Fact Check | ಕೇರಳದ ಶಬರಿ ಮಲೆಯಲ್ಲಿ ಇಸ್ಲಾಮಿಕ್‌ ಹಾಡುಗಳನ್ನು ಹಾಡಲಾಗುತ್ತಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಹಿಂದೂ ಉಡುಗೆ ತೊಟ್ಟಿರುವ ಕೆಲವರು ಇಸ್ಲಾಮಿಕ್ ಹಾಡುಗಳನ್ನು ಹಾಡುತ್ತಿರುವುದನ್ನು ಕಾಣಬಹುದು. ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಈ  ಇಸ್ಲಾಮಿಕ್ ಹಾಡುಗಳನ್ನು ಹಾಡಲಾಗುತ್ತಿದೆ ಎಂದು ಹೇಳುವ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ಹಲವಾರು ಮಂದಿ ವಿವಿಧ ಬರಹಗಳೊಂದಿಗೆ ವೈರಲ್‌ ವಿಡಿಯೋ ಕುರಿತು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ಪೋಸ್ಟ್‌ ನೋಡಿದ ಹಲವು ಮಂದಿ ವೈರಲ್‌ ವಿಡಿಯೋ ನಿಜವೆಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಶಬರಿ ಮಲೆ ದೇವಾಸ್ಥಾನದ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಈ ರೀತಿ ಅವಕಾಶ ಮಾಡಿಕೊಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿವಿಧ ರೀತಿಯಾದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಹಲವರು ಇದನ್ನು ತಮಿಳುನಾಡಿನ ಅಯ್ಯಪ್ಪ ಸ್ವಾಮಿ ದೇವಾಲಯವಲ್ಲ ಎಂದು ವಾದಿಸುತ್ತಿದ್ದಾರೆ. ಹೀಗೆ ವಿವಿಧ ಪರ-ವಿರೋಧದ ಚರ್ಚೆಗಳನ್ನು ಹುಟ್ಟು ಹಾಕಿರುವ ವೈರಲ್‌ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌ 

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ಈ ವೀಡಿಯೊದ ಕೀಫ್ರೇಮ್‌ಗಳನ್ನು Google ಲೆನ್ಸ್‌ನಲ್ಲಿ ಹುಡುಕಿದ್ದೇವೆ. ಜುಲೈ 24, 2019 ರಂದು SBR news1 ಹೆಸರಿನ YouTube ಚಾನಲ್‌ನಲ್ಲಿ ಈ ವೀಡಿಯೊದ ಪೂರ್ಣ ಆವೃತ್ತಿಯನ್ನು ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಈ ಮೂಲಕ ವೈರಲ್‌ ವಿಡಿಯೋ ಇತ್ತೀಚೆಗಿನದ್ದಲ್ಲ ಎಂಬುದು ಸಾಬೀತಾಗಿದೆ.

ಇನ್ನು ವೈರಲ್‌ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ 3 ನಿಮಿಷ 50 ಸೆಕೆಂಡುಗಳ ಫ್ರೇಮ್‌ ಹಿನ್ನೆಲೆಯಲ್ಲಿ ಪೋಸ್ಟರ್ ಅನ್ನು ಕಾಣಬಹುದು. ಗೂಗಲ್ ಲೆನ್ಸ್ ಬಳಸಿ ಹುಡುಕಿದಾಗ ಈ ಪೋಸ್ಟರ್ ತೆಲುಗು ಭಾಷೆಯಲ್ಲಿ ಬರೆಯಲಾಗಿದೆ ಎಂದು ತಿಳಿದು ಬಂದಿದೆ. ಈ ಪೋಸ್ಟರ್‌ನಲ್ಲಿ ಅಯ್ಯಪ್ಪ ಭಜನೆ ಎಂದು ತೆಲುಗಿನಲ್ಲಿ ಬರೆಯಲಾಗಿದೆ. ಈ ವೀಡಿಯೋ ಆಂಧ್ರಪ್ರದೇಶದ್ದು ಎಂಬುದು ತಿಳಿದು ಬಂದಿದೆ.

ನವೆಂಬರ್ 12, 2017 ರಂದು ಮಲ್ಲಿ ಫೋಟೋಗ್ರಫಿ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ, ಇದನ್ನು ಆಂಧ್ರಪ್ರದೇಶದ ವಟಾಲೂರುನಲ್ಲಿರುವ ಕನ್ವೆನ್ಷನ್ ಸೆಂಟರ್ ‘ಚಲಸಾನಿ ಗಾರ್ಡನ್’ ಎಂದು ವಿವರಿಸಲಾಗಿದೆ.ಇದರ ನಂತರ ನಾವು ಗೂಗಲ್ ನಕ್ಷೆಗಳಲ್ಲಿ ಚಲಸಾನಿ ಗಾರ್ಡನ್ ಅನ್ನು ಕಂಡುಕೊಂಡಿದ್ದೇವೆ. ಚಲಸಾನಿ ಉದ್ಯಾನದ ಅನೇಕ ಚಿತ್ರಗಳನ್ನು ನಾವು ಕಂಡುಕೊಂಡಿದ್ದೇವೆ. ಈ ಫೋಟೋಗಳನ್ನು ವೈರಲ್ ವೀಡಿಯೊಗೆ ಹೋಲಿಸಿದಾಗ, ನಾವು ಅನೇಕ ಹೋಲಿಕೆಗಳನ್ನು ಗಮನಿಸಿದ್ದೇವೆ, ಒಂದು ವೇಳೆ ಈ ವಿಡಿಯೋ ಕೇರಳದ್ದೇ ಆಗಿದ್ದರೇ ಈ ವಿಡಿಯೋದಲ್ಲಿ ಮಲಯಾಳಂ ಭಾಷೆಯ ಬಳಕೆ ಕಂಡು ಬರಬೇಕಿತ್ತು ಆದರೆ ಅಂತಹ ಯಾವುದೇ ಪೂರಕವಾದ ದೃಶ್ಯಗಳು ಕಂಡು ಬಂದಿಲ್ಲ.

ಇನ್ನು ವೈರಲ್‌ ಭಜನೆಯಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧ ಪಟ್ಟಂತೆ ಹಾಡುಗಳನ್ನು ಹಾಡಲು ಕೂಡ ಕೆಲವೊಂದು ಕಾರಣಗಳಿವೆ ಎನ್ನಲಾಗಿವೆ. ಲಭ್ಯವಿರುವ ಹಲವು ಅಧಿಕೃತ ಮಾಹಿತಿಗಳ ಪ್ರಕಾರ  ವಾವರ್ ಸ್ವಾಮಿ ಎಂದೂ ಕರೆಯಲ್ಪಡುವ ವಾವರ್ ಅವರು ಅಯ್ಯಪ್ಪ ದೇವರ ಭಕ್ತರಾದ ಮುಸ್ಲಿಂ ಸಂತರಾಗಿದ್ದರು,ಶಬರಿಮಲೆಯು ವಾವರ್ ಸ್ವಾಮಿಗೆ ಸಮರ್ಪಿತವಾದ ದೇವಾಲಯವನ್ನು ಹೊಂದಿದೆ. ಇದರೊಂದಿಗೆ ಎರುಮೇಲಿಯ ಎರುಮೇಲಿಶಾಸ್ತ ದೇವಸ್ಥಾನದ ಪಕ್ಕದಲ್ಲಿ ವಾವರ್ ಸ್ವಾಮಿಯ ಮಸೀದಿಯೂ ಇದೆ. ವರ್ಷಗಳಲ್ಲಿ, ಅಯ್ಯಪ್ಪ ಭಕ್ತರು ತಮ್ಮ ಹಾಡುಗಳಲ್ಲಿ ವಾವರ್ ಸ್ವಾಮಿ ಮತ್ತು ಇಸ್ಲಾಮಿಕ್ ನುಡಿಗಟ್ಟುಗಳನ್ನು ಉಲ್ಲೇಖಿಸಿದ ಹಲವಾರು ಮಾಹಿತಿಗಳು ಲಭ್ಯವಾಗಿದೆ. ಕನ್ನಡದಲ್ಲೂ ವಾವರ್‌ ಸ್ವಾಮಿಗೆ ಸಂಬಂಧ ಪಟ್ಟ ಹಾಡುಗಳಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವಂತೆ ಶಬರಿಮಲೆಯ ಅಯ್ಯಪ್ಪ ದೇವಾಲಯದಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧ ಪಟ್ಟಂತೆ ಹಾಡು ಹಾಡಲಾಗಿದೆ. ನುಡಿಗಟ್ಟು ಹೇಳಲಾಗಿದೆ ಎಂಬುದು ಸುಳ್ಳು. ವೈರಲ್‌ ವಿಡಿಯೋ ಹೈದರಾಬಾದ್‌ಗೆ ಸಂಬಂಧಿಸಿದೆ. ಇನ್ನು ವೈರಲ್‌ ಹಾಡು ಕೂಡ ಅಯ್ಯಪ್ಪ ಸ್ವಾಮಿ ಭಕ್ತ ಹಾಗೂ ಸಂತರಾದ ವಾವರ್‌ ಸ್ವಾಮಿಗೆ ಸಂಬಂಧಿಸಿದ್ದಾಗಿದೆ. ಮಾಲೆ ಧರಿಸಿದ ಹಲವು ಅಯ್ಯಪ್ಪ ಭಕ್ತರು ಈ ವಾವರ್‌ ಸ್ವಾಮಿ ಅವರ ಹಾಡು ಹಾಡುವ ಪ್ರತೀತಿ ಕೂಡ ಇದೆ. ಹಾಗಾಗಿ ವೈರಲ್‌ ಪೋಸ್ಟ್‌ನಲ್ಲಿನ ಪ್ರತಿಪಾದನೆ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : Fact Check : ಬಾಂಗ್ಲಾದೇಶದ ವೃದ್ಧ ಹುಡುಗಿಯೊಂದಿಗೆ ತಪ್ಪಾಗಿ ವರ್ತಿಸಿದ್ದಾನೆ ಎಂದು ನಾಟಕೀಯ ವೀಡಿಯೊ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *