Fact Check | ಬಾಬಾ ರಾಮ್‌ದೇವ್ ಪತಂಜಲಿಯಿಂದ ‘ಬೀಫ್ ಬಿರಿಯಾನಿ’ ಪೌಡರ್ ಮಾರಾಟ ಮಾಡಲಾಗುತ್ತಿದೆ ಎಂಬುದು ಸುಳ್ಳು

“ಪತಂಜಲಿ ಆಯುರ್ವೇದಿಕ್ ಲಿಮಿಟೆಡ್ ಸಹ ಸಂಸ್ಥಾಪಕ ಮತ್ತು ಯೋಗ ಗುರು ಎಂದು ಕರೆಸಿಕೊಳ್ಳುವ ಬಾಬಾ ರಾಮ್‌ದೇವ್‌ ಮುಸಲ್ಮಾನರಿಗಾಗಿ ಬೀಫ್ ಬಿರಿಯಾನಿ ರೆಸಿಪಿ ಮಿಶ್ರಣವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಮತ್ತು ಅದರ ಉತ್ಪನ್ನಗಳು ಸಾರ್ವಜನಿಕರಿಗೆ ಈಗ ಲಭ್ಯವಿದೆ” ಎಂದು ಹೇಳುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋದಲ್ಲಿ ರಾಮ್‌ದೇವ್‌ಎಂಬ ಹೆಸರಿದ್ದು ಪತಂಜಲಿ ಹೆಸರನ್ನು ಕೂಡ ನೋಡಬಹುದಾಗಿದೆ.

ಈ ಫೋಟೋ ನೋಡಿದ ಹಲವು ಸಾರ್ವಜನಿಕರು ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಬಾಬಾ ರಾಮ್‌ದೇವ್‌ ವಿರುದ್ಧ ಹಾಗೂ ಪತಂಜಲಿ ಸಂಸ್ಥೆ ವಿರುದ್ಧ ಆಕ್ರೋಶವನ್ನು ಕೂಡ ಹೊರ ಹಾಕುತ್ತಿದ್ದಾರೆ. ಸಾಕಷ್ಟು ಮಂದಿ ಇದನ್ನು ನಿಜವೆಂದು ಭಾವಿಸಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ರೀತಿಯಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋವಿನ ಸತ್ಯಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್ ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ರಾಮ್‌ದೇವ್‌ಒಡೆತನದ ಪತಂಜಲಿ ಸಂಸ್ಥೆಯಿಂದ ಬಿರಿಯಾನಿ ರೆಸಿಪಿ ಮಿಶ್ರಣವನ್ನು ಮಾರಾಟ ಮಾಡಲಾಗುತ್ತಿದೆಯೇ ಎಂದು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಪತಂಜಲಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಆದರೆ ಅಲ್ಲಿ ಬೀಫ್ ಮಿಶ್ರಣದ ಯಾವುದೇ ಉತ್ಪನ್ನಗಳ ಮಾರಾಟದ ಮಾಹಿತಿ‌ ಲಭ್ಯವಾಗಿಲ್ಲ

ಬಳಿಕ ಇದೇ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಡಿದಾಗ‌ ಪಾಕಿಸ್ತಾನದ ಬಹುರಾಷ್ಟ್ರೀಯ ಆಹಾರ ಉತ್ಪನ್ನಗಳ ಕಂಪನಿಯಾದ ನ್ಯಾಷನಲ್ ಫುಡ್ಸ್ ಲಿಮಿಟೆಡ್‌ನ ಈ ಕಾಮರ್ಸ್ ವೆಬ್‌ಸೈಟ್‌ನಲ್ಲಿ ವೈರಲ್ ಫೋಟೋಗೆ ಹೋಲಿಕೆ ಆಗುವ ಮತ್ತೊಂದು ಫೋಟೋ ಕಂಡು ಬಂದಿದೆ. ಇದನ್ನು ನ್ಯಾಷನಲ್ ಫುಡ್ಸ್ ಲಿಮಿಟೆಡ್ ಕಂಪನಿಯು ತಯಾರಿಸಿದ 39 ಗ್ರಾಂ ಬೀಫ್ ಬಿರಿಯಾನಿ ಪಾಕ ವಿಧಾನ ಮಿಶ್ರಣದ ಉತ್ಪನ್ನ ಎಂಬುದು ತಿಳಿದುಬಂದಿದೆ. ಇದನ್ನು ಅಮೇಜಾನ್‌ ನಲ್ಲಿ ಕೂಡ ಮಾರಾಟ ಮಾಡಲಾಗುತ್ತಿದೆ.

ಈ ಮೂಲ ಫೋಟೋ ಮತ್ತು ವೈರಲ್ ಫೋಟೋಗೆ ಸಾಕಷ್ಟು ಹೋಲಿಕೆ ಇರುವುದು ಕಂಡು ಬಂದಿದೆ.ರಾಮ್‌ದೇವ್‌ ಮತ್ತು ಪತಂಜಲಿಯ ಹೆಸರುಗಳನ್ನು ನ್ಯಾಷನಲ್ ಫುಡ್ಸ್ ಲಿಮಿಟೆಡ್‌ನ ಬೀಫ್ ಉತ್ಪನ್ನದ ಮೂಲ ಫೋಟೋಗೆ ನ್ಯಾಷನಲ್ ಲೋಗೋ ಬದಲು ರಾಮ್‌ದೇವ್‌ಹೆಸರನ್ನು ಬಳಸಲಾಗಿದೆ. ಮತ್ತೊಂದು ಭಾಗದಲ್ಲಿ ಖಾಲಿ ಇರುವ ಬಿಳಿ ಜಾಗದಲ್ಲಿ ಪತಂಜಲಿ ಲೋಗೋವನ್ನು ಬಳಸಿರುವುದು ಕಂಡು ಬಂದಿದೆ. ಹಾಗಾಗಿ ವೈರಲ್ ಆಗಿರುವ ಫೋಟೋ ಎಡಿಟೆಡ್ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಬಾಬಾ ರಾಮ್‌ದೇವ್‌ ನೇತೃತ್ವದ ಪತಂಜಲಿ ಸಂಸ್ಥೆ ಬೀಫ್ ಬಿರಿಯಾನಿ ಮಿಶ್ರಣದ ರೆಸಿಪಿಯನ್ನು ಮಾರಾಟ ಮಾಡಲು ಮುಂದಾಗಿದೆ ಎಂಬ ಫೋಟೋ ಡಿಜಿಟಲ್ ಆಗಿ ಎಡಿಟ್ ಮಾಡಲಾಗಿದೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ನಿರೂಪಣೆಯಿಂದ ಕೂಡಿದೆ ಎಂಬುದು ಸಾಬೀತಾಗಿದೆ. ಇಂತಹ ಫೋಟೋಗಳನ್ನು ನಿಮಗೆ ಕಂಡು ಬಂದರೆ ಅವುಗಳನ್ನು ಪರಿಶೀಲಿಸದೆ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹರಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check: ಅಮೆರಿಕದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಅವರು ಟೆಕ್ಸಾಸ್ ನಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *