Fact Check : ಮನಮೋಹನ್ ಸಿಂಗ್‌ ಹೂಡಿಕೆ ಉತ್ತೇಜಿಸಿ ಪ್ರಚಾರ ಮಾಡಿದ್ದಾರೆ ಎಂದು ನಕಲಿ ವೀಡಿಯೊ ಹಂಚಿಕೆ

ಭಾರತದ ಮಾಜಿ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ಹೂಡಿಕೆಯನ್ನು ಉತ್ತೇಜಿಸಿ ಪ್ರಚಾರವನ್ನು ಮಾಡುತ್ತಿದ್ದಾರೆ. ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವೈರಲ್‌ ವೀಡಿಯೊದಲ್ಲಿ ಮನಮೋಹನ್‌ ಸಿಂಗ್‌ ಮಾತನಾಡುತ್ತಿರುವುದನ್ನು ನೋಡಬಹುದು. ಧ್ವನಿ ಕೂಡ ಮನಮೋಹನ್‌ ಸಿಂಗ್‌ರಿಗೆ ಹೋಲಿಕೆ ಆಗುತ್ತಿದೆ. ಹೀಗಾಗಿ ಹೂಡಿಕೆ ಕ್ಷೇತ್ರದಲ್ಲಿ ಆಸಕ್ತಿ ಇರುವ ಹಲವು ಮಂದಿಗೆ ಈ ವೀಡಿಯೊ ಅಚ್ಚರಿಯನ್ನು ಉಂಟು ಮಾಡಿ, ಗೊಂದಲವನ್ನು ಸೃಷ್ಟಿಸಿದೆ. ಕೆಲವು ಬಳಕೆದಾರರು ಮನಮೋಹನ್‌ ಸಿಂಗ್‌ರ ಈ ವೈರಲ್‌ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್ :

ಮನಮೋಹನ್‌ ಸಿಂಗ್‌ ಹೂಡಿಕೆ ಕುರಿತು ಪ್ರಚಾರ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೀಡಿಯೊದಲ್ಲಿನ ವಿವಿಧ ಕೀವರ್ಡ್‌ಗಳನ್ನು ಬಳಸಿ ಹುಡುಕಿದಾಗ, ಈ ಕುರಿತು ಯಾವುದೇ ಸುದ್ದಿಗಳು ಲಭಿಸಿಲ್ಲ. ಒಂದು ವೇಳೆ ಮನಮೋಹನ್‌ ಸಿಂಗ್‌ ಹೂಡಿಕೆಯನ್ನು ಉತ್ತೇಜಿಸಲು ಪ್ರಚಾರ ನಡೆಸಿದ್ದೇ ಆಗಿದ್ದಲ್ಲಿ ಆ ವಿಷಯವನ್ನು ಕುರಿತು ವರದಿಗಳು ಕಂಡು ಬರುತ್ತಿದ್ದವು. ಆದರೆ ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ. ಈ ಹಿಂದೆ ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಗೌತಮ್ ಅದಾನಿ ಹೂಡಿಕೆ ಯೋಜನೆಯನ್ನು ಪ್ರಚಾರ ಮಾಡುತ್ತಿರುವಂತೆ AI (Artificial intelligence) ರಚಿತ ನಕಲಿ ವೀಡಿಯೊ ಕಾಣಿಸಿಕೊಂಡಿತ್ತು. ಅದೇ ರೀತಿ ಈ ವೈರಲ್‌ ವೀಡಿಯೊ ಹಲವು ಅನುಮಾನಗಳಿಗೆ ಆಸ್ಪದವಾಗಿದೆ.

ಹೀಗಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕಿ ಪ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ ಬಳಸಿಕೊಂಡು ಹುಡುಕಿದಾಗ, 2019ರ ಸೆಪ್ಟೆಂಬರ್ 1ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾದ ಮೂಲ ವೀಡಿಯೊ ದೊರೆತಿದೆ. ಅದರಲ್ಲಿ ಸಿಂಗ್‌ ಸರ್ಕಾರದಲ್ಲಿನ ಆರ್ಥಿಕ ಕುಸಿತದ ಕುರಿತು ಕಾಮೆಂಟ್ ಮಾಡಲಾಗಿದೆ. ಇಂದಿನ ಮೋದಿ ಸರ್ಕಾರದಲ್ಲಿ ” ಇಂದು ಆರ್ಥಿಕತೆಯ ಸ್ಥಿತಿಯು ಅತ್ಯಂತ ಚಿಂತಾಜನಕವಾಗಿದೆ. ಕಳೆದ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ದರವು 5% ರಷ್ಟಾಗಿದೆ, ಹಾಗಾಗಿ ನಾವು ದೀರ್ಘಕಾಲದಿಂದ ನಿಧಾನಗತಿಯ ಆರ್ಥಿಕತೆಯ ಮಧ್ಯೆ ಸಿಲುಕಿದ್ದೇವೆ” ಎಂದು ಅವರು ವೈರಲ್ ವೀಡಿಯೊದಲ್ಲಿ ಮಾತನಾಡಿದ್ದಾರೆ. ಮೂಲ ವೀಡಿಯೊದಲ್ಲಿ ಯಾವುದೇ ಹಣಕಾಸಿನ ಹೂಡಿಕೆಯ ಪ್ರಚಾರದ ಕುರಿತು ಯಾವುದೇ ಉಲ್ಲೇಖವಿಲ್ಲ.

ಆದರೆ ಈ ವಿಡಿಯೋದಲ್ಲಿ ಸಿಂಗ್‌ರು ಮಾತನಾಡಿರುವ ವಿಷಯವು ಬೇರೆ ಆಗಿದ್ದು, ವೈರಲ್ ವಿಡಿಯೋದಲ್ಲಿನ ವಿಷಯವು ಬೇರೆಯೇ ಆಗಿದೆ. ವೈರಲ್‌ ವಿಡಿಯೋ ಮತ್ತು ಮೂಲ ವಿಡಿಯೋವನ್ನು ಹೋಲಿಕೆ ಮಾಡಿ ನೋಡಿದಾಗ, ಲಿಪ್‌ ಸಿಂಕಿಂಗ್‌ ಆಗದಿರುವುದು ಕಂಡು ಬಂದಿದೆ. ಹಾಗಾಗಿ TrueMedia.org ದಿಂದ ರಚಿಸಲಾದ ಡೀಪ್‌ಫೇಕ್ ಪತ್ತೆ ಸಾಧನವನ್ನು ಬಳಸಿಕೊಂಡು ವೈರಲ್ ಕ್ಲಿಪ್‌ನ ಆಡಿಯೊವನ್ನು ಪರಿಶೀಲಿಸಿದಾಗ, ವೈರಲ್ ವೀಡಿಯೊದಲ್ಲಿನ ಧ್ವನಿಯು 100% AI- ರಚಿತವಾಗಿದೆ ಎಂಬ ಫಲಿತಾಂಶಗಳು ದೊರೆತಿದ್ದು, ಸಿಂಗ್‌ರವರ ದ್ವನಿಯನ್ನು ನಕಲು ಮಾಡಿ, ಹಳೆಯ ವಿಡಿಯೋದೊಂದಿಗೆ ಹೊಂದಿಸಿ ಹಂಚಿಕೊಳ್ಳಲಾಗಿದೆ ಎಂದು ಖಚಿತವಾಗಿ ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮನಮೋಹನ್‌ ಸಿಂಗ್‌ ಹೂಡಿಕೆಯ ಕುರಿತು ವ್ಯಾಪಕವಾಗಿ ಪ್ರಚಾರವನ್ನು ನಡೆಸಿದ್ದಾರೆ ಎಂಬ ವಿಡಿಯೋ AI ರಚಿತವಾದ ವೀಡಿಯೊವಾಗಿದೆ. ಹಾಗಾಗಿ ಇಂತಹ ಯಾವುದೇ ವೈರಲ್‌ ವೀಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನು ಓದಿ :

Fact Check : ಹಿಂದೂಗಳ ನಂಬಿಕೆಯುಳ್ಳ 8,000 ವರ್ಷಗಳ ಹಳೆಯ ದೇವಾಲಯವು ಸೌದಿಯಲ್ಲಿ ಪತ್ತೆಯಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *