Fact Check: ಪಾವಗಡ, ಬೆಳ್ಳೂರು ಕ್ರಾಸ್‌ ನಲ್ಲಿ ಸಿಂಹ ಕಾಣಿಸಿಕೊಂಡಿದೆ ಎಂದು ಸುಳ್ಳು ಸುದ್ದಿ ಹಂಚಿಕೊಂಡು ಆತಂಕ ಮೂಡಿಸಿದ ಕೆಲವು ಕನ್ನಡದ ಮಾಧ್ಯಮಗಳು

ಸಿಂಹ

ಕಳೆದ ಹಲವು ದಿನಗಳಿಂದ ಪಾವಗಡದಲ್ಲಿ ಸಿಂಹ ಕಾಣಿಸಿಕೊಂಡಿದೆ, ಬೆಳ್ಳೂರು ಕ್ರಾಸ್‌ ನಲ್ಲಿ ಸಿಂಹ ಕಾಣಿಸಿಕೊಂಡಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದ್ದು ಜೀ ಕನ್ನಡ ನ್ಯೂಸ್, ಪಬ್ಲಿಕ್ ನ್ಯೂಸ್ 24/7 ಮತ್ತು ಈಡೆನ್ಸ್ ನ್ಯೂಸ್ ಕನ್ನಡ  ಸೇರಿದಂತೆ ಕೆಲವು ಕನ್ನಡ ಮಾಧ್ಯಮಗಳು ಈ ಸುದ್ದಿಯನ್ನು ವರದಿ ಮಾಡಿ ಜನರಲ್ಲಿ ಆತಂಕ ಮೂಡಿಸಿವೆ.

ಜೀ ನ್ಯೂಸ್‌ “ಪಾವಗಡದ ಪೆಟ್ರೋಲ್‌ ಬಂಕ್‌ನಲ್ಲಿ ಅಡ್ಡಾಡಿದ ಸಿಂಹ” ಸಿಂಹ ಎಂಬ ಶೀರ್ಷಿಕೆಯೊಂದಿಗೆ ವೀಡಿಯೋ ತುಣುಕನ್ನು ಹಂಚಿಕೊಂಡಿದ್ದು ಇದನ್ನು 2.2 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ ಮತ್ತು 1200 ರಷ್ಟು ಜನ ಈ ವೀಡಿಯೋವನ್ನು ಶೇರ್ ಮಾಡಿದ್ದಾರೆ.

ಇನ್ನೂ ಈಡೆನ್ಸ್ ನ್ಯೂಸ್ ಕನ್ನಡ ಮಾಧ್ಯಮದವರು “ಬೆಳ್ಳೂರು ಕ್ರಾಸ್‌ ಬಳಿ ಸಿಂಹ ಪ್ರತ್ಯಕ್ಷ.. ದಂಗಾದ ಜನ” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ತುಣುಕನ್ನು 2400ಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ.

ಹಾಗೆಯೇ ವೈಲ್ಡ್‌ಲೈಫ್‌ ಹಾಸನ್‌ ಎಂಬ ಗುಂಪು ಸೇರಿದಂತೆ ಅನೇಕರು ಈ ವೀಡಿಯೋವನ್ನು ಹಂಚಿಕೊಂಡು ಇದೇ ರೀತಿ ಪ್ರತಿಪಾದಿಸಿದ್ದಾರೆ.

ಫ್ಯಾಕ್ಟ್‌ ಚೆಕ್:

ಈ ವೀಡಿಯೋ ತುಣುಕು ಕರ್ನಾಟಕದ ಪಾವಗಡ ಅಥವಾ ಬೆಳ್ಳೂರು ಕ್ರಾಸ್‌ನದ್ದಾಗಿರದೆ ಗುಜಾರತಿನ ಗಿರ್ ಅರಣ್ಯ ಪ್ರದೇಶದ ಬಾಗಸರ ಗ್ರಾಮದ ಪೆಟ್ರೋಲ್‌ ಬಂಕ್‌ನಲ್ಲಿ ನಡೆದ ಘಟನೆಯಾಗಿದೆ. ವೈರಲ್‌ ವರದಿಗೆ ಕಮೆಂಟ್‌ ಮಾಡಿರುವ ಅನೇಕರು ಇದು ಗುಜರಾತಿನ ವೀಡಿಯಯೋ ಕರ್ನಾಟಕದ್ದಲ್ಲ ಎಂದು ತಿಳಿಸಿದ್ದಾರೆ.

ಇದರ ಸುಳಿವು ಪಡೆದು ನಾವು ಗೂಗಲ್ ರಿವರ್ಸ್‌ ಇಮೇಜ್‌ ಮೂಲಕ ಹುಡುಕಿದಾಗ ಇದೇ ವೀಡಿಯೋವನ್ನು ಸಾಕಷ್ಟು ಜನರು ಹಂಚಿಕೊಂಡಿರುವುದು ಕಂಡು ಬಂದಿದ್ದು. ಮಹಾರಾಷ್ಟ್ರದಲ್ಲಿ ಸಿಂಹ ಕಾಣಿಸಿಕೊಂಡಿದೆ, ಓರಿಸ್ಸಾದಲ್ಲಿ ಸಿಂಹ ಕಾಣಿಸಿಕೊಂಡಿದೆ ಎಂದು ನಾನಾ ಊರಿನ, ರಾಜ್ಯದ ಭಾಗಗಳಿಗೆ ಈ ವೀಡಿಯೋವನ್ನು ಹೋಲಿಸಿ ಸಿಂಹ ಕಾಣಿಸಿಕೊಂಡಿದೆ ಎಂದು ಹಬ್ಬಿಸಲಾಗಿರುವುದು ತಿಳಿದು ಬಂದಿದೆ.

ನಂತರ ನಾವು ಗೂಗಲ್‌ನಲ್ಲಿ ಕೀವರ್ಡ್‌ ಹುಡುಕಾಟವನ್ನು ನಡೆಸಿದಾಗ, ಮಿರರ್ ನೌ ನವರು ಮಾಡಿದ ವರದಿಯೊಂದು ಲಭ್ಯವಾಗಿದ್ದು ಇದರಲ್ಲಿ ಗುಜರಾತಿನ ಗಿರ್ ಅರಣ್ಯ ಪ್ರದೇಶದಲ್ಲಿ ಸಿಂಹ ಕಾಣಿಸಿಕೊಂಡಿದೆ ಎಂದು ತಿಳಿಸಿದೆ.

ಹುಡುಕಾಟದ ಸಂದರ್ಭದಲ್ಲಿ ಇಂಡಿಯಾ ಟುಡೆ ಮಲಯಾಳಂನ ಫ್ಯಾಕ್ಟ್‌ ಚೆಕ್ ವರದಿಯೊಂದು ಲಭ್ಯವಾಗಿದ್ದು ಇದೇ ವೀಡಿಯೋವನ್ನು ಬಳಸಿ ಕೇರಳದ ನಿಲಂಬೂರ್-ಅಕಂಪದಂ ಮಾರ್ಗದ ಪೆಟ್ರೋಲ್ ಬಂಕ್‌ನಲ್ಲಿ ಸಿಂಹ ಕಾಣಿಸಿಕೊಂಡಿದೆ ಎಂದು ಹಂಚಿಕೊಳ್ಳಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ನಂತರ ನಮ್ಮ ಹೆಚ್ಚಿನ ಹುಡುಕಾಟದ ನಂತರ ‘ಗಿರ್ ಇಂಡಿಯಾ ಫಿಲ್ಮ್ಸ್ ಎಚ್ಡಿ’ ಎಂಬ ಫೇಸ್ಬುಕ್ ಪುಟವು ಈ ವೀಡಿಯೊವನ್ನು ಹಂಚಿಕೊಂಡಿದ್ದು, ಇದು ಗುಜರಾತಿನ ಗಿರ್‌ನಿಂದ ಬಂದಿದೆ ಎಂದು ವಿವರಣೆ ನೀಡಿದೆ.

ಈ ಸುಳಿವುಗಳನ್ನು ಬಳಸಿಕೊಂಡು ಹುಡುಕಿದಾಗ, ‘bhavani_bapu_1313’ ಎಂಬ ಇನ್ಸ್ಟಾಗ್ರಾಮ್ ಪ್ರೊಫೈಲ್ ಸೆಪ್ಟೆಂಬರ್ 1 ರಂದು ವೈರಲ್ ವೀಡಿಯೊದ ಸ್ಪಷ್ಟ ಆವೃತ್ತಿಯನ್ನು ಹಂಚಿಕೊಂಡಿದೆ ಎಂದು ತಿಳಿದುಬಂದಿದೆ. ಗುಜರಾತ್‌ನ ವಿಸಾವದಾರ್ ರಸ್ತೆಯ ಧಾರಿಯಲ್ಲಿರುವ ಶ್ರೀನಾಥ್ ಪೆಟ್ರೋಲ್ ಬಂಕ್‌ನಿಂದ ಈ ವಿಡಿಯೋ ಬಂದಿದೆ ಎಂದು ಕೆಲವರು ಕಾಮೆಂಟ್‌ನಲ್ಲಿ ಬರೆದಿದ್ದಾರೆ. ಗಿರ್ ರಾಷ್ಟ್ರೀಯ ಉದ್ಯಾನವನದ ಬಳಿ ಇರುವ ಈ ಪೆಟ್ರೋಲ್ ಪಂಪ್ ತೈಲ ಕಂಪನಿ ನಯರಾ ಎನರ್ಜಿಗೆ ಸೇರಿದೆ. ಈ ಮಾಹಿತಿಯ ಆಧಾರದ ಮೇಲೆ, ಗೂಗಲ್ ಮ್ಯಾಪ್ಸ್ ಸ್ಟ್ರೀಟ್ ವ್ಯೂನಲ್ಲಿ ಈ ಪೆಟ್ರೋಲ್ ಪಂಪ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ. ಗೂಗಲ್ ಮ್ಯಾಪ್ಸ್‌ನಲ್ಲಿ ಲಭ್ಯವಿರುವ ಚಿತ್ರವನ್ನು ವೈರಲ್ ವೀಡಿಯೊದೊಂದಿಗೆ ಹೋಲಿಸಿದಾಗ, ಇವೆರಡೂ ಹೋಲಿಕೆಗಳನ್ನು ಹೊಂದಿರುವುದು ಕಂಡುಬಂದಿದೆ. ಹೋಲಿಕೆ ಚಿತ್ರವನ್ನು ಕೆಳಗೆ ನೋಡಬಹುದು.

ಆದ್ದರಿಂದ ಪಾವಗಡದಲ್ಲಿ, ಬೆಳ್ಳೂರು ಕ್ರಾಸ್‌ನಲ್ಲಿ ಸಿಂಹ ಕಾಣಿಸಿಕೊಂಡಿದೆ ಎಂಬ ಸುದ್ದಿಯನ್ನು ಹಂಚಿಕೊಂಡಿರುವ ಜೀ ಕನ್ನಡ ನ್ಯೂಸ್ ಮತ್ತು ಈಡೆನ್ಸ್ ನ್ಯೂಸ್‌ ಕನ್ನಡ ಈ ಎರಡೂ ಮಾಧ್ಯಮಗಳ ವರದಿಯೂ ಸುಳ್ಳಾಗಿದೆ. ಜನರು ಇದು ಗುಜರಾತಿಗೆ ಸಂಬಂದಿಸಿದ್ದು ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿದರೂ ಸಹ ವೀಡಿಯೋವನ್ನು ತೆಗೆದುಹಾಕದೆ ಸುಳ್ಳನ್ನು ಪ್ರಚಾರ ಮಾಡಲು ನಿಂತಿರುವುದನ್ನು ಗಮನಿಸಿದರೆ ಇಂದಿನ ಕರ್ನಾಟಕದ ಮಾಧ್ಯಮಗಳ ಬದ್ಧತೆ ಅರ್ಥವಾಗುತ್ತದೆ.

ಅಸಲಿಗೆ ಕರ್ನಾಟಕದಲ್ಲಿ ಸಿಂಹಗಳೇ ಇಲ್ಲದಿರುವುದು ಸಾಮಾನ್ಯ ಸಂಗತಿಯಾಗಿದೆ. ಮತ್ತು ಭಾರತದಲ್ಲಿ ಏಷ್ಯಾಟಿಕ್ ಸಿಂಹಗಳ ಸಂಖ್ಯೆ ಅಳಿವಿನಂಚಿನಲ್ಲಿದ್ದು ಗುಜರಾತಿನ ಗಿರ್ ಧಾಮದಲ್ಲಿ ಇವುಗಳನ್ನು ರಕ್ಷಿಸಲಾಗುತ್ತಿದೆ. ಇಂತಹ ಸಾಮಾನ್ಯ ಸಂಗತಿಗಳನ್ನು ಸಹ ಜನರು ಪರಿಶೀಲಿಸದೆ ಒಪ್ಪಿಕೊಳ್ಳುತ್ತಿರುವುದು ನೋಡಿದರೆ ಸಮಸ್ಯೆ ಕೇವಲ ಮಾಧ್ಯಮಗಳಿಂದಲ್ಲದೇ, ಇಂತಹ ಸುಳ್ಳು ಸುದ್ದಿಗಳನ್ನು ಪರಿಶೀಲಿಸದೆ ನಂಬುವ ಜನಗಳದೂ ಆಗಿದೆ. ಆದ್ದರಿಂದ ಸುದ್ದಿ ಮಾಧ್ಯಮದ ವರದಿಗಳನ್ನು ಸಹ ಎಚ್ಚರಿಕೆಯಿಂದ ನಂಬಿ, ಅನೇಕ ಬಾರಿ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಸಹ ನಾನಾ ಕಾರಣಗಳಿಂದ ವರದಿ ಮಾಡುತ್ತಿವೆ.


ಇದನ್ನು ಓದಿ: ಹಿಂದೂಗಳ ನಂಬಿಕೆಯುಳ್ಳ 8,000 ವರ್ಷಗಳ ಹಳೆಯ ದೇವಾಲಯವು ಸೌದಿಯಲ್ಲಿ ಪತ್ತೆಯಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *