್ ಅನ್ನು ಹಂಚಿಕೊಳ್ಳುವ ಮೂಲಕ, ಕೆಲವು ಬಳಕೆದಾರರು ಇತ್ತೀಚೆಗೆ ದೇವೇಂದ್ರ ಶರ್ಮಾನನ್ನು ಬಂಧಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ ಮತ್ತು ಅದನ್ನು ಕೋಮು ಬಣ್ಣ ನೀಡಿ ಹಂಚಿಕೊಳ್ಳುತ್ತಿದ್ದಾರೆ.

ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೇಪರ್‌ ಕಟ್ಟಿಂಗ್‌ ಅನ್ನು ಸಾಕಷ್ಟು ಮಂದಿ ನಿಜವೆಂದು ನಂಬಿದ್ದು, ಇದನ್ನು ತಮ್ಮ ವೈಯಕ್ತಿ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹಲವರು ಈತ ಮುಸ್ಲಿಂ ಅಲ್ಲ ಬ್ರಾಹ್ಮಣ ಹಾಗಾಗಿಯಾವ ಮಾದ್ಯಮಗಳು ಕೂಡ ಈ ಬಗ್ಗೆ ವರದಿಯನ್ನು ಮಾಡುವುದಿಲ್ಲ, ಒಂದು ವೇಳೆ ಈತ ಮುಸಲ್ಮಾನನಾಗಿದ್ದರೆ ಈ ಬಗ್ಗೆ ತಿಂಗಳಾನಿಗಟ್ಟಲೆ ವರದಿಯನ್ನು ಮಾಡುತ್ತಿದ್ದರು ಎಂದು ಬರೆದುಕೊಂಡಿದ್ದಾರೆ. ಹೀಗೆ ವಿವಿಧ ಆಯಾಮಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತ. ಇದಕ್ಕಾಗಿ ನಾವು ಕೀವರ್ಡ್‌ಗಳನ್ನು ಬಳಸಿಕೊಂಡು Google ನಲ್ಲಿ ಹುಡುಕಾಟವನ್ನು ನಡೆಸಿದ್ದೇವೆ. ಈ ವೇಳೆ 30 ಜುಲೈ 2020 ರಂದು ಅಮರ್ ಉಜಾಲಾ ಅವರ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ವರದಿಯೊಂದು ಕಂಡು ಬಂದಿದೆ. ಈ ವರದಿ ದಿನಾಂಕದ ಆಧಾರದ ಮೇಲೆಯೇ ಹೇಳುವುದಾದರೆ ಈ ಘಟನೆ ನಾಲ್ಕು ವರ್ಷಗಳ ಹಿಂದಿನದ್ದಾಗಿದೆ ಎಂಬುದು ಸ್ಪಷ್ಟವಾಗಿದೆ.

ಆದರೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಈ ಅಮರ್‌ ಉಜಾಲ ಸುದ್ದಿಯನ್ನು ಹೊರತು ಪಡಿಸಿ ಇನ್ನಷ್ಟು ವರದಿಗಳನ್ನು ಪರಿಶೀಲನೆ ನಡೆಸಿದ್ದೇವೆ. ಈ ಎಲ್ಲಾ ವರದಿಗಳ ಪ್ರಕಾರ “ದೆಹಲಿ ಪೊಲೀಸರ ಅಪರಾಧ ವಿಭಾಗದ ನಾರ್ಕೋಟಿಕ್ ಸೆಲ್ ಬಾಪ್ರೌಲಾದಿಂದ ದೇವೇಂದ್ರ ಶರ್ಮಾನ್ನು ಬಂಧಿಸಿದೆ. ಆತ 100 ಕ್ಕೂ ಹೆಚ್ಚು ಜನರನ್ನು ಕೊಂದಿದ್ದಾನೆ ಎಂದು ಹೇಳಿಕೊಂಡಿದ್ದಾನೆ. ಕಿಡ್ನಿ ದಂಧೆಯಲ್ಲಿ ಸರಣಿ ಹಂತಕ ದೇವೇಂದ್ರ ಕೂಡ ನಂಟು ಹೊಂದಿರುವ ಆರೋಪವಿದೆ. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಇದರ ನಂತರ, ಈ ದೇವೇಂದ್ರ ಪೆರೋಲ್‌ನಲ್ಲಿ ಹೊರಬಂದು ಮತ್ತು ಜನವರಿ 2020 ರಲ್ಲಿ ತಲೆಮರೆಸಿಕೊಂಡಿದ್ದ. ಈಗ ಆತನ ಬಂಧನವಾಗಿದೆ” ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.

ಇನ್ನು ಜುಲೈ 29, 2020 ರಂದು ದೈನಿಕ್ ಜಾಗರಣ್ ಅವರ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯಲ್ಲಿ , “ದೇವೇಂದ್ರ ಶರ್ಮಾ ಜೈಪುರದಲ್ಲಿ 11 ವರ್ಷಗಳ ಕಾಲ ಕ್ಲಿನಿಕ್ ನಡೆಸುತ್ತಿದ್ದ. 2002ರಿಂದ 2004ರ ಅವಧಿಯಲ್ಲಿ ಈತ 100ಕ್ಕೂ ಹೆಚ್ಚು ಟ್ರಕ್ ಚಾಲಕರನ್ನು ಕೊಂದಿದ್ದ ಎಂದು ಆರೋಪಿಸಲಾಗಿದೆ. ಈತ 10 ವರ್ಷಗಳಿಂದ ಕಿಡ್ನಿ ದಂಧೆಯೊಂದಿಗೆ ಸಂಬಂಧ ಹೊಂದಿದ್ದ. ಈತ ಹಲವಾರು ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವಾಗ ಪೆರೋಲ್ ಮೇಲೆ ಹೊರಗಿದ್ದ ವೇಳೆ ಪರಾರಿಯಾಗಿದ್ದ. ಈ ಬಗ್ಗೆ ಕಾರ್ಯಪ್ರವೃತರಾದ ಪೊಲೀಸರು ಈತನನ್ನು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸುಮಾರು ನಾಲ್ಕು ವರ್ಷಗಳ ಹಿಂದೆ, ದೆಹಲಿ ಪೊಲೀಸರ ಅಪರಾಧ ವಿಭಾಗವು 100 ಕ್ಕೂ ಹೆಚ್ಚು ಜನರನ್ನು ಕೊಂದಿದ್ದ ದೇವೇಂದ್ರ ಶರ್ಮಾನನ್ನು ಬಂಧಿಸಿತ್ತು. ಅದರ ಕುರಿತು ಹಲವು ಮಾಧ್ಯಮಗಳು ವರದಿಯನ್ನು ಮಾಡಿದ್ದವು. ಆದರೆ ಕಿಡಿಗೇಡಿಗಳು ಅಂದಿನ ಪೇಪರ್‌ ಕಟ್ಟಿಂಗ್ಸ್‌ಗಳನ್ನು ಈಗ ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಬೇಡಿ ಮತ್ತು ಸುಳ್ಳು ಸುದ್ದಿಗಳನ್ನು ಶೇರ್‌ ಮಾಡುವುದು ಅಪರಾಧವಾಗಿದೆ.


ಇದನ್ನೂ ಓದಿ : Fact Check : ಯೆಮೆನ್‌ನ ಗ್ಯಾಸ್ ಸ್ಫೋಟವನ್ನು ಇಸ್ರೇಲ್‌ನಲ್ಲಿ ನಡೆದ ದಾಳಿ ಎಂದು ತಪ್ಪಾಗಿ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *