Fact Check | ಪೊಲೀಸರಿಗೆ ಥಳಿಸಿರುವ ಈ ವಿಡಿಯೋ ಕರ್ನಾಟಕದ್ದಲ್ಲ, ಬದಲಿಗೆ ಗಾಜಿಯಾಬಾದ್‌ನದ್ದು

ಕರ್ನಾಟಕದ ಹೆಸರಿನಲ್ಲಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಹಿಳೆ ಸೇರಿ ಕೆಲವರು ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡು ಬರುತ್ತಿದೆ. ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ, ಕೆಲವು ಬಳಕೆದಾರರು ಕರ್ನಾಟಕದಲ್ಲಿ ಚಲನ್ ನೀಡಿದ್ದಕ್ಕಾಗಿ ಮುಸ್ಲಿಮರು ಪೊಲೀಸರನ್ನು ಥಳಿಸಿದ್ದಾರೆ. ಇದು ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಮುಸಲ್ಮಾನರಿಗೆ ಸಿಕ್ಕ ಶಕ್ತಿ ಎಂದು ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ಈ ವೈರಲ್‌ ವಿಡಿಯೋ ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಇತರೆ ರಾಜ್ಯದ ಸಾರ್ವಜನಿಕರಲ್ಲಿ ಅನುಮಾನ ಮೂಡುವಂತೆ ಮಾಡಿದೆ.

ಈ ವಿಡಿಯೋ ನೋಡಿದ ಹಲವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವಿವಿಧ ಬರಹಗಳೊಂದಿಗೆ ವೈರಲ್‌ ವಿಡಿಯೋವನ್ನು ಹಂಚಿಕೊಂಡಿದ್ದು, ಹಲವರು “ ಕರ್ನಾಟಕ ಸುದ್ದಿ! ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಮುಸ್ಲಿಮರು ಚಲನ್ ನೀಡಿದಾಗ ಪೊಲೀಸರನ್ನು ಥಳಿಸಿದ್ದಾರೆ. ಇದು ಕಾನೂನಿಗೆ ನೇರ ಸವಾಲು. ಭವಿಷ್ಯದಲ್ಲಿ ಭಾರತದಲ್ಲಿ ಏನಾಗುತ್ತದೆ, ದೇಶವನ್ನು ಯಾರು ನಡೆಸುತ್ತಾರೆ ಮತ್ತು ಪ್ರತಿಯೊಬ್ಬರ ಭವಿಷ್ಯ ಏನಾಗಬಹುದು ಎಂಬುದನ್ನು ಈ ವೀಡಿಯೊ ಹೇಳುತ್ತದೆ.” ಎಂದು ನೇರವಾಗಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರವನ್ನು ಗುರಿಯಾಗಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ  ಕೀವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಈ ವೇಳೆ ನಮಗೆ  21 ಜನವರಿ 2021ರಂದು  ವಂದೇ ಭಾರತಂ Ms ಗಗನ್ ಗೋಯಲ್ ಎಂಬ ಎಕ್ಸ್‌ ಬಳಕೆದಾರ ಇದೇ ವೈರಲ್‌ ವಿಡಿಯೋವನ್ನು ಹಂಚಿಕೊಂಡು ಈ ಘಟನೆ ಬರೇಲಿಯಲ್ಲಿ ನಡೆದಿದೆ ಎಂದು ಹಂಚಿಕೊಂಡಿದ್ದ, ಇದಕ್ಕೆ  ಬರೇಲಿ ಪೊಲೀಸರು ಪ್ರತಿಕ್ರಿಯೆ ನೀಡಿ ಈ ಘಟನೆ  ಗಾಜಿಯಾಬಾದ್‌ನಲ್ಲಿ ಎರಡು ವರ್ಷಗಳ ಹಿಂದೆ ನಡೆದದ್ದು ಎಂದು ಹಂಚಿಕೊಂಡಿದ್ದರು ಅಲ್ಲಿಗೆ ಈ ವೈರಲ್‌ ವಿಡಿಯೋ ಉತ್ತರ ಪ್ರದೇಶದ್ದು ಎಂಬುದು ಸಾಬೀತಾಗಿದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ನಾವು ಹುಡುಕಾಟವನ್ನು ನಡೆಸಿದೆವು ಈ ವೇಳೆ  27 ಆಗಸ್ಟ್ 2018 ರಂದು ಘಾಜಿಯಾಬಾದ್ ಪೊಲೀಸರ ಎಕ್ಸ್ ಹ್ಯಾಂಡಲ್‌ನಿಂದ ಅಪ್‌ಲೋಡ್ ಮಾಡಲಾದ ವಿಡಿಯೋವೊಂದು ಕಂಡು ಬಂದಿದ್ದು, ಇದರಲ್ಲಿ ಅಂದಿನ ಎಸ್‌ಎಸ್‌ಪಿ ವೈಭವ್ ಕೃಷ್ಣ ಅವರು ಮಾತನಾಡಿರುವುದು ಕಂಡು ಬಂದಿದೆ. ಈ ವಿಡಿಯೋದಲ್ಲಿ ಅವರು ” ಬ್ಯಾಂಕ್‌ವೊಂದರಲ್ಲಿ ಆಧಾರ್‌ ಕಾರ್ಡ್‌ ವಿಚಾರಕ್ಕೆ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು, ಈ ವೇಳೆ ಪೊಲೀಸರಿಗೂ ಹಲ್ಲೆ ನಡೆಸಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.” ಎಂದು ಆ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು.

ಇನ್ನು 27 ಆಗಸ್ಟ್‌ 2018ರಂದು ದೈನಿಕ್‌ ಜಾಗರಣ್‌ ವರದಿಯಲ್ಲೂ ಕೂಡ ಇದೇ ಮಾಹಿತಿ ಹಂಚಿಕೆಯಾಗಿದ್ದು, ಬ್ಯಾಂಕ್‌ನಲ್ಲಿ ನಡೆದ ಆಧಾರ್‌ ಕಾರ್ಡ್‌ ವಿಚಾರಕ್ಕೆ ಸಂಬಂಧ ಪಟ್ಟಂತೆ ವಾಗ್ವಾದ ನಡೆದಿದೆ. ಇದು ತೀವ್ರ ಸ್ವರೂಪ ಪಡೆದ ನಂತರ ಕೈ ಕೈ ಮಿಲಾಯಿಸುವ ಹಂತಕ್ಕೆ ತೆರಳಿತ್ತು, ತದ ನಂತರ ಅಲ್ಲಿಗೆ ಬಂದ ಪೊಲೀಸರು ಕೇವಲ ಒಂದು ಪಕ್ಷದ ಪರವಾಗಿ ಮಾತನಾಡಿದ್ದರು ಎಂಬ ಆರೋಪ ಹೊರಿಸಿ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಮಾಹಿತಿ ಇನ್ನೀತರೆ ವರದಿಗಳಲ್ಲಿ ಕೂಡ ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿ ಇರುವ ಕಾರಣಕ್ಕೆ ಮುಸಲ್ಮಾನರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ವೈರಲ್‌ ವಿಡಿಯೋ ಸುಳ್ಳು ನಿರೂಪಣೆಯೊಂದಿಗೆ ಕೂಡಿದೆ. ಈ ವಿಡಿಯೋ ಉತ್ತರಪ್ರದೇಶದ ಘಾಸಿಯಬಾದ್‌ ಸಂಬಂಧಿಸಿದ್ದಾಗಿದೆ. ಹಾಗಾಗಿ ಇಂತಹ ಸುಳ್ಳು ಮಾಹಿತಿಯಿಂದ ಕೂಡಿರುವ ವಿಡಿಯೋಗಳನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check: ಜವಾಹರಲಾಲ್ ನೆಹರು ಅವರು ಪತ್ನಿ ಕಮಲಾ ಅವರನ್ನು ನಿರ್ಲಕ್ಷಿಸಿದ್ದರು ಎಂಬ ಸುದ್ದಿ ಸುಳ್ಳು!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *