Fact Check: ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ಶೇಖರ್ ಆಸ್ಪತ್ರೆ ಮುಸ್ಲಿಂ ವೈದ್ಯರ ನಿರ್ವಹಣೆಯಲ್ಲಿದೆ ಎಂಬುದು ಸುಳ್ಳಾಗಿದೆ

ಶೇಖರ್ ಆಸ್ಪತ್ರೆ

ಇತ್ತೀಚೆಗೆ ಮುಸ್ಲಿಂ ಸಮುದಾಯದವರನ್ನು ಸಮಾಜದ ದೃಷ್ಟಿಯಲ್ಲಿ ಅಪರಾಧಿಗಳು ಎಂಬಂತೆ ಬಿಂಬಿಸುವ ಸಲುವಾಗಿ ವ್ಯವಸ್ಥಿತವಾಗಿ ಸಂಚುರೂಪಿಸಲಾಗುತ್ತಿದೆ. ಪ್ರತೀದಿನ ಮುಸ್ಲಿಂ ವಿರೋಧಿ ಸಂದೇಶಗಳನ್ನು ಹರಿಬಿಡಲು ಅನೇಕ ನಕಲಿ ಖಾತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಸಲಾಗಿದೆ. ಮತ್ತು ವಾಟ್ಸಾಪ್‌ ಸಂದೇಶಗಳನ್ನು ಸಹ ನಿರಂತರವಾಗಿ ಹರಿಬಿಡಲಾಗುತ್ತಿದೆ.

ಇತ್ತೀಚೆಗೆ ವಾಟ್ಸಾಪ್‌ನಲ್ಲಿ ಸಂದೇಶವೊಂದನ್ನು ಹಂಚಿಕೊಳ್ಳಲಾಗುತ್ತಿದ್ದು ಅದರಲ್ಲಿ, “ಬೆಂಗಳೂರಿನ ಬಸವನಗುಡಿಯ, ರಾಮಕೃಷ್ಣ ಮಠದ ಹತ್ತಿರ ಇರೋ -ಶೇಖರ್ ಆಸ್ಪತ್ರೆ – ಮೊದಲು ಹಿಂದೂಗಳದ್ದಾಗಿತ್ತು,
ಅದನ್ನೀಗ ಸಾಬಿ ತೊಗೊಂಡು–ಪೇಷೆಂಟ್ ಗಳನ್ನೆಲ್ಲಾ ಸಾಯಿಸುತ್ತಿದ್ದಾನೆ. ನಾನು ಸ್ವಲ್ಪ ಬೆನ್ನು ನೋವಿಗೆ ಒಂದು ಇಂಜೆಕ್ಷನ್ ಕೊಡಿ ಅಂತ ಹೋದರೆ -ಅಲ್ಲಿರೋ ಮಂಗಳೂರು ಮೂಲದ ಹಿಂದೂ 😱😡ಮೋಸಗಾರ ಡಾಕ್ಟರೊಬ್ಬ -ಬೆನ್ನಿನ exray ತೆಗೆಸಿ-ಅದರ ಮೇಲೆಲ್ಲಾ ಗೀಚಿ-ಮೂಳೆ ಎಲ್ಲಾ ಪುಡಿಪುಡಿಯಾಗಿ ಹೋಗಿದೆ ಅಂತ ಸುಳ್ಳು ಹೇಳಿ -ಎರಡು ದಿನ admit ಆಗಿ ನೋಡೋಣ-ಅಂದ. ನನ್ನಿಂದ ಹಣವನ್ನು ದೋಚಿದರು. ನಾನು ಪೋಲಿಸರು ಬಳಿ ದೂರು ನೀಡಲು ಹೋದಾಗ “ಎಲ್ಲಾರಿಗೂ ತಿಳಿಸಿ-ಯಾವುದೇ ಆಸ್ಪತ್ರೆಯ admin ಸಾಬರಿದ್ದರೆ ಯಾರೂ ಹೋಗಬೇಡಿ ,ಖಂಡಿತ ಸಾಯ್ತೀರಿ ಇಲ್ಲ ಬಾಡಿ ಪಾರ್ಟ್ಸ್ ಎಲ್ಲಾ ತೊಗೊಂಡು ,ಹೆಣಾನೂ ಮಾಯ ಮಾಡಿಬಿಡ್ತಾರೆ ಹುಷಾರು -ಎಂದರು” ಎಂಬ ಸಂದೇಶವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್:

ವೈರಲ್‌ ಸಂದೇಶ ಕಟ್ಟುಕಥೆಯಾಗಿದ್ದು ಬೆಂಗಳೂರಿನ ಬಸವನಗುಡಿಯ ಶೇಖರ್ ಆಸ್ಪತ್ರೆ ಮುಸ್ಲಿಂ ನಿರ್ವಾಹಣೆಯಲ್ಲಿದೆ. ಮುಸ್ಲಿಮರು ಕುರಿತು ದ್ವೇಷ ಹರಡುವ ಸಲುವಾಗಿ ಇಂತಹ ಸಂದೇಶವೊಂದನ್ನು ಹರಿಬಿಡಲಾಗಿದೆ.

ನಾವು ವೈರಲ್ ಸಂದೇಶದ ಆರೋಪದಂತೆ ಶೇಖರ್ ಆಸ್ಪತ್ರೆಯ ಮುಖ್ಯ ಡಾಕ್ಟರ್‌ ಯಾರು ಎಂದು ಪರಿಶೀಲಿಸಲು ಹುಡಕಾಡಿದಾಗ, ಶೇಖರ್ ಆಸ್ಪತ್ರೆಯ ಅಧಿಕೃತ ವೆಬ್‌ಸೈಟ್‌ನ ಪ್ರಕಾರ ಡಾ. ಅಶ್ವಿನ್‌ ಎಸ್‌ ಈ ಆಸ್ಪತ್ರೆಯ ಮುಖ್ಯಸ್ಥರಾಗಿದ್ದಾರೆ. ಇವರು ಕಳೆದ ಇಪ್ಪತ್ತು ವರ್ಷಗಳಿಂದ ವೈಧ್ಯರಾಗಿ ಸೇವೆ ಸಲ್ಲಿಸಿದ್ದಾರೆ. 

ನಾವು ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರಬಹುದಾದ ಮುಸ್ಲಿಂ ವೈದ್ಯರ ಹೆಸರಿಗಾಗಿ ಹುಡುಕಾಡಿದಾಗ ಅಂತಹ ಯಾವ ವೈದ್ಯರ ಹೆಸರು ಸಹ ಇರುವುದು ಕಂಡು ಬಂದಿಲ್ಲ. ಡಾ. ವಿಶ್ವಜಿತ್‌ ಮೂರ್ತಿ, ಡಾ. ಮೀನಾಕ್ಷಿ ಆರ್‌ ಕಾಮತ್‌ ಅವರು ಶೇಖರ್ ಆಸ್ಪತ್ರೆಯ ಮುಖ್ಯ ವೈದ್ಯರುಗಳಾಗಿದ್ದಾರೆ.  

ಈ ಕುರಿತು ನಾವು ಹೆಚ್ಚಿನ ಮಾಹಿತಿ ತಿಳಿಯಲು ಆಸ್ಪತ್ರೆಯವರನ್ನು ಸಂಪರ್ಕಿಸಿದಾಗ ಅವರು ವೈರಲ್‌ ಸಂದೇಶದ ಮಾಹಿತಿಯನ್ನು ತಳ್ಳಿಹಾಕಿದ್ದಾರೆ. “ಯಾರೋ ಕೆಲವು ಕಿಡಿಗೇಡಿಗಳು ಆಸ್ಪತ್ರೆಯ ಹೆಸರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಇಂತಹ ಮಾಹಿತಿಯನ್ನು ಹರಿಬಿಟ್ಟಿದ್ದಾರೆ. ಶೇಖರ್ ಆಸ್ಪತ್ರೆ ಮುಸ್ಲಿಂ ವೈದ್ಯರ ನಿರ್ವಾಹಣೆಯಲ್ಲಿ ಇಲ್ಲ, ಇಂತಹ ಸಂದೇಶವನ್ನು ನಂಬಬೇಡಿ” ಎಂದು ತಿಳಿಸಿದ್ದಾರೆ.

ಆದ್ದರಿಂದ ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ಶೇಖರ್ ಆಸ್ಪತ್ರೆ ಮುಸ್ಲಿಂ ವೈದ್ಯರ ನಿರ್ವಹಣೆಯಲ್ಲಿದೆ ಎಂಬುದು ಮತ್ತು ರೋಗಿಯೊಬ್ಬರು ಮೋಸಹೋದ ಘಟನೆಯು ಕಟ್ಟುಕಥೆಯಾಗಿದೆ.


ಇದನ್ನು ಓದಿ:  ಮಹಾಲಕ್ಷ್ಮಿ ಕೊಲೆ ಆರೋಪಿಯನ್ನು ಮುಸ್ಲಿಂ ಎಂದು ಬಿಂಬಿಸಿ ಸುಳ್ಳು ಮಾಹಿತಿ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *