Fact Check | ಬಾಂಗ್ಲಾದೇಶದಲ್ಲಿ ಮುಸ್ಲಿಂ ವ್ಯಕ್ತಿಯ ಹತ್ಯೆಯ ವಿಡಿಯೋವನ್ನು ಹಿಂದೂವಿನದ್ದು ಎಂದು ಹಂಚಿಕೆ

“ಬಾಂಗ್ಲಾದೇಶದ ನಾರ್ಸಿಂಗಡಿ ಜಿಲ್ಲೆಯ ಕೌರಿಯಾ ಪಾರಾದ ಈದ್ಗಾ ಗೇಟ್‌ನಲ್ಲಿ ಎಲ್ಲರ ಸಮ್ಮುಖದಲ್ಲಿ ಇನ್ನೊಬ್ಬ ಹಿಂದೂವನ್ನು ಕತ್ತು ಸೀಳಿ ಕೊಂದಿದ್ದಾರೆ. @UNHumanrights ನಿದ್ರಿಸುತ್ತಿದೆ. ನಾವಲ್ಲದಿದ್ದರೆ ಬಾಂಗ್ಲಾದೇಶಿ ಹಿಂದೂಗಳ ಪರ ಧ್ವನಿ ಎತ್ತುವವರು ಯಾರು? #ಬಾಂಗ್ಲಾದೇಶಿ ಹಿಂದೂಗಳನ್ನು ಉಳಿಸಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಬಾಂಗ್ಲಾದೇಶದಲ್ಲಿ ಈ ರೀತಿ ನಿರಂತರವಾಗಿ ಹಿಂದೂಗಳು ಹತ್ಯೆಗೆ ಒಳಗಾಗುತ್ತಿದ್ದಾರೆ ಎಂದು ಕೂಡ ಹಲವರು ಉಲ್ಲೇಖಿಸುತ್ತಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಕತ್ತು ಸೀಳಿ ವ್ಯಕ್ತಿಯೊಬ್ಬನನ್ನು ಕೊಲ್ಲಲಾಗಿದ್ದು, ಆತನ ಸುತ್ತಲು ಜನರು ಸೇರಿರುವುದು ಕಂಡು ಬಂದಿದೆ. ಇದರಲ್ಲಿ ಹತ್ಯಗೆ ಒಳಗಾದ ವ್ಯಕ್ತಿ ಹಿಂದೂ ಎಂದು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋ ಹಾಗೂ ಅದರ ಜೊತೆಗಿನ ಬರಹಗಳನ್ನು ನೋಡಿದ ಹಲವರು ಇದು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಹಲವರು ವೈರಲ್‌ ವಿಡಿಯೋವನ್ನು ಇನ್ನಷ್ಟು ವಿವಿಧ ರೀತಿಯ ಕೋಮು ಆಯಾಮದ ಬರಹಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ನೈಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಈ ಕುರಿತು ಯಾವುದಾದರೂ ವರದಿಗಳು ಪ್ರಕಟಗೊಂಡಿವೆಯೇ ಎಂದು ಪರಿಶೀಲನೆಯನ್ನು ನಡೆಸಿದೆವು. ಆದರೆ ಈ ಸಂಬಂಧ ಯಾವುದೇ ರೀತಿಯಾದ ಮಾಧ್ಯಮ ವರದಿಗಳು ಕಂಡು ಬಂದಿಲ್ಲ. ಹೀಗಾಗಿ ವೈರಲ್‌ ವಿಡಿಯೋ ಹಲವು ಅನುಮಾಗಳಿಗೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ ನಮಗೆ 1 ಅಕ್ಟೋಬರ್‌ 2024ರಂದು ವಿವಿಧ ಮಾಧ್ಯಮಗಳಲ್ಲಿ ಪ್ರಕಟಗೊಂಡ ಹಲವು ವರದಿಗಳು ಕಂಡು ಬಂದಿವೆ. ಈ ವರದಿಗಳ ಪ್ರಕಾರ ನರಸಿಂಗಡಿಯಲ್ಲಿ ಹನೀಫ್ ಮಿಯಾ (35) ಎಂಬ ವ್ಯಕ್ತಿಯನ್ನು ಹಿಂದಿನ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ. ಹತ್ಯೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಹಲವು ಪ್ರಕರಣಗಳಲ್ಲಿ ಹನೀಫ್ ಹೆಸರು ಇದೆ. ಪೊಲೀಸರು ಮತ್ತು ಮೃತನ ಸಂಬಂಧಿಕರ ಪ್ರಕಾರ, ಹಿಂದಿನ ದ್ವೇಷ, ಕೌಟುಂಬಿಕ ಕಲಹ ಮತ್ತು ವ್ಯವಹಾರದ ವಿವಾದಗಳು ಇದ್ದವು ಈ ಹಿನ್ನೆಲೆಯಲ್ಲಿ ಆತನ ಹತ್ಯೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಒಂದೂವರೆ ತಿಂಗಳ ಹಿಂದೆ ಹನೀಫ್‌ನ ಚಿಕ್ಕಪ್ಪ ಹಬು ಮಿಯಾ ಎಂಬಾತನನ್ನು ಹನೀಫ್‌ನ ಕಿರಿಯ ಸಹೋದರ ಬಾಬು ಕಡಿದು ಕೊಲೆ ಮಾಡಿದ್ದ. ಈ ಹಿನ್ನೆಲೆಯಲ್ಲೂ ಕೂರ ಹನೀಫ್‌ನ ಕೊಲೆಯಾಗಿರುವ ಸಾಧ್ಯತೆ ಇದೆ ಎಂದು ಹಲವರು ಅಭಿಪ್ರಾಯವನ್ನು ಕೂಡ ವ್ಯಕ್ತ ಪಡಿಸಿದ್ದಾರೆ. ಆದರೆ ಇಲ್ಲಿ ಎಲ್ಲಿಯೂ ಕೂಡ ಹಿಂದೂ ವ್ಯಕ್ತಿಯ ಕೊಲೆಯಾಗಿರುವ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋವನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಇಂತಹ ವಿಡಿಯೋ ನಿಮಗೆ ಕಂಡು ಬಂದರೆ ಅವುಗಳನ್ನು ಹಂಚಿಕೊಳ್ಳಬೇಡಿ. ಸುಳ್ಳು ಮಾಹಿತಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check: ಪಾವಗಡ, ಬೆಳ್ಳೂರು ಕ್ರಾಸ್‌ ನಲ್ಲಿ ಸಿಂಹ ಕಾಣಿಸಿಕೊಂಡಿದೆ ಎಂದು ಸುಳ್ಳು ಸುದ್ದಿ ಹಂಚಿಕೊಂಡು ಆತಂಕ ಮೂಡಿಸಿದ ಕೆಲವು ಕನ್ನಡದ ಮಾಧ್ಯಮಗಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *